ಹೊನ್ನಾಳಿ:
ವ್ಯಕ್ತಿತ್ವ ವಿಕಸನಕ್ಕೆ ಗ್ರಾಮೀಣ ಪರಿಸರ ಪ್ರಶಸ್ತವಾದುದು ಎಂದು ಚಿತ್ರದುರ್ಗದ ನಿವೃತ್ತ ಡಿಎಚ್‍ಒ ಡಾ.ಎಂ. ಮಲ್ಲಿಕಾರ್ಜುನ್ ಹೇಳಿದರು.
ತಾಲೂಕಿನ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ 2.50 ಲಕ್ಷ ರೂ.ಗಳಷ್ಟು ಮೌಲ್ಯದ ಡೆಸ್ಕ್-ಬೆಂಚ್‍ಗಳನ್ನು ವಿತರಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಕಾರಣಾಂತರಗಳಿಂದ ನಗರೀಕರಣ ಹೆಚ್ಚಾಗುತ್ತಿದೆ. ತಮ್ಮ ಮಕ್ಕಳು ಪೇಟೆಯಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿ ಓದಬೇಕು ಎಂದು ಬಯಸುವವರು ಹೆಚ್ಚಾಗುತ್ತಿದ್ದಾರೆ. ಇಂಥ ಮನೋಭಾವ ಸರಿಯಲ್ಲ. ನಗರಗಳತ್ತ ವಲಸೆ ಹೋಗುವುದನ್ನು ನಿಲ್ಲಿಸಬೇಕು. ಗ್ರಾಮೀಣ ಭಾಗಗಳಲ್ಲೇ ಬದುಕು ಕಟ್ಟಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಕನಿಷ್ಠ 7ನೇ ತರಗತಿಯವರೆಗಾದರೂ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ದೊರಕಿಸಬೇಕು. ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಲ್ಲೇ ದಾಖಲಿಸಿದರೆ ಇನ್ನೂ ಒಳಿತು ಎಂದು ತಿಳಿಸಿದರು.
ತಮ್ಮ ಹುಟ್ಟೂರು ಕೋಟೆಮಲ್ಲೂರು ಗ್ರಾಮದ ಪರಿಸರ, ತುಂಗಭದ್ರಾ ನದಿ ತೀರದಲ್ಲಿ ತಾವು ಕಳೆದ ಬಾಲ್ಯದ ದಿನಗಳು ಇತ್ಯಾದಿ ನಮಗೆ ಇಂದಿಗೂ ಪುಳಕವನ್ನುಂಟುಮಾಡುತ್ತದೆ. ನಮ್ಮ ಗ್ರಾಮದ ಸರಕಾರಿ ಶಾಲೆ ಸಬಲಗೊಳ್ಳಬೇಕು. ನಮ್ಮ ಗ್ರಾಮದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಲಭಿಸಬೇಕು ಎಂಬುದು ನಮ್ಮ ಕಳಕಳಿ. ಆದ್ದರಿಂದ, ನಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜಮುಖಿ ಕಾರ್ಯಕ್ಕೆ ಬಳಸಲು ಮುಂದಾಗಿದ್ದೇವೆ. ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪೋಷಕರು ಸಹಕರಿಸಬೇಕು ಎಂದು ವಿವರಿಸಿದರು.
ಎಸ್ಡಿಎಂಸಿ ಅಧ್ಯಕ್ಷ ಎ.ಕೆ. ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿತ್ರದುರ್ಗದ ನಿವೃತ್ತ ಡಿಎಚ್‍ಒ ಡಾ.ಎಂ. ಮಲ್ಲಿಕಾರ್ಜುನ್ ನಮ್ಮ ಗ್ರಾಮದ ಬಗ್ಗೆ ಹೊಂದಿರುವ ಕಳಕಳಿ ಅನನ್ಯವಾದುದು. ಅವರ ಕುಟುಂಬಸ್ಥರಾದ ದಿ.ಎಂ. ಶಂಕರ್, ಕೋಟೆಮಲ್ಲೂರು ಎಂ. ವಿಶ್ವನಾಥ್, ಬೆಂಗಳೂರಿನ ಎಂ. ಗುರುನಾಥ್, ವಿ. ನಿತಿನ್ ಇತರರು ದಾನ-ಧರ್ಮದ ಕಾರ್ಯಗಳನ್ನು ಪ್ರೇರೇಪಿಸುತ್ತಿರುವುದು ಮಾದರಿಯಾದುದು ಎಂದು ಹೇಳಿದರು.
ತಾಲೂಕು ಸಾಧು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಕ್ಯಾಸಿನಕೆರೆ ಸೋಮಶೇಖರಪ್ಪ, ಮಾಜಿ ಪ್ರಧಾನ ಬಸವರಾಜಪ್ಪಗೌಡ್ರು, ಡಾ. ಸುಧಾ ಮಲ್ಲಿಕಾರ್ಜುನ್, ಲೀಲಾ, ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಪಿ.ಎಲ್. ಜನಾರ್ದನ್ ಇತರರು ಮಾತನಾಡಿದರು.
ಬೇಲಿಮಲ್ಲೂರು ಗ್ರಾಪಂ ಸದಸ್ಯರಾದ ಕೆ.ಎನ್. ಹನುಮಂತಪ್ಪ, ಗೀತಾ ಬಿ. ಮಹೇಶ್ವರಪ್ಪ, ಎ.ಕೆ. ಅಣ್ಣಪ್ಪ, ಕೋಟೆಮಲ್ಲೂರು ಗ್ರಾಮದ ಮುಖಂಡರಾದ ಬಿ.ಜಿ. ಬಸವರಾಜಪ್ಪಗೌಡ್ರು, ಬಿ.ಜಿ. ಶಿವಮೂರ್ತೆಪ್ಪಗೌಡ್ರು, ಎಸ್. ಮಹೇಶ್ವರಪ್ಪ, ಬಿ.ಪಿ. ರಾಜಪ್ಪ, ಎಸ್.ಜಿ. ವಿಶ್ವನಾಥ್, ಬಿ. ಮಹೇಶ್ವರಪ್ಪ, ಶ್ರೀನಿವಾಸ್, ಕೋಟೆಮಲ್ಲೂರು ಶಾಲೆಯ ಶಿಕ್ಷಕಿಯರಾದ ಸಿ. ಮಂಜುಳಾ, ಲೀಲಾ ಕಾರಡಗಿ ಇತರರು ಇದ್ದರು.
ಚಿತ್ರದುರ್ಗದ ನಿವೃತ್ತ ಡಿಎಚ್‍ಒ ಡಾ.ಎಂ. ಮಲ್ಲಿಕಾರ್ಜುನ್ ಕೋಟೆಮಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 50 ತಟ್ಟೆಗಳು, 50 ಲೋಟಗಳು, 20 ಬೆಂಚ್‍ಗಳು, 20 ಡೆಸ್ಕ್‍ಗಳು, 2 ಟೇಬಲ್‍ಗಳನ್ನು ನೀಡಿದರು.