ಹೊನ್ನಾಳಿ : ಚುನಾವಣೆಯಲ್ಲಿ ಮಾತ್ರ ರಾಜಕಾರಣ, ನಂತರ ಕ್ಷೇತ್ರದ ಸಮಗ್ರ ಅಭಿವೃದ್ದಿ, ಜನರಿಗೆ ಸರ್ಕಾರಿ ಸೌಲಭ್ಯ ಒದಗಿಸುವುದು ಹಾಗೂ ಪಕ್ಷಾತೀತವಾಗಿ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ನನ್ನ ಗುರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅವಳಿ ತಾಲೂಕಿನಲ್ಲಿ ದಾಖಲೆಯ 55 ಜನಸ್ಪಂಧನ ಕಾರ್ಯಕ್ರಮಗಳನ್ನು ಮಾಡಿ ಸುಮಾರು 10 ಸಾವಿರ ಫಲಾನುಭವಿಗಳಿಗೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿದ ಕೀರ್ತಿ ನಮ್ಮದು.
ಈಗ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದ ಮೂಲಕ ಆಡಳಿತ ವ್ಯವಸ್ಥೆಯನ್ನೇ ಗ್ರಾಮಗಳ ಮನೆ ಬಾಗಿಲಿಗೆ ತಂದು ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದರು.
ನಾನು ಕೊಟ್ಟ ಮಾತಿಗೆ ತಪ್ಪುವುದಿಲ್ಲ ಈ ಹಿಂದೆ ಈ ಗ್ರಾಮಕ್ಕೆ ಜೆ.ಎಚ್.ಪಟೇಲ್ ಅವರ ಪ್ರತಿಮೆ ಮಾಡಿಸಿಕೊಡುವುದಾಗಿ ಮಾತು ಕೊಟ್ಟಿದ್ದು ಈಡೇರಿಸುವುವಲ್ಲಿ ತಡವಾಗಿದೆ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ಸಂಧ್ಯಾ ಸುರಕ್ಷಾ ಯೋಜನೆಯಡಿ ಎಂಟು, ಅಂಗವಿಕಲ ಪೋಷಣಾ ವೇತನ ಎರಡು, ಮನಸ್ವಿನಿ ಯೋಜನೆ ವೇತನ ಒಂದು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ಯಾಪ್ಯ ವೇತನ ಒಂದು, ಪೌತಿ ಖಾತೆ ಆಂದೋಲನದ ಅರ್ಜಿಗಳು ಆರು, ಕೋವಿಡ್ 19 ಸೋಂಕಿನಿಂದ ಮೃತಪಟ್ಟ ವಾರಸುದಾರರಿಗೆ ಪರಿಹಾರ ಮಂಜೂರಾತಿ ಪ್ರಮಾಣ ಪತ್ರಗಳು 40 ಸೇರಿದಂತೆ ಒಟ್ಟು 58 ಸರ್ಕಾರಿ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರಗಳನ್ನು ವಿತರಿಸಲಾಯಿತು ಹಾಗೂ ವಿವಿಧ ಇಲಾಖೆ ಸೌಲಭ್ಯಗಳಿಗಾಗಿ 112 ಅರ್ಜಿಗಳನ್ನು ಸ್ವೀಕರಿಸಲಾಯಿತಿ.
ಉಪವಿಭಾಗಾಧಿಕಾರಿ ತಿಮ್ಮಣ್ಣ ಹುಲುಮನಿ, ತಾ.ಪಂ.ಇಓ ರಾಮಬೋವಿ ಮಾತನಾಡಿದರು.
ಗ್ರಾ.ಪಂ ಅಧ್ಯಕ್ಷ ನಾಗರಾಜ್ ನಾಯ್ಕ, ಉಪಾಧ್ಯಕ್ಷರಾದ ಪರಮೇಶ್ ನಾಯ್ಕ, ಸದಸ್ಯರುಗಳು, ನ್ಯಾಮತಿ ತಹಶೀಲ್ದಾರ್ ರೇಣುಕಾ,ಉಪತಹಶೀಲ್ದಾರ್ ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *