ಸರ್ಕಾರದ ಸೂಚನೆಯಂತೆ ಬೆಸ್ಕಾಂ ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಪೂರೈಕೆಗೆ ಬದ್ದವಾಗಿದ್ದು ಮಳೆಯ ಕೊರತೆಯ ನಡುವೆ ಬೇಸಿಗೆ ನಿರ್ವಹಣೆಗಾಗಿ ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಬೆಸ್ಕಾಂ ಎಂ.ಡಿ. ಮಹಂತೇಶ್ ಬೀಳಗಿ ತಿಳಿಸಿದರು.
 ಅವರು ಭಾನುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜನಪ್ರತಿನಿಧಿಗಳೊಂದಿಗೆ ದಾವಣಗೆರೆ ಜಿಲ್ಲಾ ಬೆಸ್ಕಾಂ ಕುಂದು ಕೊರತೆಯ ಸಭೆಯಲ್ಲಿ ಮಾತನಾಡಿದರು. ಈ ವರ್ಷ ಮುಂಗಾರು ಮಳೆಯ ಕೊರತೆಯಿಂದ ಜಲಾಶಯಗಳಲ್ಲಿ ನೀರು ಸಂಗ್ರಹ ಕಡಿಮೆಯಾಗಿದ್ದು ರೈತರು ಪಂಪ್‍ಸೆಟ್‍ಗಳ ಮೇಲೆಯೇ ಜೂನ್ ತಿಂಗಳಿನಿಂದಲೂ ಅವಲಂಭಿತವಾಗಿದ್ದರಿಂದ ತೀವ್ರ ವಿದ್ಯುತ್ ಕೊರತೆಯನ್ನು ಎದುರಿಸಬೇಕಾಗಿದೆ. ಕೊರತೆಯನ್ನು ನೀಗಿಸಲು ಈಗಾಗಲೇ ಜಿಂದಾಲ್, ಸಕ್ಕರೆ ಕಾರ್ಖಾನೆಗಳು, ಯು.ಪಿ.ಸಿ.ಎಲ್, ಸೋಲಾರ್, ವಿಂಡ್‍ಮಿಲ್ ಮೂಲಕ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಈಗ ಯಾವುದೇ ವಿದ್ಯುತ್ ಕೊರತೆಯಾಗದಂತೆ ಪೂರೈಕೆ ಮಾಡಲಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿದ್ದು ಈ ದಿನಗಳಲ್ಲಿ ಇನ್ನಷ್ಟು ವಿದ್ಯುತ್ ಅಭಾವವಾಗಬಹುದೆಂದು ಸಾವಿರ ಮೆಗಾವ್ಯಾಟ್ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದ್ದು ಬೇಸಿಗೆಯಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದು ಎಂ.ಡಿ. ತಿಳಿಸಿದರು.
 ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡರವರು ಸಭೆಯಲ್ಲಿ ಪ್ರಸ್ತಾಪಿಸಿ ರೈತರಿಗೆ ನಿರಂತರವಾಗಿ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂಬ ಭರವಸೆಯಿಂದ ಬೆಳೆಗಳನ್ನು ಹಾಕಿರುವರು. ಎಷ್ಟು ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗಲಿದೆ ಎಂದು ರೈತರಿಗೆ ನಿಖರವಾಗಿ ತಿಳಿಸಿದಲ್ಲಿ ವಿದ್ಯುತ್ ಪೂರೈಕೆಯನ್ನಾಧರಿಸಿ ಬೆಳೆಯನ್ನು ಬೆಳೆಯುತ್ತಾರೆ ಎಂದಾಗ ಬೆಸ್ಕಾಂ ಎಂ.ಡಿ.ಯವರು ಕಳೆದ ಅಕ್ಟೋಬರ್ ತಿಂಗಳಲ್ಲಿ ವಿದ್ಯುತ್ ಕೊರತೆಯಾಗಿದ್ದರಿಂದ ವ್ಯತ್ಯಯವಾಗಿದ್ದು ಮುಂದಿನ ದಿನಗಳಲ್ಲಿ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಬದ್ದವಾಗಿದೆ ಎಂದರು.
