ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧವಾಗಿದ್ದು ಎಷ್ಟು
ಜಾಗೃತಿ ತಿಳುವಳಿಕೆ ನೀಡಿದರೂ ಸಂಬಂಧಿಸಿದವರು
ಎಚ್ಚೆತ್ತುಕೊಳ್ಳುತ್ತಿಲ್ಲ ಹಾಗಾಗಿ ಇಂತಹ ಕಾರ್ಯಗಾರವನ್ನು
ಮತ್ತೆ ಮತ್ತೆ ಮಾಡಬೇಕಾಗಿದೆ, ಯಾವುದೇ ಕಾಯ್ದೆಗಳಿಗೆ
ಹೆದರುವುದಕ್ಕಿಂತ ನಮ್ಮ ಮನಸಾಕ್ಷಿ ಒಪ್ಪುವಂತೆ ನಾವು
ನಡೆದುಕೊಂಡರೆ ಹೆಣ್ಣು ಶಿಶುಗಳನ್ನು ಉಳಿಸಲು ಸಾಧ್ಯ ಎಂದು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ಇವರ
ಸಹಯೋಗದಲ್ಲಿ ಶ್ರೀರಾಮನಗರದ ಬಳಿ ಇರುವ
ಗಾಂಧಿಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪಿ.ಸಿ ಮತ್ತು
ಪಿ.ಎನ್.ಡಿ.ಟಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು
ನೆಲೆಸಿರುತ್ತಾರೆ ಎಂದು ನಮ್ಮ ಪುರಾಣ, ವೇದ, ಉಪನಿಷತ್ತುಗಳಲ್ಲಿ
ಉಲ್ಲೇಖಿಸಲಾಗಿದೆ. ಆದರೆ ನಮ್ಮ ವೈಯಕ್ತಿಕ ಬದುಕಿನಲ್ಲಿ
ಪುರುಷ ಪ್ರಧಾನ ವ್ಯವಸ್ಥೆ ಜಾರಿಯಲ್ಲಿದ್ದು ಹೆಣ್ಣು
ಭ್ರೂಣಹತ್ಯೆಗಳು ಹೆಚ್ಚುತ್ತಿವೆ. ಹೆಣ್ಣು ಭ್ರೂಣಹತ್ಯೆ
ತಡೆಯುವ ನಿಟ್ಟಿನಲ್ಲಿ ಕಾಯ್ದೆ ಜಾರಿಯಾದರು ಸಹ ಭ್ರೂಣಹತ್ಯೆ
ಮತ್ತು ಲಿಂಗಪತ್ತೆ ಮಾಡುವ ಚಟುವಟಿಕೆಗಳು ನಡೆಯುತ್ತಿವೆ,
ಬಹಳಷ್ಟು ತಿಳಿದವರು, ಹಣವಂತರೇ ಕಾಯ್ದೆಯ
ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದರು.
     ಹೆಣ್ಣು ಹೆತ್ತವರ ಮನೆಯಲ್ಲಿ ಸಂತೋಷ ತುಂಬಿರುತ್ತದೆ,
ಹೆಣ್ಣು ಕುಟುಂಬದ ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ, ಪೋಷಣೆ
ಮಾಡುತ್ತಾಳೆ. ಹೆಣ್ಣಿರಲಿ ಗಂಡಿರಲಿ ಸಂಸಾರಕ್ಕೆ ಒಂದು ಮಗು
ಇದ್ದರೆ ಸಾಕು. ದಾವಣಗೆರೆಯಲ್ಲಿ 79 ಸ್ಕ್ಯಾನಿಂಗ್ ಸೆಂಟರ್‍ಗಳಿವೆ,
ಅಕ್ರಮವಾಗಿ ಲಿಂಗಪತ್ತೆ ಮಾಡುವವರ ಮೇಲೆ ಸೂಕ್ತ
ಕಾನೂನು ಕ್ರಮ ಕೈಗೊಳ್ಳಲಾಗುವುದು. ಕೆಲವು ಸ್ಕ್ಯಾನಿಂಗ್
ಸೆಂಟರ್‍ಗಳಲ್ಲಿ ಗಂಡು ಮತ್ತು ಹೆಣ್ಣಿನ ದೇವರ ಪೋಟೊಗಳ
ಕಡೆಗೆ ಕಣ್ಣಾಡಿಸುವ ಮೂಲಕ ಲಿಂಗಪತ್ತೆ ಮಾಡುವ
ಪ್ರಕರಣಗಳು ಕಂಡು ಬಂದಿದ್ದು, ಈಗಾಗಲೇ ಆ ರೀತಿಯ
ಪೋಟೊ ಅಳವಡಿಸುವುದನ್ನ ನಿಷೇಧಿಸಿ ಆದೇಶ ಹೊರಡಿಸಲಾಗಿದೆ,
ಲಿಂಗಪತ್ತೆ ಮಾಡುವವರ ಮೇಲೆ ಪಿಎನ್‍ಡಿಸಿ ಕಾಯ್ದೆಯಡಿ ಕಠಿಣ

ಕಾನೂನು ಕ್ರಮ ಜರುಗಿಸಿ, ಸ್ಕ್ಯಾನಿಂಗ್ ಸೆಂಟರ್‍ನ ಪರವಾನಗಿ ರದ್ದು
ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
     ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಮಾತನಾಡಿ,
ಲಿಂಗಾನುಪಾತದಲ್ಲಿ ಸಮತೋಲನ ಪಾಲಿಸುವುದು ನಮ್ಮೆಲ್ಲರ ಆದ್ಯ
ಕರ್ತವ್ಯ. ಜಿಲ್ಲೆಯ ಯಾವುದೇ ಸ್ಕ್ಯಾನಿಂಗ್ ಸೆಂಟರ್‍ಗಳಲ್ಲಿ ಚಿಹ್ನೆ,
ಸನ್ನೆಗಳ ಮೂಲಕ ಲಿಂಗಪತ್ತೆ ಮಾಡುವುದು ಕಂಡು ಬಂದಲ್ಲಿ
ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಅಕ್ರಮವಾಗಿ
ಲಿಂಗಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆಯಂತಹ ಕಾನೂನು
ಬಾಹಿರ ಚಟುವಟಿಕೆ ಮಾಡುವ ಸ್ಕ್ಯಾನಿಂಗ್ ಸೆಂಟರ್‍ಗಳನ್ನು ಸೀಜ್
ಮಾಡುವುದರ ಜೊತೆಗೆ ಕಾನೂನು ರೀತಿಯಲ್ಲಿ ಕ್ರಮ
ಕೈಗೊಳ್ಳಲಾಗುವುದು ಎಂದರು.
     ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ,
ಯಾವುದೇ ಒಂದು ಜೀವವನ್ನು ಹತ್ಯೆ ಮಾಡುವುದು ಅತ್ಯಂತ
ಪಾಪದ ಕೆಲಸ, ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗಪತ್ತೆ
ಮಾಡುವಂತಹ ಅಮಾನವೀಯ ಕೃತ್ಯ ತಡೆಗಟ್ಟುವುದು
ಪ್ರತಿಯೊಬ್ಬರ ಕರ್ತವ್ಯವಾಗಬೇಕು, ವಿಶೇಷವಾಗಿ ಆಶಾ
ಕಾರ್ಯಕರ್ತೆಯರಿಗೆ ತಾವು ಕಾರ್ಯನಿರ್ವಹಿಸುವ ಪ್ರದೇಶದ
ವ್ಯಾಪ್ತಿಯಲ್ಲಿ ಗರ್ಭಿಣಿಯರ ಸಂಪೂರ್ಣ ಮಾಹಿತಿ ಇರುತ್ತದೆ. ಹಾಗಾಗಿ
ಆ ಗರ್ಭಿಣಿಯರಿಗೆ ಹೆರಿಗೆ ಆಗುವವರೆಗೂ ಅವರ ಕುರಿತು ಮಾಹಿತಿ
ಪಡೆಯುತ್ತಿರಬೇಕು. ಮಗುವಿನ ಬೆಳವಣಿಗೆಯ ಕುರಿತು
ಮಾಹಿತಿ ತಿಳಿಯುವ ಸಲುವಾಗಿ ಆಲ್ಟ್ರಾಸೌಂಡ್ ಟೆಕ್ನಾಲಜಿ ಕಂಡು
ಹಿಡಿಯಲಾಯಿತು. ಆದರೆ ಆಧುನಿಕ ದಿನಗಳಲ್ಲಿ ಲಿಂಗಪತ್ತೆ
ಮಾಡುವಂತಹ ಅಕ್ರಮ ಚಟುವಟಿಕೆಗೆ ಬಳಸಲಾಗುತ್ತಿದೆ. ಈ
ರೀತಿಯ ಕಾನೂನು ಬಾಹಿರ ಕ್ರಿಯೆಗಳಲ್ಲಿ
ತೊಡಗಿಸಿಕೊಳ್ಳುವವರ ಕುರಿತು ಮಾಹಿತಿ ದೊರೆತರೆ ಪಿ.ಸಿ ಮತ್ತು
ಪಿ.ಎನ್.ಡಿ.ಟಿ ಸಮಿತಿಗೆ ತಿಳಿಸಬೇಕು ಹಾಗೂ ಹೆಣ್ಣು ಭ್ರೂಣಹತ್ಯೆ
ತಡೆಯಲು ಎಲ್ಲರೂ ಶ್ರಮಿಸೋಣ ಎಂದರು.
     ಕಾರ್ಯಕ್ರಮದಲ್ಲಿ ಕೊವೀಡ್-19 ಹಾಗೂ ಲಸಿಕಾಕರಣಕ್ಕಾಗಿ
ಶ್ರಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ
ಸುರಕ್ಷಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು
ಸನ್ಮಾನಿಸಲಾಯಿತು. ಕ್ಷಯರೋಗ ನಿರ್ಮೂಲನೆಯಲ್ಲಿ ವಿಶೇಷ
ಪಾತ್ರವಹಿಸಿದ ದಾವಣಗೆರೆ ಜಿಲ್ಲೆಗೆ ಕಂಚಿನ ಪದಕ ಬರಲು ಶ್ರಮಿಸಿದ
ಕ್ಷಯರೋಗ ನಿರ್ಮೂಲನಾಧಿಕಾರಿ ಗಂಗಾಧರ್ ಹಾಗೂ ಸಿಬ್ಬಂದಿ
ಕಾರ್ಯವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶ್ಲಾಘಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣಾಧಿಕಾರಿ ಡಾ.ನಾಗರಾಜ, ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಇಲಾಖೆಯ ಅಧಿಕಾರಿ ವಿಜಯಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ
ಡಾ.ಎ.ಎಂ ರೇಣುಕಾರಾಧ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್‍ಕುಮಾರ್.ಡಿ,
ಆಯುಷ್ ಅಧಿಕಾರಿ ಶಂಕರಗೌಡ ಹಾಗೂ ಆಶಾ
ಕಾರ್ಯಕರ್ತೆಯರು, ಇತರರು ಹಾಜರಿದ್ದರು.

Leave a Reply

Your email address will not be published. Required fields are marked *