ಮಕ್ಕಳು ರಾಷ್ಟ್ರದ ಸಂಪತ್ತು. ಈ ಸಂಪತ್ತನ್ನು ಸಂರಕ್ಷಿಸಿ. ಪೋಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಇಂತಹ ಮಕ್ಕಳ ಕನಸು, ಬಾಲ್ಯ ಮತ್ತು ಶಿಕ್ಷಣವನ್ನು ಕಸಿಯುತ್ತಿರುವ ಬಾಲ ಕಾರ್ಮಿಕ ಪದ್ದತಿ ವಿರುದ್ದ ಹೋರಾಡಿ, ಇದನ್ನು ನಿರ್ಮೂಲನೆಗೊಳಿಸುವ ಅವಶ್ಯಕತೆ ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ.
ಬಾಲ್ಯಾವಸ್ಥೆಯ ಹಾಗೂ ಕಿಶೋರಾವಾಸ್ಥೆಯ ಕಾರ್ಮಿಕ ಪದ್ದತಿಯು ಮಕ್ಕಳನ್ನು ದೈಹಿಕ, ನೈತಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶೈಕ್ಷಣಿಕ ಅವಕಾಶಗಳನ್ನು ಹಾಗೂ ಬದುಕು ಕಟ್ಟಿಕೊಳ್ಳುವ ಕನಸಿಗೆ ತಡೆಯೊಡ್ಡುತ್ತಿದೆ. ಕಲಿಯುವ ವಯಸ್ಸಿನಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿದು ದುಡಿಮೆಯಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಕಳವಳಕಾರಿಯಾಗಿದ್ದು, ಶಿಕ್ಷಣ ವಂಚಿತ ಮತ್ತು ದುಡಿಮೆಯಲ್ಲಿ ತೊಡಗಿರುವ ಈ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತರಲು ಕೇಂದ್ರ, ರಾಜ್ಯ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿಸಬೇಕಿದೆ.
ವಿಶ್ವದಲ್ಲಿ 10 ಮಕ್ಕಳಲ್ಲಿ 1 ಮಗು ಬಾಲ ಕಾರ್ಮಿಕನಾಗಿ ದುಡಿಯುತ್ತಿದೆ. 5 ರಿಂದ 17 ರೊಗಳಗಿನ ಸುಮಾರು 152 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಇದರಲ್ಲಿ 73 ಮಿಲಿಯನ್ ಮಕ್ಕಳು ಅಪಾಯಕಾರಿ ಕೆಲಸದಲ್ಲಿ ತೊಡಗಿದ್ದಾರೆ. ಶೇ.71 ಮಕ್ಕಳು ಪ್ರಮುಖವಾಗಿ ಮೀನಿಗಾರಿಕೆ, ಅರಣ್ಯ, ಪ್ರಾಣಿ ಸಾಕಾಣಿಕೆ ಸೇರಿದಂತೆ ಇತರೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರೆ ಶೇ.17 ಸೇವೆಗಳಲ್ಲಿ ಹಾಗೂ ಶೇ.12 ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
2011 ರ ಜನಗಣತಿ ಪ್ರಕಾರ ಭಾರತ ದೇಶದಲ್ಲಿ 10.1 ಮಿಲಿಯನ್ ಬಾಲ ಕಾರ್ಮಿಕರಿದ್ದು, ಈ ಪೈಕಿ 5.6 ಗಂಡು ಮತ್ತು 4.5 ಹೆಣ್ಣು ಮಕ್ಕಳಿದ್ದಾರೆ. ಇಂದಿಗೂ ನಾವು ಕೃಷಿ ಚಟುವಟಿಕೆಗಳು, ಗ್ಯಾರೇಜ್, ಹೋಟೆಲ್, ಸಿನೆಮಾ ನಿರ್ಮಾಣ, ಇಟ್ಟಿಗೆ, ಮಂಡಕ್ಕಿ ಭಟ್ಟಿ, ವಿವಿಧ ಕೈಗಾರಿಕೆಗಳು ಹೀಗೆ ನೂರಾರು ಜಾಗಗಳಲ್ಲಿ ಮಕ್ಕಳಿಂದ ದುಡಿಸಿಕೊಳ್ಳುವುದನ್ನು ಕಾಣುತ್ತಲೇ ಸಾಗುತ್ತಿದ್ದೇವೆ.
ವಿಶ್ವ ಬಾಲ ಕಾರ್ಮಿಕತೆ ವಿರೋಧಿ ದಿನ: ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಇಂಟರ್ನ್ಯಾಷನಲ್ ಲೇಬರ್ ಆರ್ಗನೈಸೇಷನ್)ಯು ಬಾಲ ಕಾರ್ಮಿಕತೆಯ ಜಾಗತಿಕ ವ್ಯಾಪ್ತಿ ಹಾಗೂ ಈ ಪಿಡುಗನ್ನು ನಿರ್ಮೂಲನೆ ಮಾಡಲು ಅಗತ್ಯವಿರುವ ಕ್ರಮಗಳು ಮತ್ತು ಪ್ರಯತ್ನಕ್ಕೆ ಒತ್ತು ನೀಡುವ ಉದ್ದೇಶದಿಂದ 2002 ರ ಜೂನ್ 12 ರಂದು ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪ್ರಾರಂಭಿಸಿತು.
ಈ ದಿನವು ಸರ್ಕಾರಗಳು, ಉದ್ಯೋಗದಾತರು, ಸಂಘಟನೆಗಳು, ಇಡೀ ನಾಗರೀಕ ಸಮಾಜ ಬಾಲ ಕಾರ್ಮಿಕತೆಯಂತಹ ಬಿಕ್ಕಟ್ಟಿನ ಮೇಲೆ ಬೆಳಕು ಚೆಲ್ಲಿ, ಇದರ ನಿರ್ಮೂಲನೆಗೆ ನಾವೇನು ಮಾಡಬೇಕೆಂಬ ಚಿಂತನೆಯನ್ನು ಹುಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ.
ಕೋವಿಡ್ 19-ಬಾಲ ಕಾರ್ಮಿಕರ ರಕ್ಷಣೆಗೆ ಶ್ರಮ: ಕೋವಿಡ್ 19 ಪಿಡುಗಿನಿಂದ ಉದ್ಘವಿಸಿರುವ ಆರ್ಥಿಕ ಮತ್ತು ಮಾರುಕಟ್ಟೆ ಬಿಕ್ಕಟ್ಟು ಮತ್ತಷ್ಟು ಬಾಲ ಕಾರ್ಮಿಕತೆಯನ್ನು ಹೆಚ್ಚಿಸಬಹುದೆಂಬ ಸೂಚನೆಯನ್ನು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಹಾಗೂ ಯೂನಿಸೆಫ್ ನೀಡಿದೆ. ವಿಶ್ವದಾದ್ಯಂತ ಹೆಚ್ಚುವರಿಯಾಗಿ 9 ಮಿಲಿಯನ್ ಮಕ್ಕಳು ಬಾಲ ಕಾರ್ಮಿಕತೆಗೆ ಈಡಾಗುವ ಅಪಾಯ ಇದೆ ಎಂದು ಇವು ಹೇಳುತ್ತಿವೆ. ಹಾಗೂ ಕಳೆದ ಒಂದು ದಶಕದಿಂದ ವಿಶ್ವದಲ್ಲಿ ಬಾಲ ಕಾರ್ಮಿಕತೆಯನ್ನು ಶೇ.38 ರಷ್ಟು ತಗ್ಗಿಸಲು ಸರ್ಕಾರಗಳು ಮತ್ತು ವಿವಿಧ ಸಂಸ್ಥೆಗಳು ಶ್ರಮಿಸಿದ್ದು, ಇದೀಗ ಕೋವಿಡ್ 19 ಪಿಡುಗು ಈ ಪ್ರಗತಿಯನ್ನು ಬುಡಮೇಲು ಮಾಡುವ ಸಂಭವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಸ್ತುತದ ಸನ್ನಿವೇಶದಲ್ಲಿ ಹಿಂದೆಂದಿಗಿಂತ ಹೆಚ್ಚಾಗಿ ಮಕ್ಕಳನ್ನು ಬಾಲಕಾರ್ಮಿಕತೆಯಿಂದ ರಕ್ಷಿಸಲು ಎಲ್ಲರೂ ಶ್ರಮಿಸಬೇಕಿದೆ.
ಬಾಲ ಕಾರ್ಮಿಕ ಪದ್ದತಿ ನಿಷೇಧ ಕಾಯ್ದೆ : ಬಾಲ ಕಾರ್ಮಿಕತೆಯನ್ನು ಹೋಗಲಾಡಿಸಲು ಸರ್ಕಾರ ಅನೇಕ ಕಾಯ್ದೆ ಕಾನೂನುಗಳನ್ನು ಜಾರಿ ಮಾಡಿದೆ. ಜೊತೆಗೆ ಸಮುದಾಯಕ್ಕೂ ಜವಾಬ್ದಾರಿಯನ್ನು ನೀಡಿದೆ. ಕಾಯ್ದೆಯನ್ವಯ 18 ವಯಸ್ಸಿನ ಒಳಗಿನ ಎಲ್ಲರೂ ಮಕ್ಕಳು. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ತಿದ್ದುಪಡಿ ಕಾಯ್ದೆ 1986 ರನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗ ಸಂಸ್ಥೆಯ(ವಾರೆಂಟ್ರಹಿತ ಬಂಧಿಸಬಹುದಾದ) ಅಪರಾಧವಾಗಿದೆ. ಶಿಕ್ಷಣಕ್ಕೆ ಮಾರಕವಾಗದಂತೆ ಮಗುವಿನ ಕುಟುಂಬವು ನಡೆಸುವ ಉದ್ದೆಗಳನ್ನು ಹಾಗೂ ಬಾಲನಟ/ನಟಿಯಾಗಿ ಕೆಲಸ ನಿರ್ವಹಿಸಲು ಸೀಮಿತ ಅವಕಾಶವನ್ನು ಮಾತ್ರ ಕಲ್ಪಿಸಲಾಗಿದೆ.
ಈ ಕಾಯ್ದೆಯನ್ವಯ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ ಕಾರ್ಮಿಕರನ್ನು ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ.20 ರಿಂದ 50 ಸಾವಿರದವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಭಾರತ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ(ಸಿವಿಲ್)ಸಂಖ್ಯೆ 465/1986 ರಲ್ಲಿ ನೀಡಿರುವ ನಿರ್ದೇಶನದನ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ ರೂ.20 ಸಾವಿರ ಪರಿಹಾರವನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕು.
ಸರ್ಕಾರದ ನಿರ್ದೇಶನದಂತೆ ಕಾರ್ಮಿಕ ಇಲಾಖೆಗಳು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಅಗತ್ಯ ಕ್ರಮಗಳನ್ನು ವಹಿಸುತ್ತಿದೆ. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿಯೂ ತಂಡಗಳನ್ನು ರಚಿಸಿಕೊಂಡು ನಿಯಮಿತವಾಗಿ ಕೈಗಾರಿಕೆಗಳು ಹಾಗೂ ಮಕ್ಕಳು ಕೆಲಸ ಮಾಡುವ ಸ್ಥಳಗಳಲ್ಲಿ ದಾಳಿ ನಡೆಸಿ ಪ್ರಕರಣ ದಾಖಲಿಸಿ, ಮಕ್ಕಳನ್ನು ಬಾಲ ಕಾರ್ಮಿಕತೆಯಿಂದ ಮುಕ್ತಗೊಳಿಸುವ ಕೆಲಸ ಮಾಡುತ್ತಿದೆ. ಇದರೊಂದಿಗೆ ಸಾರ್ವಜನಿಕರೂ ತಮಗೆ ಕಾಣ ಬರುವ ಬಾಲ ಕಾರ್ಮಿಕರ ಸುಳಿವಿನ ದೂರನ್ನು ನೀಡಿದರೆ ಅಥವಾ ಸಹಾಯವಾಣಿ 1098 ಕರೆ ಮಾಡಿದಲ್ಲಿ ಪರಿಣಾಮಕಾರಿಯಾಗಿ ಈ ಪದ್ದತಿಯನ್ನು ನಿರ್ಮೂಲನೆಗೊಳಿಸಬಹುದು.
2019-20 ನೇ ಸಾಲಿನಲ್ಲಿ 04 ಬಾಲ ಕಾರ್ಮಿಕರನ್ನು ದುಡಿಯೆಯಿಂದ ಮುಕ್ತಗೊಳಿಸಿ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಹಾಗೂ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿ, 01 ಪ್ರಕರಣದಲ್ಲಿ ರೂ.20 ಸಾವಿರವನ್ನು ಮಕ್ಕಳ ಪುನರ್ವಸತಿಗಾಗಿ ಕಲ್ಯಾಣ ನಿಧಿಗೆ ಮಾಲೀಕರಿಂದ ಪಾವತಿಸಲಾಗಿದೆ. 2020-21 ನೇ ಸಾಲಿನಲ್ಲಿ 01 ಮಗುವನ್ನು ಬಾಲ ಕಾರ್ಮಿಕತೆಯಿಂದ ಮುಕ್ತಗೊಳಿಸಿ ಪುನರ್ವಸತಿ ಕಲ್ಪಿಸಿ ಮಾಲೀಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಪ್ರತಿ ಮಾಹೆ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ನಿಯೋಜಿತ ತಂಡಗಳು ಬಾಲ ಕಾರ್ಮಿಕರು ಇರಬಹುದಾದ ಪ್ರದೇಶವನ್ನು ತಪಾಸಣೆಗೊಳಿಸಿ ದಾಳಿ ನಡೆಸುತ್ತವೆ. ಬಾಲ ಕಾರ್ಮಿಕ ನಿಷೇಧ ಕಾಯ್ದೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಿಯಮಿತವಾಗಿ ವಿವಿಧ ಕಾರ್ಯಕ್ರಮಗಳಾದ ಬೀದಿ ನಾಟಕ, ಕರಪತ್ರ ಹಂಚಿಕೆ, ಫ್ಲೆಕ್ಸ್, ಗೋಡೆ ಬರಹ, ಆಕಾಶವಾಣಿ ಕಾರ್ಯಕ್ರಮಗಳನ್ನು ನೀಡಲಾಗುತ್ತಿದ್ದು, ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಮಾಡುವಲ್ಲಿ ಸಾರ್ವಜನಿಕರೂ ಕೈಜೋಡಿಸಬೇಕೆಂದು ಮನವಿ ಮಾಡುತ್ತೇನೆ.
– ಎಂ.ಪಿ.ವಿಶ್ವನಾಥ್, ಜಿಲ್ಲಾ ಕಾರ್ಮಿಕ ಅಧಿಕಾರಿ
ದೂರು ಅಥವಾ ಸಹಾಯವಾಣಿಗೆ ಕರೆ ಮಾಡಿ : 6 ರಿಂದ 14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳನ್ನು ಹಾಗೂ18 ವರ್ಷ ವಯಸ್ಸಿನ ಒಳಗಿನ ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವುದು ಕಂಡಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಸಂಪರ್ಕಿಸಿ ದೂರು ನೀಡಬೇಕು ಇಲ್ಲವೇ 1098 ಸಹಾಯವಾಣಿ ಅಥವಾ 08182-248810 ನ್ನು ಸಂಪರ್ಕಿಸಿ ದೂರು ನೀಡಬಹುದು.
• ಸಾರ್ವಜನಿಕರು ದುಡಿಯುವ ಮಕ್ಕಳು ಕಂಡರೆ ತಕ್ಷಣವೇ ಪೆನ್ಸಿಲ್ ಪೋರ್ಟಲ್ನ www.pencil.gov.in ನಲ್ಲಿ ದೂರು ಸಲ್ಲಿಸಬಹುದು.
ಬಾಲ ಕಾರ್ಮಿಕತೆ ನಿರ್ಮೂಲನೆ ವರ್ಷ : 2021 ನೇ ಸಾಲನ್ನು ಅಂತರಾಷ್ಟ್ರೀಯ ಬಾಲ ಕಾರ್ಮಿಕತೆ ನಿರ್ಮೂಲನೆ ವರ್ಷವನ್ನಾಗಿ ಪರಿಗಣಿಸಲಾಗಿದ್ದು, ಈ ವರ್ಷ ಬಾಲ ಕಾರ್ಮಿಕರನ್ನು ಕಾರ್ಮಿಕತೆಯಿಂದ ಮುಕ್ತಗೊಳಿಸಲು ಅಗತ್ಯವಾದ ಕ್ರಮಗಳಿಗೆ ಒತ್ತು ನೀಡಲು ಕರೆ ನೀಡಲಾಗಿದೆ. ಹಾಗೂ ಸಸ್ಟೈನಬಲ್ ಡೆವೆಲಪ್ಮೆಂಟ್ ಗೋಲ್ಸ್(ಎಸ್ಡಿಜಿ) ಹಾಗೂ ಇತರೆ ಸಂಸ್ಥೆಗಳು ಮಕ್ಕಳನ್ನು ಬಾಲ ಕಾರ್ಮಿಕರ ರಕ್ಷಣೆ ಮತ್ತು ಬಾಲ ಕಾರ್ಮಿಕತೆ ನಿರ್ಮೂಲನೆಗೆ ಜಾಗತಿಕ ಸಮುದಾಯ ಶೀಘ್ರ ಮತ್ತು ಪರಿಣಾಮಕಾರಿ ಕ್ರಮಗಳನ್ನು ವಹಿಸಬೇಕೆಂದು ಕರೆ ನೀಡಿವೆ. ಜೊತೆಗೆ 2025 ರ ಹೊತ್ತಿಗೆ ಬಾಲ ಕಾರ್ಮಿಕತೆ ಮುಕ್ತ ವಿಶ್ವವನ್ನಾಗಿಸುವ ಗುರಿ ಹೊಂದಲಾಗಿದೆ. ಇದು ಯಶಸ್ವಿಯಾಗಬೇಕಾದರೆ ಸರ್ಕಾರಗಳು, ಸಂಘಟನೆಗಳೊಂದಿಗೆ ಸಮುದಾಯದ ಪಾತ್ರ ಅತಿ ಮುಖ್ಯವಾಗುತ್ತದೆ.
ಮಕ್ಕಳನ್ನು ಬಾಲ ಕಾರ್ಮಿಕತೆಯಿಂದ ಮುಕ್ತಗೊಳಿಸುವಲ್ಲಿ ಸಮುದಾಯದ ಒಂದು ಸಣ್ಣ ಪ್ರಯತ್ನ ಬಹು ದೊಡ್ಡ ಪಾತ್ರ ವಹಿಸಲಿದ್ದು, ಬೆಳೆಯಬೇಕಾದ ಮಕ್ಕಳ ಜೀವನದಲ್ಲಿ ದೊಡ್ಡ ಬದಲಾವಣೆ ತರಲಿದೆ. ಆದ ಕಾರಣ ಮಕ್ಕಳನ್ನು ಈ ಪಿಡುಗಿನಿಂದ ಪಾರು ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರೆ ತಪ್ಪಾಗಲಾರದು.
-ಭಾಗ್ಯ ಎಂ.ಟಿ