ಜನಪದ ಸಾಹಿತ್ಯದಲ್ಲಿ ಬಾರದ ವಿಷಯಗಳೇ ಇಲ್ಲ ಅದು ನಮ್ಮ ಜೀವನದ ಪ್ರತಿಬಿಂಬ. ಜೀವನದ ಸಮ ಸೃಷ್ಟಿ ಅದು ಪ್ರಪಂಚ ದರ್ಶನದ ಕಥಾಸಾರ. ಅನ್ನಮಯದಿಂದ ಆನಂದಮಯಕ್ಕೇರುವ ಆತ್ಮ ಪ್ರಮಾಣದ ಮಹಾಕತೆ. ಇದಕ್ಕೆ ಕಟ್ಟುನಿಟ್ಟುಗಳಿಲ್ಲ. ಸಂಸ್ಕೃತಿಯ ಒಂದು ಭಾಗ. ಮಡದಿ ಮಕ್ಕಳು ಕುಳಿತು ಶುದ್ಧಭಕ್ತಿ ಪ್ರದರ್ಶಿಸುವ ಕೇಳುವ ಒಂದು ತಪಸ್ಸು. ಜನವಾಣಿಯೇ ಮನವಾಣಿಯಾಗಿ ನಿರರ್ಗಳ ಶೈಲಿಯಲ್ಲಿ ಹರಿಯುತ್ತದೆ. ನಮ್ಮ ಸಂಸ್ಕೃತಿ ಕಣ್ಮರೆಯಾಗುವ ಈ ಸಮಯದಲ್ಲಿ ಶಿವಶರಣ, ಶಿವಶರಣೆಯರಿಂದ ನಾಡು ನುಡಿ ಪರಂಪರೆಯವರಿಗೆ, ಪೌರಾಣಿಕದಿಂದ ಐತಿಹಾಸಿಕದವರಿಗೆ,ಜನತೆಗೆ ಸಂದೇಶ ನೀಡುವ ಜನರ ಬದುಕು ಸಂಸ್ಕೃತಿ ಆಸೆ ನಿರಾಸೆ ಸುಖ ದುಃಖದ ರೀತಿ ನೀತಿಗಳನ್ನು ವಿಷದವಾಗಿ ಚಿತ್ರಿಸಿ ಪಂಡಿತರನ್ನು ಪಾಮರರನ್ನು ತಲೆದೋಗಿಸುವ ಆತ್ಮ ಶಕ್ತಿಗೆ ನವಚೈತನ್ಯ ತುಂಬುವ ಜನಪದ ಕಲಾವಿದ ಬಹುಮುಖ ವ್ಯಕ್ತಿತ್ವದ 2025ರ ಜನಪದ ಅಕಾಡೆಮಿ ಪುರಸ್ಕೃತ ಜಿ‌ ಪರಮೇಶ್ವರಪ್ಪ ಕತ್ತಿಗಿ ಅವರು.

