ನ್ಯಾಮತಿ: ಸವಳಂಗ -ನ್ಯಾಮತಿ ರಸ್ತೆಯ ಎಡ ಬದಿಯಲ್ಲಿ ಇಟ್ಟಿಗೆ ಭಟ್ಟಿಗಳಿದ್ದು, ಇದರಿಂದ ಹೊರಹೊಮ್ಮುವ ಬೆಂಕಿಯ ಶಾಖಕ್ಕೆ ಸಾಲುಮರಗಳು ಒಣಗುತ್ತಿವೆ ಎಂದು ತಾಲೂಕು ಬಣಜಾರ ಸಂಘದ ಅಧ್ಯಕ್ಷ ಮಂಜುನಾಯ್ಕ ದೂರಿದ್ದಾರೆ.
ಇಟ್ಟಿಗೆ ಭಟ್ಟಿ ಮಾಲೀಕರು ಸುಡಲು ಬೆಂಕಿ ಹಾಕುವುದರಿಂದ ಅದರ ಶಾಖಕ್ಕೆ ರಸ್ತೆ ಬದಿಯ ವಿವಿಧ ಜಾತಿಯ ಮರಗಳಿಗೆ ಹಾನಿಯಾಗಿ ಅವುಗಳು ಒಣಗುತ್ತಿವೆ. ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇಟ್ಟಿಗೆ ಭಟ್ಟಿಗಳ ಶಾಖಕ್ಕೆ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಹಾಗೂ ರೈತರಿಗೆ ತಟ್ಟುತ್ತಿದೆ. ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಇಟ್ಟಿಗೆ ತಯಾರಿಸಬಾರದು ಎಂಬ ನಿಯಮ ಇದ್ದರೂ ಸಹ ಸಂಬಂಧ ಪಟ್ಟ ಗ್ರಾಮ ಆಡಳಿತ ಅರಣ್ಯ ಇಲಾಖೆ ಹೆದ್ದಾರಿ ಪ್ರಾಧಿಕಾರ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಸಾಲುಮರಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಗಮನಹರಿಸಬೇಕು ತಪ್ಪಿದ್ದಲ್ಲಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಂಜಾರ ವಿದ್ಯಾರ್ಥಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ ಆರ್ ಗಿರೀಶ್, ವೆಂಕಟೇಶ್ ನಾಯ್ಕ್, ರುದ್ರೇಶ್ ನಾಯ್ಕ್, ಕುಮಾರನಾಯ್ಕ್, ರವಿ ನಾಯ್ಕ್ ಸಹ ಇದ್ದರು.