ದಾವಣಗೆರೆ ಮಾ.17
ಸಾರ್ವಜನಿಕರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವ
ಸಲುವಾಗಿ ಜನಸ್ಪಂದನಾ ಸಭೆ ನಡೆಸಲಾಗುತ್ತಿದ್ದು, ಅಧಿಕಾರಿಗಳು
ವಿಳಂಬಕ್ಕೆ ಅವಕಾಶ ನೀಡದೆ ಸಾರ್ವಜನಿಕ ಮನವಿಗಳಿಗೆ ತ್ವರಿತವಾಗಿ
ಸ್ಪಂದಿಸುವ ಮೂಲಕ ಸಮಸ್ಯೆ ಪರಿಹರಿಸಲು ಮುಂದಾಗಬೇಕು ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸೂಚನೆ ನೀಡಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆಸಿದ
ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರ ಅವಹಾಲುಗಳನ್ನು ಸ್ವೀಕರಿಸಿ
ಅವರು ಮಾತನಾಡಿದರು.
ಜನಸ್ಪಂದನ ಸಭೆಯ ಮೂಲಕ ಅನೇಕ ಸಮಸ್ಯೆಗಳು
ಸ್ಥಳದಲ್ಲಿಯೇ ಇತ್ಯರ್ಥವಾಗುತ್ತವೆ ಅಲ್ಲದೆ ಅಧಿಕಾರಿಗಳ
ಕಾರ್ಯವೈಖರಿಯೂ ತಿಳಿಯುತ್ತದೆ. ಅಧಿಕಾರಿಗಳು ಸಾರ್ವಜನಿಕರ
ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ
ಉದ್ದೇಶದಿಂದ ಜನಸ್ಪಂದನಾ ಸಭೆಯನ್ನು ಪುನರಾರಂಭಿಸಲಾಗಿದೆ
ಎಂದರು.
ಜಗಳೂರು ತಾಲ್ಲೂಕಿನ ಗಡಿ ಭಾಗದ ಚಿಕ್ಕ ಮಂಗನಹೊಳೆ
ಗ್ರಾಮದ ವ್ಯಕ್ತಿಯೊಬ್ಬರು ಗ್ರಾಮದಲ್ಲಿ ಸುಮಾರು 200ಕ್ಕೂ
ಹೆಚ್ಚು ಕುಟುಂಬಗಳು ವಾಸವಿದ್ದು, ನ್ಯಾಯ ಬೆಲೆ ಅಂಗಡಿ ಹೊರತು
ಪಡಿಸಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ, ಬಸ್ ತಂಗುದಾಣ,
ಗ್ರಂಥಾಲಯ, ಸಮುದಾಯ ಭವನ, ಚೆಕ್ ಡ್ಯಾಂ ರಿಪೇರಿ, ಬ್ಯಾಂಕ್ ಶಾಖೆ
ಸೇರಿದಂತೆ ಅಗತ್ಯವಾದ ಸೌಲಭ್ಯಗಳನ್ನು ಗ್ರಾಮಕ್ಕೆ
ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು,
ಗ್ರಾಮಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ, ಪರಿಶೀಲನೆ ನಡೆಸಲಾಗುವುದು.
ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಲು
ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದರು.
ಕರೆಕಟ್ಟೆ ಗ್ರಾಮದ ವೃದ್ದ ವ್ಯಕ್ತಿಯೊಬ್ಬರು ಭತ್ತದ
ಅಂಗಡಿ ಮಾಲೀಕನೊಬ್ಬ ಭತ್ತ ಖರೀದಿಸಿ ಹಣ ನೀಡದೆ ಮೋಸ ಮಾಡಿದ್ದು,
ನ್ಯಾಯ ದೊರಕಿಸುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ
ಜಿಲ್ಲಾಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್
ವರಿಷ್ಠಾಧಿಕಾರಿಗಳ ಜೊತೆಗೆ ಚರ್ಚಿಸಿ, ನ್ಯಾಯ ದೊರಕಿಸಲು ಸೂಕ್ತ
ಕ್ರಮ ಕೈಗೊಳ್ಳಲಾಗುವುದು ಎಂದರು.
ಚನ್ನಗಿರಿ ತಾಲ್ಲೂಕಿನ ಸೋಮಲಾಪುರ ಗ್ರಾಮಕ್ಕೆ ಕೆಎಸ್‍ಆರ್‍ಟಿಸಿ ಬಸ್
ಸಂಚಾರ ಕಲ್ಪಿಸುವಂತೆ ಗ್ರಾಮದ ಮುಖಂಡರೊರ್ವರು ಮಾಡಿದ
ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ಸೋಮಲಾಪುರ
ಗ್ರಾಮಕ್ಕೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆಎಸ್‍ಆರ್‍ಟಿಸಿ
ದಾವಣಗೆರೆ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದರು.
ಶಿರಮಗೊಂಡನಹಳ್ಳಿ ಗ್ರಾಮದ ರವೀಂದ್ರನಾಥ್ ಬಡಾವಣೆಯ
ನಿವಾಸಿಯೋರ್ವರು ಮನವಿ ಮಾಡಿ ಬಡಾವಣೆಯಲ್ಲಿ ರಸ್ತೆಗಳು,
ಪಾರ್ಕುಗಳು ಹಾಳಾಗಿದ್ದು ಅಭಿವೃದ್ಧಿ ಮಾಡುವಂತೆ ಮನವಿ
ಮಾಡಿದರು. ಬಡಾವಣೆಯ ಸಮಸ್ಯೆಗಳನ್ನು ಸರ್ಕಾರ ಬಿಡುಗಡೆ
ಮಾಡುವ ಅನುದಾನಕ್ಕೆ ಅನುಗುಣವಾಗಿ ಹಂತ ಹಂತವಾಗಿ ಅನುದಾನ
ಒದಗಿಸಿ ಅಭಿವೃದ್ಧಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು
ಭರವಸೆ ನೀಡಿದರು.
ಹರಿಹರದ ವಿದ್ಯಾರ್ಥಿಯೊಬ್ಬರು ಲ್ಯಾಪ್‍ಟಾಪ್ ಒದಗಿಸುವಂತೆ ಮನವಿ
ಮಾಡಿದರು. ಜಿಲ್ಲಾಧಿಕಾರಿಗಳು ತಕ್ಷಣ ಪ್ರತಿಕ್ರಿಯಿಸಿ, ಸರ್ಕಾರದ
ಯೋಜನೆಯಡಿ ನಗರಸಭೆ ವತಿಯಿಂದ ನೀಡಲಾಗುವ ಸೌಲಭ್ಯದಡಿ
ಲ್ಯಾಪ್‍ಟಾಪ್ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಡಿಯುಡಿಸಿ
ಯೋಜನಾಧಿಕಾರಿಗೆ ಸೂಚನೆ ನೀಡಿದರು.
ಹೂವಿನಮಡು ಗ್ರಾಮದಲ್ಲಿ ಚೌಡೇಶ್ವರಿ ದೇವಸ್ಥಾನದ ಕಟ್ಟಡ
ತೆರವುಗೊಳಿಸಿ, ಜಾಗವನ್ನು ಒತ್ತುವರಿ ಮಾಡಿಕೊಂಡು ಅಡಿಕೆ ತೋಟ
ನಿರ್ಮಾಣ ಮಾಡಿಕೊಳ್ಳಲಾಗಿದೆ, ಆದರೆ ಸ್ಥಳವು ದೇವಸ್ಥಾನಕ್ಕೆ
ಸೇರಿದ್ದು ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ
ಗ್ರಾಮಸ್ಥರು ಮನವಿ ಮಾಡಿಕೊಂಡರು. ತಹಸಿಲ್ದಾರ್ ಅವರು
ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಒತ್ತುವರಿಯಾಗಿದ್ದಲ್ಲಿ ಪೊಲೀಸ್
ನೆರವು ಪಡೆದು ತೆರವುಗೊಳಿಸುವಂತೆ ತಹಶೀಲ್ದಾರ್ ಅವರಿಗೆ
ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿದೇರ್ಶಕ
ವಿಜಯ್‍ಕುಮಾರ ಅವರು ಜಿಲ್ಲಾಡಳಿತ ಭವನದಲ್ಲಿ ಶಿಶುಪಾಲನಾ
ಕೇಂದ್ರ ತೆರೆಯಲು ಕೊಠಡಿ ಒದಗಿಸುವಂತೆ ಮನವಿ ಮಾಡಿದರು.
ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಭವನದಲ್ಲಿ ಶಿಶುಪಾಲನಾ ಕೇಂದ್ರ
ತೆರೆಯುವುದು ಒಳ್ಳೆಯ ಕಾರ್ಯವಾಗಿದೆ, ಶೀಘ್ರ ಕೊಠಡಿ
ಒದಗಿಸಲಾಗುವುದು ಎಂದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ, ಬಸ್ ವ್ಯವಸ್ಥೆ,
ಪಹಣಿ, ಜಾತಿ ಪ್ರಮಾಣ ಪತ್ರ ಒದಗಿಸುವುದು ಸೇರಿದಂತೆ
ಸಾರ್ವಜನಿಕರಿಂದ ಅನೇಕ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಚನ್ನಪ್ಪ, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಮಹಾನಗರ ಪಾಲಿಕೆ
ಆಯುಕ್ತ ವಿಶ್ವನಾಥ್ ಪಿ ಮುದ್ದಜ್ಜಿ, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ
ಮಟ್ಟದ ಅಧಿಕಾರಿಗಳು, ತಹಸಿಲ್ದಾರರು, ಸಾರ್ವಜನಿಕರು ಹಾಜರಿದ್ದರು.