ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ
ಯುದ್ಧದಿಂದಾಗಿ ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು
ತೆರಳಿದ್ದ ಜಿಲ್ಲೆಯ ಕೆಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ
ಬಂದಿದ್ದು, ಇನ್ನುಳಿದ ವಿದ್ಯಾರ್ಥಿಗಳನ್ನು ಕೂಡ ಕರೆತರಲು
ವಿದೇಶಾಂಗ ಸಚಿವರ ಜೊತೆಗೆ ನಿರಂತರವಾಗಿ ಮಾತುಕತೆ
ನಡೆಸುತ್ತಿದ್ದೇವೆ ಎಂದು ಸಂಸದ ಡಾ ಜಿ.ಎಂ ಸಿದ್ದೇಶ್ವರ್ ಹೇಳಿದರು.
ಶನಿವಾರ ನಗರದಲ್ಲಿ ಉಕ್ರೇನ್‍ನಿಂದ ವಾಪಾಸ್ಸಾದ ವಿದ್ಯಾರ್ಥಿಗಳ
ಮನೆಗೆ ಭೇಟಿ ನೀಡಿ, ನಂತರ ಪೋಷಕರು ಮತ್ತು
ವಿದ್ಯಾರ್ಥಿಗಳೊಂದಿಗೆ ಯೋಗಕ್ಷೇಮ ವಿಚಾರಿಸಿ ಬಳಿಕ
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯುದ್ಧಪೀಡಿತ ಉಕ್ರೇನ್ ದೇಶದ ವಿವಿಧ ನಗರಗಳಲ್ಲಿರುವ
ಭಾರತೀಯರನ್ನು ತೆರವುಗೊಳಿಸುವ ಬಗ್ಗೆ ಭಾರತದ
ವಿದೇಶಾಂಗ ಸಚಿವಾಲಯ ಅಧಿಕಾರಿಗಳು ಉಕ್ರೇನ್ ಹಾಗೂ ರಷ್ಯಾ
ಎರಡೂ ದೇಶಗಳ ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ,
ಉಕ್ರೇನ್‍ನಿಂದ ವಾಪಾಸ್ಸಾದ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸದ ಬಗ್ಗೆ
ನಮ್ಮ ಸರ್ಕಾರ ಚಿಂತನೆ ನಡೆಸುತ್ತಿದೆ, ಹೀಗಾಗಿ ವಿದ್ಯಾರ್ಥಿಗಳು
ಆತಂಕ ಪಡದೇ ಧೈರ್ಯವಾಗಿರಿ ಎಂದು ಸಂಸದ ಜಿ.ಎಂ. ಸಿದ್ದೇಶ್ವರ
ಅವರು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಭಾರತ ಸರ್ಕಾರ
ತನ್ನ ಸ್ವಂತ ಖರ್ಚಿನಲ್ಲಿ ಬಸ್, ವಿಮಾನ, ರೈಲುಗಳ ಮೂಲಕ
ವಿದ್ಯಾರ್ಥಿಗಳನ್ನು ಮರಳಿ ಭಾರತಕ್ಕೆ ಕರೆತರುತ್ತಿದೆ, ಜಿಲ್ಲೆಯ
ಕೆಲವು ವಿದ್ಯಾರ್ಥಿಗಳು ಈಗಾಗಲೇ ಮರಳಿದ್ದು, ಇನ್ನುಳಿದ
ವಿದ್ಯಾರ್ಥಿಗಳನ್ನು ಕೂಡ ಸುರಕ್ಷಿತವಾಗಿ ಕರೆತರುವ ಪ್ರಯತ್ನ
ಮಾಡುತ್ತಿದ್ದೇವೆ. ಪೋಷಕರು ಭಯಪಡದೇ
ಧೈರ್ಯವಾಗಿರಬೇಕು ಎಂದರು.
ಉಕ್ರೇನ್‍ನಿಂದ ವಾಪಾಸ್ಸಾದ ವಿದ್ಯಾರ್ಥಿಗಳಾದ ಸಂಜಯ್‍ಕುಮಾರ್,
ಸಯ್ಯದ್ ಹಬೀಬಾ ಹಾಗೂ ವಿನಯ್ ಕಲ್ಲಿಹಾಳ್ ಮಾತನಾಡಿ, ಉಕ್ರೇನ್
ತೊರೆಯುವಂತೆ ವಿದ್ಯಾರ್ಥಿಗಳಿಗೆ ಭಾರತದ ರಾಯಭಾರಿ
ಕಚೇರಿಯೂ ಸೂಚಿಸಿತ್ತು. ಆದರೆ ನಾವು ಓದುತ್ತಿದ್ದ ಕಾಲೇಜಿನವರು
ವಾಪಸ್ ಹೋಗದಂತೆ ಹೇಳಿದ್ದರು, ಹಾಜರಾತಿಯೂ
ಕಡ್ಡಾಯವಾಗಿತ್ತು. ಆನ್‍ಲೈನ್ ತರಗತಿಯ ಅವಕಾಶವು ಕೂಡ
ಇರಲಿಲ್ಲ. ಹಾಗಾಗಿ ವಾಪಸ್ ಬರಲು ಪರಿಸ್ಥಿತಿ ಕಷ್ಟಕರವಾಗಿತ್ತು. ರಷ್ಯಾ ದಾಳಿ
ಆರಂಭಿಸಿದ ನಂತರ ವಿಮಾನ ಸಂಚಾರ ರದ್ದಾದವು, ಆಗ ನಾವು
ಬಂಕರ್‍ಗಳಲ್ಲಿ ಆಶ್ರಯ ಪಡೆದಿದ್ದೆವು ಎಂದು ತಿಳಿಸಿದರು.
ದೇಶಕ್ಕೆ ಸುರಕ್ಷಿತವಾಗಿ ಮರಳುವ ನಂಬಿಕೆ
ಕಳೆದುಕೊಂಡಿದ್ದೆವು, ಕಷ್ಟಪಟ್ಟು ಉಕ್ರೇನ್ ಗಡಿ ದಾಟಿ ಬಂದೆವು,
ಅಲ್ಲಿಂದ ಭಾರತ ಸರ್ಕಾರ ಮತ್ತು ಸೇನೆಯ ಅಧಿಕಾರಿಗಳು
ನಮ್ಮನ್ನು ಸುರಕ್ಷಿತವಾಗಿ ಜಿಲ್ಲೆಗೆ ಕರೆತಂದರು. ಹೀಗಾಗಿ
ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಇದೆ ವೇಳೆ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಜಿಲ್ಲೆಯ ವಿದ್ಯಾರ್ಥಿ
ಕುಶಾಲ್ ಶಂಕರಣ್ಣನವರ್ ಮನೆಗೆ ಸಂಸದರು ಹಾಗೂ
ಜಿಲ್ಲಾಧಿಕಾರಿಗಳು ಭೇಟಿ ನೀಡಿ ಆದಷ್ಟು ಬೇಗ ಅವರನ್ನು
ಉಕ್ರೇನ್‍ನಿಂದ ಕರೆ ತರುವ ಎಲ್ಲಾ ಪ್ರಯತ್ನ ಮಾಡಲಾಗುವುದು
ಎಂದು ಪೋಷಕರಿಗೆ ಭರವಸೆ ನೀಡಿ ಧೈರ್ಯ ತುಂಬಿದರು.
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಜಯಮ್ಮ
ಗೋಪಿನಾಯ್ಕ್ ಹಾಗೂ ಉಪ ಮೇಯರ್ ಗಾಯಿತ್ರಿಬಾಯಿ, ಧೂಡಾ ಮಾಜಿ
ಅಧ್ಯಕ್ಷ ಯಶವಂತ್‍ರಾವ್ ಜಾಧವ್, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ
ಹಾಗೂ ಇತರರು ಹಾಜರಿದ್ದರು.