ಹೊನ್ನಾಳಿ,ಮಾ6: ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ನಡೆದಿರುವ ಸರ್ಕಾರಿ ಕಾರ್ಯಕ್ರಮಗಳಿಗೆ ಮತ್ತು ಇತ್ತೀಚೆಗೆ ನಡೆದ ಪುನೀತ್ ರಾಜಕುಮಾರ್ ನುಡಿನಮನ ಕಾರ್ಯಕ್ರಮಗಳಿಗೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್ ನೇತೃತ್ವದ ತಂಡ ಸರ್ಕಾರಿ ಅಧಿಕಾರಿಗಳಿಂದ ಹಣ ಪಡೆದಿದ್ದಾರೆ ಎಂದು ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆಯ ಅಧ್ಯಕ್ಷ ಮಂಜುನಾಥ್ ಮತ್ತು ಕಾರ್ಯದರ್ಶಿ ಮನೋಜ್ ಕೋಟೆಮಲ್ಲೂರು ಗಂಭೀರ ಆರೋಪ ಮಾಡಿದ್ದಾರೆ.
ಅವರು ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸರ್ಕಾರಿ ಅಧಿಕಾರಿಗಳ ಮೇಲೆ ಒತ್ತಡ ತಂದು ಸರ್ಕಾರಿ ಕಾರ್ಯಕ್ರಮಗಳಿಗೆ ಹಣ ವಸೂಲಿ ಮಾಡಿದ್ದು ಹಣ ನೀಡಿದ ಅಧಿಕಾರಿಗಳ ಹೆಸರು ಹೇಳಿದರೆ ಅಂತಹ ಅಧಿಕಾರಿಗಳಿಗೆ ತೊಂದರೆ ಕೊಡಬಹುದು ಎಂದು ಹೆಸರುಗಳನ್ನು ಬಹಿರಂಗ ಪಡಿಸುವುದಿಲ್ಲ ಎಂದರು.
ಸುಂಕದಕಟ್ಟೆ ರಸ್ತೆಯಲ್ಲಿರುವ ಕೆಇಬಿ ಹಿಂಭಾಗದ ಖಾಸಗಿ ಲೇಔಟ್‍ನಲ್ಲಿ ಮನೆ ನಿರ್ಮಿಸಿಕೊಂಡಿರುವ ತಾಲ್ಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಅವರು ತಮ್ಮ ಮನೆ ಮುಂಭಾಗದ ರಸ್ತೆಗೆ ನರೇಗಾ ಯೋಜನೆಯಡಿ 25 ಲಕ್ಷ ಹಣ ಕಾನೂನು ಬಾಹಿರವಾಗಿ ಮಂಜೂರು ಮಾಡಿಸಿಕೊಂಡು ಅಕ್ರಮವೆಸಗಿದ್ದಾರೆ ಎಂದು ದೂರಿದರು.
ಈ ಕಾಮಗಾರಿ ಬಗ್ಗೆ ತಾವು ಜಿಲ್ಲಾ ಪಂಚಾಯ್ತಿಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೇಳಿದಾಗ ಜಿಪಂ ಎಇಇ ಅಜ್ಜಪ್ಪನವರು ಕಾಮಗಾರಿಗೆ ಕೆಇಬಿ ಹಿಂಭಾಗದಲ್ಲಿರುವ ಖಾಸಗಿ ಲೇಔಟ್‍ನಲ್ಲಿ ರಸ್ತೆ ನಿರ್ಮಿಸಲು ಯಾವುದೇ ಅನುಮೋದನೆ ನೀಡಿಲ್ಲವೆಂದು ಮಾಹಿತಿ ನೀಡಿದ್ದರು.
ಆದರೆ ಇದೇ ಲೇಔಟ್ ಎಚ್.ಕಡದಕಟ್ಟೆ ಗ್ರಾಮ ಪಂಚಾಯ್ತಿಯಲ್ಲಿ ಕ್ರಿಯಾ ಯೋಜನೆಯಡಿ ಅನುಮೋದನೆಯಾಗಿರುವ ಕಾಮಗಾರಿಗಳ ಪ್ರಕಾರ ಜಿಲ್ಲಾ ಪಂಚಾಯ್ತಿ ಉಪವಿಭಾಗದಿಂದ 25 ಲಕ್ಷ ರೂಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಹಣ ಬಿಡುಗಡೆಯಾಗಿದೆ ಎಂದು ವರದಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಲೇಔಟ್‍ನಲ್ಲಿ ಸರ್ಕಾರದ ಅನುದಾನ ಬಳಸಿ ಸಿಸಿ ರಸ್ತೆ ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ತಮ್ಮ ಪ್ರಭಾವ ಬಳಸಿ ತಾಲ್ಲೂಕು ಬಿಜೆಪಿ ಅಧ್ಯಕ್ಷರು ಸರ್ಕಾರದ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ.
ನರೇಗಾ ಯೋಜನೆಯ ತಾಂತ್ರಿಕ ಸಹಾಯಕ ಎಂಜಿನಿಯರ್ ಯೋಗೀಶ್ ಅವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಎಇಇ ಅಜ್ಜಪ್ಪ ಮತ್ತು ಜೆ.ಕೆ.ಸುರೇಶ್ ಅವರುಗಳು ಒತ್ತಾಯಪೂರ್ವಕವಾಗಿ ಕಾಮಗಾರಿಗೆ ನನ್ನಿಂದ ಸಹಿ ಹಾಕಿಸಿಕೊಂಡು ಅನುಮೋದನೆ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ಆಡಿಯೋ ತಮ್ಮ ಬಳಿ ಇದೆ ಎಂದು ಹೇಳಿದರು.