ದಾವಣಗೆರೆ : ನಮ್ಮ ಜಿಲ್ಲೆ ಮಧ್ಯ ಕರ್ನಾಟಕದಲ್ಲಿದ್ದು ಅಕ್ಕಪಕ್ಕದ ಎರಡು ಮೂರು ಜಿಲ್ಲೆಗಳು ಆರೋಗ್ಯ, ಶಿಕ್ಷಣ, ಕೈಗಾರಿಕೆ ವಿಚಾರದಲ್ಲಿ ನಮ್ಮನ್ನು ಆಶ್ರಯಿಸಿದ್ದಾವೆ. ಹೀಗಾಗಿ ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ  ಮಾಡಬೇಕು ಅನ್ನೋದು ನಮ್ಮ ಮಹದಾಸೆ. ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಜಿಲ್ಲೆಯಲ್ಲಿ 1000 ಕ್ಕೂ ಹೆಚ್ಚು ಎಕರೆ ಜಮೀನನ್ನು ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣಕ್ಕೆ ಸ್ಥಳ ಗುರುತಿಸಿದ್ದರು. ಮುಂದಿನ ದಿನಗಳಲ್ಲಿ ಅದನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವುದೇ  ನನ್ನ ಪ್ರಥಮ ಆದ್ಯತೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ತಿಳಿಸಿದರು.
ನಗರದ  ವಿನಾಯಕ ಬಡಾವಣೆಯ ವಿನಾಯಕ ಉದ್ಯಾನವನದಲ್ಲಿ ವಿನೂತ ಮಹಿಳಾ ಸಮಾಜದ ಮಾಸಿಕ ಸಭೆಯಲ್ಲಿ ಮಹಿಳಾ ಮತದಾರರ ಜೊತೆ ಮನದಾಳದ ಮಾತುಗಳನ್ನಾಡಿದ ಅವರು, ಕರ್ನಾಟಕದ ಮಧ್ಯ ಭಾಗದಲ್ಲಿರುವ ದಾವಣಗೆರೆ ಜಿಲ್ಲೆಯಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ನಿರ್ಮಾಣ ಮಾಡಿದರೆ ಲಕ್ಷಾಂತರ ಉದ್ಯೋಗಗಳು ಸೃಜನೆಯಾಗುತ್ತವೆ. ಈ ನಿಟ್ಟಿನಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ್ ಅವರು ಜಮೀನನ್ನು ಗುರುತಿಸಿದ್ದರು. ಸದರಿ ಜಮೀನುಗಳನ್ನು ಭೂಸ್ವಾಧೀನ ಮಾಡಿಕೊಳ್ಳುವ ಪ್ರಸ್ತಾವನೆ ಹಂತಕ್ಕೆ ಬಂದು ನಿಂತಿದೆ. ಏರ್ ಫೋರ್ಟ್ ನಿರ್ಮಾಣಕ್ಕೂ 361 ಎಕರೆ ಜಾಗ ಗುರುತಿಸಲಾಗಿದ್ದು, ಭೂಸ್ವಾಧೀನಕ್ಕೆ 142 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ. ಈ ಹಣವನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ನೀವು ಮಹಿಳೆಯರೆಲ್ಲರೂ ಸೇರಿ ನನಗೆ ಬಂಬಲ ನೀಡಿ, ಕಮಲದ ಗುರುತಿಗೆ ಮತ ನೀಡಿದರೆ ಮುಂದಿನ ದಿನಗಳಲ್ಲಿ ಈ ಎರಡು ಬೃಹತ್ ಪ್ರೊಜೆಕ್ಟ್ಗಳನ್ನು ಪ್ರಥಮ ಆದ್ಯತೆ ಮೇಲೆ ಪೂರ್ತಿಗೊಳಿಸುತ್ತೇನೆ ಎಂದರು.
ಕೃಷಿ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರಿಗೆ ಡ್ರೋನ್ ನಿರ್ವಹಣೆ ತರಬೇತಿ ಕೊಡಿಸುತ್ತಿದ್ದಾರೆ. ಡ್ರೋನ್ಗಳನ್ನು ಬಳಸಿಕೊಂಡು ಕೃಷಿ ವಲಯದಲ್ಲಿ ಔಷಧ ಸಿಂಪಡಣೆ ಮಾಡುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಇದು ಸಹಕಾರಿಯಾಗಲಿದೆ. ಇದು ಮಹಿಳೆಯರಿಗೆ ಉದ್ಯೋಗ ಲಭಿಸಲು ಅನುಕೂಲವಾಗಿದೆ ಎಂದರು.
ಮೋದಿ ಜೀ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾವು, ನೀವು ಎಲ್ಲರೂ ನೆಮ್ಮದಿಯಿಂದ ನಿದ್ರೆ ಮಾಡುತ್ತಿದ್ದೇವೆ. ದೇಶದ ಆಂತರಿಕ, ಬಾಹ್ಯ ಭದ್ರತೆ ಬಗ್ಗೆ ಅವರಿಗಿರುವಷ್ಟು ಕಾಳಜಿ ಕಾಂಗ್ರೆಸ್ಸಿಗರಿಗೆ ಇಲ್ಲ. ಹಿಂದುಗಳ ಆರಾಧ್ಯ ದೈವ, ಮರ್ಯಾದ ಪುರುಷೋತ್ತಮನಿಗೆ ಸೂರು ಕಟ್ಟಲು 500 ವರ್ಷವಾದರೂ ಆಗಿರಲಿಲ್ಲ. ಮೋದಿ ಜೀ ಅವರು ಕೇವಲ 2 ವರ್ಷದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿ ಕೋಟ್ಯಂತರ ಹಿಂದುಗಳ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ಧಾರೆ. ರಾಮ ಮಂದಿರ ಹೋರಾಟದಲ್ಲಿ ದಾವಣಗೆರೆಯ ವೀರರು ಹುತಾತ್ಮರಾಗಿದ್ದು ನಮ್ಮ ಕಣ್ಮುಂದೆಯೇ ಇದೆ. ನಾವು ನರೇಂದ್ರ ಮೋದಿ  ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂದರೆ ನೀವು ಕಮಲದ ಗುರುತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಬೇಕು ಎಂದು ಮನವಿ ಮಾಡಿದರು.
ನೀವು ಇಲ್ಲಿ ಸೇರಿರುವ ಎಲ್ಲ ಮಹಿಳೆಯರು ಮನಸ್ಸು ಮಾಡಿದರೆ ಒಬ್ಬೊಬ್ಬರು ಸಾವಿರ ಮತಗಳನ್ನು ಕಮಲದ ಗುರುತಿಗೆ ಹಾಕಿಸುವ ಶಕ್ತಿ ಇದೆ. ಇಂದು ಸಣ್ಣ ಮಕ್ಕಳನ್ನು ಕೇಳಿದರೂ ಮೋದಿ, ಮೋದಿ ಎನ್ನುತ್ತಾರೆ. ಅದಕ್ಕೆ ಕಾರಣ ಅವರ ಪರದರ್ಶಕ ಆಡಳಿತ. ಈ ಬಾರಿಯ ಚುನಾವಣೆಯಲ್ಲಿ ನೀವೆಲ್ಲ ನನಗೆ ಮತ ನೀಡಿ, ಗೆಲ್ಲಿಸಿ ದೆಹಲಿಗೆ ಕಳುಹಿಸುವ ಮೂಲಕ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದರು ಪ್ರಾರ್ಥಿಸಿದರು.
ಈ ವೇಳೆ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ, ಶೈಲಜಾ, ರಂಚಿತ, ಚೈತನ್ಯ, ರೂಪಾ, ವಿನೋದಾ, ವಾಣಿ ಮತ್ತಿರರು ಸಭೆಯಲ್ಲಿದ್ದರು.

Leave a Reply

Your email address will not be published. Required fields are marked *