ಬಡವರು ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯಲು ಹೊಲ-
ಮನೆಗಳನ್ನು ಮಾರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದನ್ನು
ತಡೆಯುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ
ಪ್ರಾಯೋಜಕತ್ವದಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ
ತರಲಾಗಿದೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಸೋಮವಾರ ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 75ನೇ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ,
ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ರಾಷ್ಟ್ರೀಯ ಆರೋಗ್ಯ ಅಭಿಯಾನ ತಾಲ್ಲೂಕು
ಆರೋಗ್ಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿ
ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳವನ್ನು
ಉದ್ಘಾಟಿಸಿ ಮಾತನಾಡಿದರು.
ಜನರ ದೃಷ್ಠಿಯಲ್ಲಿ ವೈದ್ಯರೇ ದೇವರು ಹಾಗಾಗಿ ವೈದ್ಯರು
ಪ್ರಾಮಾಣಿಕವಾಗಿ ಸೇವೆ ಮಾಡಬೇಕು. ಸೇವಾವಲಯದಲ್ಲಿ ಕಾರ್ಯ
ನಿರ್ವಹಿಸುವ ಪ್ರತಿಯೊಬ್ಬರು ಪ್ರಾಮಾಣಿಕ ಕೆಲಸ ಮಾಡಿದರೆ
ಸೌಲಭ್ಯಗಳು ಜನರಿಗೆ ತಲುಪುತ್ತವೆ. ಕುಷ್ಠರೋಗ ಹಾಗೂ
ಕ್ಷಯರೋಗದಂತಹ ಖಾಯಿಲೆಗಳ ನಿರ್ಮೂಲನೆಗಾಗಿ ಜಿಲ್ಲಾ
ವೈದ್ಯರು ಶ್ರಮಿಸುತ್ತಿದಾರೆ, ಕ್ಷಯರೋಗ ಜಿಲ್ಲೆಯಲ್ಲಿ ಶೇ 20
ರಷ್ಟು ಕಡಿಮೆಯಾಗಿದೆ. ಅದಕ್ಕಾಗಿ ಕೇಂದ್ರ ಸರ್ಕಾರ ಕಂಚಿನ
ಪದಕ ನೀಡಿ ಗೌರವಿಸಿದೆ. ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು
ವ್ಯವಸ್ಥಿತವಾಗಿ ಮುನ್ನಡೆಸಲು ಶ್ರಮಿಸೋಣ ಎಂದು ತಿಳಿಸಿದರು.
ಮನುಷ್ಯನಿಗೆ ಅನೇಕ ಖಾಯಿಲೆ ರೋಗಗಳು ಬರುವುದು
ಸಹಜ ಆದರೆ ಅವುಗಳಿಗೆ ಸೂಕ್ತ ಚಿಕಿತ್ಸೆ ಪಡೆಯಲು ಬೇರೆ ಬೇರೆ
ಆಸ್ಪತ್ರೆಗಳಿಗೆ ಹೋಗಿ ಹಣ ಕಳೆದುಕೊಂಡವರನ್ನು ಮತ್ತು
ಚಿಕಿತ್ಸೆ ಪಡೆಯಲು ಸಾಧ್ಯವಾಗವರನ್ನು ನಾವು ಕಾಣಬಹುದು. ಹಾಗಾಗಿ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂತಹ ಪರಿಸ್ಥಿತಿ
ನಿಭಾಯಿಸಲು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ
ಜಾರಿಗೊಳಿಸಿ, ಬಡತನ ರೇಖೆಗಿಂತ ಕೇಳಗಿರುವ ಕುಟುಂಬದ
ಸದಸ್ಯರಿಗೆ ಐದು ಲಕ್ಷದ ವರೆಗೆ ಉಚಿತವಾಗಿ ವಿವಿಧ ರೀತಿಯ
ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬಹುದಾಗಿದೆ. ಉನ್ನತ
ಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕಾರ್ಡ್
ಅನುಕೂಲವಾಗಲಿದೆ. ಕೋರೋನಾ ಸಂದರ್ಭದಲ್ಲಿ ಜೀವವೇ
ಉಳಿಯದ ಪರಿಸ್ಥಿತಿ ಕಂಡಿದ್ದೇವೆ, ಆಗ ವೈದ್ಯರು ಜನರಿಗೆ ಸೂಕ್ತ
ಮಾರ್ಗದರ್ಶನ ಮಾಡುವ ಪ್ರಾಮಾಣಿಕ ಕೆಲಸ ಮಾಡಿದ್ದಾರೆ.
ದೇಶದ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗಿದೆ. ಬಡವರಿಗೆ ಒಂದುವರೆ
ವರ್ಷಗಳ ಕಾಲ ಉಚಿತವಾಗಿ ಆಹಾರ ಒದಗಿಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ಉತ್ತರ
ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ ಈ
ಹಿಂದೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವುದಕ್ಕೆ
ಜನರು ಭಯ ಪಡುತ್ತಿದ್ದರು, ಆದರೆ ಪ್ರಸ್ತುತ ವಾತವಾರಣ
ಬದಲಾಗಿದೆ ಜಿಲ್ಲಾಸ್ಪತ್ರೆಯಲ್ಲಿ ಉತ್ತಮ ಸೇವೆ ದೊರೆಯುವ ಹಿನ್ನಲೆ
ನಿತ್ಯವು ಸಾವಿರಾರು ಜನರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ
ಪಡೆಯಲು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸಹ
ಇರಲಿಲ್ಲ ಈಗ ಅದನ್ನು ಕಲ್ಪಿಸಲಾಗಿದೆ. ಕೋವಿಡ್ ವೇಳೆಯಲ್ಲಿ
ವೈದ್ಯರು ಹಗಲು-ರಾತ್ರಿ ಎನ್ನದೇ ನಿರ್ವಹಿಸಿದ ಕಾರ್ಯ
ಶ್ಲಾಘನೀಯ ಎಂದರು.
ವೇದಿಕೆಯಲ್ಲಿ ಸಾಂಕೇತಿಕವಾಗಿ ಮೂರು ಫಲಾನುಭವಿಗಳಿಗೆ
ಡಿಜಿಟಲ್ ಹೆಲ್ತ್ ಕಾರ್ಡ್ ವಿತರಣೆ ಮಾಡಲಾಯಿತು. ಆರೋಗ್ಯ ಮೇಳದಲ್ಲಿ
ಕುಟುಂಬ ಕಲ್ಯಾಣ ಯೋಜನೆ, ಕೋವಿಡ್ ಲಸಿಕೆ, ಆಯುರ್ವೇದ ಔಷಧಿ,
ಡೆಂಗ್ಯೂ ಮತ್ತು ಚಿಕನ್ ಗುನ್ಯಾ ಅರಿವು, ಆಯುಷ್ಮಾನ್ ಭಾರತ್
ಕಾರ್ಡ್ ನೋಂದಣಿ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ
ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್
ಆರ್.ಜಯಮ್ಮ, ತಹಶೀಲ್ದಾರ್ ಬಸವನಗೌಡ ಕೊಟ್ಟುರ್, ಮಾಜಿ ಶಾಸಕ
ಬಸವರಾಜ್‍ನಾಯ್ಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಅಧಿಕಾರಿ ಡಾ.ನಾಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಷಣ್ಮಖಪ್ಪ, ಆಯುಷ್
ಅಧಿಕಾರಿ ಶಂಕರಗೌಡ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ
ಡಾ.ನೀಲಕಂಠ ನಾಯ್ಕ್, ಆರ್‍ಸಿಹೆಚ್ ಡಾ.ಮೀನಾಕ್ಷಿ, ಸರ್ವೇಕ್ಷಣಾಧಿಕಾರಿ
ಡಾ.ಆರ್.ಜಿ.ರಾಘವನ್, ಡಾ.ಸುರೇಶ್ ಎನ್.ಬಾರ್ಕಿ, ಜಿಲ್ಲಾಸ್ಪತ್ರೆ ವೈದ್ಯರು,
ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಭಾಗವಹಿಸಿದ್ದರು.