ದಾವಣಗೆರೆ : ಏಪ್ರಿಲ್ 21 :: ಜಿಲ್ಲೆಯಲ್ಲಿ ಮುಂಗಾರು ನಿರೀಕ್ಷಿತ ಅವಧಿಯೊಳಗೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೆರೆ,
ಕಟ್ಟೆ-ಕಾಲುವೆಗಳಲ್ಲಿ ಸಂಗ್ರಹವಾಗಿದ್ದ ನೀರು ದಿನೇದಿನೇ ಬತ್ತಿ ಹೋಗುತ್ತಿದೆ ಮಾತ್ರವಲ್ಲ ಅಂತರ್ಜಲದ ಮಟ್ಟ ಕಡಿಮೆಯಾಗಿದ್ದು, ಗ್ರಾಮೀಣ ಜನ-
ಜಾನುವಾರುಗಳಿಗೆ ಉಂಟಾಗಬಹುದಾದ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆಯನ್ನು ಸಕಾಲದಲ್ಲಿ ಸುಗಮಗೊಳಿಸಲು ಜಿಲ್ಲೆಯ ಎಲ್ಲಾ ತಹಶೀಲ್ದಾರರು
ಹಾಗೂ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಕಾಲಿಕವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು
ಸೂಚಿಸಿದರು.
ಅವರು ಇಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗವು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ
ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯ ಭಾನುವಳ್ಳಿ ಸುತ್ತಮುತ್ತಲ 20ಗ್ರಾಮಗಳಿಗೆ ಕುಡಿಯುವ ನೀರಿನ
ಸರಬರಾಜಿನಲ್ಲಿ ತೀವ್ರ ತರಹದ ಸಮಸ್ಯೆ ಉಂಟಾಗಿದ್ದು, ಅದರ ತುರ್ತು ನಿರ್ವಹಣೆಗಾಗಿ ಅಗತ್ಯವಿರುವ 35-40ಲೋಡ್ ಪ್ರಮಾಣದ ಮರಳನ್ನು ನಂದಿಗಾವಿ
ಮರಳು ಬ್ಲಾಕ್ನಿಂದ ತೆಗೆದುಕೊಳ್ಳಲು ಜಿಲ್ಲಾಡಳಿತ ಅನುಮೋದನೆ ನೀಡಿದ್ದು, ಈ ಕೂಡಲೆ ಗ್ರಾಮೀಣ ಜನರಿಗೆ ಕುಡಿಯುವ ನೀರನ್ನು ಒದಗಿಸುವ ಮಹತ್ವದ
ಕಾರ್ಯವನ್ನು ತಕ್ಷಣದಿಂದಲೇ ಆರಂಭಿಸುವಂತೆ ಅವರು ಜಿಲ್ಲಾ ಭೂವಿಜ್ಞಾನ ಮತ್ತು ಗಣಿಗಾರಿಕೆ ಇಲಾಖೆಯ ಹಿರಿಯ ವಿಜ್ಞಾನಿ ಶ್ರೀಮತಿ ರಷ್ಮಿ ಅವರಿಗೆ ಸೂಚಿಸಿದ
ಅವರು, ಘಟನೋತ್ತರ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸುವಂತೆ ಅವರು ತಿಳಿಸಿದರು.
