ಹುಣಸಘಟ್ಟ: ದಾಸ ಸಾಹಿತ್ಯದ ಮೂಲಕ ಗಮನ ಸೆಳೆದು ಜೀವನ ಪಾಠವನ್ನು ಸಾರಿದವರು ಕನಕದಾಸರು ಎಂದು ಹೊಟ್ಯಾ ಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಸ್ವಾಮೀಜಿಯವರು ಹೇಳಿದರು.
ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಕುಳಗಟ್ಟೆ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಕುರುಬ ಸಮಾಜದ ವೀರ ಸಂಗೊಳ್ಳಿ ರಾಯಣ್ಣ ಹಾಗೂ ಯುವಸೇನೆ ಆಯೋಜಿಸಿದ ಕನಕದಾಸರ 535 ನೇ ಜಯಂತೋತ್ಸವದ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು ಜಾತಿ ಮತ ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಸಂತವರೇಣ್ಯರು ಕನಕದಾಸರು. ದಾಸ ಪರಂಪರೆಯ 50 ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು.15-16 ನೇ ಶತಮಾನ ಕನಕದಾಸರ ಜೀವಿತಾವಧಿಯ ಕಾಲಘಟ್ಟ. ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟವರು. ಅವರು ಕನ್ನಡ ಭಾಷೆಯ ಕೀರ್ತನಾಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡಿಗೆ ನೀಡಿದರು. ಸಹಜ ಬದುಕು ಬಾಳಿದ ಕನಕದಾಸರು ಕೀರ್ತನಕಾರರಾಗಿ, ತತ್ವಜ್ಞಾನಿಗಳಾಗಿ, ಸಂತ ರಾಗಿ, ದಾರ್ಶನಿಕರಾಗಿ, ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಗೆ ಅನನ್ಯ ಕೊಡುಗೆ ನೀಡಿದ್ದಾರೆ.


ಕನಕದಾಸರು ದಂಡನಾಯಕರಾಗಿದ್ದು ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿ ಭಕ್ತ ದಾಸರಾದರು. ಎಂಬ ಐತಿಹ್ಯವಿದೆ. ಕಾಗಿನೆಲೆಯ ಅಧಿಕಶವನ ಭಕ್ತರಾದ ಕನಕದಾಸರು ಶ್ರೀ ವ್ಯಾಸರಾಯರ ನೆಚ್ಚಿನ ಶಿಷ್ಯರಾಗಿದ್ದರು. ಮದ್ವ, ತತ್ವಶಾಸ್ತ್ರವನ್ನು ಕಲಿತು ಅದನ್ನು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣ ಭಗವಂತನ ಅನನ್ಯ ಭಕ್ತರು ಹೌದು ಎನ್ನುವುದಕ್ಕೆ ಉಡುಪಿ ಶ್ರೀ ಕೃಷ್ಣ ಕನಕದಾಸರಿಗೆ ಕನಕನ ಕಿಂಡಿಯ ಮೂಲಕ ದರ್ಶನವಿತ್ತು ಆ ಕನಕನ ಕಿಂಡಿಯನ್ನು ಈಗಲೂ ನೋಡ ಬಹುದಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಕುರುಬ ಸಮಾಜದ ಮುತ್ತೈದೆಯರು ಪಂಚ ಕಳಸದಾರತಿ, ಕುಂಭಗಳನ್ನು ಹೊತ್ತು ಗಿರಿ ಸಿದ್ದೇಶ್ವರ ಸ್ವಾಮೀಜಿ ಅವರನ್ನು ಜಾನಪದ ಕಲಾ ಮೇಳಗಳೊಂದಿಗೆ ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಿ ನಂತರ ವೀರ ಸಂಗೊಳ್ಳಿ ರಾಯಣ್ಣ, ಕನಕದಾಸರ ದೊಡ್ಡ ದೊಡ್ಡ ಭಾವಚಿತ್ರವನ್ನು ಟ್ರ್ಯಾಕ್ಟರ್ ವಾಹನಗಳ ಮೇಲೆ ಪ್ರತಿಷ್ಠಾಪಿಸಿ ಯುವಕರು ಡಿಜೆ ಸೌಂಡಿಗೆ ಹೆಜ್ಜೆ ಹಾಕುತ್ತಾ ಗ್ರಾಮದ ರಾಜಾಬೀದಿಗಳಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮಾಡಿದರು.

Leave a Reply

Your email address will not be published. Required fields are marked *