ಶಿಕಾರಿಪುರ ಹೋರಾಟದ ಜೀವಜಲ ಹುಲಗಿ ಕೃಷ್ಣ
“ಯುದ್ದ ಕಾಲೇ ಶಸ್ತ್ರಭ್ಯಾಸ” ಎನ್ನುವಂತೆ ಕೋವಿಡ್ ಯುದ್ದ ಸಾರಿದೆ ಆಡಳಿತ ವ್ಯವಸ್ಥೆಗಳು ಅದನ್ನು ತಹಬದಿಗೆ ತರುವಲ್ಲಿ ಹೆಣಗಾಡುತ್ತಿವೆ, ಕೋವಿಡ್ ತನ್ನ ವೇಗದಲ್ಲಿ ಕೋಟಿ ಸಂಖ್ಯೆಯಲ್ಲಿ ಬದುಕುಗಳನ್ನು ನಿತ್ರಾಣಗೊಳಿಸಿದೆ, ಲಕ್ಷದ ಸಂಖ್ಯೆಯಲ್ಲಿ ಸಾವುಗಳ ಹೊತ್ತು ನುಗ್ಗುತ್ತಿದೆ, ಎಲ್ಲಿ ನೋಡಿದರೂ ಬದುಕಿನ ಬವಣೆಗಳು ಮೇರೆ ಮೀರಿದೆ, ಎದೆಯ ಚರಿಗೆಗಳು ಬತ್ತಿ ಹೋಗುತ್ತಿವೆ, ಮಾತಾಡುವ ದನಿಗಳು ಕ್ಷೀಣಿಸುತ್ತಿವೆ, ಹೋರಾಟಗಳು ಹುದುಗಿ ಹೋಗಿವೆ, ಮಾನವೀಯ ಎದೆಗಳ ಮ್ಯಾಲೆ ಅಮಾನವೀಯ ಅಸಹನೆಗಳು ತಾಂಡವವಿಕ್ಕಿದೆ. ಎಲ್ಲಾ ಬದಲುಗೊಂಡಿದೆ ಕಂಡ್ರೀ… ವ್ಯಾಪಾರ-ವಹಿವಾಟು, ಶಿಕ್ಷಣ, ಆರೋಗ್ಯ, ಮಾರುಕಟ್ಟೆಯಲ್ಲಿ ಕೊಳೆತು ಮೊದಲಿನ ಸ್ಥಿತಿಯನ್ನು ಎದುರು ನೋಡುವಂತಾಗಿದೆ.
ಇಂತಿವುಗಳ ನಡುವೆ, ರಾಜಕೀಯ ಪಲ್ಲಟಕ್ಕೆ ತಾಲೀಮುಗಳು ನಡೆಯುತ್ತಲಿದೆ, ಸಾವಿನ ಸೂರಿನಲ್ಲಿ ಸೂತಕವಿದ್ದರೇನಂತೆ… ಅಧಿಕಾರದಂದಣದ ಚರ್ಚೆ ನಡೆಯುತ್ತಿರುವುದು ಎಷ್ಟರಮಟ್ಟಿಗೆ ಸಮಂಜಸ ಎನ್ನುವುದು ನೇರವಾಗಿ ಪ್ರಶ್ನಿಸಿದ್ದಾರೆ ಶಿಕಾರಿಪುರದ ಕನ್ನಡದ ಕಟ್ಟಾಳು ಹುಲಗಿ ಕೃಷ್ಣ.
ಹೌದು ಇಂತಿವರ ಕುರಿತಾಗಿ ಒಂದಿಷ್ಟು ಬರೆಯಬೇಕಿನಿಸಿದೆ, ಮಲೆನಾಡಿನ ಹೆಬ್ಬಾಗಿಲು ಹೋರಾಟದ ಜನ್ಮಭೂಮಿ ಶಿವಮೊಗ್ಗ ಜಿಲ್ಲೆ ಒಂದಲ್ಲ ಒಂದು, ಸುದ್ದಿಯಲ್ಲಿ, ಸ್ಥಿತಿಯಲ್ಲಿ ತನ್ನ ಪ್ರಭುತ್ವವನ್ನು ಸಾಧಿಸಿ ಅಗ್ರಮಾನ್ಯವಾಗಿ ಗುರುತಿಸಿಕೊಳ್ಳುತ್ತದೆ ಹೀಗಾಗಿಯೇ ಶಿವಮೊಗ್ಗವನ್ನು ಯಾರು ಅಲ್ಲಗಳೆಯಲು ಇಂದಿಗೂ ಸಾಧ್ಯವಾಗಿಲ್ಲ. ಇಂತಹ ಬಲು ಸಂದಿಗ್ಧತೆ ಮನುಕುಲದ ಮೇಲೆ ಎರಗಿದೆ, ಕೋವಿಡ್ ಆತಂಕದಲ್ಲೂ ಪ್ರಶ್ನಿಸುವುದು, ಆಡಳಿತ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡು ಜಾಗೃತಿ ಮೂಡಿಸಿ ಎಚ್ಚರಿಸುವುದು ಕೂಡ ಈ ಹೊತ್ತಿನ ಪ್ರತಿ ಸಂಘಟಕರ ಆದ್ಯ ಕರ್ತವ್ಯ.
ಸಾಕಷ್ಟು ಸಂಘಟಕರು ನಾಡಿನಲ್ಲಿ ಪ್ರಶ್ನಿಸುತ್ತಲೇ ಇದ್ದಾರೆ, ಆಡಳಿತ ವ್ಯವಸ್ಥೆಗಳ ನ್ಯೂನ್ಯತೆಗಳನ್ನು ಪ್ರತಿಬಿಂಬಿಸುತ್ತಲೇ ಇದ್ದಾರೆ ಆದರು ಯಾವ ಬದಲಾವಣೆಯ ಹೊಸ್ತಿಲಲ್ಲಿಯೂ ನಾಗರೀಕ ಜನಪ್ರತಿನಿಧಿಗಳು ನಿಂತಿಲ್ಲ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಕನ್ನಡದ ಕಟ್ಟಾಳು ಹುಲಗಿ ಕೃಷ್ಣರವರ ಹೋರಾಟದ ಕೂಗು ಇಂದಿಗೂ ನಿಲ್ಲಿಸಿಲ್ಲ, ಯಾವುದೇ ಕ್ಲಿಷ್ಟಕರ ಸಂದರ್ಭದಲ್ಲಿಯೂ ಬಕೆಟ್ ಹಿಡಿದಿಲ್ಲ, ಸದಾ ನ್ಯಾಯಪರ-ಜನಪರತೆಯ ದನಿಯಾಗಿ ಕನ್ನಡದ ತಳಹದಿಯಲ್ಲಿ ಸಮಗ್ರ ಭಾವದಿ ಸಂಘಟಕನಾಗಿ, ಭದ್ರವಾಗಿ ತಮ್ಮ ಜಯಕರ್ನಾಟಕ ಸಂಘಟನೆಯನ್ನು ಕಟ್ಟಿಕೊಂಡಿದ್ದಾರೆ.
ಯಾವುದೇ ಹೋರಾಟವಿರಲಿ ಅಲ್ಲಿ ಹುಲಗಿ ಕೃಷ್ಣರವರ ದನಿ ಇದ್ದೇ ಇರುತ್ತದೆ ಒಮ್ಮೊಮ್ಮೆ ಕೇಸು ದಾಖಲಿಸಿಕೊಂಡರು ಬೆಂಬಿಡದೇ ಆ ಹೋರಾಟದಲ್ಲಿ ತಾತ್ವಿಕ ನ್ಯಾಯವನ್ನು ದೊರಕಿಸಿಕೊಡುವಲ್ಲಿ ಯಶಸ್ಚಿಯಾಗಿದ್ದಾರೆ.
ಕೋವಿಡ್ ನಂತಹ ಈ ಕಾಲಮಾನದಲ್ಲೂ ರಾಜಕೀಯ ಸ್ಥಾನ-ಮಾನಗಳಿಗಾಗಿ ಪರದಾಡುತ್ತಿರುವ ಪ್ರಸ್ತುತ ವಿದ್ಯಮಾನಗಳನ್ನು ಸಾರಾಸಗಟಾಗಿ ಖಂಡಿಸಿದ್ದು ಇದೆ ಹಾಗೆಯೇ ಚುನಾವಣೆಯ ಸಂದರ್ಭದಲ್ಲಿ ಹಣ ಹಂಚುವ ಮುಖ್ಯಮಂತ್ರಿಗಳೇ ಇಂದು ಸಂಕಟಗಳ ಹೊತ್ತಿರುವ ಸೂರುಗಳಿಗೆ ವಿಶೇಷ ಅನುದಾನ ಕರುಣಿಸಿ ಎಂದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅವಲತ್ತುಕೊಂಡಿದ್ದಾರೆ.
ಸಿಡಿ ಸಚಿವರ ಪ್ರಕರಣದ ವಿರುದ್ದ, ನಾಡಿನ ಜ್ವಲಂತ ಸಮಸ್ಯೆಗಳ ವಿರುದ್ದ ಶಿಕಾರಿಪುರದಲ್ಲಿದ್ದುಕೊಂಡೇ ದನಿಯಾಗುವ ಪ್ರಖರವಾದಿ-ಜನಪರವಾದಿ ಕನ್ನಡದ ಕಟ್ಟಾಳು ಹುಲಗಿ ಕೃಷ್ಣ ರಾಜ್ಯದಲ್ಲಿ ವಿಶೇಷವಾಗಿ ಹೋರಾಟಗಳ ಮೂಲಕ ಗಮನ ಸೆಳೆಯುತ್ತಾರೆ.
ಅಂದು ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ನೀಡಿದ ಸರ್ಕಾರದ ಹಠಮಾರಿತನದ ಧೋರಣೆಯ ವಿರುದ್ದ ದನಿಯಾದವರು, ಹೀಗೆ ಸಾಮಾಜಿಕ ನ್ಯಾಯವನ್ನು ಬಯಸುತಲಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಬಲಿಷ್ಠ ಹೆಜ್ಜೆಗಳಿಟ್ಟುಕೊಂಡೇ ಸಾಗಿ ಬಂದ ಹುಲಗಿ ಕೃಷ್ಣರವರ ಹೋರಾಟದ ಕುರುಹುಗಳು ಸಾವಿರ ಸಂಖ್ಯೆಯಲ್ಲಿದೆ ಇಲ್ಲಿ ಎಲ್ಲವನ್ನು ವಿವರಿಸಲೊರಟರೇ ಸಂಚಿಕೆಗಳೇ ಸಗಟುಗಳಾಗುತ್ತದೆ.
ಹೀಗಾಗಿ ಇಲ್ಲೊಂದಿಷ್ಟು ದಾಖಲಿಸಿದ್ದೇನೆ, ಶಿಕಾರಿಪುರದಲ್ಲಿ ಜಿಲ್ಲಾ ಆಸ್ಪತ್ರೆಯ ಕಟ್ಟಡವಾಯಿತು. ಆದರೆ ಅದು ಜಿಲ್ಲಾ ಆಸ್ಪತ್ರೆಯಾಗಿ ಉಳಿಯಲಿಲ್ಲ. ನಿರ್ಮಿಸಲಾದ ಎಲ್ಲಾ ಆರೋಗ್ಯ ಕೇಂದ್ರ ಕೊಠಡಿಗಳು ಹಾಗೇ ಉಳಿದು ಕೊಂಡವು, ಇದನ್ನು ಪುನರ್ಜಿವಗೊಳಿಸಬೇಕು, ನಿರ್ಮಿಸಲಾದ ಎಲ್ಲಾ ಕೊಠಡಿಗಳು ಕಾರ್ಯನಿರ್ವಹಿಸಬೇಕು ನಾಗರೀಕ ಸೇವೆಗೆ ಅಣಿಗೊಳಿಸಬೇಕು ಎಂದು ಸತತ ಹದಿನೈದು ದಿನಗಳ ಕಾಲ ಧರಣಿ ನಡೆಸಿದ್ದು ಶಿಕಾರಿಪುರದ ಜನತೆ ಎಂದಿಗೂ ಮರೆಯುವಂತಿಲ್ಲ,
ಕೇಂದ್ರ ಯೋಜನೆಯಾದ “ಸರ್ಕಾರದ ಸಂಚಾರಿ ಆರೋಗ್ಯ ಘಟಕ” ದಿಂದ ನಾಗರೀಕ ಚಿಕಿತ್ಸೆಗೆಂದು ಆಗಮಿಸಿದ್ದ ನಕಲಿ ವೈದ್ಯರುಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ಇನ್ನೂ ಅನೇಕತೆಗಳ ದಿಟ್ಟ ಧಿರೋದತ್ತ ಹೋರಾಟದ ಹೆಜ್ಜೆಗಳನ್ನು ಇಂದಿಗೂ ಶಿಕಾರಿಪುರ ನೆನಪಿಸುತ್ತದೆ.
ಹೀಗೆ ಹೋರಾಟಗಳ ತಳಹದಿಯಲ್ಲಿ ಬದುಕು ಕಟ್ಟಿಕೊಂಡು ಎಂದಿಗೂ ರಾಜಿಗಳಿಲ್ಲದ ಗಟ್ಟಿತನ ಮೈಗೂಡಿಸಿಕೊಂಡು, ಸಾವಿರಾರು ಹೆಜ್ಜೆ ಕುರುಹುಗಳನ್ನು ಶಾಶ್ವತಿಕರಣಗೊಳಿಸಿದ್ದಾರೆ ಎಂದರೆ ತಪ್ಪಾಗಲಾರದು, ಹುಲಗಿ ಕೃಷ್ಣ ಎಂದೊಡೆ ಒಮ್ಮೆಲೆ ಆಡಳಿತ ವ್ಯವಸ್ಥೆಗಳಿಗೆ ಕಿವಿ ನಿಮಿರಿಸುವಂತೆ ಅಗಾಧತೆಯನ್ನು ತಂದುಕೊಟ್ಟಿದೆ.
ಹೌದು ಇಂತಹ ಸಂಘಟಿತ ದನಿಗಳಲ್ಲಿ ದನಿಯಾಗಿ, ಭ್ರಷ್ಟಾಚಾರಿಗಳ ಸಿಂಹಸ್ವಪ್ನವಾಗಿ, ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ದ ಎಚ್ಚರಿಕೆ ಘಂಟೆ ಭಾರಿಸಿದ ಹುಲಗಿ ಕೃಷ್ಣ ಪ್ರಸ್ತುತ ಈ ದಿನಮಾನದ “ಶ್ರೀ ಸಾಮಾನ್ಯರ ಬೆನ್ನೆಲುಬು” ಎಂದೇ ಹೇಳಬೇಕಾಗುತ್ತದೆ. ಹೋರಾಟ ಎನ್ನುವುದು ಬಲು ಸುಲಭ ಆದರೆ ಅದರ ಹಾದಿಯಲ್ಲಿ ನಡೆಯುವುದು ಬಲು ಕಷ್ಟಕರ, ಈ ಮಾತ್ರದಿಂದಲೇ ಬೆರಳಣಿಕಯಷ್ಟು ಮನಸುಗಳು ಇಲ್ಲಿ ತಮ್ಮ ಮೈಲಿಗಲ್ಲನ್ನು ಸ್ಥಾಪಿಸುತ್ತದೆ. ಇದರಲ್ಲಿ ಹುಲಗಿ ಕೃಷ್ಣ ಕೂಡ ಒಬ್ಬರಾಗಿದ್ದಾರೆ.