ತಗ್ಗಿ ಗ್ರಾಮದ ಭದ್ರಾ ಚಾನಲ್ನಲ್ಲಿ ರೈತರು ಪಂಪ್ಸೆಟ್ ಮೂಲಕ ನೀರನ್ನು ಸೆಳೆದುಕೊಳ್ಳುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ
ಕಂಡುಬರುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಿಂದ ಕಚೇರಿಗೆ ಸಾಕಷ್ಟು ದೂರುಗಳೂ ಸಹ ಬರುತ್ತಿವೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಬೆಸ್ಕಾಂ
ಮತ್ತು ಪೊಲೀಸ್ ಇಲಾಖೆಯ ಸಹಕಾರ ಪಡೆದು, ಅಕ್ರಮವಾಗಿ ನೀರೆತ್ತುತ್ತಿರುವವರ ವಿರುದ್ಧ ದೂರು ದಾಖಲಿಸುವಂತೆ ಹಾಗೂ ತ್ವರಿತವಾಗಿ ಕುಡಿಯುವ
ನೀರನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ಸರಬರಾಜು ಕಡಿಮೆ ಇರುವ ಸ್ಥಳಗಳಲ್ಲಿ ಸಾರ್ವಜನಿಕರು ನೀರನ್ನು ಮಿತವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ನೀರನ್ನು ಸದ್ಬಳಕೆ
ಮಾಡಿಕೊಳ್ಳಬೇಕು ಅಂತೆಯೇ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಮನವಿ ಮಾಡಿದ ಅವರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ
ಅಧಿಕಾರಿಗಳು ನೀರಿನ ಸಮಸ್ಯೆಯ ಇತ್ಯರ್ಥಕ್ಕಾಗಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಇಂತಹ ಸಂದಿಗ್ಧ ಸಂದರ್ಭದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ
ವರ್ತನೆಯನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂದವರು ಎಚ್ಚರಿಸಿದರು. ಎಲ್ಲಾ ತಾಲೂಕುಗಳ ತಹಶೀಲ್ದಾರರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ
ವಾರಕ್ಕೊಮ್ಮೆ ತಮ್ಮ ಕಾರ್ಯಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆಯ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಾಹಿತಿ
ನೀಡುವಂತೆ ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವೆಡೆಗಳಲ್ಲಿ ಖಾಸಗಿ ಬೋರ್ವೆಲ್ಗಳ ಮಾಲೀಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ನೀರು ಒದಗಿಸಲು ಕ್ರಮ
ಕೈಗೊಳ್ಳಬೇಕು. ಅಧಿಕಾರಿಗಳು ಸರಿಯಾದ ಕ್ರಮದಲ್ಲಿ ನೀರಿನ ಬಳಕೆಗೆ ಗಮನಹರಿಸಬೇಕು. ನೀರಿನ ಒಟ್ಟು ಬೇಡಿಕೆ ಮತ್ತು ನಿರ್ವಹಣೆಯ ಬಗ್ಗೆ
ಗಮನಹರಿಸುವಂತೆ ಅವರು ಸಲಹೆ ನೀಡಿದರು.
ಕಲುಷಿತ ನೀರು ನಾಲೆ, ಕೆರೆ ಕಟ್ಟೆ-ಕಾಲುವೆಗಳಿಗೆ ಸೇರದಂತೆ ಹಾಗೂ ಗ್ರಾಮೀಣ ತ್ಯಾಜ್ಯ, ಸತ್ತ ಪ್ರಾಣಿಗಳು ಜಲಮೂಲಗಳಿಗೆ ಸೇರ್ಪಡೆಯಾಗದಂತೆ
ವಿಶೇಷ ಗಮಹರಿಸಬೇಕು. ಹಾಗೆಯೇ ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸುವಂತೆ ಸಲಹೆ ನೀಡಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ಯಾವುದೇ ಸಮಸ್ಯೆಗಳು ಎದುರಾಗದಂತೆ ಹಾಗೂ ಮುಂದಿನ ಒಂದು
ವಾರದಲ್ಲಿ ಎದುರಾಗಬಹುದಾದ ಸಂಭಾವ್ಯ ಗ್ರಾಮಗಳನ್ನು ಈಗಲೇ ಗುರುತಿಸಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದ
ಅವರು, ನೀರಿನ ಮೂಲಗಳನ್ನು ಗುರುತಿಸಿ, ಸಮಸ್ಯೆಯ ಸಕಾಲಿಕ ನಿರ್ವಹಣೆಗೆ ಸದಾ ಸನ್ನದ್ಧರಾಗಿರುವಂತೆ ಅವರು ಸೂಚಿಸಿದರು.
ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ 13ಗ್ರಾಮಗಳಿಗೆ ಬೋರ್ವೆಲ್ಗಳ ಮೂಲಕ, 02ಗ್ರಾಮಗಳಿಗೆ ಟ್ಯಾಂಕರ್ಗಳ ಮೂಲಕ ನೀರನ್ನು
ಒದಗಿಸಲಾಗುತ್ತಿದೆ. ಡಿ.ಸಿ., ದಾವಣಗೆರೆ.
ಜನಗಣತಿ ಕಾರ್ಯಕ್ಕೆ ಸಹಕರಿಸಲು ಮನವಿ : ಜಿಲ್ಲೆಯಲ್ಲಿ ಈಗಾಗಲೇ ಆರಂಭಗೊಂಡಿರುವ ಜನಗಣತಿ ಕಾರ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು
ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದಾರೆ. ಸಾರ್ವಜನಿಕರು ತಮ್ಮ ಮನೆಗೆ ಸಮೀಕ್ಷೆಗಾಗಿ ಬರುವ ಅಧಿಕಾರಿ-ಸಿಬ್ಬಂಧಿಗಳಿಗೆ ಅಗತ್ಯ ಮಾಹಿತಿ ನೀಡಿ
ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ಮನವಿ ಮಾಡಿದ್ದಾರೆ.
