ನ್ಯಾಮತಿ : ನ್ಯಾಮತಿ ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 518 ಕೋಟಿ ರೂಪಾಯಿ ವೆಚ್ಚದ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು ಸದ್ಯದಲ್ಲೇ ಕೆರೆಗಳಿಗೆ ನೀರು ಹರಿಯಲಿದೆ ಎಂದು ಮಾಜಿ ಶಾಸಕರ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಗೋವಿನಕೋವಿ(ಕುರುವಹಳೇದಿಬ್ಬ) ಹಾಗೂ ಸವಳಂಗ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಜಾಕ್‍ವೆಲ್ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು.
518 ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ 108 ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಮೂರು ಕಡೆ ಜಾಕ್ ವೆಲ್ ನಿರ್ಮಾಣವಾಗುತ್ತಿದ್ದು, ಹನುಸಾಗರ ಏತ ನೀರಾವರಿ ಯೋಜನೆ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಇನ್ನು ಹತ್ತು ದಿನಗಳ ಒಳಗಾಗಿ ಈ ಯೋಜನೆ ಮೂಲಕ 17 ಗ್ರಾಮಗಳ 32 ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ಅದೇ ರೀತಿ ಗೋವಿನಕೋವಿ ಏತನೀರಾವರಿ ಯೋಜನೆಗೆ ಕುರುವ ಹಳೇದಿಬ್ಬ ಬಳಿ ಜಾಕ್‍ವೆಲ್ ನಿರ್ಮಾಣ ಮಾಡುತ್ತಿದ್ದು ಇದರಿಂದ 22 ಗ್ರಾಮಗಳ 33 ಕೆರೆಗಳಿಗೆ ನೀರು ಹರಿಯಲಿದೆ ಎಂದರಲ್ಲದೇ, ಸವಳಂಗ ಬಳಿ ನಿರ್ಮಾಣವಾಗುತ್ತಿರುವ ಜಾಕ್‍ವೆಲ್‍ನಿಂದ 15 ಗ್ರಾಮಗಳ 40 ಕೆರೆಗಳಿಗೆ ನೀರು ಹರಿಯಲಿದೆ ಎಂದರು.
ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ರೈತರ ಅನುಕೂಲಕ್ಕಾಗಿ ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಿದ್ದು ನಾನು ಹಾಗೂ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಜನರು ಸದಾ ಚಿರಋಣಿ ಎಂದರು.
ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಕೆರೆಗಳನ್ನು ತುಂಬಿಸುವುದಾಗಿ ನಾನು ಮತುಕೊಟ್ಟಿದ್ದೇ ಇದೀಗ ಅದೇ ರೀತಿ ನಡೆದುಕೊಂಡಿದ್ದೇನೆಂದರು.
ಈ ವೇಳೆ ಮುಖಂಡರಾದ ಚಂದ್ರಪ್ಪ, ಗೋಪಿಚಂದ್,ಮಲ್ಲಿಕ್,ಕುಮಾರ್,ಎಸ್.ಪಿ.ರವಿಕುಮಾರ್, ದೊಡ್ಡೇರಿ ರಾಜಣ್ಣ ಸೇರಿದಂತೆ ಮತ್ತೀತತರಿದ್ದರು.