ಹುಣಸಘಟ್ಟ: ರಾಜ್ಯ ಸರ್ಕಾರ ನೂತನವಾಗಿ ಬಿಡುಗಡೆ ಮಾಡಿರುವ ಬೆಳಕು ಯೋಜನೆಯಡಿ ವಿದ್ಯುತ್ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಇಲಾಖೆವತಿಯಿಂದ ನೀಡಲಾಗಿದೆ ಎಂದು ಹರಿಹರ ಡಿವಿಜನಲ್ ವ್ಯಾಪ್ತಿಯ ಎಕ್ಸಿಕೂಟಿವ್ ಇಂಜಿನಿಯರ್ ವಿನಯ್ ಕುಮಾರ್ ಹೇಳಿದರು.
ಕ್ಯಾಸಿನಕೆರೆ ಬೆಸ್ಕಾಂ ಶಾಖಾ ವ್ಯಾಪ್ತಿಯ ಸೂರುಮಟ್ಟಿ ಗ್ರಾಮದ ಮನೆಗಳಿಗೆ ಬೆಳಕು ಯೋಜನೆಯಡಿ ಅಳವಡಿಸಿದ ವಿದ್ಯುತ್ ಸಂಪರ್ಕ ಪರಿಶೀಲಿಸಿ ಮಾತನಾಡಿದ ಅವರು ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ.ಆದರೆ ಪ್ರತಿ ತಿಂಗಳು ಬರುವ ಮಾಸಿಕ ವಿದ್ಯುತ್ ಬಿಲ್ಲಿನ ಮೊತ್ತವನ್ನು ಮನೆಯ ಮಾಲೀಕರು ತಪ್ಪದೆ ಪಾವತಿಸುವಂತೆ ತಿಳಿಸಿದರು. ಒಂದು ವೇಳೆ ಮಾಸಿಕ ಬಿಲ್ಲು ಪಾವತಿಸದೇ ಇದ್ದಲ್ಲಿ ನಿರ್ಧಾಕ್ಷಿಣ್ಯವಾಗಿ ಸಂಪರ್ಕ ಕಡಿತಗೊಳಿಸಲಾಗುವುದು ಎಂದರು.
ಈಗಾಗಲೇ ಹರಿಹರ ಡಿವಿಜನಲ್ ವ್ಯಾಪ್ತಿಯಲ್ಲಿ ಬೆಳಕು ಯೋಜನೆಯಡಿಯಲ್ಲಿ 2200 ಬಿಪಿಎಲ್ ಕುಟುಂಬಗಳಿಗೆ, ಹೊನ್ನಾಳಿ ತಾಲೂಕಿನಲ್ಲಿ 1300, ಕ್ಯಾಸಿನಕೆರೆ ಬೆಸ್ಕಾಂ ಶಾಖಾ ವ್ಯಾಪ್ತಿಯ ಕುಳಗಟ್ಟೆ ಗ್ರಾ.ಪಂ 45, ಹುಣಸಘಟ್ಟ ಗ್ರಾ. ಪಂ ವ್ಯಾಪ್ತಿಗೆ 126, ಲಿಂಗಾಪುರ ಗ್ರಾ. ಪಂ ವ್ಯಾಪ್ತಿಗೆ 58, ಕ್ಯಾಸಿನಕೆರೆ ಗ್ರಾ. ಪಂ ವ್ಯಾಪ್ತಿಗೆ 136 ಸೇರಿ ಒಟ್ಟು 365 ಕುಟುಂಬಗಳಿಗೆ ಬೆಳಕು ಯೋಜನೆಯಡಿ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ ಇದರ ಸದುಪಯೋಗವನ್ನು ನಾಗರಿಕರು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹೊನ್ನಾಳಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಕಿರಣ, ಕ್ಯಾಸಿನಕೆರೆ ಬೆಸ್ಕಾಂ ಶಾಖಾಧಿಕಾರಿ ಕೆ.ಬಿ.ಹುತ್ತೆಶ್ ನಾಯ್ಕ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.