ಪರಿಶೀಲನಾ ಸಭೆ

ಕೋವಿಡ್ ಸಂಕಷ್ಟಕ್ಕೆ ಸಿಲುಕಿದ ಮಕ್ಕಳ ಹಿತ ಕಾಯಲು ಬಾಲಸೇವಾ ಹಾಗೂ ಬಾಲ

ಹಿತೈಶಿ ಯೋಜನೆ ಜಾರಿ- ಶಶಿಕಲಾ ಜೊಲ್ಲೆ

ಕೋವಿಡ್ ಎರಡನೆ ಅಲೆಯಲ್ಲಿ ತಂದೆ, ತಾಯಿಯನ್ನು ಕಳೆದುಕೊಂಡು
ಅನಾಥರಾದ ಮಕ್ಕಳ ನೆರವಿಗಾಗಿ ಮುಖ್ಯಮಂತ್ರಿಗಳ ಬಾಲ ಸೇವಾ
ಯೋಜನೆ ಹಾಗೂ ದಾನಿಗಳ ಮೂಲಕ ಮಕ್ಕಳ ಭವಿಷ್ಯ ರೂಪಿಸಲು ಬಾಲ
ಹಿತೈಶಿ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಇಲಾಖಾ ಸಚಿವರಾದ ಶಶಿಕಲಾ ಜೊಲ್ಲೆ ಅವರು ಹೇಳಿದರು.
ಸಂಭಾವ್ಯ ಕೋವಿಡ್ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ
ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ
ಏರ್ಪಡಿಸಲಾದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಕೋವಿಡ್‍ನ ಎರಡನೆ ಅಲೆಯಲ್ಲಿ ರಾಜ್ಯದಲ್ಲಿ ಒಟ್ಟು 52 ಮಕ್ಕಳು ತಮ್ಮ
ತಂದೆ, ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ,
ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಕ್ಕಳು ಏಕ
ಪೋಷಕರನ್ನು ಹೊಂದುವಂತಾಗಿದೆ. ಅಂತಹ ಮಕ್ಕಳ ಉತ್ತಮ
ಭವಿಷ್ಯ ರೂಪಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೆ ರಾಜ್ಯದ 20 ಜಿಲ್ಲೆಗಳಲ್ಲಿ
ತಾವೇ ಖುದ್ದು ಪ್ರವಾಸ ಕೈಗೊಂಡು ಪರಿಸ್ಥಿತಿಯ ಪರಾಮರ್ಶೆ
ನಡೆಸಲಾಗಿದೆ. ಅನಾಥ ಮಕ್ಕಳ ಸಂಬಂಧಿಕರು ಹಾಗೂ ಮಕ್ಕಳೊಂದಿಗೆ
ವಿಡಿಯೋ ಸಂವಾದ ನಡೆಸಿ, ಮಕ್ಕಳ ಅಭಿಪ್ರಾಯ ಆಲಿಸಲಾಗಿದೆ. ಹೀಗಾಗಿ
ಅನಾಥ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ಸಲುವಾಗಿ
ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯನ್ನು ಜಾರಿಗೊಳಿಸಿದೆ. ಈ
ಯೋಜನೆ ಮೂಲಕ ಅಂತಹ ಮಕ್ಕಳಿಗೆ ಪ್ರತಿ ತಿಂಗಳು 3500 ರೂ.
ನೀಡುವುದು, ಅಲ್ಲದೆ ಉಚಿತ ಶಿಕ್ಷಣ ನೀಡುವುದು, ಉನ್ನತ ಶಿಕ್ಷಣಕ್ಕಾಗಿ
ಉಚಿತವಾಗಿ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ನೀಡುವುದು, 21 ವರ್ಷ ತುಂಬಿದ ಹೆಣ್ಣು
ಮಕ್ಕಳಿಗೆ 01 ಲಕ್ಷ ರೂ. ನೆರವು ನೀಡಲು ನಿರ್ಧರಿಸಲಾಗಿದೆ ಎಂದರು.
ರಾಜ್ಯದಲ್ಲಿ ದಾನಿಗಳಿಗೆ ಕೊರತೆಯಿಲ್ಲ, ಹೀಗಾಗಿ ಕೋವಿಡ್‍ನಿಂದ ತಂದೆ
ಮತ್ತು ತಾಯಿ ಅಥವಾ ಏಕ ಪೋಷಕ ಹೊಂದಿರುವಂತಹ ಮಕ್ಕಳಿಗೆÀ
ನೈತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ನೆರವನ್ನು ಒದಗಿಸಿ ಮಗುವಿನ

ಸರ್ವತೋಮುಖ ಅಭಿವೃದ್ಧಿಗೆ ಬೆಂಬಲ ನೀಡಲು ಮುಂದಾಗುವವರಿಗೆ
ಸರ್ಕಾರವು ಬಾಲಹಿತೈಶಿ ಯೋಜನೆಯಡಿ ಮಗು ಮತ್ತು
ದಾನಿಗಳೊಂದಿಗಿನ ಸಂಪರ್ಕ ಕೊಂಡಿಯಂತೆ ಕಾರ್ಯ ನಿರ್ವಹಿಸಲಿದೆ.
ದತ್ತು ಸ್ವೀಕಾರ ಕಾರ್ಯಕ್ರಮದಡಿಯೂ ಮಕ್ಕಳಿರದ
ದಂಪತಿಗಳಿಗೆ ನಿಯಮಾನುಸಾರ ದತ್ತು ಪಡೆಯಲು ಅವಕಾಶ
ಕಲ್ಪಿಸಲಿದೆ ಎಂದರು. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ ಅಲ್ಲದೆ ಅನ್ಯ
ಕಾರಣಗಳಿಂದ ತಂದೆ ತಾಯಿ ಮರಣ ಹೊಂದಿ ಅನಾಥರಾದ ಒಂದೇ ಕುಟುಂಬದ
05 ಮಕ್ಕಳನ್ನು ಗುರುತಿಸಿದ್ದು, ಕೋವಿಡ್ ಕಾರಣದಿಂದ 01 ಮಗು
ಅನಾಥವಾಗಿದೆ. 125 ಮಕ್ಕಳು ಏಕ ಪೋಷಕರಾಗಿದ್ದಾರೆ. ಮಕ್ಕಳಿಗೆ
ಸರ್ಕಾರದಿಂದ ನೆರವು ನೀಡಲು ಬಾಲಸ್ವರಾಜ್ ಪೋರ್ಟಲ್‍ನಲ್ಲಿ ವಿವರ
ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ದಾವಣಗೆರೆ
ಜಿಲ್ಲೆಯಲ್ಲಿ ಕೋವಿಡ್‍ನಂತರದ ತಪಾಸಣೆ ಸಂದರ್ಭದಲ್ಲಿ 01 ಮಗುವಿಗೆ
ಮಿಸ್ಸಿ ಸೋಂಕಿನಂತಹ ರೋಗ ಲಕ್ಷಣ ಕಂಡುಬಂದಿದ್ದು, ಚಿಕಿತ್ಸೆ
ನೀಡಲಾಗುತ್ತಿದೆ ಎಂದರು.
3ನೇ ಅಲೆ ತಡೆಗಟ್ಟಲು ಸಿದ್ಧತೆ : ರಾಜ್ಯದಲ್ಲಿ ಕೋವಿಡ್‍ನ 3ನೇ ಅಲೆ ಬರುವ
ಸಾಧ್ಯತೆಗಳಿದ್ದು, ಈ ವೇಳೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ
ಉಂಟಾಗುವ ಸಂಭವವಿದೆ ಎಂಬುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಡಾ. ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು ಈಗಾಗಲೆ
ಮುಖ್ಯಮಂತ್ರಿಗಳಿಗೆ ವರದಿಯನ್ನು ನೀಡಿದೆ. ರಾಜ್ಯದಲ್ಲಿ 3ನ ಅಲೆ
ತಡೆಗಟ್ಟುವುದು ಹಾಗೂ ನಿರ್ವಹಿಸುವ ಕುರಿತು ಇಲಾಖೆ ಸಾಕಷ್ಟು
ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್
ಮೊದಲನೆ ಅಲೆಯಲ್ಲಿ 18 ವರ್ಷದೊಳಗಿನ ಒಟ್ಟು 1875 ಮಕ್ಕಳು
ಸೋಂಕಿಗೆ ಒಳಗಾಗಿದ್ದರು, 3ನೇ ಅಲೆಯಲ್ಲಿ ಒಟ್ಟು 2283 ಮಕ್ಕಳಲ್ಲಿ
ಸೋಂಕು ಕಾಣಿಸಿಕೊಂಡಿದ್ದು, ಯಾವುದೇ ಮಕ್ಕಳಲ್ಲಿ ತೀವ್ರ
ಗಂಭೀರ ಸ್ವರೂಪದ ಪ್ರಕರಣ ವರದಿಯಾಗಿಲ್ಲ ಎಂದು ಸಚಿವರು
ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಉಪನಿರ್ದೇಶಕ ವಿಜಯಕುಮಾರ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 06
ವರ್ಷದೊಳಗಿನ 130220 ಹಾಗೂ 6 ರಿಂದ 16 ವರ್ಷದೊಳಗಿನ 118140
ಮಕ್ಕಳು ಸೇರಿದಂತೆ ಒಟ್ಟು 248360 ಮಕ್ಕಳಿದ್ದಾರೆ, ಈ ಪೈಕಿ 180 ತೀವ್ರ
ಅಪೌಷ್ಠಿಕ ಹಾಗೂ 8168 ಅಪೌಷ್ಠಿಕ ಮತ್ತು 118519 ಮಕ್ಕಳಿದ್ದಾರೆ. ಶಿಕ್ಷಣ
ಇಲಾಖೆಯು ಕೂಡ 272 ಮಕ್ಕಳನ್ನು ತೀವ್ರ ಆರೋಗ್ಯ ಸಮಸ್ಯೆ
ಹೊಂದಿರುವ ಮಕ್ಕಳೆಂದು ಗುರುತಿಸಿದೆ. ತೀವ್ರ ಅಪೌಷ್ಠಿಕತೆ ಹಾಗೂ
ಅಪೌಷ್ಠಿಕತೆ ಹೊಂದಿರುವ ಮಕ್ಕಳ ಆರೋಗ್ಯ ಸುಧಾರಣೆಗೆ ಅಗತ್ಯ
ಕ್ರಮ ವಹಿಸಲಾಗಿದೆ, ಅಲ್ಲದೆ ಈ ಮಕ್ಕಳ ತಾಯಂದಿರಿಗೆ ಆದ್ಯತೆ ಮೇರೆಗೆ
ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಮಕ್ಕಳ ಮನೆಗೆ
ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿಯರು ಭೇಟಿ ನೀಡಿ,
ಮೊಟ್ಟೆ ಹಾಗೂ ಪೌಷ್ಠಿಕ ಆಹಾರ ನೀಡಿ, ಪಾಲಕರಿಂದ ಸಹಿ ಪಡೆಯುವ
ವ್ಯವಸ್ಥೆ ಜಾರಿಗೊಳಿಸಿದೆ. ಆಯುಷ್ ಇಲಾಖೆಯಿಂದಲೂ ಮಕ್ಕಳಿಗೆ ರೋಗ
ನಿರೋಧಕ ಶಕ್ತಿ ಹೆಚ್ಚಿಸಲು ಶಕ್ತಿವರ್ಧಕ ಮತ್ತು ಸ್ಪಿರುಲಿನಾ ಚಿಕ್ಕಿ
ವಿತರಿಸಲು ಕ್ರಮ ಕೈಗೊಂಡಿದೆ. ಕಳೆದ ವರ್ಷ 73 ಹಾಗೂ ಈ ವರ್ಷ 20
ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದು, ಒಟ್ಟು 10 ಪ್ರಕರಣಗಳಲ್ಲಿ
ಎಫ್‍ಐಆರ್ ದಾಖಲಿಸಲಾಗಿದೆ. ವಿಕಲಚೇತನರು, ಅಂಗನವಾಡಿ
ಕಾರ್ಯಕರ್ತೆಯರಿಗೆ ಸಂಬಂಧಿಸಿದಂತೆ ಶೇ. 90 ರಷ್ಟು ಲಸಿಕೆ ಕಾರ್ಯ
ಆಗಿದೆ. ಕೋವಿಡ್‍ನಿಂದ ಮೃತಪಟ್ಟ ಜಿಲ್ಲೆಯ ಓರ್ವ ಅಂಗನವಾಡಿ
ಕಾರ್ಯಕರ್ತೆಯ ಅವಲಂಬಿತರಿಗೆ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ
ನೀಡಲಾಗಿದೆ ಎಂದರು.

