ನ್ಯಾಮತಿ: ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಚೀಲೂರು ಸಹಯೋಗದಲ್ಲಿ ಏರ್ಪಡಿಸಿದ್ದ ದಿಟ್ಟ ಸ್ತ್ರೀವಾದಿ ಅಕ್ಕಮಹಾದೇವಿ ಜೀವನ ಸಾತ್ವಿಕ ಕೊಡುಗೆ ಕುರಿತ ಕಾರ್ಯಕ್ರಮ ಚೀಲೂರು ಅಕ್ಕನ ಬಳಗದ ಸಮುದಾಯ ಭವನದಲ್ಲಿ ನೆರವೇರಿತು.
ಕಿರಿಯರಿಂದ ಹಿಡಿದು ಹಿರಿಯ ಜೀವಿಗಳವರೆಗೆ ಎಲ್ಲರೂ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ತೊಡಸಿಕೊಂಡಿದ್ದು ವಿಶೇಷ.
ವಚನ ಗಾಯನ, ವಚನ ಪಠಣ, ವ್ಯಾಖ್ಯಾನ, ಅಕ್ಕಮಹಾದೇವಿಯ ವೇಷಭೂಷಣ ಹಾಗೂ ಅಕ್ಕಮದೇವಿಯ ಜೀವನ ಸಾಧನೆ ಕುರಿತು ಆಧುನಿಕ ಅನುಭವ ಮಂಟಪದ ರೀತಿಯಲ್ಲಿ ಸರ್ವರೂ ಚಿಂತಿಸಿದ್ದು ಈ ಕಾರ್ಯಕ್ರಮದ ವಿಶೇಷ.

ದಾವಣಗೆರೆ ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ವಿನೋದ ಅಜಗಣ್ಣನವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಂಗ ಸಂಸ್ಥೆಯಾದ ಕದಳಿ ಮಹಿಳಾ ವೇದಿಕೆ ದಾವಣಗೆರೆಯಲ್ಲಿ 2008 ರಂದು ಸ್ಥಾಪನೆಯಾಯಿತು. ಅನುಭವಾಮೃತ ಜ್ಯೋತಿಯಾಗಿ ಬೆಳಗಿ ವೈಚಾರಿಕ ಸಂದೇಶ ಸಾರಿದ ಸ್ತ್ರೀ ಕುಲದ ಅನಘ್ರ್ಯ ರತ್ನ ಕನ್ನಡದ ಪ್ರಪ್ರಥಮ ಮಹಿಳಾ ಕವಯತ್ರಿ, ಭಕ್ತಿ – ಜ್ಞಾನ – ವೈರಾಗ್ಯ ನಿಧಿ, ಶಿವಶರಣೆ ಅಕ್ಕಮಹಾದೇವಿಯ ಐಕ್ಯ ಸ್ಥಳ ಕದಳಿ ಕ್ಷೇತ್ರದ ಕುರುವುಹಾಗಿ ಈ ವೇದಿಕೆಗೆ ಕದಳಿ ವೇದಿಕೆ ಎಂದು ಹೆಸರಿಡಲಾಗಿದೆ.
ಸಂಸ್ಥಾಪಕ ಅಧ್ಯಕ್ಷರಾದಿಯಾಗಿ ಎಲ್ಲಾ ಅಧ್ಯಕ್ಷರ ಶಿಸ್ತು ಮತ್ತು ಸಮಯೋಚಿತ ಕ್ರಿಯಾಶೀಲತೆಯೊಂದಿಗೆ ಭದ್ರ ಬುನಾದಿ ಹಾಕಿ ಉತ್ತಮವಾದ ಹಾದಿಯಲ್ಲಿ ಕೊಂಡೊಯ್ದಿದ್ದಾರೆ. ತಮ್ಮ ತನು ಮನ ಧನದಿಂದ ಸೇವೆಯನ್ನು ಮಾಡಿ ಕದಳಿ ವೇದಿಕೆಯನ್ನು ಮುನ್ನಡೆಸಿದ್ದಾರೆ.
ವೇದಿಕೆಯಲ್ಲಿ ಜಾತಿ ಮತ ವಯೋಮಾನ ಭೇದವಿಲ್ಲದೆ ದಾವಣಗೆರೆಯ ವಿವಿಧ ಭಾಗಗಳಲ್ಲಿ 600 ಕ್ಕೂ ಹೆಚ್ಚು ಸದಸ್ಯರು ಹೊಂದಿದ್ದಾರೆ, 120ಕ್ಕೂ ಹೆಚ್ಚು ವಚನ ಗಾಯನವನ್ನು ಕಲಿಯುತ್ತಿದ್ದಾರೆ. 12ನೇ ಶತಮಾನದ ಶರಣರ ಪರಂಪರೆ ಸಂಸ್ಕøತಿ ಜೀವನ ಚರಿತ್ರೆಯನ್ನು ತಿಳಿಸುವುದು ಮಾನವೀಯ ಮೌಲ್ಯಗಳೇ ತುಂಬಿದ ವಚನ ಸಾಹಿತ್ಯವನ್ನು ಇಂದಿನ ಜನಾಂಗಕ್ಕೆ ಪರಿಚಯಿಸುವುದು ವೇದಿಕೆಯ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಪ್ರತಿ ತಿಂಗಳು ಕಮ್ಮಟಗಳನ್ನು ಶಾಲಾ-ಕಾಲೇಜುಗಳಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮಹಿಳೆಯರಿಗೆ ಸಂಬಂಧಿತ ಸ್ಪರ್ಧೆಗಳನ್ನು ಮತ್ತು ಉಪನ್ಯಾಸಗಳನ್ನು ಏರ್ಪಡಿಸಿ ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದೇವೆ. ವಚನ ಕಂಠಪಾಠ, ವಚನ ರಸಪ್ರಶ್ನೆ, ವಚನ ಲಿಖಿತ ಸ್ಪರ್ಧೆ, ವಚನ ಪ್ರಥಮಾಕ್ಷರಿ, ವಚನ ವಾಚನ ಮತ್ತು ಭಾವಾರ್ಥ ಹೇಳುವುದು ವಚನ ರೂಪಕ ವಚನ ನೃತ್ಯ ಪ್ರಬಂಧ ಸ್ಪರ್ಧೆ ಹೀಗೆ ಶರಣ ಸಾಹಿತ್ಯ ಮತ್ತು ವಚನ ಪ್ರಚಾರಕ್ಕೆ ನಿರಂತರ ಪ್ರಯತ್ನವನ್ನು ಕದಳಿ ವೇದಿಕೆ ಮಾಡುತ್ತದೆ. ನಾವೆಲ್ಲರೂ ಶರಣರ ತತ್ವಗಳನ್ನು ಪಾಲಿಸುತ್ತಾ ಕಾಯಕವೇ ಕೈಲಾಸ ವೆಂದು ನಂಬಿ ಅರಿವು ಆಚಾರ ವೈಚಾರಿಕತೆ ದಾಸೋಹ ಭಾವನೆಗಳನ್ನು ಅಳವಡಿಸಿಕೊಂಡು ಪ್ರಗತಿಪಥದಲ್ಲಿ ಸಾಗೋಣ, ವಚನ ಸಾಹಿತ್ಯವನ್ನು ಉಳಿಸಿ ಬೆಳೆಸುವದೋಸ್ಕರ ವಚನ ಸಂಕ್ರಾಂತಿ ಎಂಬ ಕಾರ್ಯಕ್ರಮ ಔಚಿತ್ಯಪೂರ್ಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಯಿತು ಎಂದು ತಿಳಿಸಿದರು.

ಈ ಕಾರ್ಯಕ್ರಮ ದಿಟ್ಟ ಸ್ತ್ರೀವಾದಿ ಅಕ್ಕಮಹಾದೇವಿ ಎಂಬ ವಿಷಯವಾಗಿ ಡಾ. ಬಸವರಾಜಪ್ಪ ಶಿಕ್ಷಣ ಸಂಯೋಜಕರು ಶಿವಮೊಗ್ಗ ಇವರು ನಂತರ ಮಾತನಾಡಿ ಅಕ್ಕನ ಪ್ರಾರಂಭದ ಬಾಲ್ಯದ ಜೀವನದಿಂದ ಹಿಡಿದು ಮುಕ್ತಿಯ ವರೆಗಿನ ಜೀವನ ಘಟನೆಗಳನ್ನು ವಿವರಿಸಿದರು.
ಶಿವಮೊಗ್ಗ ಜಿಲ್ಲೆಯ ಉಡುತಡೆಯಿಂದ ಕಲ್ಯಾಣದವರಿಗಿನ ಪಯಣ, ಕಲ್ಯಾಣದ ಅನುಭವ ಮಂಟಪದಲ್ಲಿ ಅಕ್ಕನ ಸತ್ವ ಪರೀಕ್ಷೆಯ ಘಟನೆಗಳನ್ನು ಸವಿಸ್ತಾರವಾಗಿ ವಿವರಿಸಿದರು. ಅಲ್ಲಮಪ್ರಭುವಿನ ಆಣತಿಯಂತೆ ಶ್ರೀಶೈಲ ಕದಳಿ ವನದಲ್ಲಿ ಐಕ್ಯಳಾದ ಜೀವನ ಘಟನೆಗಳನ್ನು ವಚನ ಹಾಗೂ ಶೂನ್ಯ ಸಂಪಾದನೆಯ ಸಂದರ್ಭಗಳೊಂದಿಗೆ ಅರ್ಥಪೂರ್ಣವಾಗಿ ವಿವರಿಸಿದರು.
ಶರಣ ಸತಿ ಲಿಂಗಪತಿ ಭಾವದ ಅಕ್ಕಮಹಾದೇವಿಯ ವಚನಗಳೊಂದಿಗೆ ಅನುಭವ ಮಂಟಪದಲ್ಲಿ ಅಕ್ಕನ ಕುರಿತಾದ ಲೌಕಿಕ ಗಂಡನ ಪರಿತ್ಯಜನೆ, ದಿಗಂಬರತ್ವದ ಪ್ರತಿಪಾದನೆಯ ಮೊನಚಾದ ಸೂಕ್ಷ್ಮ ವಿಚಾರಗಳನ್ನು ಪ್ರಶ್ನೋತ್ತರದ ರೀತಿಯಲ್ಲಿ ಅಲ್ಲಮ ಪ್ರಭು, ಬಸವಣ್ಣ, ಚನ್ನಬಸವಣ್ಣ, ಸಿದ್ದರಾಮ ಇವರೊಂದಿಗೆನ ಸಂವಾದ ಅಕ್ಕನ ಸತ್ವ ಪರೀಕ್ಷೆಯ ಜೊತೆಗೆ ಸಮಾಜಕ್ಕೂ ಸಹ ದಿವ್ಯ ಸಂದೇಶವನ್ನು ಕೊಡುವ ಈ ಪ್ರಸಂಗ ನಾಟಕೀಯ ರೀತಿಯಲ್ಲಿ ವಿವರಿಸಿದ್ದು ವಿಶೇಷವಾಗಿತ್ತು.
ವಚನಕಾರರು ಸ್ತ್ರೀ ಕುಲಕ್ಕೆ ವಿಶೇಷ ಮಾನ್ಯತೆಯನ್ನು ನೀಡಿ ಹೆಣ್ಣು ಮಾಯೆಯಲ್ಲ, ರಕ್ಕಸಿಯಲ್ಲ, ಸಾಕ್ಷಾತ್ ಕಪಿಲಸಿದ್ಧ ಮಲ್ಲಿಕಾರ್ಜುನ ಎನ್ನುವವರೆಗಿನ ಉತ್ತುಂಗ ಸ್ಥಿತಿಯನ್ನು ವಿಮರ್ಷಿಸಲಾಯಿತು.
ಸ್ತ್ರೀ ಸಮಾನತೆ, ಕುಲದ ಸೂತಕದ ಛಾಯೆಯಿಂದ ಸ್ತ್ರೀಯನ್ನು ವಿಮುಕ್ತಿಗೊಳಿಸಿದ್ದು ವಚನಕಾರರ ಹೆಗ್ಗಳಿಕೆ. ವಚನ ಸಂವಿಧಾನ, ವಚನ ಜೀವನ ಧರ್ಮವೇ ಆತ್ಯಂತಿಕವಾಗಿ ಸಮಾಜಕ್ಕೆ ಆದರ್ಶವಾದದ್ದು ಎಂಬ ಪರಿಕಲ್ಪನೆಯನ್ನು ವಿವರಿಸಿದರು. ಈ ರೀತಿ ಅರ್ಥಪೂರ್ಣ ಕಾರ್ಯಕ್ರಮಗಳು ಪ್ರತಿವಾರ, ಪ್ರತಿ ತಿಂಗಳು ನಡೆದು ವಚನಕಾರರ ಬದುಕಿನೊಂದಿಗೆ ನಮ್ಮ ಬದುಕು ಮೇಳೈಸಿದರೆ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ. ನಮ್ಮ ನೆಲದಲ್ಲೇ ಆಗಿ ಹೋದ ಈ ವಚನ ಕ್ರಾಂತಿಯ ಅನುಭಾವದ ಬುತ್ತಿಯನ್ನು ಮುಂದಿನ ಪೀಳಿಗೆಗೂ ಸಾಗಿಸುವ ಹೊಣೆ ನಮ್ಮ ಮೇಲಿದೆ ಎಂಬ ಜವಾಬ್ದಾರಿಯ ಮಾತುಗಳೊಂದಿಗೆ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಚೀಲೂರು ಅಕ್ಕನ ಬಳಗದ ಸಂಸ್ಥಾಪಕÀ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಕಾಂತಪ್ಪ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಶಿವಯೋಗಿ ಎಂ ಬಿ ಪ್ರಾಸ್ತಾವಿಕ ಮಾತನಾಡಿದರು.
ಶ್ರೀಮತಿ ರತ್ನಮ್ಮ ಸಂಗಪ್ಪ, ಶ್ರೀ ಬಸವರಾಜಪ್ಪ ಹುಲಿಕೆರೆ ಉಪಸ್ಥಿತರಿದ್ದರು. ವಚನ ಪ್ರಾರ್ಥನೆ: ಅಕ್ಕನ ಬಳಗದ ಸದಸ್ಯರಿಂದ ಮಾಡಲಾಯಿತು. ಸ್ವಾಗತವನ್ನು ಶ್ರೀಮತಿ ಲಕ್ಷ್ಮೀ ಸಂತೋಷ ನಡೆಸಿಕೊಟ್ಟರು. ಶರಣು ಸಮರ್ಪಣೆಯನ್ನು ಶ್ರೀಮತಿ ಮಾನಸ ಗಿರೀಶ್ ನಿರ್ವಹಿಸಿದರು. ನಿರೂಪಣೆಯನ್ನು ಶ್ರೀಮತಿ ಸವಿತಾ ವಾದಿರಾಜ್ ನುಡಿದರು.

Leave a Reply

Your email address will not be published. Required fields are marked *