ಸರ್ಕಾರಿ ಯೋಜನೆಗಳ ಸವಲತ್ತುಗಳನ್ನು ಜನರ ಬಳಿಗೇ
ತೆರಳಿ ವಿತರಣೆ ಮಾಡುವ ಮೂಲಕ, ಜನರ ಮನೆ ಬಾಗಿಲಲ್ಲೇ
ಸರ್ಕಾರವಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ ಮೂಡಿಸುವ
ಪ್ರಾಮಾಣಿಕ ಪ್ರಯತ್ನವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮದ
ಗುರುಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ಶನಿವಾರ
ಏರ್ಪಡಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮ
ವಾಸ್ತವ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು
ಮಾತನಾಡಿದರು.
ಪಹಣಿ, ಪಿಂಚಣಿ, ಮಾಸಾಶನ, ವಿಕಲಚೇತನರ ಮಾಸಾಶನ
ಸೇರಿದಂತೆ ಸರ್ಕಾರದ ವಿವಿಧ ಸವಲತ್ತುಗಳನ್ನು ವಿತರಿಸಲು
ಜಿಲ್ಲಾಡಳಿತವೇ ಫಲಾನುಭವಿಗಳನ್ನು ಹುಡುಕಿ, ಅವರ ಮನೆಗೇ
ತಲುಪಿಸುವಂತಹ ಕಾರ್ಯವನ್ನು ಪ್ರಾರಂಭಿಸಲಾಗಿದ್ದು, ಈ ನಿಟ್ಟಿನಲ್ಲಿ
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪೂರಕವಾಗಿದೆ. ಹಸಿವು ಎಂದರೆ
ಏನು ಎಂದು ಅರಿಯದವರು, ಶ್ರೀಮಂತಿಕೆಯಲ್ಲಿಯೇ ಹುಟ್ಟಿ
ಬೆಳೆದವರು ಬಡತನ, ಹಸಿವು ಕುರಿತು ಉದ್ದುದ್ದ ಭಾಷಣ
ಮಾಡುತ್ತಾರೆ, ಅಂತಹವರು ಹಸಿವು ನಿವಾರಣೆ ಕುರಿತಂತೆ ಪಿಹೆಚ್‍ಡಿ
ಯನ್ನೂ ಕೂಡ ಪಡೆಯುತ್ತಾರೆ. ಹವಾನಿಯಂತ್ರಿತ
ಕೊಠಡಿಯಲ್ಲಿ ಕುಳಿತುಕೊಂಡು ಆಡಳಿತ ನಡೆಸುವ ಕಾಲ ಈಗಿಲ್ಲ.
ದೇಶದ ಆತ್ಮ ಹಳ್ಳಿಗಳಲ್ಲಿದೆ. ಇದನ್ನು ಅರಿತೇ ಸರ್ಕಾರ ಗ್ರಾಮ
ವಾಸ್ತವ್ಯದಂತಹ ಮಹತ್ವದ ಕಾರ್ಯಕ್ರಮವನ್ನು
ಜಾರಿಗೊಳಿಸಿದ್ದು, ಕೇವಲ ಹಳ್ಳಿಗೆ ಬಂದು ಭಾಷಣ ಮಾಡಿ ಹೋಗುವುದು
ಗ್ರಾಮವಾಸ್ತವ್ಯದ ಉದ್ದೇಶವಲ್ಲ. ಗ್ರಾಮ ವಾಸ್ತವ್ಯ ಮಾಡುವ
ಗ್ರಾಮ ಸುತ್ತಮುತ್ತಲ ಸುಮಾರು ಐದಾರು ಹಳ್ಳಿಗಳಲ್ಲಿ, ಪ್ರತಿ
ಮನೆ ಮನೆಗೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ, ಪಿಂಚಣಿ, ಮಾಸಾಶನ,
ವಿಕಲಚೇತನರ ಮಾಸಾಶನಕ್ಕೆ ಯಾರು ಅರ್ಹರಿದ್ದಾರೆ, ಅವರಿಗೆ
ಸವಲತ್ತು ದೊರೆತಿದೆಯೇ ಇಲ್ಲವೆ, ಯೋಜನೆಗಾಗಿ ಯಾರು ಅರ್ಹ
ಫಲಾನುಭವಿಗಳಿದ್ದಾರೆ ಎಂಬುದನ್ನು ಗುರುತಿಸಲು ಸರ್ವೆ
ಮಾಡಿಸಲಾಗುತ್ತಿದೆ. ಅರ್ಹರಿದ್ದೂ, ಸವಲತ್ತಿನಿಂದ ವಂಚಿತರಾಗಿದ್ದಲ್ಲಿ,
ಅಂತಹವರಿಗೆ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಸೌಲಭ್ಯ ಮಂಜೂರು

ಮಾಡಲಾಗುತ್ತಿದೆ. ಇವೆಲ್ಲವೂ ಮಧ್ಯವರ್ತಿಗಳ ಹಾವಳಿಯನ್ನು
ತಪ್ಪಿಸಿ, ಅರ್ಹರಿಗೆ ಯೋಜನೆಯನ್ನು ತಲುಪಿಸುವ ಮೂಲಕ, ಜನರ
ಮನೆ ಬಾಗಿಲಲ್ಲೇ ಸರ್ಕಾರವಿದೆ ಎಂಬ ಭಾವನೆಯನ್ನು ಸಾರ್ವಜನಿಕರಲ್ಲಿ
ಮೂಡಿಸುವ ಯತ್ನ ಮಾಡುತ್ತಿದ್ದೇವೆ. ಬಿದರಕೆರೆ ಗ್ರಾಮದಲ್ಲಿ
ಮನೆ ಮನೆಗೆ ಭೇಟಿ ನೀಡಿ ಸುಮಾರು 12 ವಿಕಲಚೇತನ
ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಮಾಸಾಶನ ಮಂಜೂರು
ಮಾಡಿಸುವ ಕಾರ್ಯ ಮಾಡಿದ್ದೇವೆ. ಮನೆ ಮನೆ ಸಮೀಕ್ಷೆ
ಸಂದರ್ಭದಲ್ಲಿ ವ್ಯಾಪ್ತಿಯಿಂದ ಹೊರಗುಳಿದವರೂ ಕೂಡ,
ಗ್ರಾಮವಾಸ್ತವ್ಯ ಕಾರ್ಯಕ್ರಮ ಸಂದರ್ಭದಲ್ಲಿ ಸೌಲಭ್ಯಕ್ಕಾಗಿ ಅರ್ಜಿ
ಸಲ್ಲಿಸುವ ವ್ಯವಸ್ಥೆಯನ್ನು ಕೂಡ ಮಾಡಿದ್ದೇವೆ. ಸಮಾಜದ ಕಟ್ಟ
ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆ ತಲುಪಿದಾಗ ಮಾತ್ರ
ಇಂತಹ ಕಾರ್ಯಕ್ರಮಗಳ ಉದ್ದೇಶ ಈಡೇರಲು ಸಾಧ್ಯ. ಕೋವಿಡ್
ಸೋಂಕು ನಿಯಂತ್ರಣ ಸಂದರ್ಭದಲ್ಲಿ ಜಿಲ್ಲೆಯ ಜನರು ಒಳ್ಳೆಯ
ರೀತಿಯಲ್ಲಿ ಸಹಕರಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ನಾಲ್ಕನೆ
ಅಲೆ ಬರುತ್ತದೆ ಎಂಬ ಮಾತು ಕೇಳಿಬರುತ್ತಿದೆ. ಈಗಾಗಲೆ
ಅರ್ಹರೆಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ನೀಡಲಾಗಿದೆ. ಎಷ್ಟೇ ಅಲೆ
ಬಂದರೂ, ಜನರ ಸಹಕಾರವಿದ್ದಲ್ಲಿ, ಉತ್ತಮವಾಗಿ ನಿಭಾಯಿಸಲು
ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ
ಹೇಳಿದರು.
ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರು ಮಾತನಾಡಿ,
ಸರ್ಕಾರದಲ್ಲಿ ನಾನೂ ಒಬ್ಬ ಕೆಲಸಗಾರ, ಹೀಗಾಗಿ ಕ್ಷೇತ್ರದ ಜನರ
ಒಳಿತಿಗಾಗಿ ನಿರಂತರವಾಗಿ ದುಡಿಯುತ್ತಿದ್ದೇನೆ. ಅಧಿಕಾರ
ಶಾಶ್ವತವಲ್ಲ, ನಾವು ನೀಡುವ ಕಾರ್ಯಕ್ರಮಗಳು ಶಾಶ್ವತ.
ಮುಖ್ಯಮಂತ್ರಿಗಳು ಏ. 29 ರಂದು ಜಗಳೂರು ಕ್ಷೇತ್ರಕ್ಕೆ
ಆಗಮಿಸಲಿದ್ದು, ಅಂದು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ
ಚಾಲನೆ ನೀಡುವರು. 57 ಕೆರೆಗಳನ್ನು ತುಂಬಿಸುವ ಯೋಜನೆ
ಜೊತೆಗೆ 1236 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ
ಯೋಜನೆಯ ಕಾಮಗಾರಿಗೂ ಮುಖ್ಯಮಂತ್ರಿಗಳು ಚಾಲನೆ
ನೀಡಲಿದ್ದಾರೆ. ಇದರಲ್ಲಿ ಬಿದರಕೆರೆ ಗ್ರಾಮಕ್ಕೂ ನೀರು
ಹರಿದುಬರುವಂತೆ ಯೋಜನೆ ರೂಪಿಸಲಾಗಿದೆ. ಮೂರು ಬಾರಿ ನನ್ನನ್ನು
ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಕ್ಷೇತ್ರದ ಜನರ ಋಣ
ತೀರಿಸುವುದು ನನ್ನ ಕರ್ತವ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚನ್ನಪ್ಪ
ಮಾತನಾಡಿ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸಂದರ್ಭದಲ್ಲಿ
ನಿವೇಶನ, ಮನೆ ಸೌಲಭ್ಯ ನೀಡುವಂತೆ 100 ಕ್ಕೂ ಹೆಚ್ಚು ಜನ ಅರ್ಜಿ
ಸಲ್ಲಿಸಿದ್ದಾರೆ. ನಿವೇಶನ ರಹಿತರ ಸಮೀಕ್ಷೆ ಕಾರ್ಯ ಕೈಗೊಂಡಿದ್ದು,
ಗ್ರಾಮದಲ್ಲಿ 300 ಕ್ಕೂ ಹೆಚ್ಚು ನಿವೇಶನ ರಹಿತರನ್ನು
ಗುರುತಿಸಲಾಗಿದೆ. ಇವರೆಲ್ಲರಿಗೂ ನಿವೇಶನ ನೀಡಲು ಸುಮಾರು 8
ಎಕರೆ ಭೂಮಿ ಅಗತ್ಯವಿದೆ. ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ,
ಗಾಂವಠಾಣವಾಗಲೀ ಇಲ್ಲ. ಯಾರಾದರೂ ಜಮೀನು ಮಾಲೀಕರು ಭೂಮಿ
ನೀಡಲು ಮುಂದೆ ಬಂದರೆ, ಸರ್ಕಾರದ ದರಕ್ಕಿಂತ ದುಪ್ಪಟ್ಟು ಬೆಲೆ
ನೀಡಿ, ಭೂಮಿ ಖರೀದಿಸಲು ನಿಗಮ ಸಿದ್ಧವಿದೆ ಎಂದರು.
     ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾತನಾಡಿ, ಜನರು
ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ
ಕಾನೂನಿನ ವ್ಯಾಪ್ತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಮತ್ತು
ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು
ಆಯೋಜಿಸಲಾಗಿದೆ. ವೃದ್ಯಾಪ್ಯ ವೇತನ, ಸಂಧ್ಯಾ ಸುರಕ್ಷಾ, ವಿಧವಾ
ವೇತನಗಳನ್ನು ಅರ್ಹರಿಗೆ ತಲುಪಿಸಲಾಗುತ್ತಿದೆ. ಗ್ರಾಮಕ್ಕೆ
ಸ್ಮಶಾನ ಸೌಲಭ್ಯ ವ್ಯವಸ್ಥೆ ಸೇರಿದಂತೆ ಹಲವಾರು ಸೌಲಭ್ಯಗಳನ್ನು
ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ

ಯೋಜನೆಗಳು ಯಾವ ರೀತಿ ಅನುಷ್ಠಾನವಾಗುತ್ತಿದೆ ಎಂಬುದನ್ನು
ಪರಿಶೀಲಿಸಲು ಗ್ರಾಮ ವಾಸ್ತವ್ಯ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಫಲಾನುಭವಿಗಳಿಗೆ
ಸರ್ಕಾರದ ಸೌಲಭ್ಯಗಳ ಮಂಜೂರಾತಿ ಪತ್ರ,
ಹಕ್ಕುಪತ್ರಗಳನ್ನು ವಿತರಿಸಲಾಯಿತು. ಪ್ರಧಾನಮಂತ್ರಿ ಗರೀಬ್
ಕಲ್ಯಾಣ ಅನ್ನ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಪಡಿತರ
ವಿತರಿಸಲಾಯಿತು., 16 ಜನ ಈರುಳ್ಳಿ ಬೆಳೆಗಾರರಿಗೆ ಈರುಳ್ಳಿ ಶೇಖರಣಾ
ಘಟಕ ಮಂಜೂರಾತಿ ಪತ್ರ ನೀಡಲಾಯಿತು. ಅಲ್ಲದೆ ಮಹಿಳಾ ಮತ್ತು
ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗರ್ಭಿಣಿಯರಿಗೆ
ವೇದಿಕೆಯಲ್ಲಿಯೇ ಸೀಮಂತ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ
ಪ್ರೇಮಲೀಲಾ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ
ವಿಜಯಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ
ಕೌಸರ್, ತಹಸಿಲ್ದಾರ್ ಸಂತೋಷ್‍ಕುಮಾರ್, ತಾ.ಪಂ ಇ.ಒ
ನರಸಿಂಹಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ, ತಾಲ್ಲೂಕು
ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರುಗಳು
ಉಪಸ್ಥಿತರಿದ್ದರು.
ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಜಿಲ್ಲಾಧಿಕಾರಿ
ಮಹಾಂತೇಶ್ ಬೀಳಗಿ ನೇತೃತ್ವದ ಅಧಿಕಾರಿಗಳ ತಂಡಕ್ಕೆ
ಗ್ರಾಮದಲ್ಲಿ 101 ಪೂರ್ಣಕುಂಭ ಹೊತ್ತ ಮಹಿಳೆಯರು, ಕಹಳೆ
ವಾದನ, ಡೊಳ್ಳುವಾದನದ ಸಹಿತ ವೈಭವದ ಸ್ವಾಗತ ಕೋರಿದರು,
ಅಲ್ಲದೆ ಎತ್ತಿನಗಾಡಿಯಲ್ಲಿ ಅಧಿಕಾರಿಗಳ ಮೆರವಣಿಗೆ ಸಾಗಿಬಂದಿತು. ವಿವಿಧ
ಜಿಲ್ಲೆಗಳಿಂದ ಆಗಮಿಸಿದ್ದ ಕಲಾತಂಡಗಳು ಮೆರವಣಿಗೆಯಲ್ಲಿ
ಪಾಲ್ಗೊಂಡಿದ್ದವು. ಬಳಿಕ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ
ವಿವಿಧ ಅಧಿಕಾರಿಗಳು ಗ್ರಾಮದ ವಿವಿಧೆಡೆ ಭೇಟಿ ನೀಡಿ ಜನರ
ಅಹವಾಲುಗಳನ್ನು ಆಲಿಸಿದರು.
 ಗ್ರಾಮದ ಸುನಂದಮ್ಮ, ಲಲಿತಮ್ಮ, ಮಾರಕ್ಕ ಎಂಬುವವರ
ಮನೆಗೆ ಭೇಟಿ ನೀಡಿ, ಸರ್ಕಾರದ ಸೌಲಭ್ಯಗಳಾದ ಪಡಿತರ, ವೃದ್ಧಾಪ್ಯ
ವೇತನ, ಕುಡಿಯುವ ನೀರು, ವಿಧವಾ ವೇತನ ಕುರಿತು ಮಾಹಿತಿ
ಪಡೆದರು, ಸ್ಥಳದಲ್ಲೆಯಿದ್ದ ಗ್ರಾಮ ಲೆಕ್ಕಾಧಿಕಾರಿಗೆ
ಇದುವರೆಗೂ ಸೌಲಭ್ಯ ಪಡೆಯದ ಅರ್ಹರನ್ನು ಗುರುತಿಸಿ
ಕಂದಾಯ ಇಲಾಖೆಯ ಸೌಲಭ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳು
ಸೂಚಿಸಿದರು.
     ಗ್ರಾಮದ ಮತ್ತೋರ್ವ ನಿವಾಸಿ ಅನಸೂಯಮ್ಮ ಅವರ ಮನೆಗೆ
ಭೇಟಿ ನೀಡಿ, ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ
ಕೆಲಸಕ್ಕೆ ಸೇರಿ ಪ್ರತಿದಿನ ರೂ. 309  ಕೂಲಿ ಪಡೆದು ಯೋಜನೆಯ
ಸದುಪಯೋಗ ಪಡೆದುಕೊಳ್ಳಿ ಎಂದು ಜಿಲ್ಲಾ ಪಂಚಾಯಿತ್ ಸಿಇಒ ಸಲಹೆ
ನೀಡಿದರು.
ಗ್ರಾಮದ ಪರಿಶಿಷ್ಟರ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ 
ಕಾಲೋನಿಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನ
ಶಿಥಲಗೊಂಡಿದ್ದು ನೂತನ ಸಮುದಾಯ ಭವನ ನಿರ್ಮಿಸಿ
ಕೊಡುವಂತೆ ಕಾಲೋನಿಯ ಮುಖಂಡರು ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಹಳೆಯ ಸಮುದಾಯ ಭವನವನ್ನು
ದುರಸ್ತಿಗೊಳಿಸಲಾಗುವುದು. ಅಗತ್ಯವಿದ್ದರೆ ಶಾಸಕರೊಂದಿಗೆ
ಚರ್ಚಿಸಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಕ್ರಮ
ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *