ಹರಿಹರ : ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರ ವಿಜಯ ಪತಾಕೆ ಹಾರಿಸಲು ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ನಾವು ಗೆದಿದ್ದೇವೆ. ಇನ್ನೇನಿದ್ದರೂ ಭಾವುಟ ಹಾರಿಸುವುದೊಂದೆ ಬಾಕಿ ಎಂದು ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಕರೆ ನೀಡಿದರು.
ಹರಿಹರ ನಗರದ ಸಿದ್ದೇಶ್ವರ ಪ್ಯಾಲೇಸ್ನಲ್ಲಿ ಆಯೋಜಿಸಿದ್ದ ಜೆಡಿಎಸ್ ಪಕ್ಷದ ಬೆಂಬಲ ಘೋಷಣೆ ಮತ್ತು ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮನ್ವಯ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯ, ದೇಶದ ರಕ್ಷಣೆ, ದೂರದೃಷ್ಟಿ ಮೆಚ್ಚಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲೂ ಇದೆ. ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ನಾವು ಈಗಾಗಲೇ ಗೆದ್ದಿದ್ದೇವೆ. ಇನ್ನೇನಿದ್ದರೂ ಭಾವುಟ ಹಾರಿಸುವುದು ಬಾಕಿ ಇದೆ ಎನ್ನಿಸುತ್ತಿದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಒಂದಾಗಿ ಪ್ರಚಾರ ಮಾಡುತ್ತಿರುವುದು ಎದುರಾಳಿಗಳಿಗೆ ನಿದ್ರೆ ಕೆಡಿಸಿದೆ. ಈ ದೇಶದ ಜನ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಬೇಕು ಎಂದು ನಿರ್ಧಾರಿಸಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಪ್ರಜ್ಞಾವಂತ ಮತದಾರರು ಮೋದಿ ಅವರನ್ನು ಪ್ರಧಾನಿ ಮಾಡಬೇಕು ಅಂದರೆ ಇಲ್ಲಿಯೂ ಬಿಜೆಪಿ ಅಭ್ಯರ್ಥಿ ಹೆಚ್ಚಿನ ಅಂತರದಿಂದ ಗೆದ್ದು ದೆಹಲಿಗೆ ಹೋಗಬೇಕು ಎಂಬುದನ್ನು ಅರಿತುಕೊಂಡು ಗಾಯಿತ್ರಿ ಸಿದ್ದೇಶ್ವರ್ ಅವರನ್ನು ಗೆಲ್ಲಿಸುವ ಸಂಕಲ್ಪ ಹೊಂದಿದ್ದಾರೆ. ಹರಿಹರ ವಿಧಾನಸಭಾ ಕ್ಷೇತ್ರದಿಂದ 1 ಲಕ್ಷಕ್ಕೂ ಅಧಿಕ ಮತಗಳ ಅಂತರ ನೀಡುವ ಮೂಲಕ ನನ್ನ ಮತ್ತು ಸ್ನೇಹಿತ, ಶಾಸಕ ಬಿ.ಪಿ.ಹರೀಶ್ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಹರಿಹರದಲ್ಲಿ ನಾನು, ಬಿ.ಪಿ.ಹರೀಶ್ ಇಬ್ಬರೂ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ಸೇರಿರುವ ಸಾವಿರಾರು ಕಾರ್ಯಕರ್ತರೇ ಅದಕ್ಕೆ ಸಾಕ್ಷಿ. ನಮ್ಮಲ್ಲಿ ಯಾವುದೇ ಭಿನ್ನಮತ, ಅಸಮಾಧಾನ ಇಲ್ಲ. ನಮ್ಮಿಬ್ಬರ ಗುರಿ ಒಂದೇ. ಗಾಯಿತ್ರಿ ಸಿದ್ದೇಶ್ವರ್ ಅವರು ಸಂಸತ್ ಪ್ರವೇಶಿಸಿ ಇತಿಹಾಸ ಬರಿಯಬೇಕು ಎನ್ನುವುದು. ಇಲ್ಲಿ ಹರಿ (ಹರೀಶ್) ಹರ (ಶಿವ-ಶಂಕರ್) ಇಬ್ಬರು ಒಂದಾಗಿದ್ದು, ಹರಿಹರ ಕ್ಷೇತ್ರದ ಅಭಿವೃರದ್ಧಿಗೆ ಶ್ರಮಿಸುತ್ತೇವೆ ಎಂದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಬಿಜೆಪಿ ಹೈಕಮಾಡ್ ಈ ಬಾರಿ ನನ್ನ ಪತ್ನಿಗೆ ಟಿಕೆಟ್ ನೀಡಿದೆ. ಎಚ್.ಎಸ್.ಶಿವಶಂಕರ್ ಹಾಗೂ ಹರೀಶ್ ಇಬ್ಬರೂ ಒಂದಾಗಿ ಕೆಲಸ ಮಾಡಿ ನನ್ನ ಶ್ರೀಮತಿಯನ್ನು ಗೆಲ್ಲಿಸಬೇಕು. ನೀವು ಇಬ್ಬರು ನಮಗೆ ಜೋಡಿ ಶಕ್ತಿ ಇದ್ದಂತೆ. ನಾನು ಸಂಸದನಾಗಿ ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಅನುದಾನ ನೀಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಬೆಂಬಲ ನೀಡಿದ್ದೇನೆ. ಈ ಗಾಯಿತ್ರಿ ಸಿದ್ದೇಶ್ವರ್ ಅವರು ಗೆದ್ದು ನಿಮ್ಮಿಬ್ಬರ ಕನಸಿನ ಹರಿಹರ ಅಭಿವೃದ್ಧಿಗೆ ಸಾಥ್ ನೀಡುತ್ತಾರೆ ಎಂದರು.
ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಮಾತನಾಡಿ, ಮಾಜಿ ಶಾಸಕ ಎಚ್.ಶಿವಶಂಕರ್ ಹಾಗೂ ಶಾಸಕ ಬಿ.ಪಿ.ಹರೀಶ್ ನನ್ನ ಜೊತೆ ಜೋಡೆತ್ತುಗಳಂತೆ ನಿಂತಿದ್ದಾರೆ. ನನ್ನನ್ನು ಗೆಲ್ಲಿಸಿ ಸಂಸತ್ತಿಗೆ ಕಳುಹಿಸುವವರೆಗೂ ವಿರಮಿಸುವುದಿಲ್ಲ ಎಂದು ಮಾತುಕೊಟ್ಟು ನನ್ನ ಬೆನ್ನಿಗೆ ನಿಂತಿದ್ದಾರೆ. ನಾನು ಅಡುಗೆ ಮಾಡುವುದಕ್ಕೂ ಸಿದ್ಧ, ಮಾತಾಡುವುದಕ್ಕೂ ಸಿದ್ಧ, ಅಭಿವೃದ್ಧಿ ಮಾಡುವುದಕ್ಕೂ ಸಿದ್ಧ ಎನ್ನುವುದನ್ನು ಸಾಭೀತು ಮಾಡಲು ನೀವೆಲ್ಲ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿ ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಆಡಳಿತ ವಿರುದ್ಧ ಜನ ರೋಸಿ ಹೋಗಿದ್ದಾರೆ. ನಿಮ್ಮದೇ ಹಣವನ್ನು ನಿಮಗೆ ಗ್ಯಾರಂಟಿ ರೂಪದಲ್ಲಿ ಕೊಟ್ಟು ಮರಳು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಟಕಕ್ಕೆ ನೀವು ಮರಳು ಆಗಬೇಡಿ. ರಾಜ್ಯದಲ್ಲಿ ಕೊಟ್ಟಿರುವ ಗ್ಯಾರಂಟಿಗಳನ್ನೇ ಇಡೇರಿಸಲು ಆಗುತ್ತಿಲ್ಲ. ಕೇಂದ್ರದವರು 25 ಗ್ಯಾರಂಟಿ ನೀಡಿ ಇಡೀ ದೇಶದ ಜನರನ್ನು ಮರಳು ಮಾಡಲು ಮುಂದಾಗಿದೆ. ಈ ಬಗ್ಗೆ ಜನ ಎಚ್ಚರಿಕೆ ವಹಿಸಬೇಕು. ಮೋದಿ ಜೀ ಮತ್ತೊಮ್ಮೆ ಪ್ರಧಾನಿಯಾದರೆ ಇಡೀ ದೇಶ ಅಭಿವೃದ್ಧಿ ಹೊಂದುತ್ತದೆ. ಹರಿಹರದಲ್ಲಿ ನಾನು-ಶಿವಶಂಕರ್ ಜೊತೆಯಾಗಿ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಮುಖಂಡರಾದ ತೇಜಸ್ವಿ ಪಟೇಲ್, ದೇವರಾಜ್, ಚಿದಾನಂದ್, ವೀರೇಶ್, ಎಸ್ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸ್ ಕರಿಯಪ್ಪ, ಬೂತ್ ಅಧ್ಯಕ್ಷರು, ಮಂಡಲ ಅಧ್ಯಕ್ಷರು, ಜೆಡಿಎಸ್ ಪಕ್ಷದ ಮುಖಂಡರು, ಜೆಡಿಯು ಪಕ್ಷದ ಮುಖಂಡರು ಸೇರಿದಂತೆ ಬಿಜೆಪಿ ಕಾರ್ಯುಕರ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.