ದಾವಣಗೆರೆ ಏಪ್ರಿಲ್‌, 24 : ಜಿಲ್ಲೆಯ ಗ್ರಾಮೀಣ ಭಾಗದ ಜನತೆಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಮತ್ತು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್‌ ಮಲ್ಲಿಕಾರ್ಜುನ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರದಲ್ಲಿ ಗೃಹ ಕಚೇರಿಯಲ್ಲಿ ಸಾರ್ವಜನಿಕರುಗಳ ಕುಂದುಕೊರತೆಗಳನ್ನು ಆಲಿಸಿ ಮಾತನಾಡಿದರು.

ದಾವಣಗೆರೆ ಜಿಲ್ಲೆಯಲ್ಲಿ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿವೆ ಎನ್ನುವುದು ಮಾಧ್ಯಮದವರು ಬಿತ್ತರಿಸುವ ವರದಿಯಿಂದ ಪ್ರಕಟವಾಗಿವೆ. ಈ ಹಿನ್ನಲೆ ಗ್ರಾಮಾವಾರು ಟಾಸ್ಕ್‌ಫೋರ್ಸ್ ರಚನೆ ಮಾಡಬೇಕು ಪ್ರತಿ ತಾಲೂಕಿಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸಚಿವರು ಹಾಗೂ ಸಂಸದರು ತಿಳಿಸಿದರು.

ದಾವಣಗೆರೆ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೊರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿಯುವ ಅಂತ ತಲುಪಿದೆ. ಯಾವ ಕುಟುಂಬವೂ ನೀರಿಗಾಗಿ ಪರದಾಡಬಾರದು ಎಂಬುದು ಸರ್ಕಾರದ ಸ್ಪಷ್ಟ ನಿರ್ದೇಶನ. ಗ್ರಾಮೀಣ ಭಾಗದ ತಾಯಂದಿರು, ಮಕ್ಕಳು ಕೊಡಪಾನ ಹಿಡಿದು ಕಿಲೋಮೀಟರ್‌ಗಟ್ಟಲೆ ನಡೆಯುವ ಪರಿಸ್ಥಿತಿ ಬರಬಾರದು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತುಕೊಳ್ಳದೆ ಹಳ್ಳಿಗಳಿಗೆ ಭೇಟಿ ನೀಡಿ ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಚಿವರು ಮತ್ತು ಸಂಸದರು ಎಚ್ಚರಿಸಿದರು.

ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿದಿನ ಬೆಳಿಗ್ಗೆ 10 ಗಂಟೆಯೊಳಗೆ ಗ್ರಾಮವಾರು ನೀರಿನ ಸ್ಥಿತಿಗತಿ ವರದಿ ಸಲ್ಲಿಸಲು ಆದೇಶಿಸಿದ ಸಚಿವರು, ಅಗತ್ಯವಿರುವ ಕಡೆಗಳಲ್ಲಿ ಟ್ಯಾಂಕರ್ ವ್ಯವಸ್ಥೆ ಮಾಡಬೇಕು ನೀರಿನ ಕೊರತೆ ಇರುವ ಗ್ರಾಮಗಳಿಗೆ ತಕ್ಷಣ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಇದಕ್ಕೆ ತಾಲೂಕು ಮಟ್ಟದಲ್ಲಿ 24×7 ಸಹಾಯವಾಣಿ ಆರಂಭಿಸಲು ಸೂಚಿಸಲಾಯಿತು.

ಹಾಳಾಗಿರುವ ಕೊಳವೆಬಾವಿಗಳನ್ನು ಹಾಗೂ ಮಿನಿ ಜಲಸರಬರಾಜು ಯೋಜನೆಗಳನ್ನು ತಕ್ಷಣ ದುರಸ್ತಿಪಡಿಸಿ ಕಾರ್ಯಾರಂಭ ಮಾಡಬೇಕು. ವಿಳಂಬವಾದರೆ ಸಂಬಂಧಪಟ್ಟ ಇಂಜಿನಿಯರ್‌ಗಳೇ ಹೊಣೆ ಎಂದು ಸಚಿವರು ಎಚ್ಚರಿಸಿದ ಸಚಿವರು ಹಾಗೂ ಸಂಸದರು ಅಗತ್ಯ ಬಿದ್ದಲ್ಲಿ ಖಾಸಗಿ ಕೊಳವೆಬಾವಿಗಳನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಸಾರ್ವಜನಿಕರಿಗೆ ನೀರು ಒದಗಿಸಬೇಕು. ಮಾಲೀಕರಿಗೆ ನ್ಯಾಯಯುತ ಪರಿಹಾರ ನೀಡಲು ಮುಂದಾಗಬೇಕು ಎಂದರು.

ಸಾರ್ವಜನಿಕರಿಗೆ ಸಚಿವರು ಹಾಗೂ ಸಂಸದರ ಮನವಿ

ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ, ಪೋಲಾಗದಂತೆ ನೋಡಿಕೊಳ್ಳಬೇಕು. ನೀರಿನ ಸಮಸ್ಯೆ ಕಂಡುಬಂದಲ್ಲಿ ತಾಲೂಕು ಸಹಾಯವಾಣಿ: 1077 ಅಥವಾ ಜಿಲ್ಲಾಧಿಕಾರಿ ಕಚೇರಿ: 08192-230701 ಗೆ ಕರೆ ಮಾಡಿ ದೂರು ದಾಖಲಿಸಬಹುದು ಎಂದು ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ ಹಾಗೂ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ ಅವರು ತಿಳಿಸಿದರು.

Leave a Reply

Your email address will not be published. Required fields are marked *