ದಾವಣಗೆರೆ,ಏಪ್ರಿಲ್.10.2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.