ಭಾರತದ ಸಂವಿಧಾನ ಅತ್ಯಂತ ಶ್ರೇಷ್ಟವಾದ
ಸಂವಿಧಾನವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯ,
ಸಾಮಾಜಿಕ, ಆರ್ಥಿಕ, ಸಮಾನತೆ, ಭ್ರಾತೃತ್ವ, ಪರಸ್ಪರ ವಿಶ್ವಾಸ
ಹಾಗೂ ಎಲ್ಲಾ ಧರ್ಮೀಯರಿಗೆ ಗೌರವ ಹೀಗೆ ಎಲ್ಲಾ ವಿಚಾರಗಳು
ಸಂವಿಧಾನದ ಪ್ರಸ್ತಾವನೆಯಲ್ಲಿ ಒಳಗೊಂಡಿದ್ದು ಸಂವಿಧಾನ
ನಮಗೆ ದಾರಿದೀಪವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿ ಹೇಳಿದರು.
ಸಂವಿಧಾನ ದಿನದ ಅಂಗವಾಗಿ ಶುಕ್ರವಾರ ನಗರದ
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಆಯೋಜಿಸಿದ್ದ
‘ಸಂವಿಧಾನ ದಿನ’ ಸಂಸದೀಯ ಭವನದ ಸೆಂಟ್ರಲ್ ಹಾಲ್‍ನಿಂದ
ರಾಷ್ಟ್ರಪತಿಗಳೊಂದಿಗೆ ಸಂವಿಧಾನದ ಪ್ರಸ್ತಾವನೆಯನ್ನು
ಓದೋಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಸ್ವಾತಂತ್ರ್ಯ ಬಂದ ನಂತರ ಯಾವ ರೀತಿ ದೇಶ
ನಡೆಸಬೇಕು, ಯಾವ ರೀತಿಯ ಹಕ್ಕುಗಳು, ಕರ್ತವ್ಯಗಳು,
ಕಾನೂನುಗಳು ದೇಶದಲ್ಲಿ ಇರಬೇಕು ಎಂಬ ತೀರ್ಮಾನ ಮಾಡಲು
ಸಂವಿಧಾನ ಸಮಿತಿ ರಚನೆಯಾಯ್ತು. ಭಾರತದಲ್ಲಿ ಸಂವಿಧಾನ
ಅಂಗೀಕರಾವಾಗಿದ್ದು 1949 ರ ನವೆಂಬರ್ 26 ರಂದೇ ಆದರೂ
ಅನುಷ್ಠಾನಕ್ಕೆ ತಂದಿದ್ದು 1950 ರ ಜನವರಿ 26 ರಂದು. ಈ ದಿನವನ್ನು
ಗಣರಾಜ್ಯೋತ್ಸವ ದಿನವಾಗಿ ಆಚರಣೆ ಮಾಡಲಾಗುತ್ತದೆ ಎಂದರು.
ಭಾರತೀಯರನ್ನು ಒಗ್ಗೂಡಿಸುವ ಜತೆಗೆ ಭಾರತೀಯರಲ್ಲಿ
ಮಾನವೀಯ ಗುಣಗಳನ್ನು ಮೂಡಿಸುವ ಹೊಣೆಗಾರಿಕೆಯನ್ನು
ಸಂವಿಧಾನ ಯಶಸ್ವಿಯಾಗಿ ನಿಭಾಯಿಸಿದೆ. ಪ್ರಸ್ತುತ
ದಿನಮಾನಗಳಲ್ಲಿ ಮಾನವೀಯ ಗುಣಗಳು ಅತ್ಯವಶ್ಯಕ.
ಅವುಗಳು ಇಲ್ಲದಿದ್ದರೆ ಯಾವ ಗುಣಗಳು ಇದ್ದರೆಷ್ಟು?
ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ ಎಂದರೆ ಅದು
ತ್ಯಾಗ ಮತ್ತು ಅಂತಃಕರಣದಿಂದ ಮಾತ್ರ. ಇವೆರಡರಿಂದ ವಿವಿಧ
ಸಂಸ್ಕೃತಿ, ಭಾಷೆಗಳನ್ನು ನಮ್ಮ ದೇಶ ಒಳಗೊಂಡಿದೆ ಎಂದು
ತಿಳಿಸಿದರು.
ಸಂವಿಧಾನ ಇಲ್ಲದಿದ್ದರೆ ದೇಶದ ಐಕ್ಯತೆ, ಅಖಂಡತೆ,
ಹಕ್ಕುಗಳನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ದೇಶ
ಒಗ್ಗೂಡಿಸುವಲ್ಲಿ ಸಂವಿಧಾನ ಮಹತ್ವದ ಪಾತ್ರ ವಹಿಸಿದೆ. ಇಂಗ್ಲೆಂಡ್
ದೇಶದಲ್ಲಿರುವ ಕಾನೂನುಗಳಿಗಿಂತ ಭಾರತದ
ಸಂವಿಧಾನದಲ್ಲಿರುವ ಕಾನೂನುಗಳು ಅತ್ಯಂತ ಶ್ರೇಷ್ಠವಾಗಿವೆ.
ಡಾ.ಬಿ.ಆರ್.ಅಂಬೇಡ್ಕರ್ ಅವರು ದೊಡ್ಡ ತತ್ವಜ್ಞಾನಿಯಾಗಿದ್ದರು.
ಅವರಿಗೆ ಬಸವ, ಬುದ್ಧ ಸೇರಿದಂತೆ ದೊಡ್ಡ ತತ್ವಜ್ಞಾನಿಗಳ ಪ್ರಭಾವ
ದೊಡ್ಡ ಪ್ರಮಾಣದಲ್ಲಿತ್ತು. ಹೀಗಾಗಿ ಬುದ್ಧ, ಬಸವ ತತ್ವಗಳನ್ನು
ಸಂಪೂರ್ಣವಾಗಿ ಸಂವಿಧಾನದಲ್ಲಿ ಕಾಣುತ್ತಿದ್ದೇವೆ ಎಂದು ತಿಳಿಸಿದರು.
ಮಾನವೀಯ ಗುಣಗಳ್ಳುಳ್ಳ ಏಕೈಕ ಸಂವಿಧಾನ: ಪ್ರಪಂಚದ
ಯಾವುದೇ ಸಂವಿಧಾನಗಳಲ್ಲಿ ಮಾನವೀಯ ಗುಣಗಳು
ಇರುವಂತಹ ಸಂವಿಧಾನ ಎಂದರೆ ಅದು ಭಾರತೀಯ ಸಂವಿಧಾನ.
ಉಳಿದ ಸಂವಿಧಾನಗಳು ಕೇವಲ ಕಾನೂನು ಮತ್ತು
ಕರ್ತವ್ಯಗಳನ್ನು ಮಾತ್ರ ಮಾತಾಡುತ್ತವೆ. ಆದರೆ ಸಂಪೂರ್ಣ
ಮಾನವೀಯ ಗುಣಗಳನ್ನು ಒಳಗೊಂಡಿರುವಂತಹÀ
ಸಂವಿಧಾನವನ್ನು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿ
ಸಂವಿಧಾನ ಸಮಿತಿಗೆ ಕೊಟ್ಟಿರುವಂತಹದು ಮಹತ್ತರವಾದದ್ದು.