ಕಾಲಮಿತಿಯಲ್ಲಿ ಟಿ.ಸಿ.ಬದಲಾವಣೆ; ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಳೀಯವಾಗಿ ಟಿ.ಸಿ.ರಿಪೇರಿ ಕೇಂದ್ರಗಳಿದ್ದು ರೈತರಿಗೆ ಕಾಲಮಿತಿಯಲ್ಲಿ ಸುಟ್ಟ ಟಿ.ಸಿ.ಗಳನ್ನು ಬದಲಾಯಿಸಬೇಕು. ಈ ವೇಳೆ ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಪ್ರಸ್ತಾಪಿಸಿ ನವಿಲೆಹಾಳ್‍ನಲ್ಲಿ ಕಳೆದ 10 ದಿನಗಳಿಂದ ಸುಟ್ಟ ಟಿ.ಸಿ.ಬದಲಾವಣೆ ಮಾಡಿಲ್ಲ ಎಂದಾಗ ಟಿ.ಸಿ.ಸುಟ್ಟಾಗ ತಕ್ಷಣ ಬದಲಾವಣೆ ಮಾಡಬೇಕು, ಟಿ.ಸಿ.ಬ್ಯಾಂಕ್‍ನಲ್ಲಿ 150 ಟಿ.ಸಿ.ಗಳು ದಾಸ್ತಾನಿದ್ದರೂ ಬದಲಾಯಿಸದಿರಲು ಕಾರಣವೇನು ಎಂದು ಬೆಸ್ಕಾಂ ಎಇಇ ಗೆ ಪ್ರಶ್ನಿಸಿದ ಎಂ.ಡಿ. ಮುಂದಿನ ದಿನಗಳಲ್ಲಿ ಈ ತರಹದ ದೂರುಗಳು ಬಂದಲ್ಲಿ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು.
 ಶಾಸಕರಾದ ಡಿ.ಜಿ.ಶಾಂತನಗೌಡರವರು ಹೊನ್ನಾಳಿ ತಾಲ್ಲೂಕಿನ ಟಿ.ಸಿ. ರಿಪೇರಿ ಕೇಂದ್ರದಲ್ಲಿ ಆಯಿಲ್ ದಾಸ್ತಾನಿಲ್ಲ ಎಂದು ಟಿ.ಸಿ.ರಿಪೇರಿ ನಿಲ್ಲಿಸಲಾಗಿತ್ತು ಎಂದಾಗ ಎಂ.ಡಿ.ಯವರು ಏನು ಕಾರಣ ಎಂದಾಗ ಹೊನ್ನಾಳಿ ಎ.ಇಇ ಆಯಿಲ್ ಕೊರತೆ ಇತ್ತು, ಟೆಂಡರ್ ಅವಧಿ ಮುಗಿದ ಕಾರಣ ಆಯಿಲ್ ದಾಸ್ತಾನು ಇರಲಿಲ್ಲ, ಟೆಂಡರ್ ಅವಧಿಯನ್ನು ವಿಸ್ತರಣೆ ಮಾಡಿದ್ದರಿಂದ ಈಗ ಯಾವುದೇ ಸಮಸ್ಯೆ ಇಲ್ಲ ಎಂದರು.
  ಸೋಲಾರ್ ಪಂಪ್‍ಸೆಟ್‍ಗೆ ಆದ್ಯತೆ; ರೈತರ ಪಂಪ್‍ಸೆಟ್‍ಗಳ ಅಕ್ರಮ ಸಕ್ರಮ ಯೋಜನೆಯನ್ನು 2023 ರ ಸೆಪ್ಟೆಂಬರ್ 22 ಕ್ಕೆ ನೊಂದಣಿಯನ್ನು ಸ್ಥಗಿತಗೊಳಿಸಲಾಗಿದೆ. 500 ಮೀಟರ್ ವ್ಯಾಪ್ತಿಯ ಒಳಗೆ ಇರುವ ಪಂಪ್ ಸೆಟ್‍ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ವಿದ್ಯುತ್ ಸಂಪರ್ಕ ಸಕ್ರಮ ಮಾಡಲಾಗುತ್ತದೆ. 500 ಮೀಟರ್‍ಗಿಂತ ಹೆಚ್ಚಿದ್ದಲ್ಲಿ ಸೋಲಾರ್ ಪಂಪ್‍ಸೆಟ್ ಅಳವಡಿಕೆಗೆ ಪ್ರೋತ್ಸಾಹಿಸಲಾಗುತ್ತದೆ. ಸೋಲಾರ್ ಪಂಪ್ ಸೆಟ್ ಅಳವಡಿಕೆಗೆ ಪಿಎಂ ಕುಸುಮ.ಬಿ ಯೋಜನೆಯಡಿ ಅವಕಾಶ ಇದ್ದು ಫಲಾನುಭವಿ ವಂತಿಗೆ ಶೇ 20 ರಷ್ಟು ಪಾವತಿಸಬೇಕು. ಈಗಾಗಲೇ ಮಹಾರಾಷ್ಟ್ರದಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು ಸಾವಿರ ಅಡಿ ಆಳ, ಎರಡು ಕಿ.ಮೀ ದೂರದವರೆಗೆ 7.5 ಹೆಚ್‍ಪಿ ಸೋಲಾರ್ ಪಂಪ್‍ಸೆಟ್ ನಿರಂತರವಾಗಿ ನೀರನ್ನು ತಳ್ಳುತ್ತದೆ. ಈ ಸ್ಥಳಗಳನ್ನು ಬೆಸ್ಕಾಂ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದಾಗ ರೈತರಿಗೆ ಜಾಗೃತಿ ಮೂಡಿಸಿದಲ್ಲಿ ರೈತರೇ ಅಳವಡಿಕೆಗೆ ಮುಂದಾಗುವರು ಎಂದು ಶಾಸಕರಾದ ಡಿ.ಜಿ.ಶಾಂತನಗೌಡ ಮತ್ತು ಬಸವಂತಪ್ಪ ತಿಳಿಸಿ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ. ಯೋಜನೆಯಡಿ ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಸೋಲಾರ್ ಅಳವಡಿಸಿ ಎಂದರು.
 ಅಕ್ರಮ ಸಕ್ರಮಕ್ಕೆ 310 ಕೋಟಿ; 2023 ರ ಸೆಪ್ಟೆಂಬರ್ 22 ರೊಳಗಾಗಿ ಅಕ್ರಮ ಸಕ್ರಮದಲ್ಲಿ ನೊಂದಾಯಿಸಿದ ರೈತರ ಪಂಪ್‍ಸೆಟ್‍ಗಳನ್ನು ಸಕ್ರಮ ಮಾಡಲು ಈಗಾಗಲೇ ಟೆಂಡರ್ ಕರೆದು ಅನುಮೋದನೆ ನೀಡಿ ಜಿಲ್ಲೆಯಲ್ಲಿ ನೊಂದಾಯಿಸಿದ ಹರಪನಹಳ್ಳಿ ಮತ್ತು ತೆಲಗಿ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲಿ 15615 ಪಂಪ್‍ಸೆಟ್‍ಗಳ ಸಕ್ರಮಕ್ಕಾಗಿ 310 ಕೋಟಿ ಅನುದಾನ ಹಂಚಿಕೆ ಮಾಡಿ ಬಿಡುಗಡೆ ಮಾಡಲಾಗಿದೆ ಎಂದು ಎಂ.ಡಿ.ಯವರು ತಿಳಿಸಿದರು.
