ರೈತರಿಗೆ ಸಲಹೆ

ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು, ರೈತರು
ಮುಂಗಾರು ಬೆಳೆ ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿತ್ತನೆ
ಬೀಜದಲ್ಲಿ ಬೀಜೋಪಚಾರ ಕೈಗೊಳ್ಳಲು ಹಾಗೂ ಬೀಜಾಮೃತ ಬಳಕೆ
ಮಾಡುವಂತೆ ಕೃಷಿ ಇಲಾಖೆಯು ರೈತರಿಗೆ ಸಲಹೆ ನೀಡಿದೆ.
ಅಧಿಕ ಇಳುವರಿ ಪಡೆಯಲು ಉತ್ತಮ ಬೀಜದ ಕೊಡುಗೆ
ಅಪಾರವಾಗಿದೆ. ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬ ನಾಡ್ನುಡಿಯಂತೆ
ಉತ್ತಮ ಇಳುವರಿ ಪಡೆಯುವಲ್ಲಿ ಆರೊಗ್ಯವಂತ ಸಸಿಗಳ ಪಾತ್ರ
ಪ್ರಮುಖವಾಗಿದೆ. ಆದ್ದರಿಂದ ಮಣ್ಣಿನಿಂದ ಹಾಗೂ ಬೀಜದಿಂದ ಹರಡುವ
ರೋಗಗಳನ್ನು ತಡೆಗಟ್ಟಲು, ಸಾರಜನಕ ಮತ್ತು ರಂಜಕ
ಪೋಷಕಾಂಶಗಳ ಲಭ್ಯತೆಯನ್ನು ಹೆಚ್ಚಿಸಲು ಬೀಜೋಪಚಾರ
ಅವಶ್ಯಕ. ಮುಸುಕಿನಜೋಳ, ಶೇಂಗಾ, ತೊಗರಿ ಜಿಲ್ಲೆಯ
ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾಗಿದ್ದು ಬಿತ್ತನೆ
ಕೈಗೊಳ್ಳುವ ಮುನ್ನ ರೈತಬಾಂಧವರು ಕೆಲವು
ತಾಂತ್ರಿಕತೆಗಳನ್ನು ಅನುಸರಿಸಬೇಕು.


ಮುಸುಕಿನಜೋಳದ ಬೆಳೆಯಲ್ಲಿ ಎಕರೆಗೆ ಬೇಕಾಗುವ ಬಿತ್ತನೆ
ಬೀಜಕ್ಕೆ 200 ಗ್ರಾಂ ಅಝೋಸ್ಪೈರಿಲಂ ಮತ್ತು 200 ಗ್ರಾಂ ರಂಜಕ
ಕರಗಿಸುವ ಜೀವಾಣು ಗೊಬ್ಬರದೊಂದಿಗೆ ಬೀಜಪೋಚಾರ ಮಾಡಬೇಕು.
ಬೂಜು ರೋಗ ಅಥವಾ ಕೇದಿಗೆ ರೋಗ ಕಂಡುಬರುವ ಪ್ರದೇಶದಲ್ಲಿ
ಮೆಟಲಾಕ್ಸಿಲ್+ಮ್ಯಾಂಕೋಜೆಬ್ ಮಿಶ್ರಣವನ್ನು 3 ಗ್ರಾಂ ನಂತೆ ಪ್ರತಿ
ಕಿ.ಗ್ರಾಂ ಬೀಜಕ್ಕೆ ಬೆರೆಸಿ ಬೀಜೋಪಚಾರ ಮಾಡಬೇಕು.
ನೆಲಗಡಲೆ ಬಿತ್ತನೆ ಮಾಡುವ ಮೊದಲು ಪ್ರತಿ ಕಿ.ಗ್ರಾಂ ನೆಲಗಡಲೆ
ಬೀಜಕ್ಕೆ 5 ಗ್ರಾಂ ಟ್ರೈಕೋಡರ್ಮ ವಿರಿಡೆ ಅಥವ 2.5 ಗ್ರಾಂ
ಥೈರಾಮ್‍ನ್ನು ಬೆರೆಸಿ, ನೆರಳಿನಲ್ಲಿ ಒಣಗಿಸಬೇಕು, ನಂತರ ಒಂದು ಎಕರೆ
ಬಿತ್ತನೆ ಬೀಜಕ್ಕೆ 150 ಗ್ರಾಂ ರೈಜೋಬಿಯಂ ಮತ್ತು 400 ಗ್ರಾಂ ಪಿ.ಎಸ್.ಬಿ
ಜೈವಿಕ ಗೊಬ್ಬರಗಳನ್ನು ಅಂಟು ದ್ರಾವಣ ಬಳಸಿ ಉಪಚರಿಸಿ ಬಿತ್ತನೆಗೆ
ಬಳಸಬೇಕು. ಗೊಣ್ಣೆ ಹುಳುವಿನ ಬಾಧೆ ಇದ್ದಲ್ಲಿ ಪ್ರತಿ ಕಿ.ಗ್ರಾಂ
ಬಿತ್ತನೆ ಬೀಜಕ್ಕೆ 10 ಮಿ.ಲೀ ಕ್ಲೊರೋಫೈರಿಫಾಸ್ 20 ಇ.ಸಿ ಯನ್ನು ಬೀಜಕ್ಕೆ
ಹಾನಿಯಾಗದಂತೆ ಲೇಪಿಸಿ ಬಿತ್ತನೆ ಮಾಡಬೇಕು.
ಕತ್ತು ಕೊಳೆ ರೋಗದ ನಿರ್ವಹಣೆಗೆ ಪ್ರತಿ ಕಿ. ಗ್ರಾಂ ಬಿತ್ತನೆ
ಬೀಜಕ್ಕೆ 2 ಗ್ರಾಂ ಕಾರ್ಬೆಂಡಜಿಂ ಅಥವಾ ಕ್ಯಾಪ್ಟಾನ್ ನ್ನು ಬೀಜೋಪಚಾರ
ಮಾಡಿ ಬಿತ್ತುವುದು ಸೂಕ್ತ.
ರಾಗಿ ಬೆಳೆಯಲ್ಲಿ ಕಂಡುಬರುವ ಬೆಂಕಿ ರೋಗ/ ಇಳುಕು ರೋಗ
ಮತ್ತು ಕಂದು ಚುಕ್ಕೆ ರೋಗದ ಹತೋಟಿಗೆ ಪ್ರತಿ ಕಿ.ಗ್ರಾಂ
ಬಿತ್ತನೆ ಬೀಜಕ್ಕೆ 2 ಗ್ರಾಂ. ಕಾರ್ಬೆಂಡಜಿಂ ನಿಂದ ಉಪಚಾರ ಮಾಡಿ ಬಿತ್ತನೆ
ಮಾಡಬೇಕು.

ದ್ವಿದಳ ಬೆಳೆಗಳಾದ ತೊಗರಿ, ಹೆಸರು, ಉದ್ದು, ಅವರೆ ಇತರೆ ದ್ವಿದಳ
ಧಾನ್ಯಗಳನ್ನು ಬಿತ್ತುವ ಮೊದಲು 200 ಗ್ರಾಂ ರೈಜೋಬಿಯಂ
ಮತ್ತು 200 ಗ್ರಾಂ ರಂಜಕ ಕರಗಿಸುವ ಜೀವಾಣು ಗೊಬ್ಬರದೊಂದಿಗೆ
ಬೀಜಪೋಚಾರ ಮಾಡಬೇಕು. ತೊಗರಿ ಬೆಳೆಯಲ್ಲಿ ಸೊರಗು
ರೋಗದ ಹತೋಟಿಗೆ ಪ್ರತಿ ಕಿ. ಗ್ರಾಂ ಬಿತ್ತನೆ ಬೀಜಕ್ಕೆ 5 ಗ್ರಾಂ
ಟ್ರೈಕೋಡರ್ಮ ವಿರಿಡೆ ಅಥವಾ 2 ಗ್ರಾಂ ಕಾರ್ಬೆಂಡಜಿಂ ಅನ್ನು
ಬೀಜೋಪಚಾರ ಮಾಡಿ ಬಿತ್ತಬೇಕು.

ಬೀಜಾಮೃತ ತಯಾರಿಕೆಗೆ 20 ಲೀ. ನೀರು, 5 ಕೆ.ಜಿ. ದೇಸಿ ಹಸುವಿನ
ಸಗಣಿ, 5 ಲೀಟರ್ ದೇಸಿ ಹಸುವಿನ ಗಂಜಲ, 50 ಗ್ರಾಂ ಸುಣ್ಣ, ಒಂದು ಬೊಗಸೆ
ಜಮೀನಿನ ಫಲವತ್ತಾದ ಮಣ್ಣು ಬಳಸಬೇಕು. ಬಿತ್ತನೆ ಹಿಂದಿನ ದಿನ
ತೆಳುವಾದ ಹತ್ತಿ ಬಟ್ಟೆಯಲ್ಲಿ 5 ಕೆ. ಜಿ. ಸಗಣಿಯನ್ನು ಕಟ್ಟಿ, 20 ಲೀ.
ನೀರಿರುವ ಪ್ಲಾಸ್ಟಿಕ್ ಬಕೆಟ್ / ಡ್ರಮ್‍ನಲ್ಲಿ ತೂಗುಬಿಡಬೇಕು. ಒಂದು ಲೀ.
ನೀರಿನಲ್ಲಿ 50 ಗ್ರಾಂ ಸುಣ್ಣವನ್ನು ಪ್ರತ್ಯೇಕವಾಗಿ ಬೆರೆಸಿ ತಿಳಿಯಾಗಲು
ಬಿಡಬೇಕು. ಬಿತ್ತನೆ ಮಾಡುವ ದಿನ ಇಳಿಬಿಟ್ಟಿರುವ ಸಗಣಿ ಗಂಟನ್ನು
ಚೆನ್ನಾಗಿ ಕಲಕಿಸಿ, ಐದಾರು ಬಾರಿ ಹಿಂಡಿ ತೆಗೆಯಬೇಕು. ಸುಣ್ಣದ ತಿಳಿ, ಗಂಜಲ
ಹಾಗೂ ಮಣ್ಣನ್ನು ಸಗಣಿ ತಿಳಿಗೆ ಹಾಕಿ ಚೆನ್ನಾಗಿ ಕಲೆಸಿ, ನಂತರ
ಬೀಜಗಳನ್ನು ಒಂದು ನಿಮಿಷ ಮಾತ್ರ ಬೀಜಾಮೃತದಲ್ಲಿ ಮುಳುಗಿಸಿ
ತೆಗೆಯಬೇಕು. ನೆರಳಿನಲ್ಲಿ ಒಣಗಿಸಿ ತೇವ ಆರಿದ ನಂತರ ಬಿತ್ತನೆ
ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *