ದಾವಣಗೆರೆ: ನ್ಯಾ|| ನಾಗಮೋಹನ್ ದಾಸ್ ಅವರು ಪರಿಶಿಷ್ಟ ಪಂಗಡಗಳ ಕುರಿತು ನೀಡಿರುವ ವರದಿಯನ್ನು ಶೀಘ್ರದಲ್ಲೇ ಜಾರಿಗೆ ತರುವಂತೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಬೆಂಗಳೂರಿನಲ್ಲಿ ಹಲವು ದಿನಗಳಿಂದ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿರುವ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳ ಅಮರಣಾಂತ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿ ಅವರು ಮಾತನಾಡಿದರು.

ಕಳೆದ 2-3 ವರ್ಷಗಳ ಹಿಂದೆಯೇ ನ್ಯಾ|| ನಾಗಮೋಹನ್ ದಾಸ್ ಅವರು ರಾಜ್ಯ ಸರ್ಕಾರಕ್ಕೆ ವರದಿ ನೀಡಿದ್ದರೂ ಸಹ ಬಿಜೆಪಿಯವರಿಗೆ ಇಚ್ಚಾಶಕ್ತಿ ಕೊರತೆಯಿಂದಲೋ ಅಥವಾ ಪರಿಶಿಷ್ಟ ಪಂಗಡಗಳ ಬಗೆಗಿನ ತಾತ್ಸಾರ ಮನೋಭಾವದಿಂದಲೋ ವರದಿಯನ್ನು ಜಾರಿಗೆ ತರಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ನ್ಯಾ|| ನಾಗಮೋಹನ್ ದಾಸ್ ವರದಿಯನ್ನು ಜಾರಿಗೆ ತರುವಂತೆ ಶ್ರೀಗಳು ಹಲವು ದಿನಗಳಿಂದ ಅಮರಣಾಂತ ಸತ್ಯಾಗ್ರಹ ನಡೆಸುತ್ತಿದ್ದರೂ ಸಹ ಸರ್ಕಾರ ಕಂಡುಕಾಣದಂತೆ ಇರುವುದನ್ನು ನೋಡಿದರೆ ಪರಿಶಿಷ್ಟ ಪಂಗಡಗಳ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ತಾತ್ಸಾರ ಮನೋಭಾವನೇ ಇದೆ ಎಂಬುದು ತೋರಿಸುತ್ತಿದೆ. ಸ್ವಾಮೀಜಿಯವರು ಕೇವಲ ತಮಗೆ ಮಾತ್ರ ಮೀಸಲಾತಿ ಕೇಳುತ್ತಿಲ್ಲ. ರಾಜ್ಯದ ಉದ್ದಗಲ್ಲಕ್ಕೂ ಇರುವ ವಾಲ್ಮೀಕಿ ಸಮಾಜ ಸೇರಿದಂತೆ ಪರಿಶಿಷ್ಟ ಪಂಗಡಗಳ ವಿವಿಧ ಸಮಾಜಕ್ಕೆ ಮೀಸಲಾತಿಗೆ ಆಗ್ರಹಿಸುತ್ತಿದ್ದು, ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಓಬಿಸಿ ಸೇರಿದಂತೆ ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿತ್ತು. ಆದರೆ ಇಂದು ಬಿಜೆಪಿ ಸರ್ಕಾರ ಜಾತಿ-ಧರ್ಮಗಳ ಮಧ್ಯೆ ವಿಷಬೀಜ ಬಿತ್ತಿ ಸಾಮರಸ್ಯ ಕದಡುತ್ತಿದ್ದು, ಇದರಿಂದ ಭವಿಷ್ಯದಲ್ಲಿ ರಾಜ್ಯ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು ಪರಿಶಿಷ್ಟ ಪಂಗಡಗಳ ಸಮುದಾಯದ ಎಲ್ಲಾ ಸಮಾಜಗಳು ಹೋರಾಟ ನಡೆಸಿ ತಮ್ಮ ಹಕ್ಕನ್ನು ಪಡೆಯಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರುಗಳಾದ ಆರ್.ಎಸ್.ಶೇಖರಪ್ಪ, ಗಣೇಶ ಹುಲ್ಮನಿ, ತರಕಾರಿ ಚಂದ್ರಪ್ಪ, ಎಸ್.ಎನ್.ತಿಪ್ಪೇಸ್ವಾಮಿ, ಬಸಪ್ಪ, ಸಿಮೇಎಣ್ಣೆ ಮಲ್ಲೇಶ್, ನರಸಿಂಹ, ಪಾಲಿಕೆ ಸದಸ್ಯರುಗಳಾದ ವಿನಾಯಕ ಪೈಲ್ವಾನ್, ಶಾಮನೂರು ಕಲ್ಲಳ್ಳಿ ನಾಗರಾಜ್,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್, ಸದಸ್ಯ ಎ.ನಾಗರಾಜ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್, ಇಟ್ಟಿಗುಡಿ ಮಂಜುನಾಥ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *