ಹುಣಸಘಟ್ಟ:ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವವು ಬುಧವಾರ ಅದ್ದೂರಿಯಾಗಿ ನಡೆಯಿತು.
ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ರಾಜಬೀದಿಗಳಲ್ಲಿ ದೊಡ್ಡ ದೊಡ್ಡ ಪ್ಲಕ್ಸ್, ಬ್ಯಾನರ್ಗಳು ರಾರಾಜಿಸುತ್ತಿದ್ದವು. ಮಂಗಳವಾರ ಬೆಳಿಗ್ಗೆಯಿಂದಲೇ ಚೌಡೇಶ್ವರಿ ಗದ್ದುಗೆ ಹಾಗೂ ದೇವಸ್ಥಾನಗಳಲ್ಲಿ ಬಣ್ಣ ಬಣ್ಣದ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಅಂದು ಸಂಜೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿಗೆ ಬಡಿಗೇರ ಮನೆಯಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಿದ ನಂತರ ಊರಿನ ಗೌಡರ ಮನೆಯಿಂದ ಹುಡಿಹಕ್ಕಿ ತುಂಬುವ ಶಾಸ್ತ್ರ ಕಾರ್ಯವು ನೆರವೇರಿಸಲಾಯಿತು.
ನಂತರ ಜಾನಪದ ಕಲಾ ಮೇಳಗಳೊಂದಿಗೆ ಚೌಡೇಶ್ವರಿ ಉತ್ಸವಮೂರ್ತಿ ಹಾಗೂ ಗಂಗಾಜಲದ ಕುಂಬದ ಮೆರವಣಿಗೆಯು ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಲಾಯಿತು.
ಬುಧವಾರ ಬೆಳಿಗ್ಗೆ ಸುತ್ತಮುತ್ತಲ 26 ಹಳ್ಳಿಯ ಭಕ್ತರು ಚೌಡೇಶ್ವರಿ ದೇವಿಗೆ ಹಣ್ಣುಕಾಯಿ ಉಡಿಯಕ್ಕಿ ಸಲ್ಲಿಸಿದರು. ಗ್ರಾಮದ ಮಹಿಳೆಯರು ಮಕ್ಕಳು ಪುರುಷರು ಬೇವಿನಸೊಪ್ಪಿನ ಉಡುಗೆ ತೊಟ್ಟು ಮಡಿಯಿಂದ ಉದೋ… ಉದೋ… ಎನ್ನುತ್ತಾ ದೇವಿಯ ಗದ್ದಿಗೆಯ ಸುತ್ತಲೂ ಉರುಳುಸೇವೆ ಹರಕೆಯನ್ನು ಅರ್ಪಿಸಿದರು. ನಂತರ ಕುರಿ ಕಾಳಗ ನಡೆಯಿತು. ಚೌಡೇಶ್ವರಿಯ ಗದ್ದಿಗೆಯಲ್ಲಿ ಕಮಿಟಿಯವರು ಬಲಿ ನಿಷೇಧಿಸಿರುವುದರಿಂದ ಭಕ್ತರು ಹರಿಕೆಯ ಕುರಿ ಕೋಳಿ ಮೇಕೆಗಳನ್ನು ತಮ್ಮ-ತಮ್ಮ ಕೇರಿಗಳಲ್ಲಿ ಬಲಿನೀಡಿ ದೇವಿಯ ಅರಕೆಯನ್ನು ಸಲ್ಲಿಸಿದರು.