ಹೊಸ ಸ್ಟೇಷನ್, ಹಳೆ ಸ್ಟೇಷನ್ ಮೇಲ್ದರ್ಜೆಗೇರಿಸಲು ಕ್ರಮ; ರೈತರಿಗೆ ಮತ್ತು ಗ್ರಾಹಕರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಹೊಸ ವಿದ್ಯುತ್ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಈಗಿರುವ ಕೇಂದ್ರಗಳನ್ನು 12.5 ಮೆಗಾವ್ಯಾಟ್‍ನಿಂದ 20 ಮೆಗಾವ್ಯಾಟ್‍ಗೆ ಹೆಚ್ಚಿಸಲು ಮನವಿ ಸಲ್ಲಿಸಿದ ಶಾಸಕರಾದ ಡಿ.ಜಿ.ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಲತಾ ಮಲ್ಲಿಕಾರ್ಜುನ್ ರವರು ಆನಗೋಡು, ಮೆಳ್ಳೆಕಟ್ಟೆ, ಅತ್ತಿಗಟ್ಟೆ ಇವುಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಕಬ್ಬೂರು, ತೋಳಹುಣಸೆ ಹೊಸಸ್ಟೇಷನ್ ಬೇಗ ಆರಂಭಿಸಬೇಕು. ಮತ್ತು ಹೊನ್ನಾಳಿ ತಾ; ನ್ಯಾಮತಿ, ಕ್ಯಾಸಿನಕೆರೆ ಸ್ಟೇಷನ್, ಚೀಲೂರು ಹೊಸ ಮಾರ್ಗ ನಿರ್ಮಾಣ, ಹರಪನಹಳ್ಳಿಯಲ್ಲಿ ಈಗಿರುವ ಸ್ಟೇಷನ್‍ಗಳನ್ನು ಮೇಲ್ದರ್ಜೆಗೇರಿಸಿ ಹೊಸದಾಗಿ ಕನಿಷ್ಠ 4 ಕಡೆ ಸ್ಟೇಷನ್ ಆರಂಭಿಸಲು ಮನವಿ ಮಾಡಿ ವಿದ್ಯುತ್ ಪೂರೈಕೆ ಬೆಸ್ಕಾಂಗೆ ಹರಪನಹಳ್ಳಿ ಬರಲಿದ್ದು ಕೆ.ಪಿ.ಟಿ.ಸಿ.ಎಲ್ ಗುಲ್ಬರ್ಗಕ್ಕೆ ಬರುತ್ತದೆ. ಇದನ್ನ ಸರಿಪಡಿಸಲು ಲತಾ ಮಲ್ಲಿಕಾರ್ಜುನ್ ಮನವಿ ಮಾಡಿದರು.
 ಹೊಸ ಬಡಾವಣೆಗಳ ಸಮೀಕ್ಷೆ; ಗ್ರಾಮಾಂತರ ಪ್ರದೇಶದಲ್ಲಿ ಹೊಸದಾಗಿ ಅಲ್ಲಲ್ಲಿ ಗುಚ್ಚ ಮನೆ ಮತ್ತು ರಸ್ತೆ ಬದಿಯಲ್ಲಿ ತಮ್ಮ ಜಮೀನುಗಳಲ್ಲಿ ಮನೆ ನಿರ್ಮಾಣ ಮಾಡಿಕೊಂಡಿದ್ದು ಇಂತಹ ಜನವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಲು ಸಮೀಕ್ಷೆ ಮಾಡಿ ಅಂದಾಜು ಪಟ್ಟಿ ನೀಡಲು ಬೆಸ್ಕಾಂ ಇಂಜಿನಿಯರ್‍ಗಳಿಗೆ ತಿಳಿಸಿದರು.
 ಸಭೆಯಲ್ಲಿ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಹೆಚ್.ಜೆ.ರಮೇಶ್, ಮುಖ್ಯ ಇಂಜಿನಿಯರ್ ಗೋವಿಂದಪ್ಪ, ಕೆ.ಪಿ.ಟಿ.ಸಿ.ಎಲ್. ಮುಖ್ಯ ಇಂಜಿನಿಯರ್ ಉಮೇಶ್, ಅಧೀಕ್ಷಕ ಇಂಜಿನಿಯರ್ ಜಗದೀಶ್ ಹಾಗೂ ಬೆಸ್ಕಾಂ ಇಂಜಿನಿಯರ್‍ಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *