ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಯುವನಿಧಿ ಯೋಜನೆಗೆ ಜನವರಿ 12 ರಂದು ಶಿವಮೊಗ್ಗದಲ್ಲಿ ಚಾಲನೆಗೊಳ್ಳಲಿದ್ದು ದಾವಣಗೆರೆ ಜಿಲ್ಲೆಯಲ್ಲಿ ಯುವನಿಧಿ ನೊಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
 ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಮತ್ತು ಕಾಲೇಜು ಪ್ರಾಂಶುಪಾಲರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದರು. ಇತ್ತೀಚಿನ 6 ತಿಂಗಳಗಿಂತ ಮೊದಲು ಪದವಿ ಉತ್ತೀರ್ಣ, ಡಿಪ್ಲೊಮಾ ಉತ್ತೀರ್ಣರಾದ ಯುವ ಪದವೀಧರರಿಗೆ ಮಾಸಿಕ 3 ಸಾವಿರ ಮತ್ತು ಡಿಪ್ಲೊಮಾ ಪಡೆದವರಿಗೆ ಮಾಸಿಕ 1500 ರೂ.ಗಳ ಯುವ ನಿಧಿಯನ್ನು ನೀಡಲಾಗುತ್ತಿದೆ. ಈ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದೆ. ಈವರೆಗೆ ಜಿಲ್ಲೆಯಲ್ಲಿ 500 ಜನರಿಗಿಂತ ಹೆಚ್ಚು ನೊಂದಣಿಯಾಗಿದ್ದು ಬರುವ ಜನವರಿ 12 ರೊಳಗಾಗಿ 10 ಸಾವಿರ ಪದವಿ, ಡಿಪ್ಲೊಮಾ ಪಡೆದ ಯುವ ಜನರನ್ನು ನೊಂದಣಿ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನ ಡಿಬಿಟಿ ಮೂಲಕ ಯೋಜನೆಯ ಲಾಭ ಕಲ್ಪಿಸಲು ನೊಂದಣಿಗೆ ಅಭಿಯಾನ ಮಾಡಲಾಗುತ್ತಿದೆ.
 ಯುವನಿಧಿ ನೊಂದಣಿಯನ್ನು ಗ್ರಾಮಾ ಒನ್, ಕರ್ನಾಟಕ ಒನ್ ಮತ್ತು ಸೇವಾಸಿಂಧೂ ಪೋರ್ಟಲ್‍ನಲ್ಲಿ ನೊಂದಣಿ ಮಾಡಬಹುದಾಗಿದೆ. ಆದರೂ ಸಹ ಅಭಿಯಾನದ ಮೂಲಕ ಹೆಚ್ಚು ಜನರ ನೊಂದಣಿ ಮಾಡಲು ಹಾಗೂ ಯಾರು ಸಹ ಈ ಯೋಜನೆಯಿಂದ ಹೊರಗುಳಿಯಬಾರದೆಂದು ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ ಕಚೇರಿ, ತಾಲ್ಲೂಕು ಪಂಚಾಯಿತಿಯಲ್ಲಿ ನೊಂದಣಿ ಅಭಿಯಾನವನ್ನು ಹೆಚ್ಚುವರಿಯಾಗಿ ಮಾಡಲಾಗುತ್ತದೆ. ಮತ್ತು ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ನಿವಾರಣೆಗಾಗಿ ದಾವಣಗೆರೆ ಪಾಲಿಕೆ ನಿಯಂತ್ರಣ ಕೊಠಡಿಯಲ್ಲಿ ಕಾಲ್ ಸೆಂಟರ್ ತೆರೆಯಲಾಗುತ್ತದೆ. ಮತ್ತು ಎಲ್ಲಾ ತಾಲ್ಲೂಕುಗಳಲ್ಲಿನ ತಾಲ್ಲೂಕು ಕಚೇರಿಯಲ್ಲಿ ಕಾಲ್ ಸೆಂಟರ್ ತಾತ್ಕಾಲಿಕವಾಗಿ ತೆರೆಯಲು ತಹಶೀಲ್ದಾರರಿಗೆ ಸೂಚನೆ ನೀಡಿದರು.
ನೋಡಲ್ ಅಧಿಕಾರಿಗಳ ನೇಮಕ; ಯುವನಿಧಿ ಯೋಜನೆಗೆ ನೊಂದಣಿ ಮಾಡಿಸಲು ಎಲ್ಲಾ ತಾಲ್ಲೂಕಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದು ಎಲ್ಲಾ ಕಾಲೇಜುಗಳಲ್ಲಿಯು ಅಭಿಯಾನ ಮಾಡುವ ಮೂಲಕ ಯುವಕರಿಗೆ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಮತ್ತು ದಾವಣಗೆರೆ ವಿ.ವಿ. ಉತ್ತೀರ್ಣರಾದ ಅಂತಿಮ ಪದವಿ ವಿದ್ಯಾರ್ಥಿಗಳ ವಿವರವನ್ನು ನ್ಯಾಡ್‍ಗೆ ಅಪ್‍ಲೋಡ್ ಮಾಡಲು ಸೂಚನೆ ನೀಡಿದರು.
