ಸಾಮೂಹಿಕ ಹೊಣೆಗಾರಿಕೆಯಿಂದ ಮಾತ್ರ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಲು ಸಾಧ್ಯವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯ್ಕ ಅವರು ಹೇಳಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಂಗಳವಾರ ನಗರದ ಶ್ರೀ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ನಡೆದ ಬಾಲ ನ್ಯಾಯ ಕಾಯ್ದೆ ಮತ್ತು ಪೋಕ್ಸೊ ಕಾಯ್ದೆಯ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಬಾಲ ನ್ಯಾಯ ಕಾಯ್ದೆಯು ಅತ್ಯಂತ ಶಕ್ತಿಶಾಲಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಅತ್ಯಚಾರ ಪ್ರಕರಣಗಳು ಹೆಚ್ಚುತ್ತಿವೆ. ಸಂತ್ರಸ್ತ ಮಗು ಮತ್ತು ಕುಂಟುಂಬಕ್ಕೆ ಸೂಕ್ತ ರಕ್ಷಣೆ, ಪೋಷಣೆ, ಕಾನೂನಿನ ನೆರವು ಮತ್ತು ಪುನರ್ವಸತಿ ಕಲ್ಪಿಸಲು ಪೋಕ್ಸೊ ಕಾಯ್ದೆ-2012ನ್ನು ಜಾರಿಗೆ ತರಲಾಗಿದೆ. ಪೋಕ್ಸೋ ಕಾಯ್ದೆಯಡಿ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲಾಗುತ್ತದೆ ಎಂದರು.
ಆಟ ಪಾಠದೊಂದಿಗೆ ನಲಿಯುತ್ತ ಬಾಲ್ಯ ಕಳೆಯುವುದು ಪ್ರತಿಯೊಂದು ಮಗುವಿನ ಜನ್ಮಸಿದ್ಧಹಕ್ಕು. ಆದರೆ ಅನೇಕ ಮಕ್ಕಳು ಬಡತನ ಮತ್ತಿತರ ಕಾರಣಗಳಿಂದ ಸಂತಸದ ಕ್ಷಣಗಳನ್ನು ಕಾಣದೆ ಹಕ್ಕುಗಳಿಂದ ವಂಚಿತರಾಗಿದ್ದಾರೆ. 14 ವರ್ಷ ವಯೋಮಾನದ ಮಕ್ಕಳನ್ನು ದುಡುಸಿಕೊಳ್ಳುವುದು ಅಪರಾಧವಾಗಿದೆ. ಈ ಅಪರಾಧಗಳನ್ನು ತಡೆಗಟ್ಟಲು ಅನೇಕ ರೀತಿಯ ಕಾನೂನುಗಳಿವೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಸರ್ವಾಗೀಣ ಬೆಳವಣಿಗೆಯನ್ನು ಗಮದಲ್ಲಿಟ್ಟುಕೊಂಡು ವಿಶೇಷ ಕಾನೂನುಗಳು ರಚನೆಯಾಗಿವೆ. ಮಕ್ಕಳ ಮೇಲೆ ನಡೆಯುವ ಎಲ್ಲಾ ರೀತಿಯ ದೌರ್ಜನ್ಯಗಳನ್ನು ತಡೆಯುವುದು ಇಡೀ ಸಮಾಜದ ಕರ್ತವ್ಯವಾಗಬೇಕು ಎಂದರು.
ದೌರ್ಜನ್ಯ ತಡೆ ಕಾಯ್ದೆ ತುಂಬಾ ಕಠಿಣವಾದ ಹಾಗೂ ಸುಕ್ಷ್ಮವಾದ ಕಾಯಿದೆಯಾಗಿದ್ದು ಈ ಪ್ರಕರಣಗಳಲ್ಲಿ ರಾಜಿಮಾಡಿಕೊಳ್ಳುವ ಪ್ರಸಂಗವೇ ಬರುವುದಿಲ್ಲ, ಅಲ್ಲದೆ ಘಟನೆ ನಡೆದ ಕೂಡಲೇ ಪೋಲಿಸರು ಪ್ರಕರಣ ದಾಖಲಿಸಬೇಕಾಗುತ್ತದೆ. ಬಾಲ್ಯ ವಿವಾಹ ಕಾಯ್ದೆಯು 2017ರಲ್ಲಿ ಜಾರಿಯಾಗಿದ್ದು, ಬಾಲ್ಯ ವಿವಾಹ ನಡೆಯುತ್ತಿರುವ ಪ್ರಕರಣ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ತಿಳಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪೂರ್ಣಿಮಾ ಎಂ, ವಕೀಲರಾದ ಮಹಾದೇವಿ ಹಿರೇಮಠ್, ಶಾಲಾ ಮುಖ್ಯ ಶಿಕ್ಷಕಿ ರೇಖಾರಾಣಿ ಉಪಸ್ಥಿತರಿದ್ದರು.