ಡಿಹೆಚ್‍ಒ ಡಾ. ನಾಗರಾಜ್ ಮಾತನಾಡಿ, ಜಿಲ್ಲೆಯಲ್ಲಿ 19 ವರ್ಷದೊಳಗಿನ 07
ಲಕ್ಷ ಮಕ್ಕಳಿದ್ದು, ಶೇ. 10 ರಷ್ಟು ಮಕ್ಕಳಿಗೆ ಸೋಂಕು ಬರುವ
ಅಂದಾಜು ಮಾಡಿಕೊಂಡಿದ್ದು, ಈ ಪೈಕಿ ಶೇ. 10 ಅಂದರೆ 7 ಸಾವಿರ ಮಕ್ಕಳ
ಮೇಲೆ ಪರಿಣಾಮ ಉಂಟಾಗುವ ಸಂಭವವಿದೆ. ಜಿಲ್ಲೆಯಲ್ಲಿ ಈವರೆಗೆ
ಕೋವಿಡ್‍ನಿಂದ ಮಕ್ಕಳಲ್ಲಿ ತೀವ್ರ ಗಂಭೀರತೆ ಉಂಟಾಗಿರುವ
ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 3ನೇ ಅಲೆ ನಿರ್ವಹಣೆಗಾಗಿ
ಈಗಾಗಲೆ 68 ಮಕ್ಕಳ ತಜ್ಞ ವೈದ್ಯರನ್ನು ಗುರುತಿಸಿದ್ದು,
ಮಕ್ಕಳಿಗಾಗಿಯೇ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ 60 ಆಕ್ಸಿಜನ್ ಬೆಡ್
ಸಾಮಥ್ರ್ಯದ ಮಕ್ಕಳ ವಾರ್ಡ್ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ತಲಾ
10 ಆಕ್ಸಿಜನ್ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಕ್ಕಳಿಗೆ ಸೋಂಕು
ತಗುಲಿ, ರೋಗ ಲಕ್ಷಣ ಕಂಡುಬರದ ಮಕ್ಕಳ ಆರೈಕೆಗಾಗಿ ಜಿಲ್ಲೆಯಲ್ಲಿ
ಪ್ರತಿ ತಾಲ್ಲೂಕಿಗೆ 02 ರಂತೆ ಒಟ್ಟು 10 ಮಕ್ಕಳ ಕೋವಿಡ್ ಕೇರ್
ಸೆಂಟರ್‍ಗಳನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಪ್ರಾರಂಭಿಸಲು
ಕ್ರಮ ಕೈಗೊಂಡಿದ್ದು, ಒಟ್ಟು 2500 ಬೆಡ್‍ಗಳನ್ನು ಸುವ್ಯವಸ್ಥಿತ
ರೀತಿಯಲ್ಲಿ ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಅಲ್ಲದೆ ವಿಕಲಚೇತನರಿಗೂ
ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಗಾಗಿ 60 ಮಕ್ಕಳ ವೆಂಟಿಲೇಟರ್
ಅಗತ್ಯತೆ ಹಾಗೂ ಅಗತ್ಯ ಔಷಧಿಗಳ ಪೂರೈಕೆ ಬಗ್ಗೆ ಈಗಾಗಲೆ
ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳ ತಜ್ಞ ವೈದ್ಯರು, ಆಶಾ, ಅಂಗನವಾಡಿ,
ಶುಶ್ರೂಷಕರೊಂದಿಗೆ ಜುಲೈ ಮೊದಲ ವಾರದಲ್ಲಿ ತರಬೇತಿ
ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಮಗುವಿನ ಉನ್ನತ ಶಿಕ್ಷಣದ ಹೊಣೆ ಹೊತ್ತ ಸಂಸದರು : ಜಿಲ್ಲೆಯಲ್ಲಿ
ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ತಂದೆ ಹಾಗೂ ತಾಯಿ
ಕಳೆದುಕೊಂಡು, ಅಜ್ಜಿಯೊಂದಿಗೆ ವಾಸಿಸುತ್ತಿರುವ ಹೊನ್ನಾಳಿ ತಾಲ್ಲೂಕಿನ
06 ನೇ ತರಗತಿಯ ಹೆಣ್ಣು ಮಗುವಿಗೆ ವೇದಿಕೆಗೆ ಕರೆದು ಸಾಂತ್ವನದ
ಮಾತುಗಳನ್ನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅವರು, ಪಿಯುಸಿ ತನಕ
ಸರ್ಕಾರದಿಂದ ಉಚಿತವಾಗಿ ಶಿಕ್ಷಣ ನೀಡಲಾಗುತ್ತದೆ. ಪಿಯುಸಿ ಬಳಿಕದ ಉನ್ನತ
ಶಿಕ್ಷಣವನ್ನು ನಾನೇ ಉಚಿತವಾಗಿ ಕೊಡಿಸುತ್ತೇನೆ. ಈಗಲೆ ನಮ್ಮ
ಸಂಸ್ಥೆಯಲ್ಲಿ ನಿನ್ನ ಹೆಸರು ನೊಂದಣಿ ಮಾಡಿಸಿ, ನೀನು ಬಯಸುವ ಉನ್ನತ
ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ದೊರಕುವಂತೆ ಮಾಡಲಾಗುವುದು
ಎಂದು ಸ್ಥಳದಲ್ಲಿಯೇ ಘೋಷಿಸಿದರು. ಅಲ್ಲದೆ ಜಿಲ್ಲೆಯಲ್ಲಿ ಸಂಭಾವ್ಯ
3ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಮಟ್ಟದ ಎಲ್ಲ ಅಧಿಕಾರಿ,
ಸಿಬ್ಬಂದಿಗಳು ತೀವ್ರ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ
ನೀಡಿದರು.
ಸಭೆಯಲ್ಲಿ ಜಗಳೂರು ಶಾಸಕ ರಾಮಚಂದ್ರಪ್ಪ, ದಾವಣಗೆರೆ
ಉತ್ತರ ಕ್ಷೇತ್ರ ಶಾಸಕ ಎಸ್.ಎ. ರವೀಂದ್ರನಾಥ್, ಮಾಯಕೊಂಡ ಶಾಸಕ
ಪ್ರೊ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಒ ಡಾ.
ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಇದ್ದರು.

Leave a Reply

Your email address will not be published. Required fields are marked *