ಪೌರ ಕಾರ್ಮಿಕರ ಶ್ರಮವೇ ನಗರವಾಸಿಗಳು ಆರೋಗ್ಯದಿಂದ ಇರಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಸ್ವಚ್ಚತೆಯ ಸೇನಾನಿಗಳು ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದರು.
ಶನಿವಾರ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಜರುಗಿದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿ ಕೊರೋನಾದ ಸಂಧರ್ಭದ ಸಂಕಷ್ಟದ ದಿನಗಳಲ್ಲಿಯೂ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕಾರ್ಯನಿರ್ವಹಿಸಿ ಪೌರಕಾರ್ಮಿಕರು ವೈದ್ಯ ಸಮೂಹದಷ್ಟೆ ಪ್ರಧಾನ ಪಾತ್ರ ವಹಿಸಿದ್ದಾರೆ.
ಸಮಾಜದ ಸ್ವಾಸ್ಥವನ್ನು ಕಾಪಾಡುವವರು ಪೌರಕಾರ್ಮಿಕರು, ದಿನನಿತ್ಯದ ಜೀವನದಲ್ಲಿ ಉತ್ಪತ್ತಿಯಾಗುವ ನಾನಾ ರೀತಿಯ ಕಸ, ಕೊಳಕು ನಿರ್ಮಾಣವಾಗುತ್ತದೆ. ಅದನ್ನು ನಿರ್ಮೂಲನಗೊಳಿಸಿ ಸೇವಾ ಮನೋ ಭಾವದಿಂದ ಪರಿಸರವನ್ನು ಸ್ವಚ್ಛವಾಗಿಸುತ್ತಾರೆ. ಅವರ ಈ ಕೆಲಸ ಶ್ಲಾಘನೀಯವಾದದು. ಅವರು ದಿನನಿತ್ಯ ಸೋಂಕಿನೊAದಿಗೆ ಕೆಲಸ ಮಾಡುತ್ತಾರೆ, ಅವರ ಆರೋಗ್ಯವಾಗಿರುವುದು ಅಷ್ಟೇ ಮುಖ್ಯವಾದದ್ದು.
ಹಿಂದೆ ಪೌರಕಾರ್ಮಿಕರು ಅನೇಕ ರೀತಿಯ ಶೋಷಣೆಗೆ ಒಳಗಾಗುತ್ತಿದ್ದರು, ಆದರೆ ಇಂದಿನ ದಿನಮಾನಗಳಲ್ಲಿ ಸರ್ಕಾರ ಅವರಿಗಾಗಿ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆಯಲ್ಲಿ ೩೮೧ ಮನೆಗಳನ್ನು ಪೌರಕಾರ್ಮಿಕರಿಗಾಗಿ ನಿರ್ಮಿಸಿ ದಾಖಲೆ ಬರೆಯಲಾಗಿದೆ. ಜಿಲ್ಲೆಗಳಲ್ಲಿಯೂ ಪೌರಕಾರ್ಮಿಕರಿಗಾಗಿ ಇಷ್ಟು ಮನೆಗಳು ನಿರ್ಮಾಣವಾಗಿಲ್ಲ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಅಭಿವೃದ್ಧಿಗಾಗಿ ಯಾವಾಗಲೂ ಶ್ರಮಿಸುತ್ತದೆ ಎಂದರು.
ಮಹಾನಗರ ಪಾಲಿಕೆ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಮಾತನಾಡಿ ಪೌರಕಾರ್ಮಿಕರು ನಗರದ ಜೀವನಾಡಿಗಳು, ಅವರ ಕುರಿತು ಎಷ್ಟು ಹೇಳಿದರೂ ಸಾಲದು ಬೆಳಗಿನ ಜಾವ ಚಳಿ,ಗಾಳಿ ಎನ್ನದೆ ತಮ್ಮ ಕಾರ್ಯದಲ್ಲಿ ನಿರತರಾಗುತ್ತಾರೆ. ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆಗೂ ಗಮನಹರಿಸಬೇಕು, ಸರ್ಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ತಮ್ಮ ಮಕ್ಕಳಿಗೂ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದರು.
ಮಹಾನಗರ ಪಾಲಿಕೆ ಹಿರಿಯ ಸದಸ್ಯ ಚಮನ್ ಸಾಬ್ ಮಾತನಾಡಿ ಯಾವುದೇ ಸಮಯದಲ್ಲಿ ಪೌರಕಾರ್ಮಿಕರು ತಮ್ಮ ವೃತ್ತಿಯನ್ನು ಮರೆಯದೆ ನಗರದ ಸ್ವಚ್ಛತೆಗೆ ಶ್ರಮಿಸುತ್ತಿದ್ದಾರೆ. ಅವರಿಂದಲೇ ನಗರ ಸ್ವಚ್ಛ, ಸುಂದರ ಹಾಗೂ ಆರೋಗ್ಯದಿಂದಿರುತ್ತದೆ.
ಪೌರಕಾರ್ಮಿಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಮೂಲಕ ಉನ್ನತ ಸ್ಥಾನಕ್ಕೇರುವಂತಾಗಬೇಕು. ಡಾ. ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉತ್ತಮ ಪೌರ ಕಾರ್ಮಿಕರಿಗೆ ಮತ್ತು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಸ್ನಾತಕೋತ್ತರ ಪದವಿ ಪಡೆದ ಪೌರ ಕಾರ್ಮಿಕರ ಮಕ್ಕಳಿಗೆ ರೂ.೧೦,೦೦೦/- ನಗದು ಬಹುಮಾನ ವಿತರಿಸಲಾಯಿತು. ಹಾಗೂ ಪೌರ ಕಾರ್ಮಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ನೀಡಲಾಯಿತು.
ಪಾಲಿಕೆ ಪೂಜ್ಯ ಮಹಾಪೌರರಾದ ವಿನಾಯಕ ಬಿ.ಹೆಚ್, ಉಪಮಹಾಪೌರರಾದ ಯಶೋಧ ಯಗ್ಗಪ್ಪ, ಮಹಾನಗರ ಪಾಲಿಕೆ ನಗರ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಮಹಾನಗರ ಪಾಲಿಕೆ ಮಾಜಿ ಮೇಯರ್ ವೀರೇಶ್, ಮಹಾನಗರ ಪಾಲಿಕೆ ಸದಸ್ಯರಾದ ರೇಣುಕಾ ಶ್ರೀನಿವಾಸ್, ಗಾಯಿತ್ರಿ, ವೀಣಾ ನಂಜಪ್ಪ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಉಪಸ್ಥಿತರಿದ್ದರು.