ನ್ಯಾಮತಿ: ಪಟ್ಟಣದಲ್ಲಿ ಶ್ರೀ ಬನಶಂಕರಿ ದೇವಿಯ ರಥೋತ್ಸವ ಶ್ರೀ ವೀರಭದ್ರೇಶ್ವರ ಸ್ವಾಮಿಯ ಷರಭಿಗುಗ್ಗಳ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಇಂದು ವಿಜೃಂಭಣೆಯಿಂದ ಜರಗಿತು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಬನದ ಹುಣ್ಣಿಮೆಯ ದಿನದಂದು ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಗಂಗಾ ಪೂಜೆ, ಬನಶಂಕರಿ ಅಮ್ಮನವರಿಗೆ ಕುಂಕುಮಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ ಶತನಾಮಾವಳಿ, ಲಲಿತ ಸಹಸ್ರನಾಮಾವಳಿ, ಮಹಾ ಮಂಗಳಾರತಿಯೊಂದಿಗೆ ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ರಥೋತ್ಸವವು ಡೊಳ್ಳು, ಭಜನೆ, ಮಂಗಳವಾದ್ಯಗಳೊಂದಿಗೆ ಸಾಗಿ, ಪುನಃ ದೇವಸ್ಥಾನಕ್ಕೆ ಬಂದು ತಲುಪಿತು. ಭಕ್ತರು ಬನಶಂಕರಿ ದೇವಿ ದರ್ಶನ ಪಡೆದು ಪುನೀತರಾದರು.
ಬನಶಂಕರಿ ದೇವಿಯ ರಥೋತ್ಸವದ ಧರ್ಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಯಾವ ವ್ಯಕ್ತಿಗಳು ಸಹ ಫಲಾಪೇಕ್ಷೆ ಇಲ್ಲದೆ ಕಾರ್ಯಕ್ರಮ ಕೆಲಸದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಭಕ್ತರು ಉದ್ದೇಶ ಇಟ್ಟುಕೊಂಡು ದೇವಿಯ ಹತ್ತಿರ ಫಲ ಅಪೇಕ್ಷೆಯನ್ನು ಕಷ್ಟ ಕಾರ್ಪಣ್ಯಗಳನ್ನು ಬಗೆಹರಿಸುವಂತೆ ಬೇಡಿಕೊಂಡು ಸಂಸಾರದಲ್ಲಿ ನೆಮ್ಮದಿ ಜೀವನ ಸಾಗಿಸಬೇಕಾದರೆ ಇಂಥ ಧರ್ಮದ ಕಾರ್ಯಗಳಲ್ಲಿ ಭಕ್ತರು ಭಾಗಿಯಾಗಿ ಶ್ರೀ ಬನಶಂಕರಿ ದೇವಿಯ ಆಶೀರ್ವಾದ ಪಡೆದುಕೊಂಡು ಪುನೀತರಾಗಬೇಕೆಂದು ಹಾರೈಸಿದರು. ಬನಶಂಕರಿ ದೇವಿಯ ಕಮಿಟಿಯ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರುಗಳು ಹಾಗೂ ಪಟ್ಟಣ ಮತ್ತು ಸುತ್ತಮುತ್ತಲ ಹಳ್ಳಿಗಳಿಂದ ಸೇರಿರತಕ್ಕಂಥ ಭಕ್ತರು ಸಹ ಭಾಗವಹಿಸಿದ್ದರು.