ಹೊನ್ನಾಳಿ : ದಾರ್ಶನಿಕರ ಶರಣರ ವಿಚಾರವನ್ನು ವೇದಿಕೆಯಲ್ಲಿ ಜಯಂತಿಗಳಲ್ಲಿ ಮಾತನಾಡುವುದನ್ನು ಬಿಟ್ಟು ಜೀವನದಲ್ಲಿ ಅಳವಡಿಸಿಕೊಂಡು ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶುಕ್ರವಾರ ತಾಲ್ಲೂಕು ಆಡಳಿತ ಹಾಗೂ ಕುರುಬ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣ ಅಸಮಾನತೆಯ ವಿರುದ್ಧ ಹೋರಾಡಿದರು. ಅದೇ ರೀತಿ ಅನೇಕ ದಾರ್ಶನಿಕರು, ಸಮಾಜದ ಪರವಾಗಿ ಹೋರಾಡುವುದಕ್ಕಿಂತ ಹೆಚ್ಚಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು. ನನಗೆ ಸಮಾಜ ಏನು ಕೊಟ್ಟಿದೆ ಎನ್ನುವುದನ್ನು ಬಿಟ್ಟು ನಾವು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ಅರಿತು ನಡೆಯಬೇಕು ಎಂದರು. ಕನಕದಾಸರ ಜೀವನವೇ ಒಂದು ಹೋರಾಟವಾಗಿತ್ತು. ಅವರು ಕೇವಲ ಜಾತಿ ವಿರುದ್ಧ ಹೋರಾಟ ಮಾಡದೇ ಸಾಹಿತ್ಯ ಕ್ಷೇತ್ರದಲ್ಲೂ, ಸಾಕಷ್ಟು ಸುಧಾರಣೆ ತರುವ ಕೆಲಸ ಮಾಡಿದರು ಎಂದರು.
ಕುರುಬ ಸಮಾಜಕ್ಕೆ ಎಸ್.ಟಿ. ಮೀಸಲಾತಿ ಕೊಡುವ ವಿಚಾರದಲ್ಲಿ ನಾನೂ ಕೂಡಾ ಈ ಹಿಂದೆ ಸ್ವಾಮೀಜಿಗಳೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದೆ, ಈ ವಿಚಾರವಾಗಿ ನಾನು ಸಮಾಜದ ಪರವಾಗಿ ಇರುತ್ತೇನೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಹುಲ್ಲಮನಿ ತಿಮ್ಮಣ್ಣ ಮಾತನಾಡಿದರು. ತಹಶೀಲ್ದಾರ್ ಎಚ್.ಜೆ. ರಶ್ಮೀ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಕುರುಬ ಸಂಘದ ಅಧ್ಯಕ್ಷರಾದ ಎಂ.ಎಸ್. ಫಾಲಾಕ್ಷಪ್ಪ, ಅವಳಿ ತಾಲ್ಲೂಕು ಪ್ರದೇಶ ಕುರುಬರ ಸಂಘದ ಮತ್ತೋರ್ವ ಅಧ್ಯಕ್ಷ ಎಸ್.ಎಸ್. ಬೀರಪ್ಪ ಅವರು ಮಾತನಾಡಿದರು.

ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್ ಕನಕದಾಸರ ಜೀವನ ಚರಿತ್ರೆ ಕುರಿತು, ಶಿಕ್ಷಣ ಇಲಾಖೆಯ ಇಸಿಒ ತಿಪ್ಪೇಶ್ ಅವರು ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ರಂಗಪ್ಪ, ಉಪಾಧ್ಯಕ್ಷೆ ರಂಜಿತಾ ಚನ್ನಪ್ಪ, ತಾಲ್ಲೂಕು ಪ್ರದೇಶ ಕುರುಬರ ಸಂಘದ ಗೌರವಾಧ್ಯಕ್ಷರಾದ ದಿಡಗೂರು ಫಾಲಾಕ್ಷಪ್ಪ, ಗಾಳಿ ನಾಗರಾಜ್, ನೆಲಹೊನ್ನೆ ಮಂಜುನಾಥ್, ಹನುಮಂತಪ್ಪ, ಜಿ.ಪಂ. ಮಾಜಿ ಸದಸ್ಯ ಎಂ. ರಮೇಶ್, ತಾಲ್ಲೂಕು ಛಲವಾದಿ ಸಮಾಜದ ಮುಖಂಡ ನವೀನ್ ಬೆನಕಹಳ್ಳಿ ಇತರರು ಉಪಸ್ಥಿತರಿದ್ದರು.

ವೇದಿಕೆ ಸಮಾರಂಭಕ್ಕೂ ಮುನ್ನ ಕನಕದಾಸರ ಭಾವಚಿತ್ರ ಹಾಗೂ ಒನಕೆ ಓಬವ್ವ ಅವರ ಭಾವಚಿತ್ರಗಳನ್ನು ಅಲಂಕರಿಸಿ ಟ್ರ್ಯಾಕ್ಟರ್ ನಲ್ಲಿಟ್ಟು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ನೂರಾರು ಮುತ್ತೈದೆಯರು ತುಂಗಭದ್ರಾ ನದಿಯಿಂದ ಪೂಜೆ ಸಲ್ಲಿಸಿ ಕುಂಭಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆರುಂಡಿ ಗ್ರಾಮದ ಡೊಳ್ಳು ಕಲಾವಿದರು ವಿಶೇಷವಾಗಿ ಡೊಳ್ಳು ಬಾರಿಸುವ ಮೂಲಕ ಗಮನಸೆಳೆದರು.
ಅವಳಿ ತಾಲ್ಲೂಕಿನ ಕುರುಬ ಸಮಾಜದ ಅಧ್ಯಕ್ಷರಾದ ಎಸ್.ಎಸ್. ಬೀರಪ್ಪ, ಹೊನ್ನಾಳಿ ತಾಲ್ಲೂಕು ಅಧ್ಯಕ್ಷರಾದ ಎಂ.ಎಸ್. ಫಾಲಾಕ್ಷಪ್ಪ, ಕಾರ್ಯಾಧ್ಯಕ್ಷರಾದ ಎಚ್.ಎ. ಧರ್ಮಪ್ಪ, ಎಚ್.ಎ.ನರಸಿಂಹಪ್ಪ, ವಕೀಲರಾದ ದೇವಿಕುಮಾರ್, ಎಚ್.ಎ. ರಾಕೇಶ್, ನವೀನ್ ಇಂಚರ, ವಿನಯ್ ವಗ್ಗರ್, ಎಸ್. ಶ್ರೀನಿವಾಸ್, ಹಾಲುಮತ ಸಮಾಜದ ಅಧ್ಯಕ್ಷ ರಾಜು ಕಣಗಣ್ಣಾರ್, ಚಿನ್ನಪ್ಪ, ಕನಕ ಮಹಿಳಾ ವೇದಿಕೆಯ ಪಂಕಜಾ ಅರುಣ್‍ಕುಮಾರ್, ಹಾಲುಮತ ಸಮಾಜದ ರಾಜ್ಯ ಕಾರ್ಯದರ್ಶಿ ಸೌಮ್ಯ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು. ಮುಖಂಡರಾದ ಕತ್ತಿಗೆ ನಾಗರಾಜ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ನಗರದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕನಕದಾಸರ, ಒನಕೆ ಓಬವ್ವ ಅವರ ವೇಷಭೂಷಣ ತೊಟ್ಟು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *