ಹೊನ್ನಾಳಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಜಾರಿಗೆ ತಂದಿದ್ದು, ರೈತರು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.
ಪಟ್ಟಣದ ವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೃಷಿ ಅಭಿಯಾನದ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.
ಮೆಕ್ಕೆಜೋಳದ ಜೊತೆಗೆ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯುವಂತೆ ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ 3900 ರೈತರಿಗೆ ತಲಾ 4 ಕೆಜಿಯಂತೆ 3900 ತೊಗರಿ ಕಿಟ್‍ಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕರು ತಿಳಿಸಿದರು.
ಅವಳಿ ತಾಲ್ಲೂಕುಗಳಲ್ಲಿ 24,000 ಹೆಕ್ಟೇರ್ ವಿಸ್ತೀರ್ಣದ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯುತ್ತಿದ್ದು, ಕೇವಲ 800 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ತೊಗರಿ ಬೆಳೆಯನ್ನು ಬೆಳೆಯಲಾಗುತ್ತಿದ್ದು ಇದನ್ನು ಹೆಚ್ಚಿಸಲು ಇಲಾಖೆಯ ಅಧಿಕಾರಿಗಳು ಕ್ರಮವಹಿಸುವಂತೆ ಸೂಚಿಸಿದರು.
ರೈತರು ದೇಶದ ಬೆನ್ನಲೆಬು ಅಂತಹ ರೈತರ ಅನುಕೂಲಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿದ್ದು ರೈತರು ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಕಿವಿ ಮಾತು ಹೇಳಿದರು.


ರೈತರು ಕಮರ್ಷಿಯಲ್ ಬೆಳೆಗಳ ಕಡೆ ಮುಖ ಮಾಡುತ್ತಿದ್ದು ಅದರ ಬದಲು ಪೌಷ್ಠಿಕಾಂಶಯುಕ್ತ ಬೆಳೆಗಳಾದ ಸಜ್ಜೆ, ನವಣೆ, ಬರಗು ಮುಂತಾದ ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹಸು-ಎಮ್ಮೆ-ಎತ್ತುಗಳನ್ನು ಸಾಕುವುದರ ಮೂಲಕ ಕೀಟನಾಶಕ ಮತ್ತು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಿ ಕೊಟ್ಟಿಗೆ ಗೊಬ್ಬರವನ್ನು ಬಳಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವಂತೆ ರೈತರಿಗೆ ಶಾಸಕರು ಕರೆ ನೀಡಿದರು.
ಕೃಷಿ ಇಲಾಖೆಯಿಂದ ವಿಶೇಷ ಸೆಲ್ಫಿ ಬೂತ್‍ನ್ನು ನಿರ್ಮಿಸಿದ್ದು ಅದರ ಮೂಲಕ ತೊಗರಿ ಕಿಟ್‍ಗಳನ್ನು ಶಾಸಕರು ಮತ್ತು ಕೃಷಿ ಅಧಿಕಾರಿಗಳು ನೀಡಿದ್ದು ಎಲ್ಲರ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಹಂಸವೇಣಿ, ಜಿಪಂ ಸದಸ್ಯ ಎಂ.ಆರ್.ಮಹೇಶ್,ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್,ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್,ಸದಸ್ಯರಾದ ಬಾಬು ಹೋಬಳಿದಾರ್,ರಂಗನಾಥ್,ಸಿಪಿಐ ಟಿ.ವಿ.ದೇವರಾಜ್,ಪಿಎಸ್‍ಐ ಬಸನಗೌಡ ಬಿರಾದಾರ,ಕೆಎಸ್‍ಡಿಎಲ್ ನಿರ್ದೇಶಕ ಶಿವು ಹುಡೇದ್,ಮುಖಂಡರುಗಳಾದ ಇಂಚರ ಮಂಜು ಸೇರಿದಂತೆ ಮತ್ತೀತರರಿದ್ದರು.

Leave a Reply

Your email address will not be published. Required fields are marked *