ಹೊನ್ನಾಳಿ:
ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ತಮ್ಮ ಹಾಗೂ ತಮ್ಮ ಕುಟುಂಬದವರ ಮೇಲೆ ಬಂದಿರುವ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ಆರೋಪವನ್ನು ಮರೆಮಾಚಲು ಏಪ್ರಿಲ್ 18ರಂದು ತಾಲೂಕಿನ ಬಿಜೆಪಿ ಎಸ್ಸಿ, ಎಸ್ಟಿ ಮೋರ್ಚಾಗಳ ವತಿಯಿಂದ ಅಂಬೇಡ್ಕರ್ ಜಯಂತಿ ನೆಪದಲ್ಲಿ ಸಮಾವೇಶವನ್ನು ಮಾಡಲು ಹೊರಟಿದ್ದಾರೆ. ಅದಕ್ಕೆ ಹೊನ್ನಾಳಿ, ನ್ಯಾಮತಿ ತಾಲೂಕುಗಳ ಎಸ್ಸಿ, ಎಸ್ಟಿ ಜನಾಂಗದವರಿಗೆ ಹಣ ಕೊಟ್ಟು, ಆಸೆ-ಆಮಿಷ ತೋರಿಸುವ ಮೂಲಕ ಸಮಾವೇಶಕ್ಕೆ ಜನರು ಕರೆತರುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ತಾಲೂಕು ಪ.ಜಾ, ಪ.ವರ್ಗ ಮೀಸಲಾತಿ ಒಕ್ಕೂಟದ ಅಧ್ಯಕ್ಷ ಡಾ.ಎಲ್. ಈಶ್ವರನಾಯ್ಕ ಹಾಗೂ ಜಿಪಂ ಮಾಜಿ ಅಧ್ಯಕ್ಷ ಆರ್. ನಾಗಪ್ಪ ಆರೋಪಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಏಪ್ರಿಲ್ 6ರಂದು ನಾವು ರೇಣುಕಾಚಾರ್ಯ ವಿರುದ್ಧ ಪ್ರತಿಭಟನೆ ಮಾಡಿದ್ದೆವು. ಅದಕ್ಕೆ ಪ್ರತೀಕಾರವೆಂಬಂತೆ ನಮ್ಮ ಸಮಾಜದ ಯುವಕರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಒಗ್ಗಟ್ಟನ್ನು ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ತಮ್ಮ ಸಹೋದರರು ಮತ್ತು ಮಕ್ಕಳು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿರುವುದು ತಪ್ಪು ಎಂಬುದಾಗಿ ರೇಣುಕಾಚಾರ್ಯ ಅವರು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಕೋರ್ಟ್ ಆದೇಶವಿದೆ. ಅದರ ಪ್ರಕಾರ ಪಡೆದುಕೊಂಡಿದ್ದಾರೆ. ನಾನೂ ತೆಗೆದುಕೊಳ್ಳಬಹುದಿತ್ತು. ಆದರೆ, ನಾನು ಆ ಕೆಲಸ ಮಾಡುವುದಿಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆದ್ದರಿಂದ, ಯಾವ ಕೋರ್ಟ್ ಈ ಆದೇಶ ನೀಡಿದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು. ದಾಖಲೆಗಳಿದ್ದರೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ತಮ್ಮ ಕುಟುಂಬದವರು ಮಾಡಿರುವ ತಪ್ಪನ್ನು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಗೌರವಯುತವಾಗಿ ಒಪ್ಪಿಕೊಂಡು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ಸರಕಾರಕ್ಕೆ ಹಿಂದಿರುಗಿಸಬೇಕು. ರಾಜ್ಯದ ಎಲ್ಲಾ ಎಸ್ಸಿ, ಎಸ್ಟಿ ವರ್ಗದವರ ಕ್ಷಮೆ ಕೋರಬೇಕು ಎಂದು ಪ್ರಜಾಪರಿವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ ಒತ್ತಾಯಿಸಿದರು.
ಅಂಬೇಡ್ಕರ್ ಜಯಂತಿಯನ್ನು ಅವರು ಆಚರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಇಂಥ ಆಸೆ-ಆಮಿಷಗಳನ್ನು ಒಡ್ಡಿ, ಪೇಡ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ಇಷ್ಟು ವರ್ಷಗಳ ಕಾಲ ಮಾಡದೇ ಇದ್ದ ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಇದೀಗ ದಿಢೀರನೇ ಹಮ್ಮಿಕೊಂಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಜಯಂತಿ ಆಚರಿಸುವ ಕುರಿತು ಹಳ್ಳಿ-ಹಳ್ಳಿಗಳಿಗೆ ಹೋಗಿ, ಹಣ ಕೊಟ್ಟು ಕಾರ್ಯಕ್ರಮ ಮಾಡಿಸುತ್ತಿದ್ದಾರೆ ಎಂದು ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ಹನುಮಂತನಾಯ್ಕ ಆರೋಪಿಸಿದರು.
ಕ್ಯಾಸಿನಕೆರೆ ಶೇಖರಪ್ಪ ಮಾತನಾಡಿ, ಎಸ್ಸಿ-ಎಸ್ಟಿ ಜನಾಂಗಗಳ ಯುವಕರು ನನ್ನ ಮೇಲೆ ಅಪಾರ ಪ್ರೀತಿ-ಗೌರವ ಇಟ್ಟುಕೊಂಡಿದ್ದಾರೆ ಎಂದು ಹೇಳುವ ರೇಣುಕಾಚಾರ್ಯ, ಅವರ ಕುತ್ತಿಗೆಯ ಮೇಲೆ ಕಾಲಿಟ್ಟು ಅವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರಕಾರದಲ್ಲಿನ ಸಣ್ಣ-ಪುಟ್ಟ ಸವಲತ್ತುಗಳನ್ನು ಕೊಡಿಸುವ ಆಮಿಷಗಳನ್ನು ನಮ್ಮ ಯುವಕರಿಗೆ ನೀಡುತ್ತಿದ್ದಾರೆ ಎಂದೂ ದೂರಿದರು.
ಬೇಲಿಮಲ್ಲೂರು ಶಿವಾನಂದ್, ದಿಡಗೂರು ರುದ್ರೇಶ್, ಹನಗವಾಡಿ ರಮೇಶ್, ಅರಕೆರೆ ಕೃಷ್ಣಪ್ಪ, ಮಂಜುನಾಥ್, ಷಣ್ಮುಖಪ್ಪ ಬಳ್ಳೇಶ್ವರ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.