ಭಗವಂತನ ಈ ಸೃಷ್ಟಿಯಲ್ಲಿ ಮಾನವನಿಗೆ ಹಿರಿದಾದ ಸ್ಥಾನವಿದೆ. ಮಾನವನಿಗೆ ಕೇವಲ ದೇಹಮಾತ್ರವಲ್ಲ ಇಂದ್ರಿಯ, ಮನಸ್ಸು ,ಬುದ್ಧಿ,ಇವುಗಳ ಹಿಂದೆ ಎಲ್ಲವನ್ನು ನಿರ್ವಹಿಸುವ ಆತ್ಮಶಕ್ತಿಯ ನೆಲೆಯಾಗಿ ಈ ದೇಹವನ್ನು ಕಾಣಲಾಗಿದೆ.ಹಾಗಾಗಿ ಮನುಷ್ಯನ ಒಳ ನೋಟ ಆತ್ಮದವರೆಗೆ ಸಾಗಿದಾಗ ಮಾತ್ರ ಅದು ಪರಿಪೂರ್ಣವಾದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಈ ವ್ಯಕ್ತಿತ್ವ ನಿರ್ಮಾಣಕ್ಕೆ ಹಲವಾರು ಸೋಪಾನಗಳಿವೆ.ಮನಸ್ಸಿನ ಸಂರೋಧನೆಯಿಂದ ಒಳ ಅರಿವಿನ ಮಹತ್ವ ತಿಳಿಯುತ್ತದೆ. ಹಾಗಾಗಿ ಒಳ ಬೆಳಕಿನ ಅರಿವಿಗಾಗಿ ಸರ್ವತೋಮುಖವಾದ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಮನಸ್ಸಿನ ನಿಗ್ರಹಕ್ಕೆ ಯೋಗಕ್ಕೆ ನಾವು ಶರಣು ಹೊಂದಬೇಕು .ಹಾಗಾಗಿ ಯೋಗದ ಮೂಲಕವಾಗಿ ಮನಸ್ಸಿನ ಸಂಸ್ಕಾರ ತನ್ಮೂಲಕವಾಗಿ ಸಂಪೂರ್ಣ ವ್ಯಕ್ತಿತ್ವದ ನಿರ್ಮಾಣ ಸಾಧ್ಯ. ಯೋಗ ಶಬ್ದವು ‘ಯುಜ್’ ಧಾತುವಿನಿಂದ ಶಬ್ದ ನಿಷ್ಪತ್ತಿಯಾಗಿರುತ್ತದೆ.” युज्-समाधौ ; इत्यस्माद् व्युत्पन्नः समाधि समाध्यर्थो न तु युजिर्योगे “(ಧಾತುಪಾಠ 4-68 ;7-7) ಹಾಗಾಗಿ ಯೋಗವೆಂದರೆ ಸಮಾಧಿ(ಚಿತ್ತೈಕಾಗ್ರತೆ)ಯೆಂದೇ ತಿಳಿಯಬೇಕು. ಚಿತ್ತಶುದ್ಧಿಗಾಗಿ ಯೋಗವಿದೆಯೆಂದರೆ ಮಾನವ ಕಲ್ಯಾಣಕ್ಕಾಗಿರುವ ಕೊಡುಗೆಯೆಂದೇ ತಿಳಿಯಲಾಗಿದೆ. ಮಾನವನ ವ್ಯಕ್ತಿತ್ವ ನಿರ್ಮಾಣದಲ್ಲಿ ಯೋಗದ ಪಾತ್ರ ಅತಿ ಮುಖ್ಯವಾಗಿರುತ್ತದೆ. ವಿಷಯ ಸುಖಗಳೆಲ್ಲವೂ ಸಮಾಧಿಗೆ(ಚಿತ್ತೈಕಾಗ್ರತೆಗೆ) ಕಂಟಕಗಳು. ಚಿತ್ತೈಕಾಗ್ರತೆಯಿಂದ ವ್ಯಕ್ತಿಗೆ ಶಾಂತತೆ ಲಭಿಸುವುದು. ಅಶಾಂತತೆಯ ಪ್ರಕ್ಷುಬ್ಧತೆಗೆ ಹೇತು. ಅದು ನಿವಾರಣೀಯ ಖಂಡಿತವಾಗಲೂ ಇದು ವ್ಯಕ್ತಿಯ ಮಾನಸಿಕ ಚಂಚಲತೆ ಮತ್ತು ಗಂಡಾಂತರಗಳಿಗೆ ಕಾರಣೀಭೂತವಾಗಿ ಸಮಾಜ ಸ್ವಾಸ್ಥ್ಯವನ್ನು ಕೆಡಿಸುವಂತಹದು. ಅಂತಹವುಗಳ ಲಕ್ಷಣಗಳನ್ನು ತಿಳಿಯುವುದರಿಂದ ಮಾನವ ಕುಲಕ್ಕೆ ಉಪಯೋಗವಾಗುತ್ತದೆ.
