ಹೊನ್ನಾಳಿ: ರಾಜ್ಯದಲ್ಲಿ ವೀರಶೈವ ಪಂಚಮಸಾಲಿ ಸಮಾಜ ಸಧೃಡವಾಗಿ ಸಂಘಟನೆಗೊಳ್ಳುವ ಹಿನ್ನೆಲೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಹೊನ್ನಾಳಿಯ ಪಟ್ಟಣಶೆಟ್ಟಿ ಪರಮೇಶ್ ಅವರನ್ನು ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವೀರಶೈವ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾದ ಜಿ.ಪಿ.ಪಾಟೀಲ್ ಅವರು ಪಟ್ಟಣಶೆಟ್ಟಿ ಪರಮೇಶ್ ಅವರನ್ನು ಆಯ್ಕೆ ಮಾಡಿ ಪ್ರಕಟಣೆ ಹೊರಡಿಸಿದ್ದಾರೆ.
ಈ ಹಿಂದೆ ರಾಜ್ಯ ಯುವ ಘಟಕದ ಅಧ್ಯಕ್ಷರಾಗಿ ಮತ್ತು ರಾಜ್ಯ ಕಾರ್ಯಕಾರಿ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜದ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಅನುಭವ ಹೊಂದಿದ್ದ ಇವರನ್ನು ಇದೀಗ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ವಿದ್ಯಾರ್ಥಿದೆಸೆಯಿಂದಲೇ ನಾಯಕತ್ವ ಗುಣ ಹೊಂದಿದ್ದ ಇವರು ಪಿಯುಸಿ, ಪದವಿ ಅಭ್ಯಾಸ ಮಾಡುತ್ತಿದ್ದ ವೇಳೆಯಲ್ಲಿ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿಯಾಗಿ ಶಾಲಾ-ಕಾಲೇಜುಗಳ ವಾರ್ಷಿಕೋತ್ಸವ ಸಮಾರಂಭಗಳನ್ನು ತರಾಸು ಅಂತಹ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದು, ರಾಜ್ಯ ಮಟ್ಟದ ಕೋಕೋ ಕ್ರೀಡಾಕೂಟದಲ್ಲೂ ಸ್ಪರ್ಧಿಸಿದ್ದರು.
ಆರಂಭದಲ್ಲಿ ಹೊನ್ನಾಳಿ ಟೌನ್ ಸಹಕಾರ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಹೊನ್ನಾಳಿಗೆ ಭೇಟಿ ನೀಡಿದಾಗ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ್ದರು. ಎಲ್.ಕೆ. ಅಡ್ವಾಣಿ ಮತ್ತು ಶ್ರೀರಾಮ ಜ್ಯೋತಿ ನಗರಕ್ಕೆ ಆಗಮಿಸಿದಾಗ ತಾಲ್ಲೂಕಿನ 80 ಹಳ್ಳಿಗಳಿಗೆ ಭೇಟಿ ನೀಡಿದ್ದರು.
ಪಟ್ಟಣ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸುವ ಮೂಲಕ ತಮ್ಮ ಸಕ್ರೀಯ ರಾಜಕೀಯ ಜೀವನವನ್ನು ಆರಂಭಿಸಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾಗಿಯೂ ತಮ್ಮ ಕಾರ್ಯ ನಿರ್ವಹಿಸಿ ಪಟ್ಟಣದ ಅಭಿವೃದ್ಧಿಗೆ ತಮ್ಮದೇ ಆದ ಕೊಡಗೆಯನ್ನು ನೀಡಿದ್ದರು. ಕಳೆದ 30 ವರ್ಷಗಳ ಹಿಂದೆ ಪ್ರಾರಂಭವಾದ ಅಭಿವ್ಯಕ್ತಿ ಕಲಾ ಸಂಸ್ಥೆಯ ಹಾಲಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಿವಮೊಗ್ಗದ ಬಾಪೂಜಿ ಆಯುರ್ವೇದ ಮೆಡಿಕಲ್ ಸಂಸ್ಥಾಪಕ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ ಅನುಭವವಿದ್ದು ಪ್ರಸ್ತುತ ಇದೀಗ ಶ್ರೀ ಚನ್ನಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಯಾಗಿಯೂ ಶಿಕ್ಷಣ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ತಮ್ಮನ್ನು ಆಯ್ಕೆ ಮಾಡಿದ ರಾಜ್ಯ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ವಿಶ್ವಾಸಕ್ಕೆ ತಕ್ಕಂತೆ ಸಮಾಜ ಸಂಘಟನೆಯ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಆಯ್ಕೆ ಮಾಡಿದ ಸಮಿತಿಯ ನಂಬಿಕೆ ಉಳಿಸಿಕೊಳ್ಳುವ ಭರವಸೆ ನೀಡಿ, ರೈತರ ಸ್ವಾವಲಂಬಿ ಬದುಕಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸುವ ವ್ಯವಸ್ಥೆ ನಿರ್ಮಾಣ ಮಾಡುವುದರ ಜೊತೆಗೆ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಸಮಾಜ ಬಾಂಧವರಿಗೆ ಮಾಹಿತಿ ನೀಡುವುದರ ಜೊತೆಗೆ ಸೌಲಭ್ಯಗಳನ್ನು ಕೊಡಿಸುವ ನಿಟ್ಟಿನಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

Leave a Reply

Your email address will not be published. Required fields are marked *