ಬರೆಯುವಾಗ ಆತ್ಮದ ಭಾವಗಳು ಬರೆಸುತ್ತಲೇ ಇರಬೇಕು, ಎಲ್ಲಿಯೂ ಪದಗಳಿಗಾಗಿ ತಡಕಾಡಬಾರರು, ಶಭ್ದಕೋಶದ ಪುಟಗಳ ತಿರುವಬಾರದು, ಎಂದರೆ ಬರೆವ ವ್ಯಕ್ತಿಯ ನೈಜಕಥಾ ಪಾತ್ರ ಹಾಗೆಯೇ ಕೋಟೆಯಂತಿರಬೇಕು, ಇದರಲ್ಲಿ ಹುಲಗಿ ಕೃಷ್ಣ ಶಿಕಾರಿಪುರದಿಂದ ನಾಡಿನ ಜ್ವಲಂತ ಸಮಸ್ಯೆಗಳಿಗೆ ದನಿಯಾಗುತ್ತಿದ್ದಾರೆ ಎನ್ನುವುದು ವಿಶೇಷವಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಬರೆದಿದ್ದೇನೆ.


ಇದೀಗ ಕೋವಿಡ್ ಸಂದರ್ಭ, ಜನ-ಜೀವನ ಆತಂಕಗಳಲ್ಲಿ ಮುಳುಗಿದೆ, ಹಸಿವಿನ ವೇಗ ಹೆಚ್ಚುತ್ತಿದೆ ಲಾಕ್ಡೌನ್ ನಿಂದಾಗಿ ಸಂಪೂರ್ಣವಾಗಿ ಎಲ್ಲಾ ವ್ಯವಸ್ಥೆಗಳು ಬದಲುಗೊಂಡಿದೆ, ಸಾವಿರಾರು ಕೋವಿಡ್ ಪೀಡಿತ ಹೆಣಗಳು ಅಂತ್ಯಸಂಸ್ಕಾರಗೊಂಡಿವೆ, ಲಸಿಕೆ ಸರಿಯಾಗಿ ಸಿಗುತ್ತಿಲ್ಲ, ಬೆಡ್ ಗಳಿಲ್ಲ, ಹಾಸಿಗೆ ಸಿಕ್ಕರೂ ವೆಂಟಿಲೇಟರ್ ಗಳಿಲ್ಲ, ಕೇವಲ 40 ವೆಂಟಿಲೇಟರ್ ಇಟ್ಟುಕೊಂಡು ಪರದಾಡುತ್ತಿರುವ ವೈಧ್ಯಕೀಯ ವ್ಯವಸ್ಥೆಗಳು ಪೂರಕವಾಗಿಲ್ಲ, ಖಾಸಗಿ ಆಸ್ಪತ್ರೆಗಳು ಲಕ್ಷದ ಲೆಕ್ಕದಲ್ಲಿ ಬಿಲ್ ಹೇರುತ್ತಿವೆ, ಇಂತಹ ಅವ್ಯವಸ್ಥೆಗಳು, ಆತಂಕಕಾರಿ ಸಂದರ್ಭಗಳಲ್ಲಿ #ಸಿಎಂ” ಬದಲಾವಣೆ ಮಾಡುವ ತೆವಲುಗಳು ಬೇಕೆ..?
ಶತಾಯ-ಗತಾಯ ಜನಸಾಮಾನ್ಯರ ಉಸಿರು ಉಳಿಸುವ ಕಾಲದಲ್ಲಿ ರಾಜಕೀಯ ಹಪಾ-ಹಪಿತನಗಳಿಗೆ ಅಧಿಕಾರದಾಹಿಗಳ ಆಟಾಟೋಪ ನೋಡಿ ನಾಚಿಕೆ ಎನಿಸುತ್ತದೆ ಎನ್ನುತ್ತಾರೆ ಹುಲಗಿ ಕೃಷ್ಣ ಅಲ್ಲದೆ ಇದನ್ನು ಖಂಡಿಸುತ್ತಾರೆ.
*ಓರ್ವ ಸಂಘಟಕನಿಗೆ ಜಾತಿ-ಧರ್ಮಗಳಿರಬಾರದು, ಸ್ವಜನಪಕ್ಷಪಾತ ಮೆರೆಯಬಾರದು, ಕನ್ನಡ ನೆಲದ ನ್ಯಾಯ ಬಯಸಬೇಕು, ಮನುಜಧರ್ಮದ ಅನುಯಾಯಿಗಳು ಅಲ್ಲವೇ… ನಾವು, ಕನ್ನಡ- ಧರ್ಮದ ಪಾಲನೆ ಮಾಡುತ್ತೇನೆ-ಜನಧರ್ಮವನ್ನು ಪಾಲಿಸುತ್ತೇನೆ ಎನ್ನುವ ಮನಸ್ಥಿತಿ ಹುಲಗಿ ಕೃಷ್ಣರವರಲ್ಲಿ ಮನೆ ಮಾಡಿದೆ.
*ಅವರೆಷ್ಟು ನ್ಯೂನ್ಯತೆಗಳ ವಿರುದ್ದವಾಗಿ ಕ್ರೋಧಿಕ್ತವಾಗಿ ಖಂಡಿಸುತ್ತಾರೋ ಅಷ್ಟೆ ಸರಳತೆಯಲ್ಲಿ ಸೇವಾಮುಖಿಯಾಗಿ ನಡೆದುಕೊಳ್ಳುತ್ತಾರೆ ಕೋವಿಡ್-19ನಂತಹ ಈ ವಿಷಮ ಸ್ಥಿತಿಯಲ್ಲಿ ಜನರಿಗೆ ಅರಿವು ಮೂಡಿಸುವಲ್ಲಿ, ಪಾಸಿಟಿವ್ ನಿಂದ ಆತಂಕಗೊಂಡವರಿಗೆ ಆತ್ಮಬಲ ತುಂಬುವುದೇ ಆಗಿರಲಿ, ಹಸಿದ ಸೂರುಗಳಿಗೆ ಆಹಾರವೇ ನೀಡುವುದಾಗಿರಲಿ, ಇಂತಿವುಗಳಲ್ಲಿ ಹುಲಗಿ ಕೃಷ್ಣ ಮುಂಚೂಣಿಯಲ್ಲಿ ದರ್ಶಿಸಿಕೊಳ್ಳುತ್ತಾರೆ.*
ಹುಲಗಿ ಕೃಷ್ಣರವರಿಗೆ ಹುಲಗಿ ಹೆಸರು ಹೇಗೆ ಬಂತು ಎಂದು ಕೇಳಿದೆ ಅವರು ಒಮ್ಮೆಲೆ ಶುರು ಮಾಡಿದರು ಅದು ನಾವು ನಡೆದುಕೊಳ್ಳುವ ಮನೆದೇವರ ಹೆಸರು ನನ್ನ ಹೆಸರಿನ ಮುಂದೆ ಹುಲಗಿ ಬಂದ ಮೇಲೆ ಬದುಕು ಬದಲಾಗಿದೆ ಎನ್ನುತ್ತಾರೆ, ಇವರು ಮೂಲತಃ ಭದ್ರಾವತಿಯವರು ತಂದೆ ರಂಗಪ್ಪ ವಿಐಎಸ್ ಎಲ್ ಉದ್ಯೋಗಿ ತಾಯಿ ಸರಸ್ವತಿ ಮಧ್ಯಮವರ್ಗದ ಕುಟುಂಬದಿಂದ ಬಂದ ಇವರು ಪ್ರಾಥಮಿಕ. ಹೈಸ್ಕೂಲ್, ಉನ್ನತ ಭದ್ರಾವತಿಯಲ್ಲಿ ಉನ್ನತ ವ್ಯಾಸಂಗವನ್ನು ಡಾ.ಸರ್.ಎಂ.ವಿ ಕಾಲೇಜಿನಲ್ಲಿ ಮುಗಿಸುವ ಇವರು ಕಾರಣಾಂತರಗಳಿಂದ ತಾಯಿ ಊರಾದ ಶಿಕಾರಿಪುರಕ್ಕೆ ಬಂದು ವಸಂತರವರೊಂದಿಗೆ ವಿವಾಹವಾಗಿ ನೆಲೆಸುತ್ತಾರೆ,
ಜಯಕರ್ನಾಟಕ ಸಂಘಟನೆ ಇವರ ಹೋರಾಟದ ಬದುಕಿಗೆ ವೇದಿಕೆಯಾಗುತ್ತದೆ, ಪಕ್ಷಾತೀತವಾದ ಹೋರಾಟ, ಮಾತು ನಡೆಗಳಿಂದ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ಹುಲಗಿ ಕೃಷ್ಣರವರು ಈ ಮೊದಲು ಕರವೇ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ ಎನ್ನುತ್ತಾರೆ ಇದೀಗ ಸಂಸ್ಥಾಪಕ ಅಧ್ಯಕ್ಷರಾದ ಮುತ್ತಪ್ಪರೈ ದಿವಂಗತರಾದ ಬಳಿಕ ಜಯಕರ್ನಾಟಕ ಸಂಘಟನೆ ಎರಡು ಭಾಗವಾಗಿದೆ ಗುಣರಂಜನ್ ಶೆಟ್ಟಿಯವರ ಬಣದ ತಾಲ್ಲೂಕು ಅಧ್ಯಕ್ಷರಾಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಚ್ಚರಿ ಸಂಗತಿಯಲ್ಲಿ ಜಯಕರ್ನಾಟಕ ಸಂಘಟನೆ ತಾಲ್ಲೂಕು ಮಟ್ಟದಲ್ಲಿ 5000ಕ್ಕೂ ಹೆಚ್ಚು ಕಾರ್ಯಕರ್ತ ಸದಸ್ಯರನ್ನು ಹೊಂದಿರುವುದು ವಿಶೇಷವಾಗಿದೆ, ಅಲ್ಲದೆ ಗ್ರಾಪಂ ಚುನಾವಣೆಯಲ್ಲಿ ಐದು ಜನ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿಸಿ ಜಯ ಸಾಧಿಸಿದ ಕೀರ್ತಿ ಇವರದ್ದಾಗಿದೆ.
ಹೋರಾಟವೇ ಜೀವ ಎಂದುಕೊಂಡು, ಗಟ್ಟಿತನ ತಳೆದು ಸಾವಿರಾರು ಹೋರಾಟಗಳಲ್ಲಿ ತಮ್ಮದೇ ಜೀವನದ ಪುಸ್ತಕದಲ್ಲಿ ಮುನ್ನುಡಿ ಬರೆದುಕೊಂಡ ಹುಲಗಿ ಕೃಷ್ಣ ಬಹುಮುಖಿ ವ್ಯಕ್ತಿತ್ವದ ಸಮಾಜಮುಖಿ. ಕನ್ನಡದ ಕಟ್ಟಾಳುವಾಗಿದ್ದಾರೆ ಎಂದು ಈ ಸಂದರ್ಭದಲ್ಲಿ ಅಂಭೋಣಿಸುತ್ತೇನೆ.
-ಗಾರಾ.ಶ್ರೀನಿವಾಸ್

Leave a Reply

Your email address will not be published. Required fields are marked *