ಭಾರತೀಯ ಸಂವಿಧಾನ ಜೀವಂತಿಕೆಯುಳ್ಳದು: ಭಾರತೀಯ
ಸಂವಿಧಾನ ಸದಾ ಜೀವಂತಿಕೆ ಇರುವಂತಹ ಸಂವಿಧಾನ. ಕೆಲವು
ಸಂವಿಧಾನಗಳು ಮಾಡಿ ಬರೆದಿಟ್ಟು ತೆಗೆದಿಡಲ್ಪಟ್ಟಿದೆ. ಸ್ವಾತಂತ್ರ್ಯ
ಬಂದ ನಂತರ ಅನೇಕ ಬದಲಾವಣೆಗಳಾಗಿದ್ದು, ಹಲವಾರು
ವ್ಯತ್ಯಾಸಗಳು ಕಂಡುಬಂದಿದೆ. ಹೊಸಹೊಸ ತತ್ವಜ್ಞಾನಗಳಿಂದ
ಶೈಕ್ಷಣಿಕ, ಆಡಳಿತ ಕ್ಷೇತ್ರ ಸೇರಿದಂತೆ ನಮ್ಮ ಬದುಕಿನ ಎಲ್ಲಾ
ಆಯಾಮಗಳಲ್ಲೂ ಬದಲಾವಣೆ ತಂದಿದೆ. ಈ ಬದಲಾವಣೆಗಳು
ಮಾನವೀಯ ಹಕ್ಕುಗಳು ಮತ್ತು ಕರ್ತವ್ಯಗಳ ಮೇಲೂ
ಪ್ರಭಾವ ಬೀರಿದೆ. ಇಂತಹ ಬದಲಾವಣೆಗಳಿಗೆ ಅನುಗುಣವಾಗಿ ತಿದ್ದುಪಡಿ
ಮಾಡುವ ಮೂಲಕ ಸಂವಿಧಾನವನ್ನು ಜೀವಂತವಾಗಿ ಇರಿಸಲಾಗಿದೆ.
ಆಧುನಿಕ ಭಾರತದ ಪಿತಾಮಹ ಡಾ.ಅಂಬೇಡ್ಕರ್: ಆಧುನೀಕರಣ,
ಜಾಗತೀಕರಣ, ಖಾಸಗೀಕರಣ ಉದಾರೀಕರಣ ಬಂದರೂ ನಮ್ಮ
ದೇಶದಲ್ಲಿ ಇನ್ನೂ ಅಂತಃಕರಣ ಉಳಿದಿದೆ ಎಂದರೆ ಅದು ಸಂವಿಧಾನದ
ಬಲದಿಂದ. ಅತ್ಯಂತ ಕಟ್ಟಕಡೆಯ ಮನುಷ್ಯರ ಪೈಕಿ ಯಾರಲ್ಲಿ
ಬೆಲೆಯಿಲ್ಲ, ಯಾರಿಗೆ ಅವಕಾಶ ಸಿಗುತ್ತಿಲ್ಲ, ಯಾರು ತುಳಿತಕ್ಕೆ
ಒಳಗಾಗಿದ್ದಾರೆ ಅಂತಹ ಶೋಷಿತ ವರ್ಗದವರು ಇಂದು ತಲೆ ಎತ್ತಿ
ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವಂತಹ ಅವಕಾಶ
ಮಾಡಿಕೊಟ್ಟವರು ಡಾ.ಬಿ.ಆರ್.ಅಂಬೇಡ್ಕರ್. ಅಲ್ಲದೇ ಎಂತಹ
ಪರಿಸ್ಥಿತಿಯಲ್ಲೂ ಆಧುನಿಕ ಭಾರತದಲ್ಲಿ ಮಾನವೀಯ ಗುಣಗಳು
ಕಡಿಮೆಯಾಗಬಾರದೆಂಬ ದೂರದೃಷ್ಟಿಯಿಂದ ಮಾನವೀಯ
ಗುಣಗಳನ್ನು ಸಂವಿಧಾನದಲ್ಲಿ ಅಳವಡಿಸಿರುವುದು ಐತಿಹಾಸಿಕವಾಗಿದೆ.
ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ನೆನಪು
ಮಾಡಿಕೊಳ್ಳಬೇಕು: ಯಾವ ದೇಶದಲ್ಲಿ ನಾಗರೀಕರು
ಕರ್ತವ್ಯಗಳನ್ನು ಎತ್ತಿ ಹಿಡಿಯುತ್ತಾರೋ ಆ ದೇಶ
ಬಲಿಷ್ಠವಾಗಿರುತ್ತದೆ. ನಾಗರೀಕರು ಕರ್ತವ್ಯ ಮರೆತಾಗ
ಅರಾಜಕತೆ ಬರುತ್ತದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ
ಉಳಿಯಬೇಕಾದರೆ ಪ್ರಜೆಗಳು ಜಾಗರೂಕರಾಗಿ,
ಕರ್ತವ್ಯಬದ್ಧರಾಗಿ ಕಾರ್ಯ ನಿರ್ವಹಿಸಬೇಕು.
ನರೇಂದ್ರ ಮೋದಿ ಅವರು ಪ್ರಥಮ ಬಾರಿಗೆ
ಪ್ರಧಾನಮಂತ್ರಿ ಹುದ್ದೆ ಸ್ವೀಕರಿಸಿ ಪಾರ್ಲಿಮೆಂಟ್‍ಗೆ ತೆರಳಿದಾಗ
ಮೊದಲು ಸಂವಿಧಾನಕ್ಕೆ ಕೈಮುಗಿದು, ತಮ್ಮ ಜೀವನದಲ್ಲಿ
ಧರ್ಮಗ್ರಂಥವೆಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ
ಭಾರತೀಯ ಸಂವಿಧಾನ ಎಂದು ತಿಳಿಸಿದ್ದರು. ಈ ನಿಟ್ಟಿನಲ್ಲಿ ಸಂವಿಧಾನ
ದಿನ ಆಚರಣೆ ಮಾಡಬೇಕು ಎಂದು ಆದೇಶ ಹೊರಡಿಸಿದರು.
ಸಂವಿಧಾನದಿಂದ ಮಾತ್ರವೇ ದೇಶದ ಅಭಿವೃದ್ಧಿಯೊಂದಿಗೆ, ನಮ್ಮ
ಬದುಕಿನ ಅಭಿವೃದ್ಧಿಯೂ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ
ನಾಗರೀಕರು ಸಂವಿಧಾನದ ಆಶಯಗಳನ್ನು ತಮ್ಮ ಜೀವನದಲ್ಲಿ
ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ತಮ್ಮ ಭಾಷಣಕ್ಕೂ ಮುನ್ನ
ಸಂವಿಧಾನದ ಪ್ರಸ್ತಾವನೆಯನ್ನು ಕಾರ್ಯಕ್ರಮದಲ್ಲಿ
ಉಪಸ್ಥಿತರಿದ್ದವರಿಗೆ ಬೋಧಿಸಿದರು.
ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ಸಂಸದ
ಜಿ.ಎಂ.ಸಿದ್ದೇಶ್ವರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
ಎಂ.ಪಿ.ರೇಣುಕಾಚಾರ್ಯ, ದಾವಣಗೆರೆ ಉತ್ತರ ಕ್ಷೇತ್ರ ಶಾಸಕ
ಎಸ್.ಎ.ರವೀಂದ್ರನಾಥ್, ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ,
ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ಮಹಾನಗರ ಪಾಲಿಕೆ
ಮಹಾಪೌರರಾದ ಎಸ್.ಟಿ.ವೀರೇಶ್, ಧೂಡಾ ಅಧ್ಯಕ್ಷ ದೇವಮನಿ
ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿ.ಪಂ ಸಿಇಓ ವಿಜಯ
ಮಹಾಂತೇಶ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಪೊಲೀಸ್
ಇಲಾಖೆಯ ಐಜಿಪಿ ರವಿ, ಎಸ್.ಪಿ ಸಿ.ಬಿ.ರಿಷ್ಯಂತ್, ಎಎಸ್‍ಪಿ ರಾಜೀವ್, ಮಹಾನಗರ ಪಾಲಿಕೆ
ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಜಿಲ್ಲೆ ಮತ್ತು
ತಾಲ್ಲೂಕು ಅಧಿಕಾರಿಗಳು, ಸಿಬ್ಬಂದಿಗಳು, ಎನ್.ಎಸ್.ಎಸ್, ಸ್ಕೌಟ್ ಅಂಡ್ ಗೈಡ್ಸ್
ವಿದ್ಯಾರ್ಥಿಗಳು ಉಪಸ್ಥಿತರಿದ್ದರು.