ಕನ್ನಡ ಚಿತ್ರರಂಗದಲ್ಲಿ ಕನ್ನಡಿಗರಾಗಿ ಹುಟ್ಟಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ ಕೀರ್ತಿ ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ವರನಟ ಡಾ.ರಾಜ್ಕುಮಾರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ.ರಾಜ್ಕುಮಾರ್ ಅವರಿಗೆ ಅವರ ಜೀವಮಾನದ ಸಾಧನೆಗಾಗಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’ ಹಾಗೂ ಕೇಂದ್ರ ಸರ್ಕಾರವು ‘ಪದ್ಮಭೂಷಣ’ ಮತ್ತು ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಯಾದ ‘ದಾದಾಸಾಹೇಬ್ ಫಾಲ್ಕೆ’ ನೀಡಿ ಗೌರವಿಸಿದೆ. ಅವರು ಕೇವಲ ನಟರಾಗಿ ಉಳಿಯದೆ ಕೋಟ್ಯಂತರ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ ಎಂದರು.
ಡಾ|| ರಾಜ್ಕುಮಾರ್ರವರು ಒಟ್ಟು 212 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಅವರ ಯಾವ ಚಿತ್ರಕ್ಕೂ ಕೂಡ “ಎ” ಸರ್ಟಿಫಿಕೇಟ್ ದೊರೆತಿಲ್ಲ. ಅಂದರೆ, ಅವರ ಪ್ರತಿಚಿತ್ರವೂ ಕೂಡಾ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿವೆ. ಸದಾ ಶ್ವೇತ ವಸ್ತ್ರಧಾರಿಯಾಗಿದ್ದ ಡಾ|| ರಾಜ್ಕುಮಾರ್ರಂತೆಯೇ ಅವರ ಸಿನಿಮಾಗಳು ಕೂಡಾ ಅಷ್ಟೇ ಸ್ವಚ್ಚ, ಸ್ಫುಟವಾಗಿದ್ದವು. ಅವರ ಜೀವನ ಚೈತ್ರ ಸಿನಿಮಾ ತಮಿಳಿಗೆ ರಿಮೇಕ್ ಆಗಬೇಕಿತ್ತು. ಆಗ ತಮಿಳಿನ ಪ್ರಸಿದ್ಧ ನಟ ಶಿವಾಜಿ ಗಣೇಶನ್ ಹೇಳಿದ ಮಾತು ಅರ್ಥಪೂರ್ಣ. ಡಾ||ರಾಜ್ಕುಮಾರ್ ಮಾಡಿದ ಪಾತ್ರವನ್ನು ನಾನು ಮಾಡುವುದು ಸರಿಯಲ್ಲ. ರಾಜ್ಕುಮಾರ್ರವರ ಗುಣ-ಸ್ವಭಾವವೇ ಬೇರೆ. ನನ್ನ ಗುಣ-ಸ್ವಭಾವವೇ ಬೇರೆ. ರಾಜ್ಕುಮಾರ್ರನ್ನು ಒಪ್ಪಿಕೊಂಡ ಹಾಗೆ ವೀಕ್ಷಕರು ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವ ಅವರ ಈ ಮಾತು ಡಾ||ರಾಜ್ ಶ್ರೇಷ್ಟತೆಯನ್ನು ಅನಾವರಣಗೊಳಿಸುತ್ತದೆ ಎಂದರು.
ಅನ್ಯ ಭಾಷೆಗಳಲ್ಲಿ ನಟಿಸುವ ನೂರಾರು ಅವಕಾಶಗಳಿದ್ದರೂ, “ನಾನು ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಯ ಚಿತ್ರರಂಗದಲ್ಲಿ ನಟಿಸುವುದಿಲ್ಲ” ಎಂಬ ದೃಢ ಸಂಕಲ್ಪದ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದರು ಎಂದು ತಿಳಿಸಿದರು.
ಡಾ.ರಾಜ್ಕುಮಾರ್ ಎಂದರೆ ಅದೊಂದು ಮುಗ್ಧತೆಯ ಸಂಕೇತ. ಮುಗುವಿನ ಹಾಗೆ. ಮುಗ್ಧತೆಯಿಂದಲೇ ಎಲ್ಲವನ್ನು ಗ್ರಹಿಸುವ ಡಾ||ರಾಜ್ ಎಷ್ಟು ದೊಡ್ಡ ವ್ಯಕ್ತಿತ್ವವೋ ಅಷ್ಟೆ ಸರಳತೆಯ ಸಾಕಾರಮೂರ್ತಿ. ಅವರು ಊಟ ಮಾಡುವುದನ್ನು ನೋಡುವುದೇ ಒಂದು ಸೊಗಸು. ಪ್ರತಿ ಅಗಳು ಅನ್ನವನ್ನೂ ಕೂಡ ಭಕ್ತಿ-ಭಾವದಿಂದಲೇ ಆಸ್ವಾದಿಸುತ್ತಿದ್ದರು. ಪ್ರತಿ ಅಗುಳಿನ ಹಿಂದೆ ರೈತನ ಶ್ರಮ ಇದೆ. ಇದನ್ನು ಯಾವುದೇ ಕಾರಣಕ್ಕೂ ವ್ಯರ್ಥ ಮಾಡಬಾರದು ಎನ್ನುತ್ತಿದ್ದರು. ಹಾಗೆಯೇ ಚಿತ್ರೀಕರಣದ ಸಂದರ್ಭದಲ್ಲಿ ಎಂದೂ ಕೂಡ ಪ್ರತ್ಯೇಕವಾಗಿ ಭೋಜನ ಮಾಡಿದವರಲ್ಲ. ಸೆಟ್ನಲ್ಲಿ ಎಲ್ಲರೊಂದಿಗೆ ಬೆರೆತೇ ಊಟ ಮಾಡುತ್ತಿದ್ದರು ಎಂದರು.
ಡಾ||ರಾಜ್ಕುಮಾರ್ ಅವರು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಮಾತ್ರವಲ್ಲದೇ ಹಾರ್ಮೋ ನಿಯಂ ಸಿತಾರ್ ಹಾಗೂ ತಬಲಾ ವಾದನವನ್ನು ಬಲ್ಲವರಾಗಿದ್ದರು. ಆಗೆಲ್ಲಾ ಕಂಪನಿ ನಾಟಕದ ಕಲಾವಿದರಿಗೆ ಸಂಗೀತ ಒಂದರ್ಥರಲ್ಲಿ ಕಡ್ಡಾಯವಾಗಿತ್ತು. ಕಲಿಯಲೇ ಬೇಕಾಗಿತ್ತು. ಹೀಗಾಗಿ ರಾಜ್ ಅವರಿಗೆ ಆ ಕಲೆ ಸಹಜವಾಗಿಯೇ ಬಂದಿತ್ತು. ಅಭಿನಯ ಎಂದರೆ ರಾಜ್ ಅಂತ ಎಲ್ಲರೂ ಒಪ್ಪುತ್ತಾರೆ ಎಂದು ತಿಳಿಸಿದರು.
ಅವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಿತ್ತು. ಹಳೆಯ ತಲೆಮಾರಿನ ಪ್ರೇಕ್ಷಕರು ಇಂದಿಗೂ ಅವರ ಚಿತ್ರಗಳನ್ನು ನೋಡಿ ಭಾವುಕರಾಗುತ್ತಾರೆ ಎಂದರೆ, ಅದಕ್ಕೆ ಅವರ ನೈಜ ನಟನೆ ಮತ್ತು ಪಾತ್ರಗಳಲ್ಲಿ ಅವರು ಹೊಂದುತ್ತಿದ್ದ ತಾದಾತ್ಮ್ಯವೇ ಕಾರಣ ಎಂದರು.
ಪ್ರಸ್ತುತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಸರ್ಕಾರದ ನಿರ್ದೇಶನದಂತೆ ಈ ವರ್ಷದ ಜಯಂತ್ಯೋತ್ಸವವನ್ನು
