ಹುಣಸಘಟ್ಟ : ಹೊನ್ನಾಳಿ ತಾಲೂಕಿನ ಲಿಂಗಾಪುರ ಗ್ರಾಮದ ಒಂದನೇ ವಾರ್ಡಿನಲ್ಲಿ ಕಳೆದ ಆರು ತಿಂಗಳಿಂದ ನೀರಿನ ಸಮಸ್ಯೆ ಉಂಟಾಗಿದ್ದು ಗ್ರಾ. ಪಂ ಗೆ ಹಲವು ಬಾರಿ ಅರ್ಜಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನವಾಗಿಲ್ಲವೆಂದು ಗ್ರಾಮದ ಹೆಣ್ಣು ಮಕ್ಕಳು ಖಾಲಿಕೂಡ ಹಿಡಿದು ಲಿಂಗಾಪುರ ಗ್ರಾಮ ಪಂಚಾಯಿತಿ ಮುಂದೆ ಬುಧವಾರ ಬೆಳಿಗ್ಗೆ ಕುಡಿಯುವನೀರಿಗಾಗಿ ಪ್ರತಿಭಟಿ ಸಿದರು.
ಲಿಂಗಾಪುರ ಗ್ರಾಮದ ಮುಖ್ಯ ರಸ್ತೆ, ಏ ಕೆ ಕಾಲೋನಿ, ಅಗಸೆ ಬಾಗಿಲು ಮುಖ್ಯರಸ್ತೆ ಆಂಜನೇಯ ದೇವಸ್ಥಾನಕೇರಿ, ಧನರಾಜಪ್ಪ ಮನೆಯ ಬೀದಿ ಸೇರಿದಂತೆ ಗ್ರಾಮದ ಹಲವು ಕೇರಿಗಳಲ್ಲಿ ಬೆಳಗಿನಿಂದ ಸಂಜೆಯ ತನಕ ನಲ್ಲಿ ಮುಂದೆ ಸಾಲು ಸಾಲು ಕೊಡಪಾನ ಇಟ್ಟು ಕಾದರೂ ಎರಡು ಕೂಡ ಕುಡಿಯುವ ನೀರು ಸಿಗುವುದಿಲ್ಲ, ಗ್ರಾಮದ ಕೆಲವರು ನಲ್ಲಿಯ ಬರುವ ನೀರಿಗೆ ನೀರಿನ ಮೋಟ್ರು ಇಟ್ಟುಕೊಂಡು ದನ ಕರು ಮೈ ತೊಳಿಯುವುದು, ನಲ್ಲಿಯಲ್ಲಿ ನೀರು ಕಟ್ಟಾಗುವ ತನಕ ಮನೆಯ ಹಿತ್ತಲಿನ ಅಡಿಕೆ ಗಿಡ ತರಕಾರಿ ಗಿಡಗಳಿಗೆ ನೀರು ಬಿಡುತ್ತಾರೆ. ಅವರು ಮೋಟ್ರು ತೆಗೆದರೆ ಎರಡು ಕೂಡ ನೀರು ಇಲ್ಲದೆ ಇದ್ದರೆ ಖಾಲಿ ಕೂಡ ಹಿಡಿದು ಮನೆಗೆ ಹೋಗಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆಯರು ದೂರಿದರು.
ಗ್ರಾಮದ ರೈತ ಮುಖಂಡ ಧನರಾಜಪ್ಪ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿ ಮಾತನಾಡಿ ಭದ್ರಾ ನಾಲೆಯಲ್ಲಿ ಕಳೆದ ತಿಂಗಳಿಂದ ನೀರು ಕಟ್ಟಾಗಿರುವುದರಿಂದ ಜನ ಜಾನುವಾರುಗಳಿಗೂ ನೀರಿನ ಸಮಸ್ಯೆ ಉಂಟಾಗಿದ್ದು ಹೆಣ್ಣುಮಕ್ಕಳು ಬಟ್ಟೆ ತೊಳೆಯಲು, ಜಾನುವಾರುಗಳು ನೀರು ಕುಡಿಸಲು ಮೂರು ಕಿಲೋಮೀಟರ್ ದೂರದ ತುಂಗಭದ್ರ ನದಿಗೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ನಿರ್ಲಕ್ಷತನದಿಂದ ಉಂಟಾಗಿರುವ ನೀರಿನ ಸಮಸ್ಯೆಯನ್ನು ತಕ್ಷಣ ಬಗೆಹರಿಸಿದಿದ್ದರೆ ಗ್ರಾಮ ಪಂಚಾಯಿತಿಯ ಮುಂದೆ ಧರಣಿ ಕೂರುವುದಾಗಿ ಎಚ್ಚರಿಸಿದರು.
ಗ್ರಾಮದ ಮಹಿಳೆ ಪ್ರೇಮ ಮಾತನಾಡಿ ಸ್ವಾಮಿ ನಾವುಗಳು ಕೂಲಿಯಿಂದ ಜೀವನ ಮಾಡುವವರು ಮಕ್ಕಳು ಶಾಲೆಗೆ ಹೋಗುತ್ತಿವೆ. ಅಡಿಗೆ ಮಾಡಲು ಬಟ್ಟೆ ತೊಳೆಯಲು ಸ್ನಾನ ಮಾಡಲು ನೀರಿಲ್ಲ. ತೋಟದ ಜಮೀನಿನ ಕೊಳವೆ ಬಾವಿಯಿಂದ ನೀರು ತಂದು ಮಕ್ಕಳಿಗೆ ಅಡುಗೆ ಮಾಡಿ ಶಾಲೆಗೆ ಕಳುಹಿಸಿ ಕೂಲಿ ಮಾಡಲು ಹೋಗುತ್ತೇವೆ. ನೀರು ಗಂಟಿಗೆ ಯಾಕಪ್ಪ ನಮ್ಮ ಕೇರಿಯಲ್ಲಿ ನೀರು ಬರುತ್ತಿಲ್ಲ ಎಂದು ಕೇಳಿದರೆ? ನಾನೇನ್ ಮಾಡ್ಲಿ ರೀ…. ನೀರ್ ಬಂದ್ರೆ ಹಿಡಿದುಕೊಳ್ಳಿ….. ಬರ್ಲಿಲ್ಲ ಅಂದ್ರೆ…. ಗ್ರಾಮ ಪಂಚಾಯಿತಿಗೆ ಹೋಗಿ ಕೇಳ್ರಿ! ಎಂದು ಉಡಾಫೆ ಉತ್ತರ ಹೇಳುತ್ತಾನೆ. ಮೊದಲು ಉಡಾಫೆ ಉತ್ತರಿಸುವ ನೀರುಗಂಟಿ ತೆಗೆದುಹಾಕಿ ಒಳ್ಳೆಯವರನ್ನು ನೇಮಕ ಮಾಡಿ ಎಂದು ಪ್ರೇಮಮ್ಮ ನವರ ಜೊತೆ ಇತರೆ ಮಹಿಳೆಯರು ಧ್ವನಿಗೂಡಿಸಿ ತಿಳಿಸಿದರು.
ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಪರಮೇಶ್ ಕೊಳ್ಳೂರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮಾತನಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಗ್ರಾಮದ ಕೆಳ ಭಾಗದಲ್ಲಿ ನಲ್ಲಿ ಓಪನ್ ಆಗಿ ನೀರು ಪೊಲಾಗಿ ಹೋಗುತ್ತಿದೆ ಎಂದು ನಮ್ಮ ಸಿಬ್ಬಂದಿಗಳು ಹೇಳುತ್ತಿದ್ದಾರೆ. ಓಪನ್ ಆಗಿ ಹೋಗುತ್ತಿರುವ ನೀರನ್ನು ಬಂದು ಮಾಡಿಸಿದರೆ ನೀರು ಮೇಲ್ಬಾಗಕ್ಕೆ ಬರುತ್ತದೆ. ರೈತರು ಗ್ರಾಮ ಪಂಚಾಯಿತಿಗೆ ಬೀಗ ಹಾಕುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನಾನು ಇತ್ತೀಚಿಗಷ್ಟೇ ಪಂಚಾಯಿತಿಗೆ ಬಂದಿದ್ದೇನೆ. ನಿಮ್ಮ ಸಮಸ್ಯೆಗಳು ಏನೇ ಇರಲಿ ಪತ್ರದ ಮೂಲಕ ನೀಡಿದರೆ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುತ್ತೇನೆ. ಇನ್ನೆರಡು ದಿನದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಗ್ರಾಮದ ಮಹಿಳೆಯರಾದ ಸಾವಿತ್ರಮ್ಮ ಮಂಜುಳಾ ಸರೋಜಮ್ಮ ಮಲ್ಲಿಕಮ್ಮ ಗ್ರಾಮಸ್ಥರಾದ ನಾಗರಾಜ ವೀರೇಂದ್ರ ಪಾಟೀಲ್ ಬಾಲಚಂದ್ರ ಉಮೇಶ್ ರಾಘವೇಂದ್ರ ಹನುಮಂತಪ್ಪ ಗಣೇಶ ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಸುದ್ದಿ 1: ಲಿಂಗಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಬುಧವಾರ ಗ್ರಾಮ ಪಂಚಾಯಿತಿ ಮುಂದೆ ಮಹಿಳೆಯರು ಖಾಲಿ ಕೂಡ ಹಿಡಿದು ಪ್ರತಿಭಟಿಸಿ ಮನವಿ ಪತ್ರ ಸಲ್ಲಿಸಿದರು.
