ನ್ಯಾಮತಿ : ಸಾಮಾನ್ಯವಾಗಿ ನಾವು ನಮ್ಮ ಪ್ರೀತಿ ಪಾತ್ರರ ಹುಟ್ಟುಹಬ್ಬವನ್ನು ಆಚರಿಸುವದನ್ನು ನೋಡಿದ್ದೇವೆ, ಆದರೆ ಇಲ್ಲೊಂದು ಯುವಕರ ಗುಂಪು ತಮ್ಮ ನೆಚ್ಚಿನ ಹೋರಿಯ ಹುಟ್ಟುಹಬ್ಬ ಆಚರಿಸಿದ್ದಾರಲ್ಲದೇ, ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡು ಹೋರಿಗೆ ಶುಭಕೋರಿದ್ದಾರೆ.
ಹೌದು ತಾಲೂಕಿನ ಹೊಸಕೊಪ್ಪ ಗ್ರಾಮದ ಪ್ರವೀಣ್ ಎಂಬುವವರು ಕಳೆದ ಈ ಹೋರಿ ಎರಡುವರೆ ವರ್ಷ ವಿದ್ದಾಗ ಶಿಕಾರಿಪುರ ತಾಲೂಕಿನ ಅರಳೇಹಳ್ಳಿ ಗ್ರಾಮದಿಂದ ಈ ಹೋರಿಯನ್ನು ತಂದಿದ್ದು, ಇದೀಗ ಹೋರಿಗೆ ಆರುವರೆ ವರ್ಷವಾಗಿದೆ.
ಗ್ರಾಮದೇವತೆ ಆಂಜನೇಯಸ್ವಾಮಿ ಆಗಿದ್ದರಿಂದ ಈ ಹೋರಿಗೆ ಅಂಜನಿಪುತ್ರ ಎಂದು ನಾಮಕಾರಣ ಮಾಡಿದ್ದು ಹೋರಿಯ ಮಾಲೀಕ ಅದನ್ನು ತನ್ನ ಸ್ವತಃ ತಮ್ಮನ ರೀತಿ ನೋಡಿಕೊಳ್ಳುತ್ತಿದ್ದು, ಮಂಗಳವಾರ ಅಂಜನಿಪುತ್ರನ ಹುಟ್ಟುಹಬ್ಬ ಆಚರಿಸಿ, ಪೋಟೋ ಶೂಟ್ ಕೂಡ ಮಾಡಿಸಿದ್ದಾನೆ.
ಅಂಜನಿಪುತ್ರನಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದ ಹೋರಿಯ ಮಾಲಿಕ ಹೋರಿಯ ಹುಟ್ಟುಹಬ್ಬದ ಪ್ರಯುಕ್ತ ಗ್ರಾಮದಾಧ್ಯಂತ ಹೋರಿಯ ಮೆರವಣಿಗೆ ಕೂಡ ಮಾಡಿದ್ದಾನೆ.
ಕೊಬ್ಬರಿಹೋರಿ ಎಂದು ಹೆಸರು ಪಡೆದಿರುವ ಅಂಜನಿಪುತ್ರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾನಲ್ಲದೇ ಸಾಕಷ್ಟು ಅಭಿಮಾನಿಗಳ ಬಳಗವನ್ನು ಅಂಜನಿಪುತ್ರ ಹೊಂದಿದ್ದಾನೆ.
ಅಂಜನಿಪುತ್ರ ಹೋರಿಯ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಪಾಲ್ಗೊಂಡು ಗಮನ ಸೆಳೆದರು.
ರೇಣುಕಾಚಾರ್ಯ ಅವರೇ ಕೇಕ್ ಕತ್ತರಿಸಿ ಅಂಜನಿಪುತ್ರನಿಗೆ ತಿನ್ನಿಸಿದರಲ್ಲದೇ ಹೋರಿಯೊಂದಿಗೆ ಪೋಟೋಗೆ ಪೋಸ್ ನೀಡಿದರು.
ಇದೇ ವೇಳೆ ಮಾತನಾಡಿದ ರೇಣುಕಾಚಾರ್ಯ, ದೀಪಾವಳಿಯ ಸಂದರ್ಭದಲ್ಲಿ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲಾಗುತ್ತದೆ, ಅದಕ್ಕಾಗಿ ಹೋರಿಗಳಿಗೆ ವಿಶೇಷವಾದ ತರಬೇತಿ ನೀಡಲಾಗುತ್ತದೆ, ಯುವಕರು ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಂಡಾಗ ಎಚ್ಚರಿಕೆ ಇರುವಂತೆ ಕಿವಿ ಮಾತು ಹೇಳಿದರು.
ಈ ವೇಳೆ ಗ್ರಾಮದ ಮುಖಂಡರು, ಯುವಕರು, ಹೋರಿಯ ಅಭಿಮಾನಿಗಳಿದ್ದರು.