- ಅಷ್ಟಾಂಗ ಯೋಗದ ಸೋಪಾನಗಳು :- ಅಷ್ಟಾಂಗ ಯೋಗವೆಂದರೆ, ಪ್ರಯೋಗಾರ್ಹವಾದ ಅನುಶಾಸನಗಳೆಂದು ಹೇಳಲಾಗುತ್ತದೆ. ಇವುಗಳು ಗುಣಗಳು ಹಾಗೂ ಪುರುಷನಿಗೂ ಇರುವ ಭೇದವನ್ನು ತಿಳಿಸಿ ಕೊಡುವ ವಿವೇಕ ಖ್ಯಾತಿಗಳೆನಿಸಿವೆ.
- “यमनियमासनप्राणायामप्रत्याहारधारणध्यानसमाधयोऽष्टावंगानि” ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ಅಷ್ಟಾಂಗಗಳು. ಯೋಗಾಂಗಗಳ ಅನುಷ್ಟಾನದಿಂದ ಉತ್ತಮ ಪ್ರಜೆಯನ್ನು ದೊರಕಿಸಿ ಕೊಂಡಂತಾಗುತ್ತದೆ. ಮಾನವನ ವ್ಯಕ್ತಿತ್ವದ ಸದೃಢ ನಿರ್ಮಾಣಕ್ಕಾಗಿ ಯೋಗ ಸೂತ್ರವನ್ನು ಅನುಷ್ಟಿಸುವುದು ಯೋಗ್ಯವಾಗಿದೆ. * ಯಮ :- ಜೀವನ ಪರ್ಯಂತ ಯಾವುದೇ ಪ್ರಾಣಿಗಳನ್ನೂ ಹಿಂಸಿಸದಂತೆ ಆಚರಣೆಯಲ್ಲಿರುವುದು. ನಮ್ಮ ನಡೆ ನುಡಿಗಳಲ್ಲಿ ಏಕತಾನತೆಯನ್ನು ಸಾಧಿಸಿ ಜ್ಞಾನದ ಹಿನ್ನೆಲೆಯಲ್ಲಿ ಭ್ರಾಂತಿರಾಹಿತ್ಯರಾಗಿ ಪರೋಪಕಾರ ಮತ್ತು ಸತ್ಯಸಂಧತೆಯನ್ನು ಕಾಪಾಡಿಕೊಳ್ಳುವುದು. ಪರದ್ರವ್ಯವನ್ನು ಆಶಿಸದಿರುವುದು. ಗುಪ್ತೇಂದ್ರಿಯ ಸಂಯಮ, ಸಚ್ಚಾರಿತ್ರ್ಯ ವೃತಸ್ಥನಾಗಿರುವುದು.ಇವುಗಳ ಅನುಷ್ಠಾನವೇ ಸತ್ಯ. ಆಸ್ತೇಯ,ಬ್ರಹ್ಮಚರ್ಯ,ಅಪರಿಗ್ರಹಗಳಾಗಿವೆ.
