ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾತಿಗೊಂಡು,
ಇದುವರೆಗೂ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭ ಮಾಡದೇ
ಇರುವಂತಹ ಫಲಾನುಭವಿಗಳನ್ನು ಗುರುತಿಸಿ, ಅಂತಹವರ
ಮನೆ ಮಂಜೂರಾತಿಯನ್ನು ರದ್ದುಪಡಿಸಿ, ಬೇರೆ ಅರ್ಹ
ಫಲಾನುಭವಿಗಳಿಗೆ ಮನೆಯನ್ನು ಮಂಜೂರಾತಿ ಮಾಡಲು
ಕ್ರಮ ವಹಿಸಬೇಕು ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಅವರು
ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರದಂದು
ಏರ್ಪಡಿಸಲಾದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ
(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಆವಾಸ್ (ನಗರ) ಯೋಜನೆಯಡಿ ಜಿಲ್ಲೆಯ ವಿವಿಧ
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1346
ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಮನೆ ಪ್ರಾರಂಭಿಸದೇ
ಇರುವುದರಿಂದ ಆನ್‍ಲೈನ್ ತಂತ್ರಾಂಶದಲ್ಲಿ ಬ್ಲಾಕ್ ಮಾಡಲಾಗಿರುತ್ತದೆ.
ಹೀಗಾಗಿ ಕಳೆದ ಜೂನ್ 28 ರಂದು ರಾಜೀವ್‍ಗಾಂಧಿ ವಸತಿ ನಿಗಮದಿಂದ
ಬ್ಲಾಕ್ ಮಾಡಲಾಗಿರುವ ಮನೆಗಳನ್ನು ರದ್ದುಪಡಿಸುವಂತೆ
ಆದೇಶಿಸಿರುತ್ತಾರೆ. ವಾಜಪೇಯಿ ನಗರ ವಸತಿ, ಡಾ. ಬಿ.ಆರ್. ಅಂಬೇಡ್ಕರ್,
ದೇವರಾಜ ಅರಸು ವಸತಿ, ಪಿಎಂಎವೈ (ನಗರ) ಯೋಜನೆಗಳಡಿ
ಜಿಲ್ಲೆಯ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು
5360 ಮನೆಗಳು ಮಂಜೂರಾತಿಯಾಗಿದ್ದು, ಈ ಪೈಕಿ 1492
ಮನೆಗಳು ಪೂರ್ಣಗೊಂಡಿವೆ, 2657 ಮನೆಗಳು ಪ್ರಗತಿಯ ವಿವಿಧ
ಹಂತದಲ್ಲಿವೆ. ಆದರೆ 1211 ಮನೆಗಳ ನಿರ್ಮಾಣ ಇನ್ನೂ ಪ್ರಾರಂಭವೇ
ಆಗಿಲ್ಲ ಎಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ
ಅವರು ಮಾಹಿತಿ ನೀಡಿದರು. ಪ್ರಧಾನಮಂತ್ರಿ ಆವಾಸ್ ವಸತಿ (ಗ್ರಾಮೀಣ)
ಯೋಜನೆಯಡಿ 2016-17 ರಿಂದ 2019-20 ರವರೆಗಿನ ಅವಧಿಯಲ್ಲಿ
ಜಿಲ್ಲೆಯಲ್ಲಿ ಒಟ್ಟು 2614 ಮನೆಗಳಿಗೆ ಫಲಾನುಭವಿಗಳ ಆಯ್ಕೆ
ಮಾಡಿದ್ದು, ಈ ಪೈಕಿ 1261 ಮನೆಗಳು ಪೂರ್ಣಗೊಂಡಿದ್ದು, 484
ಮನೆಗಳು ನಿರ್ಮಾಣದ ವಿವಿಧ ಹಂತದಲ್ಲಿವೆ. ಇನ್ನೂ 253 ಮನೆಗಳ
ನಿರ್ಮಾಣ ಕಾರ್ಯ ಆರಂಭವಾಗಿಲ್ಲ, 619 ಮನೆಗಳು ತಂತ್ರಾಂಶದಲ್ಲಿ
ಬ್ಲಾಕ್ ಆಗಿವೆ ಎಂದು ಜಿ.ಪಂ. ಯೋಜನಾ ನಿರ್ದೇಶಕರು ಹೇಳಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಜಿ.ಎಂ. ಸಿದ್ದೇಶ್ವರ್
ಅವರು, ಅರ್ಹರಲ್ಲದ ಹಾಗೂ ಮನೆ ನಿರ್ಮಿಸಿಕೊಳ್ಳಲು ಆಸಕ್ತಿ
ಇಲ್ಲದಂತಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದಕ್ಕೆ ಈ
ರೀತಿ ಆಗಿದೆ. ಮುಂದಿನ ದಿನಗಳಲ್ಲಿ ಮನೆಗಳಿಗೆ
ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಹರಾದವರನ್ನು
ಮಾತ್ರ ಆಯ್ಕೆ ಮಾಡಬೇಕು. ಕೆಲವರು ಜನಪ್ರತಿನಿಧಿಗಳಿಂದ
ಹಾಗೂ ಖುದ್ದು ನಾವು ಕೂಡ ಶಿಫಾರಸು ಪತ್ರ ನೀಡುತ್ತೇವೆ,
ಆದರೆ ಅವರು ಅರ್ಹರೋ ಅಲ್ಲವೋ ಎಂಬುದು ನಮಗೂ
ಗೊತ್ತಿರುವುದಿಲ್ಲ. ಹೀಗಾಗಿ ಅಧಿಕಾರಿಗಳಾದವರು ಅರ್ಹತೆ ಬಗ್ಗೆ
ಪರಿಶೀಲಿಸಬೇಕು, ಕಡ್ಡಾಯವಾಗಿ ಗ್ರಾಮ ಸಭೆ ನಡೆಸಿಯೇ ಅರ್ಹ
ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಒಂದು ವೇಳೆ
ಅನರ್ಹರಿಗೆ ನಾವು ಶಿಫಾರಸು ಪತ್ರ ನೀಡಿದ್ದರೂ, ಅಂತಹ ಪತ್ರಕ್ಕೆ
ಅಧಿಕಾರಿಗಳು ಮನ್ನಣೆ ನೀಡಬಾರದು. ತಂತ್ರಾಂಶದಲ್ಲಿ ಬ್ಲಾಕ್
ಆಗಿರುವ ಮನೆಗಳನ್ನು ರದ್ದುಪಡಿಸಿ, ಅದನ್ನು ಹೊಸದಾಗಿ ಪಡೆದು,
ಬೇರೆ ಅರ್ಹರಿಗೆ ಮನೆ ಮಂಜೂರಾತಿ ಮಾಡಬೇಕು. ಇದುವರೆಗೂ
ಮನೆಗಳನ್ನು ಪ್ರಾರಂಭಿಸದೇ ಇರುವವರಿಗೆ ಕೂಡಲೆ ಅಂತಿಮ
ನೋಟಿಸ್ ನೀಡಿ, ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ
ಪ್ರಾರಂಭಿಸದಿದ್ದರೆ, ಮಂಜೂರಾತಿ ರದ್ದುಪಡಿಸಿ, ಆಯಾ ಶಾಸಕರ
ಗಮನಕ್ಕೆ ತಂದು, ಬೇರೆ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ
ಮಾಡಲು ತಕ್ಷಣ ಕ್ರಮ ಜರುಗಿಸಬೇಕು. ಈ ಕುರಿತು ಅಧಿಕಾರಿಗಳು
ಒಂದು ವಾರದ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಸಂಸದರು
ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿ.ಪಂ. ಸಿಇಒ ಡಾ. ವಿಜಯ
ಮಹಾಂತೇಶ್ ಅವರು ಮಾತನಾಡಿ, 2018 ರ ಸಮೀಕ್ಷೆಯನ್ವಯ
ಈಗಾಗಲೆ ವಸತಿ ರಹಿತರ ಪಟ್ಟಿ ಇದ್ದು, ಮನೆ ಮಂಜೂರು ಮಾಡುವ
ಸಂದರ್ಭದಲ್ಲಿ ಈ ಪಟ್ಟಿಯಲ್ಲಿರುವವರನ್ನೇ ಆಯ್ಕೆ
ಮಾಡಬೇಕಾಗುತ್ತದೆ. ಪಟ್ಟಿಯಲ್ಲಿ ಇಲ್ಲದಿರುವವರ ಹೆಸರಿಗೆ ಮನೆ
ಮಂಜೂರು ಮಾಡಲು ತಂತ್ರಾಂಶದಲ್ಲಿ ಅವಕಾಶವಿಲ್ಲ ಎಂದರು.
ಹರಿಹರ ತಾಲ್ಲೂಕು ನಿಟ್ಟೂರು ಗ್ರಾಮದ ಕಾಲುವೆ ಪಕ್ಕದಲ್ಲಿ
ಗುಡಿಸಲು ನಿರ್ಮಿಸಿಕೊಂಡು ಸುಮಾರು 10 ಕುಟುಂಬಗಳು ಕಳೆದ 10
ವರ್ಷಗಳಿಂದ ವಾಸವಾಗಿದ್ದಾರೆ, ಅವರಿಗೆ ಮನೆಗಾಗಿ ಸರ್ಕಾರಿ ಜಮೀನನ್ನು
ಇದುವರೆಗೂ ಗುರುತಿಸದೇ ಇರುವ ಹರಿಹರ ತಾ.ಪಂ. ಕಾರ್ಯ
ನಿರ್ವಾಹಕರ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ
ಸಂಸದರು. ಬಡವರಿಗೆ ಮನೆ ಕೊಡಲು ಸಾಧ್ಯವಿಲ್ಲದಿದ್ದರೆ, ನಾವೇಕೆ
ಇರಬೇಕು?, ಇಷ್ಟು ದಿನಗಳಾದರೂ, ಭೂಮಿ ಗುರುತಿಸಲು ನೀವು
ಪ್ರಾಮಾಣಿಕ ಯತ್ನ ಮಾಡಿಲ್ಲ, ಒಂದು ವಾರದೊಳಗೆ ಇದಕ್ಕೆ ಪರಿಹಾರ
ಕಂಡುಕೊಳ್ಳಬೇಕು ಎಂದು ತಾಕೀತು ಮಾಡಿದರು. ಇದಕ್ಕೆ
ಪ್ರತಿಕ್ರಿಯಿಸಿದ ತಾ.ಪಂ. ಇಒ ಅವರು, ಈಗಾಗಲೆ 10 ಕುಟುಂಬಗಳನ್ನು
ವಸತಿ ರಹಿತರ ಪಟ್ಟಿಗೆ ಸೇರ್ಪಡೆ ಮಾಡಿಕೊಂಡಿದ್ದು, ಭೂಮಿ
ಗುರುತಿಸಿದ ಬಳಿಕ ಮನೆ ನಿರ್ಮಾಣಕ್ಕೆ ಕ್ರಮ
ಕೈಗೊಳ್ಳಲಾಗುವುದು ಎಂದರು.
