ನಮ್ಮ ಪರಿಸರದ ಸುತ್ತಮುತ್ತ ಇರುವ ನೇಕಾರರೇ ನಮ್ಮ ಬಟ್ಟೆಗಳನ್ನು ಒದಗಿಸಲು ಸಿದ್ಧರಿರುವಾಗ, ನಾವು ದೂರದ ಊರಿನಿಂದ ಬಟ್ಟೆ ತರಿಸಿಕೊಳ್ಳುತ್ತಿರುವುದು ಮಹಾ ಅಪರಾಧವಾಗಿದೆ, ಕರೋನದಿಂದ ರಾಜ್ಯದಲ್ಲಿ ಸಾವಿರಾರು ನೇಕಾರರಿಗೆ ಕೆಲಸವಿಲ್ಲದೆ ಮನೆಯಲ್ಲೇ ಕುಳಿತಿದ್ದಾರೆ, ಅವರಿಗೆ ಆದಷ್ಟು ಬೇಗ ನಾವು ಬಟ್ಟೆ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರೆ ಅವರು ಗ್ರಾಮ ತೊರೆಯದೇ ಉಳಿದುಕೊಳ್ಳುತ್ತಾರೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.
ಅವರು ನಗರದ ತರಳಬಾಳು ನಗರದ ಒಂದನೇ ಮುಖ್ಯರಸ್ತೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಮಲ್ಲನಕಟ್ಟೆ ಗ್ರಾಮ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ “ನಮ್ಮ ಬಟ್ಟೆ ನಮ್ಮ ಹತ್ತಿರದ ನೇಕಾರರಿಂದ” ಬಗ್ಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನೇಕಾರ ಕುಟುಂಬದಲ್ಲಿ ಗಂಡ, ಹೆಂಡತಿ, ಮಕ್ಕಳು, ಸಂಸಾರ ಪ್ರತಿಯೊಬ್ಬ ಸದಸ್ಯರು ದುಡಿಮೆಯಲ್ಲಿ ಭಾಗವಹಿಸುತ್ತಾರೆ. ಹಾಗಾಗಿ ರೋಜಗಾರ ಯೋಜನೆಯಂತೆ, ಇದು ಬಹಳ ಅತ್ಯುತ್ತಮವಾದ ಕೆಲಸ ನೀಡುವಂತಹ ವ್ಯವಸ್ಥೆ. ಇಲ್ಲಿ ಬಟ್ಟೆ ಮಾಡುವವನು, ದಾರಮಾಡುವವನು, ಬಣ್ಣ ಹಾಕುವವನು, ಗಂಜಿ ಹಾಕುವನು, ಲಡಿ ತಯಾರಿಸುವನು, ಬಟ್ಟೆ ಹೊಲಿಯುವವನು ಹೀಗೆ ಪ್ರತಿಯೊಂದು ತಯಾರಿಕೆ ಹಂತದಲ್ಲೂ ಸಹ ನೂರಾರು ಜನರಿಗೆ ಕೆಲಸ ಒದಗಿಸುವಂತಹ ಈ ಗ್ರಾಮೀಣ ಉದ್ಯಮಗಳನ್ನು ನಾವು ನಾಶ ಮಾಡಿದ್ದೇವೆ, ಅವುಗಳನ್ನ ಈಗಲಾದರು ಪುನಃಶ್ಛೇತನಗೊಳಿಸಬೇಕು ಎಂದರು.
ಚರಕ ಪ್ರತಿ ಮನೆಯಲ್ಲೂ ಸಹ ಸೂರ್ಯನ ರೀತಿ ಕೆಲಸ ಮಾಡುತ್ತಿತ್ತು, ಗಾಂಧೀಜಿಯವರು ಚರಕದ ಬಗ್ಗೆ ಬಹಳಷ್ಟು ಕೆಲಸಮಾಡಿ ಹೋಗಿದ್ದಾರೆ, ಕಂಬಳಿ ಮಾಡುವರು ಈಗಲೂ ಸಹ ಚರಕ ಬಳಕೆ ಮಾಡುತ್ತಿದ್ದಾರೆ, ಕಂಬಳಿ ಉದ್ಯೋಗ ಇನ್ನೂ ನಶಿಸಿಲ್ಲ, ಕಾರಣ ಮಲೆನಾಡಿನಲ್ಲಿ ಕಂಬಳಿ ಬಳಕೆ ಇನ್ನೂ ಉಳಿದಿದೆ. ಆದರೆ ಮೊಣಕಾಲ್ಮೂರಿನಲ್ಲಿ ಹತ್ತಿ ಬಟ್ಟೆ ಮಾಡುವ ಉದ್ಯೋಗಗಳು ನಾಶವಾಗಿವೆ. ಅಲ್ಲಿ ಸಾವಿರಾರು ನೇಕಾರರು ಕೆಲಸವಿಲ್ಲದೆ ಬೀದಿಗೆ ಬಿದ್ದಿದ್ದಾರೆ. ದೊಡ್ಡ ಕಾರ್ಖಾನೆಗಳಲ್ಲಿ ಬಟ್ಟೆಗಳನ್ನು ನೇಯ್ದು, ಬಟ್ಟೆಗಳನ್ನು ತಯಾರು ಮಾಡಿ, ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ನಿಂದ ಬಟ್ಟೆ ಬಂದಂತೆ, ಈಗ ಬಾಂಬೆಯಿಂದ ನಮಗೆ ಬಟ್ಟೆಗಳು ಬರುತ್ತಾ ಇದೆ. ಭಾರತೀಯರೇ ಭಾರತೀಯರ ಶೋಷಣೆಗೆ ನಿಂತಿದ್ದಾರೆ ಎಂದರು.
ದೊಡ್ಡ ಕಾರ್ಖಾನೆಗಳಿಗೆ ಸಾವಿರಾರು ಕೋಟಿ ಬಂಡವಾಳ ಹಾಕಿ, ಬಹಳ ಕಡಿಮೆ ಬೆಲೆಯಲ್ಲಿ ಉತ್ಪಾದನೆ ಮಾಡುವುದನ್ನು ರೂಢಿಮಾಡಿಕೊಂಡಿದ್ದೇವೆ, ಆದರೆ ಬಂಡವಾಳ ವಾಪಾಸು ಬರದೇ, ಹಾಕಿದ ಹಣವನ್ನು ಹಿಂಪಡೆಯಲು ಸರ್ಕಾರದ ಅನುದಾನಕ್ಕಾಗಿ ಬಹಳಷ್ಟು ಕಾರ್ಖಾನೆಗಳು ಕಾಯುತ್ತಿವೆ. ಸಣ್ಣ ಮೀನನ್ನು ದೊಡ್ಡ ಮೀನು ತಿಂದ ಹಾಗೆ, ಸಣ್ಣ ಕಾರ್ಖಾನೆಗಳನ್ನ, ದೊಡ್ಡ ಕಾರ್ಖಾನೆಗಳು ನುಂಗಿ ಹಾಕುತ್ತಿವೆ. ಹಾಗಾಗಿ ನಿಜ ಸ್ವದೇಶಿ ಸಿದ್ಧಾಂತವನ್ನು ನಾವೀಗ ಅಳವಡಿಸಿಕೊಳ್ಳಬೇಕು, ಕರೋನದಿಂದ ಜನರು ಗ್ರಾಮದಿಂದ ನಗರಗಳಿಗೆ ವಲಸೆ ಹೋಗುತ್ತಿರುವುದನ್ನು ತಡೆಯಲು ಮೊದಲು ಬಟ್ಟೆ ಉದ್ಯೋಗವನ್ನ ಜನರಿಗೆ ಹಿಂತಿರುಗಿಸಬೇಕು. ಇದರ ಬಗ್ಗೆ ಜನಜಾಗೃತಿ ಹೆಚ್ಚಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಖಾದಿ ಬಟ್ಟೆಯ ಬಗ್ಗೆ ಪ್ರದರ್ಶನ ಏರ್ಪಡಿಸಲಾಗಿತ್ತು. ವಿವಿಧ ಮಾದರಿ ಚರಕಗಳನ್ನು, ಭಿತ್ತಿಪತ್ರಗಳ ಪ್ರದರ್ಶನ ಮಾಡಿ, ಗಾಂಧೀಜಿಯವರ ಭಜನೆಗಳನ್ನ ಹಾಡಿ, ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಫಾರ್ಮಸಿ ಕಾಲೇಜ್ ಉಪನ್ಯಾಸಕಿ ಶ್ರೀಮತಿ ಲಕ್ಷ್ಮಿರಾಧಿಕ, ಗೀತಾ, ರಚನ, ಪ್ರೇರಣ, ಸುರಕ್ಷಾ, ಅಂಶುಲ್, ಭರತ್ ಹಾಜರಿದ್ದರು.

Leave a Reply

Your email address will not be published. Required fields are marked *