ಹೊಗಳಿಕೆ-ತೆಗಳಿಕೆಗಳ ನಡುವೆ ಸಮಚಿತ್ತದಲ್ಲಿ ಅಲೌಕಿಕ ಜಗದೊಳಗೆ ಪಯಣಿಸುವ ಪಯಣಿಗನಾಗಿ ಬಾಹ್ಯಮುಖಿ ವಿಪರೀತಗಳತ್ತ ಎಂದಿಗೂ ಕಿವಿಗೊಡದಿರುವ ಕಠೋರತೆ ಇದಾಗಿದೆ, ಈಗಾಗಲೇ ವಾಸ್ತವ ಸಂಗತಿಗಳು, ನಿಷ್ಟೆಯ ಸೇವಾ ಕೈಂಕರ್ಯಗಳು, ಮಾನವೀಯ ಹಾದಿಗಳ ಕುರಿತಾಗಿ ಬರೆಯತ್ತಿದ್ದೇನೆ, ಇಂದಿಗೆ ಕಲಾಭೂಮಿಕೆಯಲ್ಲಿ ಅಗ್ರಮುಖಿಯಾಗಿ ನಡೆದು ಕೋವಿಡ್-19ನ ಈ ಕದನದಲ್ಲಿ ಗೂಡು ಸೇರಿಕೊಂಡು ಬದುಕಿನ ಬವಣೆಗಳ ಬಣವೆಯಲ್ಲಿ ನಿಜದ ಸ್ತಬ್ಧ ಪಾತ್ರಧಾರಿಯಾಗಿ ತನ್ನೊಳಗಿನ ಅಗಾಧತೆಯ ನಟನಾ ನೆನಪಿನ ಅಂಗಳದ ಮೂಲೆಯಲ್ಲಿ ಕುಳಿತುಕೊಂಡ ಮಲೆನಾಡಿನ ರಂಗಕರ್ಮಿಯನ್ನು ಇಲ್ಲಿ ಪರಿಚಯಿಸಿ ರಾಜ್ಯದ ರಂಗಭೂಮಿ ಕಲಾವಿದರಿಗೆ ಸರಕಾರದ ಜೊತೆ-ಜೊತೆಯಲ್ಲಿ ಮಾನವೀಯ ಮನಸುಗಳು, ಕನ್ನಡ ಸಂಘಟನೆಗಳು ಕೂಡ ಸ್ಪಂದಿಸಲಿ ಎಂದಿಲ್ಲಿ ವಿಸ್ತೃತಗೊಳಿಸುತ್ತಿದ್ದೇನೆ.

ರಂಗಕರ್ಮಿಯಾಗಿ ಬದುಕುವುದು ಬಲು ಸಂಕಟಗಳ ಸಂಕಲನ, ಹೀಗಿದ್ದರೂ ಕಲಿತ ಕಲೆಯನ್ನು ಬಿಡಿಗಾಸಿಲ್ಲದೆ ಮನದುಂಬಿ ನಟಿಸಿ ಬೇಷ್ ಎನ್ನಿಸಿಕೊಂಡು ಮುಂದಿನ ಪ್ರಯಾಣಕ್ಕೆ ಉದರಕೇಳಿಯಲ್ಲಿ ಚಿಲ್ಲರೆ ಹುಡುಕುವ ದುರಾದೃಷ್ಟಕರ ಎನ್ನುವುದು ಬಹುತೇಕರು ತಿಳಿಯಬೇಕಾಗಿರುವ ಜರೂರತ್ತಿದೆ, ಯಾವ ಕಲಾವಿದನೇ ಆಗಲಿ ಅವರ ಕಲಾಸೇವೆಯನ್ನು ಯಾವುದೇ ಮತ-ಪಂಥಗಳ ಬೇದವಿಲ್ಲದೇ ಹುರಿದುಂಬಿಸಿ ಹಾರೈಸುವ ಔದಾರ್ಯತೆ ಕನ್ನಡಿಗರಿಗೆ ಇದಿಯಾ..? ಎನ್ನುವುದು ಈ ಹೊತ್ತಿನ ಪ್ರಶ್ನಾರ್ಹ.

ಇನ್ನೂ ರಾಜ್ಯೋತ್ಸವದ ಪ್ರಶಸ್ತಿಗಳು ಕೂಡ ಮಾರುಕಟ್ಟೆಯಲ್ಲಿ ಬಿಕರಿಯಾಗಿರುವ ಪತ್ರವಾಗಿ ಬಿಟ್ಟಿದೆ, ಯಾರಿಗೆ ಆಡಳಿತ ಪಕ್ಷದ ಬೆಂಬಲ ವ್ಯಕ್ತವಾಗಿರುತ್ತದೋ ಅಂತಹವರಿಗೆ ಮಾತ್ರ ರಾಜ್ಯೋತ್ಸವದ ಪ್ರಶಸ್ತಿ ಲಭಿಸುತ್ತದೆ ಎನ್ನುವುದು ವಾಸ್ತವವೂ ಆಗಿದೆ. ಇಂತಹ ಅಸಲಿ ಕಥಾನಕಗಳ ನಡುವೆ ಸ್ವಾಭಿಮಾನದ ಮೇರು ಕಲಾ ಸೇವೆಯಲ್ಲಿ ತಲ್ಲೀನತೆ ಹೊಂದಿದ್ದರೂ ಯಾರಿಗೂ ಬೇಡದ ಕಲಾ ಸೇವಕರಾಗಿ ಬಹುತೇಕರು ಉಳಿದು ಬಿಡುತ್ತಾರೆ ಈ ಪಟ್ಟಿಯಲ್ಲಿ ಕಾಣ ಸಿಗುವವರು ಮಲೆನಾಡಿನ ತವರು ಜಿಲ್ಲೆಯ ಶಿವಮೊಗ್ಗ ರಾಮಣ್ಣ ಕೂಡ ಒಬ್ಬರಾಗಿದ್ದಾರೆ
ಹೌದು ಕೋವಿಡ್ ಸಾಂಕ್ರಮಿಕ ಕದನದ ಬೀಕರತೆಯಲ್ಲಿ ಸಾವು-ನೋವುಗಳನ್ನು ಸಾಮಾನ್ಯವಾಗಿ ಸ್ವಾದಿಸಬೇಕಾದ ಸಾಂದರ್ಭಿಕತೆಗಳು ನಾಗರೀಕ ಸಮುದಾಯಕ್ಕಿದೆ, ಮನುಕುಲ ಕಂಗೆಟ್ಟಿರುವ ಸುದ್ದಿಗಳನ್ನು ಆಲಿಸುತ್ತಲಿ ಮತ್ತಷ್ಟು ನಿರ್ಲಿಪ್ತತೆ ಕಳೆದುಕೊಳ್ಳುವ ಅವಸರಗಳು ಸುಳಿದು ಸರಿಯುತ್ತಲೇ ಸಾಗಿದೆ.
ಇಂತಹ ಜೀವಂತ ಸ್ಥಿತಿಗಳನ್ನೊತ್ತು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ದೌಡಾಯಿಸಿ ಬಂದು ಕಲೆಗೆ ಕೆಲಸವಿಲ್ಲದೆ ಕಲೆ ನಿಲ್ಲಿಸಿದ ಶಿವಮೊಗ್ಗ ರಾಮಣ್ಣನವರು ಲಾಕ್ಡೌನ್ ತೆರವಿಗೆ ಕಾದು ಕೂತಿದ್ದಾರೆ. ಹೇಗಾದರೂ ಸರಿ ಕಲೆಯನ್ನೇ ನಂಬಿರುವ ಬದುಕಿದು, ಕೋವಿಡ್ ಸಡಿಲಿಕೆ ಆಗುತ್ತಿದ್ದಂತೆಯೇ ಒಪ್ಪಿರುವ ಒಂದಿಷ್ಟು ಬ್ಯಾನರ್ ನಲ್ಲಿ ನಟಿಸಿ ಬಿಡುತ್ತೇನೆ ಅದಾಗ ಸಿಗುವ ಸಂಭಾವನೆಯಲ್ಲಿ ಅಂಗವಿಕಲತೆಯ ಅಸ್ವಸ್ಥತೆಯ ಮಗ ಮಧುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಬಹುದು. ಮಗಳಿಗೆ ಒಳ್ಳೆಯ ಕಡೆ ವರ ಬಂದರೆ ಮದುವೆ ಮಾಡಿ ಬಿಡಬಹುದು, ಇನ್ನೋರ್ವ ಪ್ರತಿಭಾನ್ವಿತ ಮಗ ಸಂಜುವಿಗೆ ಎಮ್.ಟೆಕ್ ವ್ಯಾಸಾಂಗದ ಖರ್ಚು ಭರಿಸಲು ಸಹಾಯವಾಗಿ ಬಿಡುತ್ತದೆ, ಇನ್ನೂ ಬದುಕು ಹೇಗಾದರೂ ದೂಡಿಕೊಳ್ಳಬಹುದು ಎನ್ನುವ ಅವರೊಳಗಿನ ಲೆಕ್ಕಾಚಾರವಿರಬಹುದು ಅನಿಸುತ್ತದೆ ಹಾಗೇ ಅವರ ಮುಖ ಭಾವದ ಧಾವಂತಗಳನ್ನು ದಿಟ್ಟಿಸಿದ್ದೇನೆ.
*ಅಚ್ಚರಿ ಎಂದರೆ ಬರೆಯುವ ಈ ಹೊತ್ತಿನಲ್ಲಿ ಶಿವಮೊಗ್ಗ ರಾಮಣ್ಣನವರನ್ನು ಪರಿಚಯಿಸಲು ಕಾರಣಕರ್ತರಾದ ಕವಿತಾ ಮತ್ತು ರಾಘವೇಂದ್ರ ದಂಪತಿಗಳಿಗೆ ಧನ್ಯವಾದ ತಿಳಿಸಬೇಕಿದೆ, “ದೂರದ ಬೆಟ್ಟ ನುಣ್ಣಗೆ” ಎನ್ನುವ ಗಾದೆಯಂತೆ ಹತ್ತಿರದಲ್ಲಿರುವ ಶಿವಮೊಗ್ಗ ರಾಮಣ್ಣನವರ ಸುಧೀರ್ಘ ಕಲಾಸೇವೆ ಯಾರಿಗೂ ತಿಳಿಯದಾಯಿತು. ಹತ್ತಿರದಿ ಇದ್ದವರು ಕೂಡ ಅವರವರ ಸರದಿಯಲ್ಲಿ ಕಲೆಯನ್ನು ಅತಿರಂಜಿಸಿಕೊಂಡು ಆಡಳಿತ ವ್ಯವಸ್ಥೆಗಳೊಂದಿಗೆ ಕೈ ಮಿಲಾಯಿಸಿಕೊಂಡು ಸಾಗಿ ಬಿಟ್ಟಿದ್ದಾರೆ, ಸ್ವಾಭಿಮಾನದಿ ಇರುವ ಬಹುತೇಕ ಕಲಾವಿದರು ಇದ್ದಲ್ಲೇ ಇದ್ದು ಹತಾಶಭಾವದಿ ಬರಗಾಲದ ಕೃಷಿಯಂತಾಗುತ್ತಾರೆ. ಇಂತಹ ಅನಾವರಣದ ನಡುವೆ ಶಿವಮೊಗ್ಗ ರಾಮಣ್ಣನವರ ಮನೆಗೆ ಬೇಟಿ ನೀಡುವ ಸೌಭಾಗ್ಯ ಬಂದೊದಗಿತ್ತು,
ಅವರನ್ನು ದಿಟ್ಟಿಸುತ್ತಲೇ ಕಿರಿದಾದ ತುಂಬು ಮನೆಯಲ್ಲಿ ಅಗಾಧವಾದ ಕಲೆಯನ್ನು ದರ್ಶಿಸಿದರು, ಅದೆಷ್ಟೋ ಮೌನಕ್ಕೆ ಶರಣಾಗಿಬಿಟ್ಟಿದ್ದಾರೆ ಶಿವಮೊಗ್ಗ ರಾಮಣ್ಣನವರು ಎಂದರೆ ಅವರ ಎದೆಯೊಳಗೆ ರಣರಂಗವೇ ಏರ್ಪಟ್ಟಿದೆ, ಅಲ್ಲೊಂದು ಚಾಂಚಲ್ಯತೆಯ ವಿರುದ್ದ ಸೆಣಸಾಡುತ್ತಿದ್ದಾರೆ ಅದಕ್ಕಾಗಿ ಬಾಹ್ಯಮುಖಿಯಾಗಿ ಬಸವಳಿದಿದ್ದಾರೆ ಎನ್ನುವುದು ಅಕ್ಷರಶಃ ಕಾಣಿಸುತಿತ್ತು. ಇರಲಿ ಅವರನ್ನು ಮಾತಾಡಿಸಲು ಶುರು ಮಾಡಿದೆ ಶಿವಮೊಗ್ಗ ರಾಮಣ್ಣ ಸ್ಟಾರ್ ಸುವರ್ಣ ಟಿವಿನಲ್ಲಿ ಪ್ರಸ್ತುತ ಬಿತ್ತರಗೊಳ್ಳುತ್ತಿರುವ “ಜೀವ ಹೂವಾಗಿದೆ” ದಾರವಾಹಿಯಲ್ಲಿ ನಟಿಸುತ್ತಿದ್ದೆ ಕೋವಿಡ್ ಕಾರಣದಿಂದ ಲಾಕ್ಡೌನ್-ಸೀಲ್ಡೌನ್ ಹಾಗೂ ಶೂಟಿಂಗ್ ಮಾಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಶಿವಮೊಗ್ಗಕ್ಕೆ ಬಂದಿದ್ದೇನೆ ಎಂದರು,
1986ರ ಸುಮಾರು ಸಂದರ್ಭ ರಂಗಭೂಮಿಯಿಂದ ಬೆಳ್ಳಿತೆರೆಯ ಕಡೆ ಬಂದೆ “ಪ್ರೇಮ ತಪಸ್ವಿ” “ತಾಯಿ ಕೊಟ್ಟ ತಾಳಿ” “ಎಸ್ಪಿ ಸಾಂಗ್ಲಿಯಾನ” “ಪೇಪರ್ ದೋಣಿ” ಹೀಗೆ 60 ರಿಂದ 70 ಸಿನಿಮಾಗಳಲ್ಲಿ ನಟಿಸಿದ್ದೇನೆ ಕೆಲವು ಸಿನಿಮಾಗಳಲ್ಲಿ ಹವ್ಯಾಸಿ ಕಲಾವಿದನೆಂದು ಸಂಭಾವನೆ ಕೊಡಲಿಲ್ಲ, ಇನ್ನೂ ಕೆಲವು ಸಿನಿಮಾಗಳು ಸ್ವಲ್ಪ ಸಂಭಾವನೆ ನೀಡಿವೆ ಇದರಲ್ಲಿಯೇ ಬದುಕು ಕಟ್ಟಿ ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುವಾಗ ಶಿವಮೊಗ್ಗ ರಾಮಣ್ಣನವರ ಕಣ್ಣುಗಳು ಕನ್ನಡಿಯಂತಾಗಿ ಎದುರಿಗೆ ಕೂತವರೇ ಕಾಣಿಸುವುದಕ್ಕೆ ಶುರುವಾಗಿತ್ತು, ಒಮ್ಮೆಲೆ ಅದು ಮಂಜು-ಮಂಜಾಗಿ ಮಸುಕಾಗುವುದಕ್ಕೆ ಶುರುವಾದಾಗಲೇ ಬಿಸಿಗಂಬನಿಯ ಬುಗ್ಗೆಗೆ ಕ್ಷಣಗಣನೆ ಶುರುವಾಗಿತ್ತು ಎಂದುಕೊಂಡು ಮತ್ತೊಮ್ಮೆ ಕುಶಲೋಪರಿಯಲ್ಲಿ ಅನ್ಯ ಹಾದಿಯಲ್ಲಿ ಮಾತಾಡಿಸಿ ಮೂಲ ಸಂಗತಿಗಳನ್ನು ಮರೆಸುವ ಪ್ರಯತ್ನ ಮಾಡಿದೆ.
ಮೂಲತಃ ಶಿವಮೊಗ್ಗದವರೇ ಆದ ಶಿವಮೊಗ್ಗ ರಾಮಣ್ಣನವರು ಓದಿದ್ದು ಎಸ್.ಎಸ್.ಎಲ್.ಸಿ ಯವರೆಗೆ ಮಾತ್ರ, ಓದಿನ ಕಾಲದಲ್ಲಿಯೇ ವಿಶಿಷ್ಠ ಶೈಲಿಯಲ್ಲಿ ರಂಗಭೂಮಿ ಮೂಲಕ ಕ್ರಾಂತಿ ಕಹಳೆ ಮೊಳಗಿಸಿದ್ದ ಮಾಸ್ಟರ್ ಹೀರಣ್ಣಯ್ಯನವರ ಮಾತುಗಳು ಪ್ರೇರಣೆ ಉಂಟು ಮಾಡಿತು, ಸ್ಪೂರ್ತಿಧಾಯಕವಾಗಿ ನಟನೆಯ ಗೀಳಿನತ್ತ ತಳ್ಳುವಂತೆ ಮಾಡಿತ್ತು, ಅವರ ಪ್ರಖರ ಮಾತು ತನ್ನೊಳಗೆ ಇನ್ನಿಲ್ಲದ ಕಲೆ ಶಿಲೆಯಾಗಿ ಅವಿತುಕೊಂಡು ನೆನಪಿಸುತಿತ್ತು ಈ ಮಾತ್ರದಿಂದಲೇ ರಂಗಭೂಮಿಯತ್ತ ಹೆಜ್ಜೆಗಳಿಟ್ಟಿದ್ದೆ, ಮೊದಲಿಗೆ ಬೇಲೂರು ಕೃಷ್ಣಮೂರ್ತಿ ರಚಿತ “ಲಚ್ಚಿ ನಾಟಕ” ದಲ್ಲಿ ಬೀರನ ಪಾತ್ರ ನಿರ್ವಹಿಸಿದೆ ಇದು ವಿವಿಧ ಜಿಲ್ಲೆಯಲ್ಲಿ ಸಾಕಷ್ಟು ಷೋ” ಗಳು ಕಂಡಿತು ಒಮ್ಮೆ ಈ ನಾಟಕದ ಪ್ರಮುಖ ಪಾತ್ರಧಾರಿ ಬರಲಿಲ್ಲ, ಅದಾಗಲೇ ಬೀರನ ಪಾತ್ರ ಮಾಡುತಿದ್ದ ನನಗೆ ಪ್ರಮುಖ ಪಾತ್ರಧಾರಿಯಾಗುವ ಅವಕಾಶ ಬಂದೊದಗಿತ್ತು, ಈ ನಂತರ ರಂಗರ್ಮಿಯಾಗಿ ಮೈಲಿಗಲ್ಲಾಗುತ್ತೇನೆ ಮಲೆನಾಡಿಗೊಂದು ಹೆಸರು ತರುತ್ತೇನೆ ಎನ್ನುವ ಕನಸು ಅರಳಿತ್ತು.
ಧಾಮೋಧರರಾವ್ ನಿರ್ಧೇಶನದ “ಇದು ಒಪ್ಪುವ ಮಾತೇ” “36 ಅಲ್ಲ 63” “ಕುದುರೆ ಮಟ್ಟೆ” “ಸಂಗೊಳ್ಳಿ ರಾಯಣ್ಣ” “ರಣದುಂಧುಂಬಿ” “ನಮ್ಮ ನಮ್ಮೊಳಗೊಮ್ಮೆ” ಹೀಗೆ 25 ನಾಟಕಗಳಲ್ಲಿ ನಟಿಸಿದ್ದೇನೆ ರಾಜ್ಯದಾಧ್ಯಂತ 500 ಷೋ ಗಳು ನಡೆದಿವೆ ಕಲಾಯಾತ್ರೆಯನ್ನು ಎಲ್ಲೆಡೆ ಪಸರಿಸಲು ಕಲಾಸೈನಿಕನಾಗಿ ಶ್ರಮಿಸುತ್ತಲೇ ಹೋದೆ, ತಿರುಗಿ ದಿಟ್ಟಿಸಿದಾಗಲೇ ತಿಳಿದಿದ್ದು ಶಿವಮೊಗ್ಗದಿಂದ ಕಲಾಸೇವೆಯನ್ನರಿಸುತ್ತಲಿ ಹದಿನೈದು ವರುಷಗಳು ಕಳೆದಿದೆ ಎಂದಾಗ ಶಿವಮೊಗ್ಗ ರಾಮಣ್ಣನವರ ಕುರುಚಲು ಬಿಳಿಗಡ್ಡ-ಮೀಸೆ ನಗು-ನೋವುಗಳನ್ನು ಮರೆಮಾಚಿತ್ತು.
ತೆರೆಯ ಹಿಂದಿನ ಕಲಾವಿದರಿಗೆ ಹಾಗೂ ರಂಗಭೂಮಿಯ ಕಲಾವಿದರಿಗೆ ಯಾವುದೇ ಉತ್ತೇಜನಗಳಿಲ್ಲದೆ ಕಲೆಗಳು ಸೊರಗುತ್ತಿವೆ. ಹೀಗಾಗಿಯೇ ಆರಂಭದಲ್ಲಿದ್ದ ಪ್ರತಿ ಹಳ್ಳಿಗಾಡಿನ ಟೆಂಟ್ ಗಳು ಸಂಪೂರ್ಣವಾಗಿ ನಶಿಸಿದೆ, 20 ರಿಂದ 28 ಶಂಖ್ಯೆಯಲ್ಲಿದ್ದ ನಾಟಕ ಕಂಪನಿಗಳಲ್ಲಿ ಇದೀಗ ಒಂದೆರೆಡು ಕಂಪನಿಗಳು ಮಾತ್ರ ಅಳಿದುಳಿದಿವೆ. ಇದಕ್ಕೆ ನಾಡಿನ ಸಾಂಸ್ಕೃತಿಕ ಅವನತಿ ಎನ್ನಬೇಕೆ..? ಅಥವಾ ತೆರೆಯ ಹಿಂದಿನ ದುರಂತವೆನ್ನಬೇಕೋ..? ಇದಕ್ಕೊಂದು ಸಚಿವ ಸಂಪುಟದಲ್ಲಿರುವ ಖಾತೆಯೇ ಉತ್ತರಿಸಬೇಕು,
ಯಾರಿಗೆ ರಂಗಕಲೆಯ ಸದಭಿರುಚಿಗಳ ಸ್ವಾದ ಗೊತ್ತಿಲ್ಲವೋ..? ಅಂತಹವರಿಗೆ ಯಾವುದೇ ಅಧಿಕಾರಗಳು ಸಿಕ್ಕರೂ ಅದೊಂದು ನಿರರ್ಥಕವಾಗಿರುತ್ತದೆ. ಇಂತಹವರ ಕೈಲಿ ಮೂಲ ಸಾಂಸ್ಕೃತಿಕ ಪರಂಪರೆಯ ವೈಭವಗಳು ಸೊರಗದೇ ಮತ್ಯಾವ ಬದಲಾವಣೆಗಳು ಆಗಲಾರದು.
ವೃತ್ತಿ ರಂಗಭೂಮಿ, ಹವ್ಯಾಸ ರಂಗಭೂಮಿ, ಈ ಮೂಲಕ ಅತಿರಂಜಿತ ಕಿರುಚಿತ್ರ- ಬೆಳ್ಳಿತೆರೆಗಳ ಕಲಾವಿದರು ವಿಭಿನ್ನ ಮಾರ್ಗದಿ ಸಾಗಿದ್ದರೂ ಕಲಾನ್ಯಾಯ ಎನ್ನುವುದು ಸಮಾನತೆಯಲ್ಲಿರಬೇಕು, ಅಸಾಧಾರಣ ಪ್ರತಿಭೆಯನ್ನೊತ್ತು ರಂಗಭೂಮಿಯಿಂದ ಕಿರುಚಿತ್ರ. ನಂತರ ಬೆಳ್ಳಿತೆರೆಗೆ ಕಾಣಿಸಿಕೊಂಡ ಶಿವಮೊಗ್ಗ ರಾಮಣ್ಣನಂತಹವರು ಸ್ವಾಭಿಮಾನ ತಳೆದರೆ ಗುರುತಿಸುವ ಮನಸುಗಳು ಕೂಡ ಸ್ವಾಭಿಮಾನದಿ ಮುಂದಾಗಬೇಕು ಅಂತಹವರುಗಳ ಎದೆಚರಿಗೆಯಲ್ಲಿ ಜಾತಿಯತೆ, ರಾಜಕೀಯ ಲೆಕ್ಕಾಚಾರಗಳಿದ್ದರೆ ಅಂತಹ ಗುರುತಿಸುವಿಕೆಗಳು ನೈತಿಕತೆ ಕಳೆದುಕೊಂಡು ಬಿಡುತ್ತದೆ.
ಹೀಗಾಗಿ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಬೇಕು, ಮಾನವೀಯ ಮನಸುಗಳತ್ತ, ಚಿತ್ತ ಸಮಾಜದತ್ತ ಕಲಾವಿದರನ್ನು ಪರಿಚಯಿಸುವ ಕೆಲಸವು ಕೂಡ ಮಹತ್ತರವಾದ ಜವಾಬ್ದಾರಿಯಿಂದ ಕೂಡಿರುತ್ತದೆ ಎನ್ನುವ ಕಾರಣಕ್ಕೆ ಶಿವಮೊಗ್ಗ ರಾಮಣ್ಣನಂತಹವರನ್ನು ಕುರಿತಾಗಿ ಒಂದಿಷ್ಟು ಇಲ್ಲಿ ಲಗತ್ತಿಸಿದ್ದೇನೆ.
ಮುಂದುವರೆದಂತೆ ಅವರು ಗೀತಾರವರೊಂದಿಗೆ ವಿವಾಹವಾಗಿ ಸುಖಿ ಜೀವನ ನಡೆಸಬೇಕು, ತನಗೊತ್ತಿರುವ ರಂಗಕಲೆಯಲ್ಲಿ ಆಕೆಯನ್ನು ಕರೆದೋಯ್ದು ವಿಹರಿಸಬೇಕು, ಪುಟ್ಟದಾದ ಮನೆ-ಮಕ್ಕಳು ಬದುಕು ಚೊಕ್ಕ ಸಂಸಾರದಲ್ಲಿ ತನ್ನ ರಂಗ “ಗೀಳಿ”ನ ಕತೆಯನ್ನು ಮೆಲುಕು ಹಾಕಿಕೊಳ್ಳುವ ಕನಸು ಕಂಡಿದ್ದ ಶಿವಮೊಗ್ಗ ರಾಮಣ್ಣನವರು ಕಮರಿದ ಸಾಂಗತ್ಯದಡಿ ನಿಂದಿದ್ದಾರೆ. ಇದೀಗ ಕೋವಿಡ್ ಬೇರೆ ಎಲ್ಲರ ಬದುಕುಗಳನ್ನು ಬದಲಾಯಿಸಿದೆ, ಮುಂದಿನ ದಾರಿ ಆವುದು ಎನ್ನುವುದು ನಿಖರವಾಗಿ ಹೇಳಲು ಸಾಧ್ಯವಾಗದ ರೀತಿಯ ದಿನಮಾನದ ಹೊಸ್ತಿಲಲ್ಲಿ ನಿಂತಿದ್ದೇವೆ.
ಕಲೆ-ಕೊಳೆ ಎನ್ನುವ ಮನಸ್ಥಿತಿ ಯಾವ ಕಲಾವಿದನಿಗೂ ಸುಳಿಯಬಾರದು, ಅದಕ್ಕೆ ಪೂರಕವಾದ ವಾತವರಣವು ಆಡಳಿತ ಸರಕಾರಗಳು, ಸಂಘಟಿತ ಮನಸುಗಳು ನಿರ್ಮಿಸಬೇಕು, ನಾಡಿನ ರಂಗಭೂಮಿಯ ಕಲಾವಿದರಿಗೆ ಗೌರವ-ಸಮ್ಮಾನಗಳು ದೊರಕಬೇಕು, ಹಸಿವಿನಿಂದ ಬಳಲಬಾರದು, ಅಂತಹ ಸಂದರ್ಭಗಳು ಎದುರಾದರೆ ಕನ್ನಡ ಸಂಘಟನೆಗಳು ನೆರವಿಗೆ ತುರ್ತು ಬರಬೇಕಾದ ಸಂದರ್ಭಗಳಿವೆ.
ಇದೀಗ ಕೋವಿಡ್ ಕದನದಲ್ಲಿ ಕಲೆ ನಿಲ್ಲಿಸಿದ ಶಿವಮೊಗ್ಗ ರಾಮಣ್ಣನವರನ್ನು ಕರವೇ-ಯುವಸೇನೆ ಮಾತಾಡಿಸಿ ಧೈರ್ಯ ತುಂಬಿದೆ, ಅದರಂತೆ ಕಲೆಯ ತಳಹದಿಯಲ್ಲಿ ಸಾಗಿರುವ ಕವಿತಾರವರು ಕೂಡ ಶಿವಮೊಗ್ಗ ರಾಮಣ್ಣನವರಿಗೆ ಬದುಕಿನ ಭರವಸೆ ತುಂಬಿಸಿದ್ದಾರೆ. ಇಂತಹ ನೈತಿಕ ಮಾನವೀಯ ಕೆಲಸಗಳು ಆಗಬೇಕಿದೆ.
ಸಾಮಾಜಿಕ ನಾಟಕಗಳ ಮುಖೇನ ಚಳುವಳಿಗಳನ್ನು ಕಟ್ಟಿದ, ನಾಡಿನ ಏಕತೆಗಾಗಿ, ಮೂಲ ಕಲಾ-ಪರಂಪರೆಯ ಉಳಿವಿಗಾಗಿ ಜಿಲ್ಲೆ-ರಾಜ್ಯಗಳನ್ನ ಸುತ್ತಿ ಕನ್ನಡದ ನೆಲದ ಕಲಾಗಂಧವನ್ನು ಪಸರಿಸಿದ ಬಹುತೇಕರಲ್ಲಿ ಶಿವಮೊಗ್ಗ ರಾಮಣ್ಣನವರು ಕೂಡ ಒಬ್ಬರು ಎನ್ನುವುದನ್ನು ಕನ್ನಡಿಗರು ಎಂದಿಗೂ ಮರೆಯಕೂಡದಾಗಿದೆ ಎಂದು ಅಂಬೋಣಿಸುತ್ತಾ ಕಲಾವಿದರೊಂದಿಗೆ ಬರಹದ ದನಿ ಎಂದೆಂದಿಗೂ ಇರುತ್ತದೆ ಹಾಗೂ ಈ ಸಂದರ್ಭದಲ್ಲಿ ಕನ್ನಡ ರಂಗಭೂಮಿಯ ಸಾಂಸ್ಕೃತಿಕ ರಾಯಭಾರಿ ಶಿವಮೊಗ್ಗ ರಾಮಣ್ಣನವರಿಗೆ ಎದೆನಮನಗಳ ತಿಳಿಸಿ ಅಭಿನಂದಿಸುತ್ತೇನೆ.
-ಗಾರಾ.ಶ್ರೀನಿವಾಸ್


ಗಾರಾ.ಶ್ರೀನಿವಾಸ್
ಸಂಪಾದಕರು
ಸೂರ್ಯಗಗನ ಕನ್ನಡ ದಿನಪತ್ರಿಕೆ,
ಇತ್ಯಾದಿ’ ಪಾಕ್ಷಿಕ ಪತ್ರಿಕೆ
ಗೋವಿಂದಪ್ಪ ಕಾಂಪ್ಲೆಕ್ಸ್,

Leave a Reply

Your email address will not be published. Required fields are marked *