ಶಿವಮೊಗ್ಗಕ್ಕೆ 10 ಸಾವಿರ ಯುವನಿಧಿ ಫಲಾನುಭವಿಗಳು; ಯುವನಿಧಿ ಯೋಜನೆಗೆ ಜನವರಿ 12 ರಂದು ಶಿವಮೊಗ್ಗದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಚಾಲನೆ ನೀಡುವ ಮೂಲಕ ನೊಂದಣಿಯಾದವರಿಗೆ ನೇರವಾಗಿ ಡಿಬಿಟಿ ಮೂಲಕ ಮಾಸಿಕ ಶಿಷ್ಯವೇತನಕ್ಕೆ ಚಾಲನೆ ನೀಡಲಿದ್ದು ದಾವಣಗೆರೆ ಜಿಲ್ಲೆಯಿಂದ 10 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಭಾಗವಹಿಸಲು ಕಳುಹಿಸಿಕೊಡಲಾಗುತ್ತದೆ. ಇದಕ್ಕಾಗಿ ಎಲ್ಲಾ ತಾಲ್ಲೂಕುಗಳಿಂದ ಕರೆದುಕೊಂಡು ಹೋಗಿ ಬರಲು ವಾಹನದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಅರ್ಜಿ ಹಾಕುವ ವಿಧಾನ; ಸೇವಾಸಿಂಧೂ ಪೋರ್ಟಲ್‍ಗೆ ಹೋಗಿ ಮೆನುನಲ್ಲಿ ಕ್ಲಿಕ್ ಅಫ್ಲಿಕೇಷನ್ ಸರ್ವೀಸಸ್, ಎಲ್ಲಾ ಸೇವೆಗಳು ತೆರದುಕೊಳ್ಳುತ್ತವೆ, ಇಲ್ಲಿ ಯುವನಿಧಿ ಅರ್ಜಿ ಕ್ಲಿಕ್ ಮಾಡಬೇಕು, ನಂತರ ಅರ್ಜಿ ಪುಟ ತೆರದುಕೊಳ್ಳುತ್ತದೆ. ಇಲ್ಲಿ ವಿದ್ಯಾರ್ಥಿಯ ಸ್ವಯಂ ಘೋಷಣೆ ಯಸ್ ಅಥವಾ ನೋ ಇದರಲ್ಲಿ 6 ಅರ್ಹತೆಗಳನ್ನು ಹೊಂದಿರಬೇಕು. ನಂತರ ಆಧಾರ್ ದೃಢೀಕರಣ ಮಾಡಬೇಕು, ಆಧಾರ್ ಮಾಹಿತಿ ಬಾಕ್ಸ್ ಚೆಕ್ ಮಾಡಿ, ನಂತರ ಓಟಿಪಿ ಜನರೇಟ್ ಮಾಡಬೇಕು, ನಂತರ ಮೊಬೈಲ್‍ಗೆ ಓಟಿಪಿ ಬರುತ್ತದೆ. ನಂತರ ಎಲ್ಲಾ ವಿವರ ಅರ್ಜಿಗೆ ಆಧಾರ್‍ನಂತೆ ತೆರೆದುಕೊಳ್ಳಲಿದ್ದು ಸಬ್‍ಮಿಟ್ ಮಾಡಬೇಕು, ವಿಳಾಸ ಸರಿಯಿದ್ದಲ್ಲಿ  ಯಥಾವತ್ತು, ಇಲ್ಲದಿದ್ದಲ್ಲಿ ಅರ್ಜಿದಾರರ ತಾಲ್ಲೂಕು, ಜಿಲ್ಲೆ ಟೈಪ್ ಮಾಡಬೇಕು, ನಂತರ ನಾಡ್‍ನಲ್ಲಿ ಪದವಿ ಶಿಕ್ಷಣದ ಪ್ರಮಾಣ ಪತ್ರದ ಸಂಖ್ಯೆ ಟೈಪ್ ಮಾಡಿದಲ್ಲಿ ವಿವರ ಸ್ವಯಂಪ್ರೇರಿತವಾಗಿ ತೆರದುಕೊಳ್ಳುತ್ತದೆ. ಶಿಕ್ಷಣದ ವಿವರ ದಾಖಲು ಮಾಡಬೇಕು ಇದು ಅರ್ಜಿ ನೊಂದಣಿಯ ವಿವಿಧ ಹಂತಗಳಾಗಿರುತ್ತವೆ.    
 ವೀಡಿಯೋ ಕಾನ್ಫರೆನ್ಸ್‍ನಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಉಪಸ್ಥಿತರಿದ್ದರು.                      ======
 

Leave a Reply

Your email address will not be published. Required fields are marked *