ಹುಣಸಘಟ್ಟ: ಹೊನ್ನಾಳಿ ತಾಲೂಕಿನ ಬಾಗವಾಡಿ ಗ್ರಾಮದಲ್ಲಿ ಸುಮಾರು 70 ವರ್ಷದ ನಂತರ ಶ್ರೀ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರ, ಬುದುವಾರ ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು.
ಗುಳ್ಳಮ್ಮ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಗ್ರಾಮದ ಎಲ್ಲಾ ರಾಜ ಬೀದಿಗಳಿಗೆ ಜಗಮಗಿಸುವ ವಿದ್ಯುತ್ ದೀಪಾಲಂಕಾರ, ದೊಡ್ಡ ದೊಡ್ಡ ಪ್ಲಕ್ಷಿ ಬ್ಯಾನರ್ ಗಳು ರಾರಾಜಿಸುತ್ತಿದ್ದವು. ಮಂಗಳವಾರ ಮುಂಜಾನೆಯಿಂದಲೇ ಗ್ರಾಮದ ಗುಳ್ಯಮ್ಮ ದೇವಿ ಗದ್ದಿಗೆ, ಬಸವೇಶ್ವರ, ಆಂಜನೇಯ, ಹಾದಿ ರಂಗಪ್ಪ, ಮಾತಂಗಮ್ಮ ದೇವಸ್ಥಾನಗಳಿಗೆ ಬಣ್ಣ ಬಣ್ಣದ ಹೂವಿನ ಅಲಂಕಾರಗಳಿಂದ ಕಂಗೊಳಿಸುತ್ತಿತ್ತು. ಸುಮಾರು 70 ವರ್ಷಗಳ ನಂತರ ಆಚರಿಸುವ ಹಬ್ಬವು ನಿರ್ವಿಘ್ನವಾಗಿ ನೆರವೇರಲಿ ಹಾಗೂ ಗ್ರಾಮದಲ್ಲಿ ಶಾಂತಿ ನಡೆಸಲು ಗಣಪತಿ ದೇವಸ್ಥಾನದಲ್ಲಿ ನವಗ್ರಹ ಪೂಜೆ ನೆರವೇರಿಸಲಾಯಿತು.
ಅಂದು ಸಂಜೆ ಆರು ಗಂಟೆಗೆ ಗುಳ್ಳಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ದೇವಿಗೆ ಮಹಾಮಂಗಳಾರತಿ ದೀಪಾರಾಧನೆ ನೆರವೇರಿಸಲಾಯಿತು. ನಂತರ ಗ್ರಾಮದ ಗೌಡ್ರು ಹಾಗೂ ಬುದ್ಧಿವಂತರ ಮನೆಯಿಂದ ಮೊದಲು ಉಡಿಯಕ್ಕಿ ಶಾಸ್ತ್ರ ನೆರವೇರಿದ ಬಳಿಕ ಎಲ್ಲಾ ಮನೆಗಳಿಂದ ಮುತ್ತೈದೆಯರು ದೇವಿಗೆ ಹುಡಿಹಕ್ಕಿ ಅರ್ಪಿಸಿ 70 ವರ್ಷದ ಹರಕೆಯ ದೇವಿಗೆ ಸಲ್ಲಿಸಿ ದರ್ಶನ ಭಾಗ್ಯ ಪಡೆದು ಕೊಂಡರು.
ಮಂಗಳವಾರ ಮಧ್ಯರಾತ್ರಿ 12 ಗಂಟೆಗೆ ಜಾನಪದ ಕಲಾಮೇಳ ಗಳೊಂದಿಗೆ ಗುಳ್ಳಮ್ಮ ದೇವಿಯ ಉತ್ಸವ ಮೂರ್ತಿಯ ಹೊಳೆ ಪೂಜೆ ನೆರವೇರಿಸಿ ಗಂಗಾ ಜಲದ ಕುಂಭಗಳ ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಿ ದೊಡ್ಡ ದೊಡ್ಡ ಧಮಾಕ ಬಾಣ ಬಿರುಸುಗಳನ್ನು ಆಕಾಶದ ಎತ್ತರಕ್ಕೆ ಸಿಡಿಸಿ ಯುವಕರು ಡಿಜೆ ಸೌಂಡಿಗೆ ಹೆಜ್ಜೆಹಾಕುತ್ತಾ ಸಂಭ್ರಮಿಸಿದರು.
ಬುಧವಾರ ಬೆಳಿಗ್ಗೆ ಗ್ರಾಮದ ಸುತ್ತಮುತ್ತಲ ಭಕ್ತರು ದೇವಿಗೆಹಣ್ಣು ಕಾಯಿ ಒಡೆದು ಭಕ್ತಿ ಸಮರ್ಪಿಸಿದರು. ಮಹಿಳೆಯರು ಮಕ್ಕಳು ದೇವಿಗೆ ಅರಿಶಿನದ ಬಂಡಾರ ಬೇವಿನ ಸೊಪ್ಪನ್ನು ಕೈಯಲ್ಲಿಡಿದು ಬಂಡಾರ ಚಲ್ಲುತ್ತಾ ಉದೋ ಉದೋ ಎಂದು ದೇವಿ ಗದ್ದಿಗೆ ಸುತ್ತಲೂ ಪ್ರದಕ್ಷಿಣೆ ಹಾಕಿ ಹರಕೆ ಸಲ್ಲಿಸಿದರು. ನಂತರ ಕುರಿ ಕಾಳಗ ನಡೆಯಿತು. ಗುಳ್ಳಮ್ಮ ದೇವಿ ಕಮಿಟಿಯವರು ಬಲಿ ನಿಷೇಧಿಸಿದ್ದರಿಂದ ಭಕ್ತರು ಕುರಿಕೋಳಿ ಮೇಕೆಗಳನ್ನು ತಮ್ಮ ತಮ್ಮ ಕೇರಿಗಳಲ್ಲಿ ಬಲಿನೀಡಿ ದೇವಿಗೆ ಹರಕೆ ಸಲ್ಲಿಸಿದರು.
ಹೋಳಿ ಹುಣ್ಣಿಮೆ ಯಾಗಿ 9ನೇ ದಿನಕ್ಕೆ ನಡೆಯುವ ಈ ಗುಳ್ಳಮ್ಮ ದೇವಿಯ ಜಾತ್ರಾ ಮಹೋತ್ಸವ ಸುಮಾರು ಎಪ್ಪತ್ತು ವರ್ಷಗಳ ಹಿಂದೆ ದೇವಿಯ ಗದ್ದಿಗೆಯಲ್ಲಿ ಹಾಕಿದ್ದ ನಂದಾದೀಪವು ಮಳೆ ಗಾಳಿಗೆ ನಂದಿ ಹೋಗಿದ್ದರಿಂದ ಗ್ರಾಮದಲ್ಲಿ ಜಗಳ ಅಶಾಂತಿ ಏರ್ಪಟ್ಟು ನಿಂತುಹೋದ ಹಬ್ಬವನ್ನು ಇಂದು ಸಂಭ್ರಮದಿಂದ ಆಚರಿಸುತ್ತಿರುವುದಾಗಿ ಗ್ರಾಮದ ಹಿರಿಯರು ಹೇಳುತ್ತಾರೆ. ಈ ಸಂದರ್ಭದಲ್ಲಿ ಗ್ರಾಮದ ದೇವಿಯ ಉತ್ಸವ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.