ಹೊನ್ನಾಳಿ : ಕಳೆದ 22 ವರ್ಷಗಳಿಂದ ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧರಿಗೆ ಗ್ರಾಮಸ್ಥರು ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆತ್ಮೀಯವಾಗಿ ಬರ ಮಾಡಿಕೊಂಡರು.
ತಾಲೂಕಿನ ಕೋಟೆಮಲ್ಲೂರು ಗ್ರಾಮದ ಯೋಧ ಎಚ್.ಆಂಜನೇಯ ಕಳೆದ 22 ವರ್ಷಗಳಿಂದ ಜಮ್ಮು ಕಾಶ್ಮೀರ ಸೇರಿದಂತೆ ವಿವಿದೇಡೆ ಸೇವೆ ಸಲ್ಲಿಸಿ ಇಂದು ನಿವೃತ್ತರಾದ ಹಿನ್ನೆಲೆಯಲ್ಲಿ ತವರಿಗೆ ಆಗಮಿಸಿದರು.
ಯೋಧ ಎಚ್.ಆಂಜನೇಯ ಅವರನ್ನು ಗ್ರಾಮದಾಧ್ಯಂತ ಮೆರವಣಿಗೆ ಮಾಡಿದ ಗ್ರಾಮಸ್ಥರು ಭಾರತಾಂಬೆಯ ಪರ ಘೋಷಣೆ ಕೂಗಿದರು. ಇದೇ ವೇಳೆ ಯೋಧ ಆಂಜನೇಯ ಅವರನ್ನು ಸನ್ಮಾನಿಸಿ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.
ಯೋಧರು ಮತ್ತು ರೈತರು ನಮ್ಮ ಎರಡು ಕಣ್ಣುಗಳು, ಯೋಧರು ತಮ್ಮ ವೈಯಕ್ತಿಕ ಬದುಕನ್ನ ಬಿಟ್ಟು ನಮ್ಮಗಳ ರಕ್ಷಣೆ ಮಾಡಿದರೇ, ರೈತರು ಬಿಸಿಲು ಮಳೆ ಎನ್ನದೇ ಕೆಲಸ ಮಾಡುತ್ತಿದ್ದಾರೆ ಎಂದರು.
ಯೋಧರು ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವುದರಿಂದ ನಾವು ಇಂದು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ ಎಂದ ರೇಣುಕಾಚಾರ್ಯ, ಯೋಧರಿಗೆ ನನ್ನದೊಂದು ಸಲಾಂ ಎಂದರು.
ಎಚ್.ಆಂಜನೇಯ ಅವರು ಜಮ್ಮು-ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಛತ್ತಿಸ್‍ಘಡ, ತೆಲಂಗಾಣ ಸೇರಿ ಐದು ರಾಜ್ಯಗಳಲ್ಲಿ ಸಿಆರ್‍ಪಿಎಫ್‍ನಲ್ಲಿ ಸೇವೆ ಸಲ್ಲಿ, ಇಂದು ಸ್ವಗ್ರಾಮಕ್ಕೆ ಆಗಮಿಸಿದ್ದು ಅವರನ್ನು ಗ್ರಾಮಸ್ಥರು ಅಭಿನಂದಿಸುವ ಕಾರ್ಯಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.
ದೇಶ ಸೇವೆಯೇ ಈಶ ಸೇವೆ ಎಂದು ಸೈನಿಕರು ಕೆಲಸ ಮಾಡುತ್ತಿದ್ದು, ಭಾರತ ಸುರಕ್ಷಿತವಾಗಿರಲು ಮುಖ್ಯ ಕಾರಣ ನಮ್ಮ ಸೈನಿಕರು. ದೇಶ ಸೇವೆಗಾಗೀ ಪ್ರಾಣ ತ್ಯಾಗ ಮಾಡಲು ನಮ್ಮ ಸೈನಿಕರು ಹಿಂದೆ ಸರಿಯುವುದಿಲ್ಲಾ, ಇಂಥ ಸೈನಿಕರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ವೇಳೆ ನಿವೃತ್ತ ಯೋಧ ಎಚ್ ಆಂಜನೇಯ ಅವರನ್ನು ಗ್ರಾಮಸ್ಥರು ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಆಚ್.ಆಂಜನೇಯ ಮಾತನಾಡಿದರು.
ಈ ಸಂದರ್ಭ ತಾಂಡಾಭಿವೃಧ್ದಿ ನಿಗಮದ ನಿದೇರ್ಶಕ ಮಾರುತಿ ನಾಯ್ಕ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುರೇಂದ್ರನಾಯ್ಕ, ಜುಂಜಾನಾಯ್ಕ, ಹನುಮಂತನಾಯ್ಕ,ಉಮೇಶ್ ನಾಯ್ಕ ಸೇರಿದಂತೆ ಯೋಧ ಎಚ್.ಆಂಜನೇಯ ಅವರ ಕುಟುಂಬಸ್ಥರು, ಗ್ರಾಮಸ್ಥರಿದ್ದರು.