ಶಾಲೆಗಳಿಗೆ ಕೊಠಡಿಗೆ ಪ್ರಸ್ತಾವನೆ : ಕೊರೊನಾ ಕಾರಣದಿಂದಾಗಿ ಈ
ವರ್ಷ ಜಿಲ್ಲೆಯಲ್ಲಿ ಒಟ್ಟು 7500 ಹೆಚ್ಚುವರಿ ವಿದ್ಯಾರ್ಥಿಗಳು ಸರ್ಕಾರಿ
ಶಾಲೆಗಳಿಗೆ ದಾಖಲಾಗಿದ್ದಾರೆ. 49 ಶಾಲೆಗಳು ಶತಮಾನ
ಪೂರೈಸಿದ್ದು, ಇವುಗಳ ಮೂಲಭೂತ ಸೌಲಭ್ಯಕ್ಕೆ ಅನುದಾನ
ಬಿಡುಗಡೆ ಕೋರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಜಿಲ್ಲೆಯಲ್ಲಿ ಒಟ್ಟು
1399 ಹೆಚ್ಚುವರಿ ಶಾಲಾ ಕೊಠಡಿಗಳ ಬೇಡಿಕೆಗೆ ಈಗಾಗಲೆ ಕ್ರಿಯಾ
ಯೋಜನೆ ತಯಾರಿಸಿ, ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದು, ರಾಜ್ಯದಿಂದ 109 ಹಾಗೂ
ಕೆಎಸ್‍ಡಿಎಲ್ ನಿಂದ 17 ಶಾಲಾ ಕೊಠಡಿಗಳಿಗೆ ಮಂಜೂರಾತಿ ದೊರೆತು,
ಕಾಮಗಾರಿ ನಡೆದಿದೆ. ಹೆಚ್ಚಿನ ಮಳೆಯಿಂದಾಗಿ ಜಿಲ್ಲೆಯ ಒಟ್ಟು 366 ಶಾಲಾ
ಕೊಠಡಿಗಳಿಗೆ ತೀವ್ರ ಹಾನಿಯಾಗಿದ್ದು, ತುರ್ತಾಗಿ ದುರಸ್ತಿ
ಆಗಬೇಕಿದೆ, ಆದರೆ ಪಿಆರ್‍ಇಡಿ ಇಲಾಖೆಯಿಂದ ಕೇವಲ 64 ಕೊಠಡಿಗಳಿಗೆ
ಮಾತ್ರ ಕ್ರಿಯಾಯೋಜನೆ ಮಾಡಿಕೊಟ್ಟಿದ್ದಾರೆ ಎಂದು ಡಿಡಿಪಿಐ
ಪರಮೇಶ್ವರಪ್ಪ ಹೇಳಿದರು. ಸಂಸದ ಜಿ.ಎಂ. ಸಿದ್ದೇಶ್ವರ್ ಅವರು
ಪ್ರತಿಕ್ರಿಯಿಸಿ, ಎಲ್ಲ 366 ಶಾಲೆ ಕೊಠಡಿಗಳಿಗೆ ಆರ್‍ಡಿಪಿಆರ್ ಅವರು ಕೂಡಲೆ
ಕ್ರಿಯಾಯೋಜನೆ ತಯಾರಿಸಿ ಸಲ್ಲಿಸಬೇಕು. ಅನುದಾನ ಬಿಡುಗಡೆಗೆ
ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 193 ಶಾಲೆಗಳಿಗೆ
ಕಾಂಪೌಂಡ್ ನಿರ್ಮಿಸಲು ಕ್ರಿಯಾಯೋಜನೆಗೆ ಈಗಾಗಲೆ ಅನುಮೋದನೆ
ನೀಡಿದ್ದು, ಕೂಡಲೆ ನರೇಗಾ ಯೋಜನೆಯಲ್ಲಿ ಕಾಂಪೌಂಡ್
ಪೂರ್ಣಗೊಳಿಸಬೇಕು. ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಶಾಲೆಗಳು
ಕಾಂಪೌಂಡ್ ಹಾಗೂ ಶೌಚಾಲಯ ರಹಿತ ಇರಬಾರದು ಎಂದರು. ಜಿ.ಪಂ.
ಉಪಕಾರ್ಯದರ್ಶಿ ಆನಂದ್ ಪ್ರತಿಕ್ರಿಯಿಸಿ, ನರೇಗಾ ಯೋಜನೆಯಡಿ
ಕೂಲಿ ಹಾಗೂ ಮಟರೀಯಲ್ ನಲ್ಲಿ 60 : 40 ಅನುಪಾತ
ಕಾಯ್ದುಕೊಂಡಲ್ಲಿ ಮಾತ್ರ ಸರ್ಕಾರ ಅನುದಾನ ಬಿಡುಗಡೆ
ಮಾಡುತ್ತದೆ. ಹೀಗಾಗಿ ಈ ಅನುಪಾತ ಕಾಯ್ದುಕೊಂಡು, ಆದಷ್ಟು
ಶೀಘ್ರ ಶಾಲೆ ಕಾಂಪೌಂಡ್ ಹಾಗೂ ಶೌಚಾಲಯ ಕಾಮಗಾರಿಗಳನ್ನು
ಕೈಗೊಂಡು, ಮಾರ್ಚ್ ವೇಳೆಗೆ ಪೂರ್ಣಗೊಳಿಸುತ್ತೇವೆ ಎಂದರು.
ಹೆಚ್ಚು ಗರ್ಭಪಾತ ಗಂಭೀರ ವಿಷಯ : ದಿಶಾ ಸಮಿತಿ ಸದಸ್ಯ ಜೆ.ಪಿ.
ಮುಪ್ಪಣ್ಣ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 23685
ಗರ್ಭಿಣಿಯರ ನೊಂದಣಿಯಾಗಿದ್ದು, ಈ ಪೈಕಿ 2600 ಗರ್ಭಪಾತ
ಸಂಭವಿಸಿದ್ದು, ಹೆಣ್ಣು ಮಕ್ಕಳ ಲಿಂಗಾನುಪಾತ ವಿಷಯಕ್ಕೆ
ಸಂಬಂಧಿಸಿದಂತೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹೆಚ್ಚು
ಗರ್ಭಪಾತ ನಡೆಯುತ್ತಿರುವ ಆಸ್ಪತ್ರೆ, ನರ್ಸಿಂಗ್
ಹೋಂಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು
ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಹೆಚ್‍ಒ ಡಾ. ನಾಗರಾಜ್, ಪಿಸಿ &ಚಿmಠಿ;
ಪಿಎನ್‍ಡಿಟಿ ಕಾಯ್ದೆಯನ್ವಯ ಪ್ರಸವಪೂರ್ವ ಲಿಂಗಪತ್ತೆ ಕಾನೂನು
ಬಾಹಿರವಾಗಿದ್ದು, ಇತ್ತೀಚೆಗೆ ಜರುಗಿದ ಸಮಿತಿ ಸಭೆಯಲ್ಲಿಯೂ ಈ
ಕುರಿತು ಚರ್ಚಿಸಲಾಗಿದೆ ಎಂದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಅವರು ಮಾತನಾಡಿ, ಅತಿ ಹೆಚ್ಚು ಗರ್ಭಪಾತ ಪ್ರಕರಣ ದಾಖಲಾಗಿರುವ
ಆಸ್ಪತ್ರೆಗಳ ವಿವರ ನೀಡಿದಲ್ಲಿ, ಅಂತಹ ಆಸ್ಪತ್ರೆ, ನರ್ಸಿಂಗ್
ಹೋಂಗಳಿಗೆ ನಾವು ಹಾಗೂ ಜಿ.ಪಂ. ಸಿಇಒ ಅವರು ಖುದ್ದಾಗಿ ಆಕಸ್ಮಿಕ
ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇವೆ ಎಂದರು. ಸಂಸದರು ಕೂಡ
ಇದಕ್ಕೆ ದನಿಗೂಡಿಸಿ, ಹೆಚ್ಚಿನ ಗರ್ಭಪಾತ ಪ್ರಕರಣವನ್ನು
ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳು ಸೂಕ್ತ ರೀತಿಯಲ್ಲಿ
ಪರಿಶೀಲಿಸಬೇಕು. ಒಂದು ವೇಳೆ ಯಾವುದೇ ಆಸ್ಪತ್ರೆಯಲ್ಲಿ
ಅಕ್ರಮ ಕಂಡುಬಂದಲ್ಲಿ, ಅಂತಹವರ ಮೇಲೆ ಕಾನೂನು ರೀತ್ಯಾ
ಕ್ರಮ ಜರುಗಿಸಬೇಕು ಎಂದರು.
ಜಲಜೀವನ್ 62 ಕಾಮಗಾರಿ ಪೂರ್ಣ : ಜಲಜೀವನ್ ಮಿಷನ್ ಯೋಜನೆಯಡಿ
ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ಕುಡಿಯುವ ನೀರಿನ
ಕಾಮಗಾರಿ ಪೂರೈಸಲು ಒಟ್ಟು 353 ಕಾಮಗಾರಿಗಳಿಗೆ ಕಾರ್ಯಾದೇಶ
ನೀಡಲಾಗಿದ್ದು, ಈಗಾಗಲೆ 62 ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ
ಕೆಲವು ಗ್ರಾಮಗಳಲ್ಲಿ ಜಲಜೀವನ್ ಮೀಷನ್ ಯೋಜನೆಯಡಿ ಕಾಮಗಾರಿ
ಕೈಗೊಳ್ಳಲು ಹಾಗೂ ಮೀಟರ್ ಅಳವಡಿಕೆಗೆ ಗ್ರಾಮಸ್ಥರ
ವಿರೋಧವಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು
ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ಹೇಳಿದರು.
ದಿಶಾ ಸಮಿತಿಯ ಸದಸ್ಯ ಅಣ್ಣಪ್ಪ ಅವರು ಮಾತನಾಡಿ, ಯೋಜನೆಯಡಿ
ಪೈಪ್‍ಲೈನ್ ಹಾಕಲು ಉತ್ತಮವಾಗಿರುವ ಕಾಂಕ್ರಿಟ್ ರಸ್ತೆಗಳಿಗೆ ಗುಂಡಿ
ತೋಡಿ, ಕಾಮಗಾರಿ ಬಳಿಕ, ಅದನ್ನು ಪುನಃ ಕಾಂಕ್ರಿಟ್‍ನಿಂದಲೇ
ದುರಸ್ತಿಗೊಳಿಸದೆ, ಮಣ್ಣು ಹಾಕಿ ಮುಚ್ಚುತ್ತಿದ್ದಾರೆ, ಇದಕ್ಕೂ
ಕೂಡ ಸಾರ್ವಜನಿಕರು ಆಕ್ಷೇಪಿಸುತ್ತಿದ್ದಾರೆ ಎಂದರು. ಸಂಸದರು
ಪ್ರತಿಕ್ರಿಯಿಸಿ, ಯೋಜನೆಗಾಗಿ ರಸ್ತೆ ಅಗೆದು, ಕಾಮಗಾರಿ ಕೈಗೊಂಡ
ಬಳಿಕ, ರಸ್ತೆಯನ್ನು ಮೊದಲು ಇದ್ದ ಸ್ಥಿತಿಯಂತೆ ನಿರ್ಮಿಸಿವುದು
ಆಯಾ ಗುತ್ತಿಗೆದಾರರ ಕರ್ತವ್ಯ, ಒಂದು ವೇಳೆ ಈ ರೀತಿ ನಿರ್ಲಕ್ಷ್ಯ
ಮಾಡಿದಲ್ಲಿ, ಅಧಿಕಾರಿಗಳು ಗಮನಿಸಿ, ಅದನ್ನು ಸರಿಪಡಿಸುವ ಕಾರ್ಯ
ಮಾಡಬೇಕು, ತಪ್ಪಿದಲ್ಲಿ, ಅಂತಹ ಗುತ್ತಿಗೆದಾರರ ಮೇಲೆ ಕ್ರಮ
ಜರುಗಿಸಬೇಕು ಎಂದರು.
ಗ್ಯಾಸ್ ಏಜೆನ್ಸಿ ಲೈಸೆನ್ಸ್ ರದ್ದತಿಗೆ ಶಿಫಾರಸು : ಉಜ್ವಲ ಯೋಜನೆಯಡಿ
ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಹರಿಹರದ ಲಕ್ಷ್ಮೀ ಗ್ಯಾಸ್
ಏಜೆನ್ಸಿ ಅವರು ಫಲಾನುಭವಿಗಳಿಂದ ಹಣ ಕೇಳುತ್ತಿರುವ ಬಗ್ಗೆ
ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ, ಈ ಏಜೆನ್ಸಿಯ
ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಲೈಸೆನ್ಸ್
ರದ್ದುಪಡಿಸುವಂತೆ ಈಗಾಗಲೆ ಸಂಬಂಧಪಟ್ಟ ಅಧಿಕಾರಿಗಳಿಗೆ
ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಅವರು ಸಭೆಗೆ ಮಾಹಿತಿ ನೀಡಿದರು. ಜಗಳೂರು ಶಾಸಕ
ರಾಮಚಂದ್ರ ಅವರು ಮಾತನಾಡಿ, ಎಲ್ಲ ತಾಂಡಾ, ಹಾಡಿಗಳಿಗೆ ನ್ಯಾಯಬೆಲೆ
ಅಂಗಡಿ ಮಂಜೂರು ಮಾಡುವಂತ ಈಗಾಗಲೆ ಸರ್ಕಾರ ಸೂಚನೆ ನೀಡಿದೆ,
ಆದರೆ ಜಿಲ್ಲೆಯಲ್ಲಿ ಈ ಕಾರ್ಯ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ
ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೆಸ್ವಾಮಿ, ಕನಿಷ್ಟ 100 ಕಾರ್ಡ್
ಇದ್ದರೂ, ನ್ಯಾಯಬೆಲೆ ಅಂಗಡಿ ನೀಡುವಂತೆ ಇಲಾಖೆ ಸೂಚನೆ
ನೀಡಿದ್ದು, ಈಗಾಗಲೆ ಜಿಲ್ಲೆಯಲ್ಲಿ ಸರ್ವೆ ಮಾಡಿಸಲಾಗುತ್ತಿದ್ದು, ಶೀಘ್ರ
ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು. ಸಂಸದರು
ಮಾತನಾಡಿ ರಾಜ್ಯದಲ್ಲಿ ಬರುವ ಜ. 26 ರಿಂದ ಮನೆ ಮನೆಗೆ ಪಡಿತರ
ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು,
ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮಾಯಕೊಂಡ ಕ್ಷೇತ್ರ ಶಾಸಕ ಪ್ರೊ. ಲಿಂಗಣ್ಣ,
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ, ಜಿಲ್ಲಾಧಿಕಾರಿ ಮಹಾಂತೇಶ್
ಬೀಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ
ಮಹಾಂತೇಶ್ ದಾನಮ್ಮನವರ್, ದಿಶಾ ಸಮಿತಿಯ ಸದಸ್ಯರುಗಳಾದ
ಜೆ.ಪಿ. ಮುಪ್ಪಣ್ಣ, ಅಣ್ಣಪ್ಪ, ವೆಂಕಟಗಿರಿನಾಯ್ಕ, ಬಸವರಾಜ್, ಹೆಚ್.ಎಂ. ಆಶಾ,
ಚೇತನ ಸೇರಿದಂತೆ ಸಮಿತಿಯ ಸದಸ್ಯರು, ವಿವಿಧ ಇಲಾಖೆಗಳ
ಅಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ : ಸರ್ಕಾರದ ಯಾವುದೇ ವಸತಿ ಯೋಜನೆಗಳಡಿ ಮನೆ
ಮಂಜೂರು ಮಾಡಲು ಯಾರೂ ಕೂಡ ಹಣ ನೀಡಬಾರದು. ಒಂದು
ವೇಳೆ ಮನೆ ಮಂಜೂರಾತಿಗೆ ಹಣ ನೀಡುವಂತೆ ಯಾವುದೇ ಅಧಿಕಾರಿ,
ಅಥವಾ ಯಾವುದೇ ವ್ಯಕ್ತಿಗಳು ಹಣ ನೀಡುವಂತೆ ಬೇಡಿಕೆ ಇಟ್ಟರೆ,
ಕೂಡಲೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅಥವಾ ಜಿ.ಪಂ. ಮುಖ್ಯ
ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಅಥವಾ ಸಂಸದರು,
ಶಾಸಕರುಗಳಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ
ಸೂಕ್ತ ಕ್ರಮ ಜರುಗಿಸಲಾಗುವುದು.
- ಸಂಸದ ಡಾ. ಜಿ.ಎಂ. ಸಿದ್ದೇಶ್ವರ