ನ್ಯಾಮತಿ: ಭಾಯಾಗಡ್ ಸಂತ ಸೇವಾಲಾಲ್ ಮಹಾರಾಜರು ಹುಟ್ಟಿದ ಕ್ಷೇತ್ರ ಸೂರಗೊಂಡನಕೊಪ್ಪ ನಮ್ಮ ತಾಲ್ಲೂಕಿನಲ್ಲಿರುವುದು ನಮ್ಮ ಪುಣ್ಯ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ಸಂತ ಸೇವಾಲಾಲ್ ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಭಾಯಾಗಡ್‍ನಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ, ಸಂತ ಸೇವಾಲಾಲ್ ಕ್ಷೇತ್ರಾಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾಪನ ಹಾಗೂ ಮಹಾಮಠ ಸೇವಾ ಸಮತಿ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿಯನ್ನು ಫೆ.13ರಿಂದ 15ರವರೆಗೆ ಆಚರಿಸುವ ಬಗ್ಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾಡಳಿತ ನೇತೃತ್ವದಲ್ಲಿ ನಡೆಯುವ ಜಯಂತ್ಯುತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕು. 286ನೇ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪ ಗ್ರಾಮದವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಭಾಯಾಗಡ್‍ನಲ್ಲಿ ಓವರ್‍ಹೆಡ್ ನೀರಿನ ಟ್ಯಾಂಕ್ ನಿರ್ಮಾಣ ಮಾಡುವ ಬಗ್ಗೆ ಎಂಜಿನಿಯರ್ ಜತೆಯಲ್ಲಿ ಚರ್ಚಿಸಿದರು. 3 ದಿನಗಳ ಕಾಲ ಇಲ್ಲಿಯೇ ಇದ್ದು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸುವುದಾಗಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ ಎಂ.ವಿ. ಮಾತನಾಡಿ, ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಕ್ಕೆ 3 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಬರುವ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ವಾಹನ ನಿಲುಗಡೆ, ಹೆಲಿಪ್ಯಾಡ್ ನಿರ್ಮಾಣ, ಆಹಾರ ವಿತರಣೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವುದು. ಶೌಚಾಲಯ ವ್ಯವಸ್ಥೆ, ವಿದ್ಯುತ್, ವೇದಿಕೆ, ಸಾರಿಗೆ ಸೇರಿದಂತೆ ಈಗಾಗಲೇ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಮಿತಿ ರಚಿಸಿದ್ದುಎಲ್ಲರೂ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಎಂ. ಲಮಾಣಿ ಮಾತನಾಡಿ, ‘ಜಯಂತ್ಯುತ್ಸವದಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು, ವಿರೋಧ ಪಕ್ಷದ ಮುಖಂಡರು, ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು ಶಿಷ್ಠಾಚಾರ ಪಾಲನೆಯ ಜತೆಗೆ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಂಏಫ್ ಅಧ್ಯಕ್ಷ ಭೀಮಾನಾಯ್ಕ ಅವರು, ಜಯಂತ್ಯುತ್ಸವ ಕಾರ್ಯಕ್ರಮಕ್ಕೆ1 ಲಕ್ಷ ನೀರಿನ ಪ್ಯಾಕೆಟ್, 1 ಲಕ್ಷ ಮಜ್ಜಿಗೆ ಪ್ಯಾಕೇಟ್ ಸರಬರಾಜು ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಶಂಕರನಾಯ್ಕ, ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ಡಿವೈಎಸ್ಪಿ ಪ್ರಶಾಂತ ಮನ್ನೋಳಿ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಮುಖಂಡರಾದ ಹೀರಾನಾಯ್ಕ, ರಾಘವೇಂದ್ರನಾಯ್ಕ, ಹನುಮಂತನಾಯ್ಕ,ಅರುಣಕುಮಾರ,ಕೆ.ಟಿ.ನಾಗರಾಜನಾಯ್ಕ, ಬೋಜ್ಯನಾಯ್ಕ ಹಾಗೂಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *