ಹೊನ್ನಾಳಿ : ವೀರಶೈವ ಜಂಗಮ ಅಥವಾ ಬೇಡುವ ಜಂಗಮ ಜಾತಿಯ ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡರೆ ದಲಿತರ ನೋವು, ಅವರ ಕಾವು ಮತ್ತು ಕಣ್ಣೀರು ನಿಮ್ಮನ್ನು ನಿರ್ನಾಮ ಮಾಡುತ್ತದೆ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟದ ಅಧ್ಯಕ್ಷ ಡಾ. ಎಲ್. ಈಶ್ವರನಾಯ್ಕ ಅವರು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಎಚ್ಚರಿಕೆ ನೀಡಿದರು.
ಬುಧವಾರ ಮೀಸಲಾತಿ ಸಂರಕ್ಷಣಾ ಮಹಾ ಒಕ್ಕೂಟ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಎಂ.ಪಿ.ರೇಣುಕಾಚಾರ್ಯ ಅವರು ತಮ್ಮ ಪ್ರಭಾವ ಬೀರಿ ಸಹೋದರನಿಗೆ, ಅವರ ಮಕ್ಕಳು ಮತ್ತು ತಮ್ಮ ಮಕ್ಕಳಿಗೆ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸಿದ್ದಾರೆ. ಅವರಿಗೆ ಸಂವಿಧಾನದ ಬಗ್ಗೆ ಗೌರವವಿದ್ದರೆ ತಕ್ಷಣವೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಶಿಕ್ಷಕರಿಂದ ಹಿಡಿದು ತಹಶೀಲ್ದಾರ್ ವರೆಗೂ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲದಿದ್ದರೆ ಇಡೀ ರಾಜ್ಯದಲ್ಲಿ ಬಿಜೆಪಿ ಪಕ್ಷದ ವಿರುದ್ಧ ದಲಿತರು ಮತ ಚಲಾಯಿಸುವ ನಿರ್ಣಯ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.


ಬಿಜೆಪಿಯಲ್ಲಿರುವ ದಲಿತರು ಮೀರ್ ಸಾಧಕರು : ನಮ್ಮ ಅನ್ನದ ತಟ್ಟೆಗೆ ಕೈಹಾಕಿರುವವರ ವಿರುದ್ಧ ಹೋರಾಟ ಮಾಡೋಣ ಬನ್ನಿ ಎಂದು ಬಿಜೆಪಿಯಲ್ಲಿರುವ ದಲಿತರನ್ನು ನಾನು ಕರೆದರೆ ಅವರು ಬರಲಿಲ್ಲ. ಆದ್ದರಿಂದ ಅವರು ಮೀರ್ ಸಾಧಕರು ಎಂದು ವ್ಯಂಗ್ಯವಾಡಿದ ಈಶ್ವರನಾಯ್ಕ, ರಾಜ್ಯದಲ್ಲಿ ಸುಮಾರು 1.50 ಲಕ್ಷ ಜನ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಎಷ್ಟೋ ಜನ ಸರ್ಕಾರಿ ಕೆಲಸವನ್ನು ಗಿಟ್ಟಿಸಿದ್ದಾರೆ. ಇವರಿಗೆ ಎಂ.ಪಿ. ದಾರುಕೇಶ್ವರಯ್ಯ ಅವರು ಅಖಿಲ ಕರ್ನಾಟಕ ಡಾ. ಬಿ.ಆರ್. ಅಂಬೇಡ್ಕರ್ ಬೇಡ ಜಂಗಮ ಹಿತ ರಕ್ಷಣಾ ಸಮಿತಿಯಿಂದ ಗುರುತಿನ ಚೀಟಿ ಕೊಡುವ ಮೂಲಕ ಸುಳ್ಳು ಜಾತಿ ಪ್ರಮಾಣ ಪತ್ರ ಕೊಡಿಸುವಲ್ಲಿ ಕುಮ್ಮಕ್ಕು ನೀಡುತ್ತಿದ್ದಾರೆ. ಆದ್ದರಿಂದ ದಾರುಕೇಶ್ವರಯ್ಯ ಅವರಿಗೆ ಧೈರ್ಯವಿದ್ದರೆ ಅವರು ಯಾವ ದಾಖಲಾತಿ ತೆಗೆದುಕೊಂಡು ಬರುತ್ತಾರೋ ಹೊನ್ನಾಳಿಗೆ ಬರಲಿ, ಸಾರ್ವಜನಿಕವಾಗಿ ಚರ್ಚೆಗೆ ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶಿವಮೊಗ್ಗ ಎಂ. ಗುರುಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ, ಅವರ ಅನ್ನಕ್ಕೆ ನೀವು ಕನ್ನ ಹಾಕುತ್ತೀದ್ದೀರಲ್ಲ ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಬೇಡ ಜಂಗಮರು ಬೀದರ್, ಗುಲ್ಬಾರ್ಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರ ಭಾಷೆ ತೆಲುಗು ಮತ್ತು ಕನ್ನಡ, ಬೇಟೆಯಾಡುವುದು ಇವರ ವೃತ್ತಿ, ಆದರೆ ಬೇಡುವ ಜಂಗಮರು ಇದಕ್ಕೆ ವಿರುದ್ಧ ಇದ್ದಾರೆ. ಇಂಥವರು ಬೇಡ ಜಂಗಮ ಎಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಮೀಸಲಾತಿ ಸೌಲಭ್ಯ ಪಡೆದುಕೊಳ್ಳಲು ಹೊರಟಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ದಾರುಕೇಶ್ವರಯ್ಯ ಅವರು ಬೇಡ ಜಂಗಮ ಸಂಘಟನೆಯ ಹೆಸರಿನಲ್ಲಿ ಗುರುತಿನ ಪತ್ರ ಪಡೆದುಕೊಳ್ಳುವಂತೆ ಮತ್ತು ಎಸ್ಸಿ ಜಾತಿ ಪ್ರಮಾಣ ಪತ್ರ ಕೊಡುವಂತೆ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡುತ್ತಿದ್ದಾರೆ ಎಂದು ದೂರಿದರು. ಆದ್ದರಿಂದ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ಅವರ ಸಹೋದರ ದಾರುಕೇಶ್ವರಯ್ಯ ಅವರು ಹೋದಲ್ಲೆಲ್ಲಾ ಘೇರಾವ್ ಹಾಕಬೇಕು ಎಂದು ಕರೆ ನೀಡಿದರು.
ದಾರುಕೇಶ್ವರಯ್ಯ ಅವರು ಕಟ್ಟಿಕೊಂಡಿರುವ ಅಖಿಲ ಕರ್ನಾಟಕ ಡಾ. ಬಿ.ಆರ್. ಅಂಬೇಡ್ಕರ್ ಬೇಡ ಜಂಗಮ ಹಿತ ರಕ್ಷಣಾ ಸಮಿತಿಯನ್ನು ಸರ್ಕಾರ ಕೂಡಲೇ ವಜಾಗೊಳಿಸಬೇಕು ಮತ್ತು ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಚಿನ್ನಸಮುದ್ರ ಶೇಖರ್‍ನಾಯ್ಕ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಯಬೇಕು ಎಂದರೆ ನೀವು ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಶಾಸಕರ ಸ್ಥಾನದಿಂದ ವಜಾಗೊಳಿಸಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ರೇಣುಕಾಚಾರ್ಯ ಅವರು ಬೇಡುವ ಜಂಗಮರು, ಈ ಮೊದಲು 3 ಬಿ. ನಲ್ಲಿದ್ದ ನೀವು, 2009 ರಲ್ಲಿ ಜನರಲ್ ಕೆಟಗರಿಗೆ ಹೋದವರು, ಇದೀಗ ಪರಿಶಿಷ್ಠ ಜಾತಿ ಅಂತೀರಲ್ಲ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ದಾವಣಗೆರೆ ಜಿಲ್ಲಾ ಬಣಜಾರ್ ಸಮಾಜದ ಅಧ್ಯಕ್ಷ ರಾಘವೇಂದ್ರನಾಯ್ಕ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಿಶಿಷ್ಟ ಜಾತಿ, ಪಂಗಡಗಳ ಸೌಲಭ್ಯವನ್ನು ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾರೆ. ಅದನ್ನು ಎಚ್ಚರಿಸುವ ಸಲುವಾಗಿ ಈ ಪ್ರತಿಭಟನೆಯನ್ನು ಇಲ್ಲಿ ಹಮ್ಮಿಕೊಂಡಿದ್ದು ಈ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಸೆಳೆಯುವ ಕೆಲಸ ಮಾಡಿದ್ದು ಶ್ಲಾಘನೀಯ ಎಂದರು.
ಜಿ.ಪಂ. ಮಾಜಿ ಅಧ್ಯಕ್ಷ ಆರ್. ನಾಗಪ್ಪ, ಪ್ರಜಾಪರಿವರ್ತನಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ಜಿ.ಪಂ. ಮಾಜಿ ಸದಸ್ಯ ಡಾ. ವೈ ರಾಮಪ್ಪ ಹಾಗೂ ಕೊಡತಾಳ್ ರುದ್ರೇಶ್ ಅವರು ಮಾತನಾಡಿ, ಎಸ್ಸಿ ನಲ್ಲಿ 101 ಜಾತಿಗಳಿವೆ, ಎಸ್ಟಿ ನಲ್ಲಿ 55 ಜಾತಿಗಳಿವೆ. ಇದೂವರೆಗೂ ಈ ಜನಾಂಗ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಖಂಡಿಸಿ ಹೋರಾಟ ಮಾಡಿಲ್ಲ ಎನ್ನುವ ಆರೋಪವಿತ್ತು. ಇನ್ನು ಮುಂದೆ ಹಾಗಾಗುವುದಿಲ್ಲ. ನಿಮ್ಮನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸುವವರೆಗೂ ಈ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ನಿಮ್ಮ ಜೊತೆಗೆ ಇರುವ ನಮ್ಮ ದಲಿತರ ರಕ್ತ ನಮ್ಮ ರಕ್ತದೊಂದಿಗೆ ಸೇರಿಕೊಂಡಿದೆ. ಅವರಿಗೆ ಹುದ್ದೆಗಳನ್ನು ಕೊಟ್ಟು ಇಟ್ಟುಕೊಂಡಿರಬಹುದು. ಆದರೆ ಮುಂದೆ ಅವರನ್ನು ಒಪ್ಪಿಸಿ ನಮ್ಮೊಂದಿಗೆ ಕರೆತರಲಾಗುವುದು ಎಂದು ಎಚ್ಚರಿಕೆ ನೀಡಿದರು. ಬೇಡ ಜಂಗಮ ಎಂಬ ಕುರಿತು ನಿಮ್ಮಲ್ಲಿ ದಾಖಲೆಗಳಿದ್ದರೆ ಹೊನ್ನಾಳಿ ಕ್ರೀಡಾಂಗಣಕ್ಕೆ, ಇಲ್ಲವೇ ಸೈನ್ಸ್ ಮೈದಾನಕ್ಕೆ ಬರಲಿ ಸಾರ್ವಜನಿಕವಾಗಿ ಚರ್ಚೆ ನಡೆಸೋಣ ಎಂದು ಸವಾಲು ಹಾಕಿದರು.
ಕೆಲವೇ ವರ್ಷಗಳ ಹಿಂದೆ ಬಾಡಿಗೆ ಮನೆಯಲ್ಲಿ ಇದ್ದ ರೇಣುಕಾಚಾರ್ಯ ಸಾವಿರಾರು ಕೋಟಿ ಆಸ್ತಿ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿದ ಅವರು, ಈಗ ಯಾವ ಜಾತಿ ಎಂಬುದನ್ನು ಸ್ಪಷ್ಟಪಡಿಸಬೇಕು. ಹಿಂದೂ ಲಿಂಗಾಯತರೋ, ವೀರಶೈವ ಲಿಂಗಾಯತರೋ, ಅಥವಾ ಬೇಡ ಜಂಗಮರೋ ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಉಪನ್ಯಾಸಕ ಮೋಹನ್ ಕುಮಾರ್ ಮಾತನಾಡಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ದಲಿತ ಮುಖಂಡ ಆರ್. ನಾಗಪ್ಪ ಅವರ ಮಗನಿಗೆ ಮಗಳು ಕೊಟ್ಟು ಸಂಬಂಧ ಬೆಳೆಸಬೇಕು. ಇದಕ್ಕೆ ಅವರು ತಯಾರಿದ್ದಾರಾ ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಹೆಗ್ಗೆರೆ ರಂಗಪ್ಪ, ಕುಂದುವಾಡ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯರಾದ ಶಿವರಾಂ ನಾಯ್ಕ, ಜೀವೇಶಪ್ಪ, ಬಿಎಸ್‍ಪಿ ಜಿಲ್ಲಾಧ್ಯಕ್ಷ ಹನುಮಂತಪ್ಪ, ಪರಮೇಶ ಬೆನಕನಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *