ಸಾಗರ: ನಾವೆಲ್ಲರೂ ಒಂದಾಗಿ ಊರು ಕಟ್ಟುವ ಕಾಯಕದಲ್ಲಿ ನಿರತರಾಗೋಣ, ಒಂದೇ ಸಮುದಾಯ, ಒಂದೇ ದೇಶದವರಾಗಿ, ಒಂದಾಗಿ ಎಲ್ಲರೂ ಸಾಗರವನ್ನು ಬೆಳೆಸೋಣ. ಸಾಗರದ ಶ್ರೀಮಂತಿಕೆ ಹೆಚ್ಚಿಸುವ ಕೆಲಸ ಜಾತ್ರೆಯಿಂದ ಆಗಬೇಕು ಎಂದು ಸಾಹಿತಿ ಡಾ. ನಾ.ಡಿಸೋಜಾ ಹೇಳಿದರು.
ಸಾಗರ ನಗರಸಭೆ ಆವರಣದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆ ಸಮಿತಿಯಿಂದ ನಿರ್ಮಿಸಿದ್ದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಆಶಯ ನುಡಿಗಳನ್ನಾಡಿದರು.
ಸಾಗರ ಪಟ್ಟಣಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ವಾಣಿಜ್ಯ ಕೇಂದ್ರವಾಗಿ ಸಾಗರ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಧಾರ್ಮಿಕವಾಗಿ ಎಲ್ಲರನ್ನೂ ಒಂದುಗೂಡಿಸಿ ಸಾಗರದ ಶ್ರೀಮಂತಿಕೆ ವೃದ್ಧಿಸುವ ಕಾರ್ಯವನ್ನು ಎಲ್ಲ ಜನರು ಒಟ್ಟುಗೂಡಿ ಮಾಡಬೇಕಿದೆ ಎಂದು ತಿಳಿಸಿದರು.
ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಎಲ್ಲರ ಸಹಕಾರದಿಂದ ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ನಗರಸಭೆ, ತಾಲೂಕು ಆಡಳಿತ, ಪೊಲೀಸ್, ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರವೇ ಜಾತ್ರೆ ಯಶಸ್ವಿಗೆ ಕಾರಣ ಎಂದು ಹೇಳಿದರು.
ರೈತರು ದೇಶದ ಬೆನ್ನೆಲುಬು, ದೇಶ ಕಾಯುವ ಸೈನಿಕರೇ ಭಾರತದ ಶಕ್ತಿ. ರೈತರು ಹಾಗೂ ಯೋಧರ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸುತ್ತಿರುವುದು ಅಭಿನಂದನೀಯ ಕೆಲಸ ಎಂದು ತಿಳಿಸಿದರು.
ಸಾಗರದ ಶ್ರೀ ಮಾರಿಕಾಂಬಾ ಜಾತ್ರೆಗೆ ಪ್ರತಿ ದಿನವೂ ಒಂದು ಲಕ್ಷ ಜನರು ಬರುವ ನೀರಿಕ್ಷೆ ಇಟ್ಟುಕೊಂಡು ಎಲ್ಲ ಸಿದ್ಧತೆ ನಡೆಸಲಾಗಿತ್ತು. ಆದರೆ ನೀರಿಕ್ಷೆಗೂ ಮೀರಿ ಜನರು ಬಂದಿದ್ದು, 10 ದಿನಗಳಲ್ಲಿ 15 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜಾತ್ರೆಗೆ ಜನರು ಆಗಮಿಸಿದ್ದಾರೆ. ಊಟ, ವಸತಿ ವ್ಯವಸ್ಥೆ, ಸಂಚಾರ, ಸುರಕ್ಷತೆ, ಸ್ವಚ್ಛತೆ ಯಾವುದೇ ವಿಷಯದಲ್ಲೂ ತೊಂದರೆ ಆಗದಂತೆ ನಿಭಾಯಿಸಿದ ರೀತಿಗೆ ಎಲ್ಲರಿಗೂ ಧನ್ಯವಾದಗಳು ಎಂದರು.
ಜಾತ್ರಾ ಯಶಸ್ಸಿಗೆ ವಿವಿಧ ಸಮಿತಿಗಳ ಮುಖಾಂತರ ಆರ್ಥಿಕವಾಗಿ ಹಾಗೂ ಸೇವಾ ರೂಪದಲ್ಲಿ ಸಹಕರಿಸಿದ ಎಲ್ಲ ಸೇವಾಕರ್ತರಿಗೂ ಜಾತ್ರಾ ಸಮಿತಿಯಿಂದ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರಿಧರರಾವ್, ಖಜಾಂಚಿ ನಾಗೇಂದ್ರ ಕುಮುಟಾ, ಮಾಜಿ ಎಂಎಲ್‌ಸಿ ಫ್ರಫುಲ್ಲಾ ಮಧುಕರ್, ವಿ.ಟಿ.ಸ್ವಾಮಿ, ಉಪಾಧ್ಯಕ್ಷರು, ವಿವಿಧ ಸಮಿತಿಗಳ ಸಂಚಾಲಕರು, ಸಹ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು, ಕಚೇರಿ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.
ಕೋಟ್
ಮಲೆನಾಡಿನ ರೈತರು, ಮುಳುಗಡೆ ಸಂತ್ರಸ್ತರು ಜೀವ ವೈವಿಧ್ಯಮಯ, ಪರಿಸರ, ಅರಣ್ಯದ ಹೆಸರಿನಲ್ಲಿ ಕಾನೂನಿನ ಸಂಕೋಲೆಗಳಲ್ಲಿ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ರೈತರು, ಮುಳುಗಡೆ ಸಂತ್ರಸ್ತರ ಎಲ್ಲ ಕಷ್ಟಗಳು ದೂರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲು ಸಾಗರದ ಶ್ರೀ ಮಾರಿಕಾಂಬೆ ಎಲ್ಲರನ್ನು ಆಶೀರ್ವದಿಸಲಿ.
| ಹರತಾಳು ಹಾಲಪ್ಪ, ಸಾಗರ ಶಾಸಕ
ಫೋಟೊ
ಸಾಗರದ ನಗರಸಭೆ ಆವರಣದಲ್ಲಿ ಶ್ರೀ ಮಾರಿಕಾಂಬಾ ಜಾತ್ರಾ ಸಮಿತಿಯಿಂದ ನಿರ್ಮಿಸಿದ್ದ ಮಾರಿಕಾಂಬಾ ಕಲಾ ವೇದಿಕೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರನ್ನು ಸನ್ಮಾನಿಸಲಾಯಿತು.

  • ರವಿವರ್ಮ ಆರ್ಟ್ಸ್ ಸಂಸ್ಥೆಯವರು ಬಿಡಿಸಿದ ಚಿತ್ರಗಳು.
    ಬಾಕ್ಸ್
    ಮಾರಿಕಾಂಬಾ ಜಾತ್ರೆ ಸಂಪನ್ನ
    ಬುಧವಾರ ರಾತ್ರಿ ಶ್ರೀ ಮಾರಿಕಾಂಬ ದೇವಿಯನ್ನು ವೈಭವಯುತ ರಾಜಬೀದಿ ಉತ್ಸವದೊಂದಿಗೆ ವನಕ್ಕೆ ಬಿಡುವ ಕಾರ್ಯಕ್ರಮದ ಮೂಲಕ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯು ಸಂಪನ್ನಗೊಂಡಿತು.
    ಒಂಬತ್ತು ದಿನಗಳ ವಿಶೇಷ ಪೂಜಾ ವಿಧಿ ವಿಧಾನಗಳ ನಂತರ ಬುಧವಾರ ರಾತ್ರಿ ಶ್ರೀ ಮಾರಿಕಾಂಬಾ ಜಾತ್ರೆಯು ಮುಕ್ತಾಯಗೊಂಡಿದ್ದು, ಬುಧವಾರ ಮಧ್ಯರಾತ್ರಿ ನಂತರ ಶ್ರೀ ಮಾರಿಕಾಂಬಾ ದೇವಿಯ ಆಕರ್ಷಕ ಮೂರ್ತಿಯನ್ನು ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ವನಕ್ಕೆ ಬಿಡಲಾಯಿತು.
    ಮಾರಿಕಾಂಬೆಯನ್ನು ವನಕ್ಕೆ ಬಿಡುವ ರಾಜಬೀದಿ ಉತ್ಸವದಲ್ಲಿ ಡೊಳ್ಳು ತಂಡಗಳು, ವೇಷಭೂಷಣಗಳ ನೃತ್ಯ ಕಲಾವಿದರು, ವಿವಿಧ ವಾದ್ಯಗಳ ತಂಡದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಜನರು ಮಧ್ಯರಾತ್ರಿ ಆರಂಭಗೊಂಡ ಮೆರವಣಿಗೆಯಲ್ಲಿ ಪಾಲ್ಗೊಂಡರು.
    ಮೂರು ವರ್ಷಗಳ ಹಿಂದಿನ ಶ್ರೀ ಮಾರಿಕಾಂಬಾ ಜಾತ್ರೆಯು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ ಜಾತ್ರೆ ಆಗಿತ್ತು. ಆದರೆ ಈ ವರ್ಷ ನಡೆದ ಜಾತ್ರೆಯು ಎಲ್ಲ ಜಾತ್ರೆಗಳನ್ನು ಮೀರಿಸಿತ್ತು. ಹತ್ತು ದಿನದ ಜಾತ್ರೆಯಲ್ಲಿ 15-18 ಲಕ್ಷಕ್ಕೂ ಅಧಿಕ ಜನರು ಶ್ರೀ ಮಾರಿಕಾಂಬಾ ಜಾತ್ರೆಗೆ ಸಾಗರಕ್ಕೆ ಆಗಮಿಸಿದ್ದರು ಎಂದು ಅಂದಾಜಿಸಲಾಗಿದೆ. ಎಲ್ಲ ವ್ಯವಸ್ಥೆಯು ಅಚ್ಚುಕಟ್ಟಾಗಿ ಮಾಡಲಾಗಿತ್ತು.
    ನಗರಸಭೆ, ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಜಾತ್ರಾ ಸಮಿತಿ, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರ ಸಹಕಾರದಿಂದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರೆಯು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
    ಸಾಗರದ ನಗರಸಭೆ ಆವರಣದಲ್ಲಿ ಮಾರಿಕಾಂಬಾ ಕಲಾವೇದಿಕೆಯಲ್ಲಿ ಸಾಂಸ್ಕೃತಿಕ ಸಂಭ್ರಮದ ಸಮಾರೋಪ ನಡೆಯಿತು. ಸಾಗರದ ರವಿವರ್ಮ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳು ಬಿಡಿಸಿದ ಚಿತ್ರಗಳು ಎಲ್ಲರ ಗಮನ ಸೆಳೆದವು. ಸಾಗರ ಜೇನುಗೂಡು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ನಂತರ ಸುರೇಖಾ ಹೆಗ್ಡೆ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

Leave a Reply

Your email address will not be published. Required fields are marked *