ನ್ಯಾಮತಿ:ಧಾರ್ಮಿಕ ಆಚರಣೆಗಳನ್ನು ಒಗ್ಗಟ್ಟಾಗಿ ಆಚರಿಸಿ ಗ್ರಾಮಗಳಲ್ಲಿ ಶಾಂತಿ ಸೌಹಾರ್ಧತೆ ಇರಬೇಕು, ಪ್ರಚೋದನೆ ಸಲ್ಲದು ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.
ಪಟ್ಟಣದ ಬನಶಂಕರಿ ಸಮುದಾಯ ಭವನದಲ್ಲಿ ಬುಧವಾರ ನ್ಯಾಮತಿ ಪೊಲೀಸ್ ಠಾಣೆ ಬುಧವಾರ ಆಯೋಜಿಸಿದ್ದ ಚನ್ನಗಿರಿ ಉಪವಿಭಾಗದ ತಾಲ್ಲೂಕು ಮಟ್ಟದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾದನಬಾವಿ ಮತ್ತು ಬಸವನಹಳ್ಳಿ ಅಕ್ಕಪಕ್ಕದ ಗ್ರಾಮಗಳಾಗಿದ್ದು, ಒಂದೇ ದೇವರು, ಒಂದೇ ಪಂಗಡದವರಾಗಿದ್ದು, ದೇವರ ಉತ್ಸವ ವಿಚಾರದಲ್ಲಿ ಕಾದಾಟ ಮಾಡುವುದು ಒಳ್ಳೆಯದಲ್ಲ, ಧಾರ್ಮಿಕ ವಿಚಾರದಲ್ಲಿ ಗ್ರಾಮಸ್ಥರು ಯಾರೇ ಆಗಲಿ ಪ್ರಚೋದನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಬರುವ ಯುಗಾದಿಯಲ್ಲಿ ನಡೆಯುವ ಬೀರಲಿಂಗೇಶ್ವರ ಉತ್ಸವದಲ್ಲಿ ಎರಡು ಗ್ರಾಮಗಳ ಜನರು ಪ್ರೀತಿ ವಿಶ್ವಾಸದಿಂದ ಆಚರಿಸಿ, ಆಚರಣೆ ಸಂದರ್ಭದಲ್ಲಿ ಗಲಭೆ ನಡೆದರೆ ಎರಡು ಗ್ರಾಮಗಳ ಗ್ರಾಮಸ್ಥರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇದಕ್ಕೆ ಆಸ್ಪದ ಕೊಡಬೇಡಿ ಎಂದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಹಾಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರು ಮತ ಚಲಾಯಿಸುವಂತೆ ಮನವಿ ಮಾಡಿದರು.
ಪೂರ್ವಜರು ನಡೆಸಿಕೊಂಡು ಬಂದಿರುವ ಧಾರ್ಮಿಕ ಆಚರಣೆಗಳು ಮುಂದುವರೆಸಿಕೊಂಡು ಹೋಗಬೇಕಾದ್ದು, ಇಂದಿನ ಜನತೆಯ ಜವಾಬ್ಧಾರಿ, ಎರಡು ಗ್ರಾಮಗಳ ಜನರು ಆಚರಣೆಯಲ್ಲಿ ಬದಲಾವಣೆ ಮಾಡುವುದು ಬೇಡ. ಸೌಹಾರ್ಧತೆಯಿಂದ ಯಾವುದೇ ಗಲಾಟೆಗೆ ಆಸ್ಪದ ಕೊಡದೆ ಆಚರಣ ಮಾಡುವಂತೆ ಚನ್ನಗಿರಿ ಡಿವೈಎಸ್ಪಿ ಪ್ರಶಾಂತ ಮುನ್ನೋಳಿ ಸಲಹೆ ನೀಡಿದರು.
ಮಾದನಬಾವಿ ಗ್ರಾಮದ ಕೆಂಚಪ್ಪ, ಸಿದ್ದಪ್ಪ, ಬಸವನಹಳ್ಳಿ ರಮೇಶ, ಸುರೇಶ ಮಾತನಾಡಿದರು.
ತಹಶೀಲ್ದಾರ್ ಫಿರೋಜಷಾ ಸೋಮನಕಟ್ಟೆ, ಇನ್ಸ್‍ಪೆಕ್ಟರ್ ಎನ್.ಎಸ್.ರವಿ,ಸಬ್‍ಇನ್ಸ್‍ಪೆಕ್ಟರ್ ಬಿ.ಎಲ್.ಪ್ರಶಾಂತನಾಯ್ಕ, ಸ್ಥಳೀಯ ಮುಖಂಡರಾದ ಪೂಜಾರÀ ಚಂದ್ರಶೇಖರ, ನುಚ್ಚಿನ ವಾಗೀಶ, ಪೊಲೀಸ್ ಸಿಬ್ಬಂದಿ ಇದ್ದರು.