ಪರಮೇಶ್ವರಪ್ಪನವರು ಹುಟ್ಟಿದ್ದು ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮದಲ್ಲಿ. ತಂದೆ ಕುಂಬಾರ ಬಸಪ್ಪ ತಾಯಿ ಶಾಂತಮ್ಮ. ಓದಿದ್ದು ಇತಿಹಾಸ ಬಿ.ಎ. ಅನ್ನಕ್ಕೆ ದಾರಿ ಹುಡುಕಿದ್ದು ಹರಿಹರದ ಸಮೀಪದ ಕುಮಾರ ಪಟ್ಟಣಂ ಗ್ವಾಲಿಯರ್ ರಯಾನ್ಸ್ ಕಂಪನಿಯಲ್ಲಿ. ಅಭಿರುಚಿ ಮತ್ತು ಆಸಕ್ತಿ ಕ್ಷೇತ್ರ ಜಾನಪದ ಮತ್ತು ಸಂಗೀತ. ಜನಪದ ಕಲಾವಿದ ತಂಡ ಕಟ್ಟಿ ಜಾನಪದವನ್ನೇ ಜ್ಞಾನ ಸಂಸ್ಕೃತಿ ಪ್ರಸಾರದ ಮಾಧ್ಯಮವನ್ನಾಗಿ ಮಾಡಿಕೊಂಡಿದ್ದಾರೆ. ಗತಕಾಲದ ಸಂಸ್ಕೃತಿ ಬಂಡಾರವನ್ನೇ ಪ್ರಸ್ತುತಕ್ಕೆ ಸಲುವಂತೆ ಬೋಧಿಸುತ್ತಿರುವುದರ ಈ ನಾಡಿನ ಹೆಮ್ಮೆಯೇ ಸರಿ. ಬಹುಮುಖ ವ್ಯಕ್ತಿತ್ವದ ಈ ಪರಮೇಶ್ವರಪ್ಪನವರು ಡೊಳ್ಳು ಪದ, ಲಾವಣಿ, ಭಜನೆ,ತತ್ವಪದ, ಮಂಗಳಾರತಿ ಹೀಗೆ ದೊಡ್ಡ ಬಂಡಾರವನ್ನೇ ತುಂಬಿಕೊಂಡು ಹಾಡಿ ರಸಿಕರ ಮನಸೂರೆಗೊಂಡಿದ್ದಾರೆ, ನಿಂತರೆ ಏಕತಾರಿ ನುಡಿಸುತ್ತಾ,ಕುಳಿತರೆ ತಬಲ ಹಾರ್ಮೋನಿಯಂ, ತಾಳಗಳಲ್ಲಿ ತಲ್ಲಿನರಾಗುತ್ತಾರೆ. ತನಗುಂಟಾದ ಆನಂದವನ್ನು ಈ ಕಲಾವಿದನ ಹಾವಭಾವಗಳ ಮೂಲಕ ಕಂಠಸಿರಿ ಮೂಲಕ ಕಣ್ಣು ಮತ್ತು ಕಿವಿ ತುಂಬಿಕೊಳ್ಳುತ್ತಾರೆ. ಪ್ರೇಕ್ಷಕರು ಬದುಕಿನ ಭಾವಾನುಭಾವಗಳನ್ನು ಮಾನವೀಯ ಸಂವೇದನೆಗಳನ್ನು ಅರಿತಿರುವ ಇವರು ರೈತ ಗೀತೆ, ಹಬ್ಬ ಬಂತು ಹಬ್ಬ, ರಸಗಂಗೆ ಮಲೆ- ಮಹದೇಶ್ವರ 1-2 ಹೀಗೆ ಭಾವಪೂರ್ಣವಾಗಿ ಹಾಡಿದ ಕ್ಯಾಸೆಟ್ಗಳನ್ನು ಹೊರತಂದಿದ್ದಾರೆ. ಸಾಹಿತ್ಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಇವರ ಸಾಹಿತ್ಯ ಭಂಡಾರಕ್ಕೆ ಮಾರಿಕೊಪ್ಪದ ಹಳದಮ್ಮ ದೇವಿ ಕಥೆಗಳು, ಜಾನಪದದಲ್ಲಿ ಚನ್ನಪ್ಪ ಸ್ವಾಮಿ ಸಾವಿರ ಗಾದೆಗಳು, ಏನು ಹೇಳಲಿ ತಮ್ಮ ನಾ ನಿನಗ,ಗುಣಸಾಗರಿ, ಹಾಗೂ ಮಹಿಳಾ ಹೋರಾಟ ಬದುಕಿನ ಸುತ್ತ ಹೆಣೆದಿರುವ “ಧರ್ಮಾವತಿ” ಕಾದಂಬರಿಗಳನ್ನು ನೀಡಿದ್ದಾರೆ.

ನಾಗರಿಕತೆ ನಮ್ಮ ಸಂಸ್ಕೃತಿ ಮೇಲೆ ಸವಾರಿ ಮಾಡಿ ನಿರ್ಣಾಮಕ್ಕೆ ಹೋರಾಡಿರುವ ಇಂಥ ಸಮಯದಲ್ಲಿ ಇಂತಹ ಕಲಾವಿದರ ಜನವಾಣಿ ಬೇರಾಗಿ ಕವಿವಾಣಿ ಹೂವಾಗಿ ದೈವ ಧರ್ಮಗಳ ಅಂಟಿನೊಂದಿಗೆ ಭೌಗೋಳಿಕ ಸಾಮಿಪ್ಯವನ್ನು ಧಾರ್ಮಿಕ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು‌. ಜನಪದ ಮಲತು ನಿಂತ ನೀರಲ್ಲ ಅದು ಸಹ ನಿರಂತರ ಹರಿವ ನೀರು ಎಂದು ಎತ್ತಿ ತೋರಿಸುತ್ತಿರುವ ಈ ಜಾನಪದ ಪ್ರತಿಭೆಗೆ ಜಾನಪದ ಪ್ರತಿಭೆ, ಗ್ರಾಮೀಣ ಸಿರಿ, ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ,ಜನಪದ ಪರಮಶ್ರೀ, ತತ್ವದ ಗಾಯಕ ಪುರಸ್ಕಾರ ಈಗ ಜಾನಪದ ಅಕಾಡೆಮಿ ಪ್ರಶಸ್ತಿ ದೊರೆತಿವೆ. ಇವರು ನಿರಂತರವಾಗಿ ತಮ್ಮ ಕಂಠಸಿರಿಯ ಪ್ರಾವೀಣ್ಯತೆಯನ್ನು ಲಕ್ಷಾಂತರ ಕಿವಿಗಳಿಗೆ ತುಂಬುತ್ತಿರಲಿ. ತಮ್ಮ ಲೇಖನಿಯಿಂದ ಕಥಾಗುಚ್ಚಗಳನ್ನು ಸಾಹಿತ್ಯ ಭಂಡಾರಕ್ಕೆ ನೀಡಲಿ.

Leave a Reply

Your email address will not be published. Required fields are marked *