- * ನಿಯಮ:- ಪ್ರತಿನಿತ್ಯ ಬಾಹ್ಯಭ್ಯಂತರದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಶೌಚ. ಅತ್ಯಾಸೆ ಪಡದೆ ಇದ್ದುದರಲ್ಲಿ ತೃಪ್ತಿಯನ್ನು ಹೊಂದುವುದು. ಸಂತೋಷ, ದೇಶ, ಕಾಲ,ಸಂದರ್ಭಗಳನ್ನರಿತು ಹಸಿವು, ಬಾಯಾರಿಕೆ, ಶೀತೋಷ್ಣಗಳಂತಹ ವಿಷಮ ಪರಿಸ್ಥಿತಿಗಳು ನಿಭಾಯಿಸುವುದು ಮತ್ತು ಮೌನದ ಮಹತ್ವವನ್ನು ಅರಿಯುವುದು ಹಾಗೂ ಜ್ಞಾನಕಾರಕ ವಿಷಯಗಳ ಸಂಗ್ರಹಣೆ ಸ್ವಾಧ್ಯಾಯ, ಪರಮಗುರು ಅರ್ಥಾತ್ ಸನ್ನಿಧಾನದಲ್ಲಿ ಭಕ್ತಿ. ಇವು ಐದು ನಿಯಮವಾಗಿ ಆಚರಿಸಲ್ಪಡಬೇಕು. *
- ಆಸನ :- “तत्र स्थिरमुखमासनम्” ಸ್ಥಿರವಾಗಿ ಸುಖವಾಗಿರುವುದೇ ಆಸನ. ಹಾಗಾಗಿ ಆಸನದ ಸಿದ್ಧಿಗಾಗಿ ಅನೇಕ ಅಭ್ಯಾಸಗಳಿವೆ. ಅವುಗಳನ್ನು ಪ್ರತಿನಿತ್ಯ ಯೋಗ್ಯ ಅಭ್ಯಾಸದಿಂದ ಶರೀರ ಪಟುತ್ವ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ಪ್ರಾಣಾಯಾಮ ಮತ್ತು ಧ್ಯಾನ ಕ್ರಿಯೆಗಳಿಗೆ ಉಪಯೋಗವಾಗುತ್ತದೆ. ಉದಾ:-ಪದ್ಮಾಸನ, ವಜ್ರಾಸನ ಮುಂತಾದವು. * ಪ್ರಾಣಾಯಾಮ :- ದೀರ್ಘಕಾಲದವರೆಗೆ ಆಸನದ ಅರ್ಹತೆ ಸಿದ್ಧಿಸಿದ ನಂತರ ಪ್ರಾಣಾಯಾಮದ ಕ್ರಮಗಳು ಅನುಷ್ಠಿಸಲ್ಪಡುತ್ತವೆ.
- ಇದು ನಿರಂತರ ಶ್ವಾಸೋಚ್ಛಾಸ್ವಗಳ ಕ್ರಿಯೆಗಳನ್ನು ಕ್ರಮವಾಗಿ ಅಭ್ಯಸಿಸುವುದಾಗಿರುತ್ತದೆ. ಶ್ವಾಸೋಚ್ಛ್ವಾಗಳು ಏಕ ಕಾಲದಲ್ಲಿ ನಡೆಯುವುದಿಲ್ಲ. ಇದರ ಅನುಷ್ಠಾನವು ಸೂಕ್ತ ನಿರ್ದೇಶನದ ಅಡಿಯಲ್ಲಿ ನಡೆಯಬೇಕಾಗಿರುತ್ತದೆ. ಮಾನಸಿಕ ಸ್ಥಿರತೆ ಹಾಗೂ ಆತ್ಮಸ್ತೈರ್ಯ ದೊರೆಯುತ್ತದೆ. * ಪ್ರತ್ಯಾಹಾರ :- ಈ ಹಂತದಲ್ಲಿ ಇಂದ್ರಿಯಗಳು ತಮ್ಮ ಸ್ವಭಾವೋಚಿತವಾಗಿ ನಡೆಸುವ ಕರ್ಮಗಳಿಂದ ವಿಯೋಗವನ್ನು ಹೊಂದುತ್ತವೆ. ಸ್ಥಿರಮನಸ್ಸಿನ ಅನುಚರರಾಗಿ ಬಿಡುತ್ತವೆ. ಇಂದ್ರಿಯಗಳನ್ನು ದುಂಬಿಗಳಿಗೂ, ಮನಸ್ಸನ್ನು ಮಧುಕರ ರಾಜನಿಗೂ ಹೋಲಿಸುವುದುಂಟು.ಇದು ಯೋಗದ ಬಹಿರಂಗ ಸಾಧನೆಗಳು. * ಧಾರಣ:- “देशबन्धश्चिन्तस्य धारणा” ಚಿತ್ತೈಕಾಗ್ರತೆ ಸಂಪಾದಿಸಿದ ನಂತರ ಇಂದ್ರಿಯಗಳು ಚಿತ್ತಾನುವರ್ತಿಯಾಗಿ ಶರೀರದ ನಿಶ್ಚಿತ ಭಾಗಗಳಲ್ಲಿ ಅಂದರೆ ನಾಸಿಕಾಗ್ರ, ನಾಭಿಚಕ್ರ, ಹೃದಯ ಕಮಲದಲ್ಲಾಗಲೀ ಚಿತ್ತದ ವೃತ್ತಿಯನ್ನು ನಿಯೋಜಿಸುವಿಕೆಯಾಗಿರುತ್ತದೆ. * ಧ್ಯಾನ :- ಚಿತ್ತವೃತ್ತಿಯನ್ನು ನಿಲ್ಲಿಸುವುದು ಧಾರಣೆಯೆನಿಸಿದರೆ ನಿಶ್ಚಿತ ಭಾಗದಲ್ಲಿ ಪ್ರತ್ಯಯವೊಂದನ್ನು ನಿರಂತರವಾಗಿ ಪ್ರವಹಿಸುವುದು ಧ್ಯಾನವಾಗಿರುತ್ತದೆ. ನಿಶ್ಚಿತ ಪ್ರತ್ಯಯವು ಅಬಾಧಿತವಾಗಿ ಬದಲಾಗದಂತಿರಬೇಕು.
- *
- ಸಮಾಧಿ :- ಧ್ಯೇಯ ಸ್ವಭಾವದ ಆವೇಶದಿಂದುಪಲಬ್ಧವಾಗಿ ಧ್ಯಾನದ ಸ್ವರೂಪ ಶೂನ್ಯ ಸ್ಥಿತಿ ಸಾಮ್ಯಾವಸ್ಥೆಯನ್ನು ಸಮಾಧಿಯೆಂದು ಹೇಳಬಹುದಾಗಿದೆ. ಇಲ್ಲಿ ಚಿತ್ತವೃತ್ತಿಗಳ ನಿರೋಧವೆಂಬುದೇ ಯೋಗ ಶಬ್ದದ ಮುಖ್ಯಾರ್ಥ.ಚಿತ್ತವು ತನ್ನ ಕೆಲಸಗಳನ್ನೆಲ್ಲಾ ಮುಗಿಸಿ ಕೈವಲ್ಯ ನೆರವಾಗುವ ಸಂಸ್ಕಾರಗಳೊಂದಿಗೆ ಲಯವನ್ನು ಹೊಂದುತ್ತದೆ. ಆಗ ಪುರುಷನು ತನ್ನ ಸ್ವರೂಪದಲ್ಲಿ ವಿಜೃಂಭಿತನಾಗುತ್ತಾನೆ. ಹೀಗೆ ಪ್ರತಿಯೊಬ್ಬ ವ್ಯಕ್ತಿಯು ಯೋಗ ದಾರಿಯನ್ನು ಹಿಡಿದರೆ ಸಾಮರಸ್ಯ ಹೆಚ್ಚಾಗಿ ಸಮಾಜಕ್ಕೆ ಉತ್ತಮ ಕೊಡುಗೆಯಾಗುತ್ತದೆ.ಇದರಿಂದ ಮನಸ್ಸು ಕೂಡ ಸ್ಥಿರವಾಗಿದ್ದು, ಉತ್ತಮ ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಯೋಗದ ಅಷ್ಟಾಂಗದ ಪ್ರತಿಯೊಂದು ಹಂತದಲ್ಲೂ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗುವ ಅಂಶಗಳನ್ನು ಕಾಣಲಾಗಿದೆ..
ಲೇಖಕರು ದೀಪಶ್ರೀ. ಎಸ್. ಸಂಸ್ಕೃತ ಶಿಕ್ಷಕರು. ಶ್ರೀ ಜಗದ್ಗುರು ಗುರುಬಸವೇಶ್ವರ ಸಂಸ್ಕೃತ ಪಾಠ ಶಾಲೆ ಶ್ರೀ
ಬೆಕ್ಕಿನಕಲ್ಮಠ. ಶಿವಮೊಗ್ಗ.