ಹೊನ್ನಾಳಿ: “ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಸೇವೆ ಶ್ಲಾಘನೀಯ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸಿ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಮೂಲಕ ಸರ್ಕಾರ ತಾರತಮ್ಯ ನೀತಿಯನ್ನು ಕೈಬಿಡಬೇಕು” ಎಂದು ಭಾರತೀಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಎಚ್.ಪಿ. ರಾಜಕುಮಾರ್ ಒತ್ತಾಯಿಸಿದರು. ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಪುರಸಭೆ ಪೌರಕಾರ್ಮಿಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. “ಸದ್ಯ ಹೊನ್ನಾಳಿ ಪಟ್ಟಣದಲ್ಲಿ 28 ಜನ ಪೌರಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದಾರೆ. ಸರ್ಕಾರವು ಕೆಲವರನ್ನು ಕಾಯಂಗೊಳಿಸಿ ಉಳಿದವರನ್ನು ಗುತ್ತಿಗೆ ಆಧಾರದಲ್ಲಿ ಮುಂದುವರಿಸುತ್ತಿರುವುದು ಸರಿಯಲ್ಲ. ಕೆಲಸದಲ್ಲಿ ಸಮಾನತೆ ಇರುವಾಗ ವೇತನ ಮತ್ತು ಸೌಲಭ್ಯಗಳಲ್ಲೂ ಸಮಾನತೆ ಇರಬೇಕು. ಈ ಕಾರ್ಮಿಕರ ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. ಆದ್ದರಿಂದ ತಕ್ಷಣವೇ ಎಲ್ಲರನ್ನೂ ಕಾಯಂಗೊಳಿಸಬೇಕು” ಎಂದು ಅವರು ಆಗ್ರಹಿಸಿದರು. ಸಂಸ್ಥೆಯ ಸಹಕಾರ್ಯದರ್ಶಿ ಗಣೇಶ್ ಕೆ. ಮಾತನಾಡಿ, “ನಗರದ ಸ್ವಚ್ಛತೆಗಾಗಿ ಹಗಲಿರುಳು ಶ್ರಮಿಸುವ ಪೌರಕಾರ್ಮಿಕರನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಅಂತಹ ಅವಕಾಶ ನಮ್ಮ ಸಂಸ್ಥೆಗೆ ಸಿಕ್ಕಿರುವುದು ಪುಣ್ಯದ ಕೆಲಸ” ಎಂದರು. ಇದೇ ಸಂದರ್ಭದಲ್ಲಿ ಪುರಸಭೆಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಪೌರಕಾರ್ಮಿಕರ ಘಟಕದ ತಾಲ್ಲೂಕು ಅಧ್ಯಕ್ಷ ನಾಗೇಶ್, ಭಾರತೀಯ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಎಚ್. ಲಿಂಗಯ್ಯ, ಖಜಾಂಚಿ ಸೋಮಶೇಖರಪ್ಪ ಕೆ, ಹಾಲೇಶ್ ಕುಂಕೋದ್, ಪ್ರಕಾಶ್ ಹೆಬ್ಬಾರ್, ಗಣೇಶ್ ಕುರುವ, ಪ್ರಸನ್ನ, ರೂಪ ಕರಿಸಿದ್ದಪ್ಪ, ಅಂಬಿಕಾ, ದೇವಿರಮ್ಮ ಹಾಗೂ ಶಾಲಾ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಚಿತ್ರಾವಳಿ ಹೊನ್ನಾಳಿ ಪಟ್ಟಣದ ಭಾರತೀಯ ವಿದ್ಯಾ ಸಂಸ್ಥೆಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಪುರಸಭೆ ಪೌರಕಾರ್ಮಿಕರ ಸನ್ಮಾನಿಸಲಾಯಿತು.

