ದಾವಣಗೆರೆ ನಗರದಲ್ಲಿ ಉತ್ತಮ ರೀತಿಯ ಸೌಹಾರ್ದ
ವಾತಾವರಣವಿದ್ದು, ಪದ್ದತಿಯಂತೆ ಹಬ್ಬಗಳ ಸೌಹಾರ್ದ ಸಭೆ
ನಡೆಸಲಾಗುತ್ತದೆ. ಎಲ್ಲಾ ಧರ್ಮ ಕೋಮುಗಳ ಮುಖಂಡರು
ಪ್ರತಿ ಹಬ್ಬಗಳಲ್ಲಿ ತಾವೇ ಮುಂದೆ ನಿಂತು ಹಬ್ಬಗಳ ಯಶಸ್ಸಿಗೆ
ಕಾರಣರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್
ಹೇಳಿದರು.
ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಲ್ಲಿ ಗುರುವಾರ ನಡೆದ
ಬಸವ ಜಯಂತಿ, ರಂಜಾನ್,  ಷಬ್-ಎ-ಖಾದರ್ ಹಬ್ಬಗಳ ನಾಗರಿಕ ಸೌಹಾರ್ದ
ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಹಬ್ಬಗಳು
ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಇಲಾಖೆಯಿಂದ ಬಂದೋಬಸ್ತ್
ವ್ಯವಸ್ಥೆ ಮಾಡಲಾಗಿದ್ದು ಅಗತ್ಯವಿರುವ ಕಡೆಗಳಲ್ಲಿ ಸಿ.ಸಿ. ಕ್ಯಾಮರಾ
ಹಾಕಲಾಗಿದೆ. ರಂಜಾನ್ ಹಬ್ಬದ ಮುನ್ನಾ ದಿನ ಚಂದ್ರ ದರ್ಶನದ
ಮಾಹಿತಿಯನ್ನು ಬೇಗ ತಿಳಿಸಿದರೆ ಸಿದ್ದತೆ ಮಾಡಿಕೊಳ್ಳಲು
ಸಹಾಯವಾಗುತ್ತದೆ. ಹಾಗೂ ಬಸವ ಜಯಂತಿ ಮೆರವಣಿಗೆ ಸಾಗುವ
ಮಾಹಿತಿಯನ್ನು ಹಂಚಿಕೊಳ್ಳಿ, ಎರಡೂ ಹಬ್ಬಗಳ ಆಚರಣೆಗೆ
ಪೊಲೀಸ್ ಇಲಾಖೆಯ ಸಹಕಾರವಿರಲಿದೆ ಎಂದರು.
ಮುಖಂಡರಾದ ಅಮಾನುಲ್ಲಾ ಖಾನ್ ಮಾತನಾಡಿ, ನಗರದ
ಮೂರು ಕಡೆ ಹಾಗೂ ಹೊರವಲಯದ ಎರಡು ಈದ್ಗಾಗಳಲ್ಲಿ
ನಮಾಜ್ ಮಾಡಲಾಗುತ್ತದೆ, ಆ ಸ್ಥಳಗಳಲ್ಲಿ ಮಹಾನಗರ ಪಾಲಿಕೆ
ವತಿಯಿಂದ ಕುಡಿಯುವ ನೀರು ಹಾಗೂ ಸ್ವಚ್ಚತೆ ಆಗಲಿ ಎಂದರು.
ನಗರದಲ್ಲಿ ಎಲ್ಲಾ ಕೋಮಿನವರು ಸಹೋದರರಂತೆ ಇದ್ದೇವೆ,
ರಂಜಾನ್ ಪವಿತ್ರ ತಿಂಗಳಿನಲ್ಲಿ ದಾನಕ್ಕೆ ವಿಶೇಷ ಮಹತ್ವವಿದ್ದು
ದುಡಿಮೆಯ 2.5 ರಷ್ಟು ದಾನ ಮಾಡಲು ಆದೇಶವಿದೆ, ಒಪ್ಪೊತ್ತಿನ
ಊಟಕ್ಕೂ ಕಷ್ಟಪಡುವವರ ಕಷ್ಟ ಎಲ್ಲರಿಗೂ ಅರ್ಥವಾಗಲಿ ಎಂದು ಈ
ಹಬ್ಬದಲ್ಲಿ ಉಪವಾಸ ಆಚರಿಸಲಾಗುತ್ತದೆ ಹಾಗಾಗಿ ಹಬ್ಬಗಳನ್ನ
ಸೌಹಾರ್ದತೆಯಿಂದ ಆಚರಿಸೋಣ ಎಂದರು.
ಮುಖಂಡರಾದ ಚ.ನ ಶಂಕರನಾರಾಯಣ ಅವರು ಮಾತನಾಡಿ,
ದೇಶದ ಸಂವಿಧಾನಕ್ಕೆ ಗೌರವ ಕೊಡುವವರು ನಾವಾದರೆ ಎಲ್ಲಾ
ಹಬ್ಬಗಳು ಸೌಹಾರ್ದತೆಯಿಂದಲೇ ಆಗುತ್ತವೆ, ಮಠಗಳಲ್ಲಿ ಇಪ್ತಾರ್
ಕೂಟಗಳನ್ನು ಆಯೋಜಿಸುವಂತೆ, ಮುಸ್ಲಿಂ ಮುಖಂಡರುಗಳು
ಹಿಂದೂಗಳಿಗೆ ಇಪ್ತಾರ್ ಕೂಟಗಳನ್ನು ಆಯೋಜಿಸಿದರೆ ಮತ್ತಷ್ಟು
ಸೌಹಾರ್ದತೆ ಬೆಳೆಯುತ್ತದೆಂದರು.
ಮುಖಂಡರಾದ ಅಯೂಬ್ ಪೈಲ್ವಾನ್ ಮಾತನಾಡಿ, ರಂಜಾನ್ ಹಬ್ಬ
ವರ್ಷಪೂರ್ತಿ ಮಾಡಿದ ಪಾಪಗಳನ್ನು ತೊಳೆದುಕೊಳ್ಳುವ ಹಬ್ಬ,

ಫಬ್ರವರಿ 1 ನೇ ತಾರೀಖಿನಂದು ತಂಜೀಮಲ್ ಸಮಿತಿ ವತಿಯಿಂದ ಇಫ್ತಾರ್
ಕೂಟವನ್ನು ಆಯೋಜಿಸಿದ್ದು ಹಿಂದೂ ಭಾಂಧವರು ಬಾಗವಹಿಸಲು
ಮನವಿ ಮಾಡಿದರು ಹಾಗೂ ಎಲ್ಲಾ ಹಬ್ಬಗಳನ್ನು ಪರಸ್ಪರ
ಪ್ರೀತಿಯಿಂದ ಆಚರಿಸೋಣ ಎಂದರು.
ಮುಖಂಡರಾದ ಬಾಡದ ಆನಂದರಾಜು ಮಾತನಾಡಿ, ಇತ್ತೀಚಿಗೆ
ಮಾಧ್ಯಮಗಳಲ್ಲಿ ಬರುವ ವರದಿಗಳನ್ನು ನೋಡಿದರೆ ದೇಶದಲ್ಲಿ
ಸೌಹಾರ್ದ ವಾತವರಣ ಇದೆಯೇ ಅನ್ನಿಸುತ್ತದೆ, ಆದರೆ ಪೊಲೀಸ್
ಇಲಾಖೆಯ ದಕ್ಷತೆಯ ಕಾರ್ಯದಿಂದ ಜಿಲ್ಲೆಯಲ್ಲಿ ಉತ್ತಮ ಸೌಹಾರ್ದ
ವಾತಾವರಣವಿದೆ. ಎಲ್ಲಾ ಕೋಮುಗಳಲ್ಲಿಯೂ ಕಿಡಿಗೇಡಿಗಳಿದ್ದಾರೆ.
ಅಂತಹವರನ್ನ ಪೊಲೀಸ್ ಇಲಾಖೆ ನೋಡಿಕೊಳ್ಳುತ್ತದೆ. ಹಾಗಾಗಿ
ಎಲ್ಲರೂ ಸಂತೋಷದಿಂದ ಹಬ್ಬಗಳನ್ನು ಆಚರಿಸಬಹುದೆಂದರು.
ಮುಖಂಡರಾದ ಗೌಡ್ರು ಚನ್ನಬಸಪ್ಪ ಮಾತನಾಡಿ, ಇಂದು ಜನ
ಪ್ರಜ್ಗಾವಂತರಾಗಿದ್ದಾರೆ, ಯಾವುದೇ ತೊಂದರೆ ಆದರೆ ನಮಗೂ
ಆಗುತ್ತದೆ ಎಂದು ಗೊತ್ತಾಗಿದೆ ನಾವುಗಳು ನಮ್ಮ ಮಕ್ಕಳಿಗೆ ತಿಳಿ
ಹೇಳಬೇಕೆಂದರು, ಹಬ್ಬಗಳ ಆಚರಣೆಗೆ ಪೊಲೀಸ್ ಇಲಾಖೆ ಹೆಚ್ಚಿನ
ಸಹಕಾರ ನೀಡುತ್ತಿದೆ ಎಂದರು.
ಉಪಮಹಾಪೌರರಾದ ಗಾಯಿತ್ರಿ ಬಾಯಿ ಮಾತನಾಡಿ, ಹಬ್ಬಗಳ
ಯಶಸ್ಸಿಗೆ ಮಹಾನಗರ ಪಾಲಿಕೆ ವತಿಯಿಂದ ನೀರು, ವಿದ್ಯುತ್, ಸ್ವಚ್ಚತೆ
ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.
ಮುಖಂಡರುಗಳಾದ ಮಹಮದ್ ಸಿರಾಜ್, ಅಬ್ದುಲ್ ಘನಿ,
ಮಾತನಾಡಿದರು
ಸಭೆಯಲ್ಲಿ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಮಹಾನಗರ
ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಸಿಪಿಐ ಗಜೇಂದ್ರಪ್ಪ,
ಡಿಹೆಚ್‍ಒ,ನಾಗರಾಜ ಹಾಗೂ ವಿವಿಧ ಸಮಾಜಗಳ ಮುಖಂಡರು ಹಾಗೂ
ಪೊಲೀಸ್ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *